ಕೇಳೋರಿಲ್ಲ ಮೂಲಭೂತ ಸೌಲಭ್ಯ ವಂಚಿತ ಮಲೆಕುಡಿಯರ ಅಳಲು
ಈಡೇರದ ಸುಗಮ ರಸ್ತೆ, ವಿದ್ಯುತ್ ಸಂಪರ್ಕದ ಬೇಡಿಕೆ
ಬೆಳ್ತಂಗಡಿ, ಆ.9: ನೆರಿಯ ಗ್ರಾಮದ ಬಾಂಜಾರು ಮಲೆಯ ಮಲೆಕುಡಿಯರ ಕಾಲನಿಯ ನಿವಾಸಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತ ರಾಗಿ ದಶಕಗಳಿಂದ ಜೀವನ ನಡೆಸುತ್ತಿದ್ದು, ಇವರ ಬಹುಕಾಲದ ಬೇಡಿಕೆಗಳಾದ ಸುಗಮ ರಸ್ತೆ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ ಇನ್ನೂ ಈಡೇರಿಸಿಲ್ಲ. ಒಂದಲ್ಲ ಒಂದು ಕಾರಣ ನೀಡುತ್ತಾ ಇಲಾಖೆಗಳು, ಸರಕಾರಗಳು ಅವರನ್ನು ನಿರಾಸೆಗೊಳಿಸುತ್ತಲೇ ಇದ್ದಾರೆ. ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾದ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಹಿಂದಿನ ರಾಜ್ಯ ಸರಕಾರ ತನ್ನ ಅಕಾರಾವಯ ಕೊನೆಯ ದಿನಗಳಲ್ಲಿ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಚುನಾವಣೆ ಕಳೆದರೂ ಇನ್ನೂ ಇದರ ಬಗ್ಗೆ ಯಾವುದೇ ಪ್ರಸ್ತಾವವಾಗಿಲ್ಲ. ಈ ಬಗ್ಗೆ ಇಲ್ಲಿನ ನಿವಾಸಿಗಳು ಅಕಾರಿಗಳನ್ನು ಕೇಳಿದರೆ ತಮಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂಬ ಉತ್ತರ ಬರುತ್ತಿದೆ. ತಮ್ಮ ಬಳಿ ಇರುವ ಸರಕಾರದ ಮಂಜೂರಾತಿ ಪತ್ರ ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದರೂ, ಎಲ್ಲಿಯೂ ಸಮರ್ಪಕವಾದ ಪ್ರತಿಕ್ರಿಯೆ ಸಿಗುತ್ತಿಲ್ಲ. ತಾವು ಮತ್ತೊಮ್ಮೆ ವಂಚಿತರಾಗಿದ್ದೇವೆ ಎಂಬ ಅನುಮಾನ ಇಲ್ಲಿನ ಮೂಲನಿವಾಸಿಗಳ ದ್ದಾಗಿದೆ.
ಅಂದು ಚುನಾವಣಾ ಬಹಿಷ್ಕಾರ ಮಾಡಿದ್ದರು: ಕಳೆದ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲಿಯೇ ಬಾಂಜಾರುಮಲೆಯ ನಿವಾಸಿಗಳು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದರು. ಎಲ್ಲರೂ ಒಟ್ಟಾಗಿ ಸೇರಿ ಮುಂದಿನ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಪ್ರಕಟಿಸಿದ್ದರು. ಈ ಸಂದರ್ಭ ಚುನಾವಣಾ ಆಯೋಗದ ಅಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಕಾರಿಗಳು ಮಂಜೂರಾಗಿರುವ ಅನುದಾನಗಳ ಮಾಹಿತಿಯೊಂದಿಗೆ ಬಾಂಜಾರು ಮಲೆಗೆ ಬಂದಿದ್ದರು. ಸರಕಾರದ ಅಕೃತ ಆದೇಶದ ಪ್ರತಿಯನ್ನೂ ನೀಡಿದ್ದರು. ಅಂದು ಮಾಹಿತಿ ನೀಡಿದ ಅಕಾರಿಗಳೇ ಇಂದು ತಮಗೆ ಇದರ ಬಗ್ಗೆ ಅರಿವೇ ಇಲ್ಲ ಎಂದು ಹೇಳುತ್ತಿದ್ದಾರೆ.
