‘ಅನನ್ಯ...’ ಸಾಧನೆ
‘ಅನನ್ಯ’ಕ್ಕೆ ಈಗ ಇಪ್ಪತ್ಮೂರರ ಪ್ರಾಯ. ಪತ್ರಿಕೆಗೆ ಇಪ್ಪತ್ತು ತುಂಬಿದೆ. ಕಳೆದ ವರ್ಷ ಎರಡು ಸಾರ್ಥಕ ದಶಕಗಳ ಮೆಲುಕಿನ ಸಂಗೀತೋತ್ಸವವೂ ನಡೆಯಿತು. ಆಸಕ್ತಿ, ಕಾಳಜಿಗಳಿದ್ದಲ್ಲಿ ಯಾರ ಹಂಗೂ ಇಲ್ಲದೆ ವ್ಯಕ್ತಿಗತ ನೆಲೆಯಲ್ಲೇ ಕಲೆ ಸಂಸ್ಕೃತಿ ಪೋಷಣೆಯ ಕೆಲಸಗಳನ್ನು ಮಾಡಬಹುದು ಎನ್ನುವುದಕ್ಕೆ ಡಾ. ಆರ್. ವಿ. ರಾಘವೇಂದ್ರ ಒಂದು ಉತ್ತಮ ನಿದರ್ಶನ. ಪ್ರಚಾರದ ಅಬ್ಬರ ಆರ್ಭಟಗಳಿಲ್ಲದೆ ಸಂಗೀತ ಮತ್ತಿತರ ಕಲೆಗಳಲ್ಲಿ ಗಣನೀಯ ಕೆಲಸಮಾಡುತ್ತ ರಜತ ಮಹೋತ್ಸವದತ್ತ ಸಾಗಿರುವ ಈ ಏಕವ್ಯಕ್ತಿ ಸಾಧನೆ ಒಂದು ಅನುಕರಣೀಯ ಮಾದರಿ.
ಕನ್ನಡದಲ್ಲಿ ಸಂಗೀತ, ನೃತ್ಯ ಮೊದಲಾದ ಪ್ರದರ್ಶಕ ಕಲೆಗಳಿಗೆ ಮೀಸಲಾದ ಪತ್ರಿಕೆಗಳು ಕಡಿಮೆ, ಅವುಗಳ ಸಂಖ್ಯೆ ಕೈಬೆರಳೆಣಿಕೆಯನ್ನೂ ಮೀರದು. ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳು, ಇತಿಹಾಸದತ್ತ ನೋಡಿದಾಗ ಗಣನೀಯವಾಗಿಯೇ ಕಾಣಸಿಗುತ್ತವೆ. ಆದರೆ ಇದೇ ಮಾತನ್ನು ಸಂಗೀತ, ರಂಗಭೂಮಿ ಮತ್ತು ಚಿತ್ರಕಲೆಗಳಿಗೆ ಸಂಬಂಧಿಸಿದಂತೆ ಹೇಳಲಾಗದು. ಸಂಗೀತಕ್ಕೆಂದೇ ಮೀಸಲಾದ ಪತ್ರಿಕೆಗಳು ಅಪರೂಪ. ಕಳೆದ ಶತಮಾನದ ಐವತ್ತರ ದಶಕದಲ್ಲಿ ಪಂಡಿತ ಶೇಷಾದ್ರಿ ಗವಾಯಿಗಳು ಸಂಗೀತಕ್ಕಂದೇ ಮೀಸಲಾದ ‘ಗಾಯನ ಗಂಗಾ’ ಪ್ರಕಟಿಸುತ್ತಿದ್ದರು. ಗವಾಯಿಯವರು ಅದರ ಸಂಪಾದಕರೂ ಪ್ರಕಾಶಕರೂ ಆಗಿದ್ದರು. ನಂತರ 1993ರಲ್ಲಿ ಸೃಜನಶೀಲ ಕಲೆಗಳಿಗೆಂದೇ ಮೀಸಲಾದ ಡಾ.ವಿಜಯಾ ಸಂಪಾದಕತ್ವದ ‘ಸಂಕುಲ’ ಒಂದು ವಿಶಿಷ್ಟ ರೀತಿಯ ಪತ್ರಿಕೆಯಾಗಿ ಸಾಂಸ್ಕೃತಿಕ ವಲಯದ ಗಮನ ಸೆಳೆಯಿತು. ಸೀಮಿತವಾದ ವಿದ್ವತ್ವಲಯದ ಮೆಚ್ಚುಗೆ ಪಡೆಯಿತಾದರೂ ಅಲ್ಪಾಯುವಾಯಿತು. 1997ರಲ್ಲಿ, ವಿದ್ವಾಂಸರುಗಳು ಮತ್ತು ಸಹೃದಯ ರಸಿಕರಿಬ್ಬರನ್ನೂ ಅಚ್ಚರಿಗೊಳಿಸುವಂಥ ಒಂದು ವಿದ್ಯಮಾನ ಕನ್ನಡ ಸಾಂಸ್ಕೃತಿಕ ಪತ್ರಿಕೋದ್ಯಮದಲ್ಲಿ ಘಟಿಸಿತು. ಅದು: ‘ಅನನ್ಯ ಅಭಿವ್ಯಕ್ತಿ’-ಸಂಗೀತ ಕಲೆಗಾಗಿ ಮೀಸಲಾದ ಮಾಸ ಪತ್ರಿಕೆಯ ಪ್ರಕಟನೆ.
ಸಂಗೀತ, ನೃತ್ಯ ಕಲೆಗಳಿಗೆ ಮೀಸಲಾದ ‘ಅನನ್ಯ ಅಭಿವ್ಯಕ್ತಿ’. ಮುಂದಿನ ವರ್ಷಗಳಲ್ಲಿ(2010) ಸೃಜನಾತ್ಮಕ ಕಲೆಗಳಿಗೆ ವಿಸ್ತರಿಸಿಕೊಂಡು ‘ಅನನ್ಯ ಕಲಾಸಿಂಚನ’ವಾಗಿ ಬೆಳೆದ ಕಥೆ ಕನ್ನಡ ಕಲೆಗಳ ಇತಿಹಾಸದ ಒಂದು ರೋಚಕ ಅಧ್ಯಾಯ. ಹಾಲುಬಿಳುಪಿನ ಕಾಗದ, ಅಚ್ಚುಕಟ್ಟಾದ ಪುಟ ವಿನ್ಯಾಸ, ಸುಂದರವಾದ ಮುದ್ರಣ ಇದು ಬಾಹ್ಯ ಆಕರ್ಷಣೆ. ಪುಟಗಳನ್ನು ತಿರುವಿದಂತೆ ಸಂಗೀತ, ನೃತ್ಯ ಚಿತ್ರಕಲೆಗಳ ಓನಾಮವೂ ತಿಳಿಯದಂಥವರಿಗೆ ಅವುಗಳನ್ನು ಪರಿಚಯಿಸುವ, ಅರ್ಥೈಸುವ ಶೈಕ್ಷಣಿಕ ಮಾದರಿಯ ಲೇಖನಗಳು, ವಿದ್ವಜ್ಜನರನ್ನೂ ರಸಿಕರನ್ನೂ ಸೆಳೆಯುವ ಅಧ್ಯಯನಪೂರ್ಣ ಲೇಖನಗಳು, ಕಲಾವಿದರ ಜೀವನ ಚಿತ್ರಗಳು, ವಿಮರ್ಶಾ ಲೇಖನಗಳು-ಇದು ಆಂತ:ಸತ್ತ್ವ, ಅಂತರಂಗದ ಸೌಂದರ್ಯ. ಈ ಸೌಂದರ್ಯ ವಿಶೇಷಗಳಿಂದಾಗಿ ‘ಅನನ್ಯ ಕಲಾಸಿಂಚನ’ ಪ್ರತಿ ತಿಂಗಳೂ ಕಲಾರಸಿಕರು ಎದುರು ನೋಡುವಂಥ (ಹಿಂದೆ ನಾವು ಅಡಿಗರ ‘ಸಾಕ್ಷಿ’ಗೆ ಕಾಯುತ್ತಿದ್ದಂತೆ) ‘ಅನನ್ಯ’ವಾಯಿತು. ‘ಅನನ್ಯ ಕಲಾಸಿಂಚನ’ದ ಪ್ರಕಾಶಕರು ಅನನ್ಯ ಟ್ರಸ್ಟ್. ಇದರ ಹಿಂದಿನ ಜೀವನಾಡಿ ಡಾ. ಆರ್. ವಿ. ರಾಘವೇಂದ್ರ. ರಾಘವೇಂದ್ರ ವೃತ್ತಿಯಂದ ವಿಜ್ಞಾನಿ, ಪ್ರವೃತ್ತಿಯಿಂದ ಸಂಗೀತ ಮೊದಲಾದ ಕಲೆಗಳ ಗೀಳು ಹಿಡಿಸಿಕೊಂಡಿರುವ ಕಲಾವಿದ, ಸಾಂಸ್ಕೃತಿಕ ಸಂಘಟಕ.