ಬಾಂಜಾರು ಮಲೆಯ ಮಲೆಕುಡಿಯರ ಕಾಲನಿಯ ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮಂಜೂರಾ ಗಿರುವ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ. ತಮಗೆ ಯಾವುದೇ ಆದೇಶವೂ ಬಂದಿಲ್ಲ, ಬಾಂಜಾರು ಮಲೆಗೆ ಹಿಂದೆ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಅದರ ಕಾಮಗಾರಿಯೂ ಮಾಡಲಾಗಿದೆ.
ಹೇಮಲತಾ, ಜಿಲ್ಲಾ ಸಮನ್ವಯಾಕಾರಿ.
ಬಾಂಜಾರು ಮಲೆಯಲ್ಲಿ ತಲೆಮಾರು ಗಳಿಂದ ವಾಸಿಸುತ್ತಿರುವ ಮೂಲನಿವಾಸಿ ಗಳನ್ನು ಸರಕಾರಗಳು ವಂಚಿಸುತ್ತಲೇ ಬಂದಿದೆ. ಇನ್ನೂ ಅವರಿಗೆ ಮೂಲಭೂತ ಸೌಲಭ್ಯ ಗಳನ್ನು ಒದಗಿಸಲಾಗಿಲ್ಲ. ಅಕಾರಿಗಳು ಆಗಾಗ ಭೇಟಿ ನೀಡಿ ಕೇವಲ ಭರವಸೆಗಳನ್ನಷ್ಟೇ ನೀಡುತ್ತಿದ್ದಾರೆ. ಸರಕಾರ ಮಂಜೂರು ಮಾಡಿದ ಅನುದಾನ ಎಲ್ಲಿಯೂ ಹೋಗಲು ಸಾಧ್ಯವಿಲ್ಲ ಕಾಮಗಾರಿ ನಡೆಯುತ್ತಿಲ್ಲ ಎಂದಾದರೆ ಇದಕ್ಕೆ ಯಾರು ಕಾರಣ ಎಂದು ತಿಳಿದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಶೇಖರ ಲಾಯ್ಲ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡ
ರಸ್ತೆ ಕಾಮಗಾರಿ ಹಾಗೂ ವಿದ್ಯುತ್ ಒದಗಿಸುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ರಸ್ತೆ ಹಾದು ಹೋಗುವ ಯೆನೆಪೊಯ ಎಸ್ಟೇಟ್‌ನವರೂ ರಸ್ತೆ ಮಾಡಲು ಅನುಮತಿ ನೀಡಿದ್ದಾರೆ. ಆದರೆ ಸರಕಾರ ಮಾತ್ರ ನಮ್ಮನ್ನು ವಂಚಿಸುತ್ತಿದೆ. ಮೂರು ತಿಂಗಳ ಹಿಂದೆ ಅನುದಾನವಿದೆ ಎಂದು ಹೇಳಿ ಹೋದವರು ಮತ್ತೆ ಬಂದೇ ಇಲ್ಲ. ಈಗ ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ. ಬಿಡುಗಡೆಯಾಗಿದ್ದ ಅನುದಾನವನ್ನು ಯಾವುದೇ ಕಾರಣಕ್ಕೂ ಬದಲಿಸದೆ ಕೂಡಲೇ ಕಾಮಗಾರಿಯನ್ನು ಆರಂಭಿಸಬೇಕು.
ನಾಗೇಶ್, ಬಾಂಜಾರು ಮಲೆ ನಿವಾಸಿ.