ರಾಘವೇಂದ್ರ ಚಿತ್ರದುರ್ಗ ಜಿಲ್ಲೆಯ ಬಿಳಚೋಡು ಗ್ರಾಮದವರು. ತಂದೆ ಅರ್.ಎನ್.ವಿ. ಆಚಾರ್ ಸರಕಾರಿ ಚಾಕರಿಯಲ್ಲಿದ್ದುದರಿಂದ ರಾಘವೇಂದ್ರರ ಬಾಲ್ಯ, ವಿದ್ಯಾಭ್ಯಾಸಗಳೆಲ್ಲ ಬಳ್ಳಾರಿ, ಕಂಪ್ಲಿ, ಗಂಗಾವತಿ, ಭದ್ರಾವತಿ ಮೊದಲಾದ ಊರೂರು ತಿರುಗಾಟದಲ್ಲೇ..... ಚಿತ್ರದುರ್ಗದಲ್ಲಿ ಬಿ.ಎಸ್ಸಿ. ಪದವಿ ಮುಗಿಸಿದಾಗ ಮಾನಸ ಗಂಗೋತ್ರಿಯ ಸಾಹಿತ್ಯ-ಕಲೆಗಳ ಪರಿಸರ ಆಕರ್ಷಿಸಿರಬೇಕು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ. ಸ್ನಾತಕೋತ್ತರರಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪಿಎಚ್.ಡಿ ಮಾಡಿದರು. ಸ್ವಲ್ಪಕಾಲ ಸಂಶೋಧಕರಾಗಿ ಕೆಲಸಮಾಡಿದರು. ಸ್ವತಂತ್ರ ಮನೋಧರ್ಮಕ್ಕೆ ತಾಪೇದಾರಿ ಬೇಡ ಎನಿಸಿರಬೇಕು. 1980ರಲ್ಲಿ, ‘ಜಿಯಾಲಾಜಿಕಲ್ ಆ್ಯಂಡ್ ಮೆಟಲಾಜಿಕಲ್ ಲ್ಯಾಬೊರೆಟರೀಸ್’, ಸ್ವಂತ ಕಂಪೆನಿ ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ವೃತ್ತಿಪ್ರವೃತ್ತಿಗಳೆರಡೂ ಹೆಗಲೆಣೆಯಾಗಿ ಸಾಗಿರುವ ರಾಘವೇಂದರ ಬದುಕು ಒಂದು ಯಶೋಗಾಥೆಯೇ.
ಬಾಲ್ಯದಲ್ಲಿ ರಾಘವೇಂದ್ರರ ಕಲಾಸಕ್ತಿ ಮೂಡಿದ್ದು ರಂಗೋಲಿ ಬಿಡಿಸುವುದರಲ್ಲಿ. ರಂಗೋಲಿ ಸ್ಪರ್ಧೆಯೆಂದರೆ ಶಾಲೆಗಿಂತಲೂ ಹೆಚ್ಚು ಮುತುವರ್ಜಿಯಿಂದ ಓಡುತ್ತಿದ್ದ ಬಾಲಕನೊಳಗೆ ಸಂಗೀತದ ಆಸಕ್ತಿ ಸುಪ್ತವಾಗಿ ದಾಂಗುಡಿಯಿಡುತ್ತಿತ್ತು. ಮನೆಯಲ್ಲಿ ಶಾಸ್ತ್ರೀಯ ಸಂಗೀತದ ಸ್ವರಾಲಾಪ ತುಂಬಿದ ವಾತಾವರಣ. ಮಾನಸಗಂಗೋತ್ರಿ ಪ್ರವೇಶಿಸಿದ ಮೇಲಂತೂ ಸಂಗೀತ ಕಲೆಗಳ ಸಾಂಸ್ಕೃತಿಕ ನಗರ ಮೈಸೂರು ರಾಘವೇಂದ್ರರೊಳಗಿನ ಸಂಗೀತದ ಆಸಕ್ತಿಯನ್ನು ಪ್ರೀತಿಯ ಗೀಳಾಗಿಸಿತು. ಸಂಗೀತ ಕಚೇರಿಗಳಿಗೆ ಹೋಗುವುದರೊಂದಿಗೆ ಬೆಳೆದ ಈ ಪ್ರೀತಿ ಕ್ರಮೇಣ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮಟ್ಟಿಗೆ ‘ಹುಚ್ಚು’ ಎನ್ನಿಸಿಕೊಂಡಿತು. ಕಲಾವಿದನಾಗುವ ಹೆಬ್ಬಯಕೆಯಿಂದ ಸಂಗೀತವನ್ನೂ ಕಲಿತರು. ತಬಲಾ, ಮೃದಂಗಗಳನ್ನೂ ಕಲಿತರು. ಕೆಲಸದ ಒತ್ತಡ, ಜವಾಬ್ದಾರಿಗಳ ಮುಂದೆ ಸಂಗೀತ ಕಲಿಕೆ ಮಣಿಯಬೇಕಾಯಿತು. ಆದರೆ ಆಸಕ್ತಿ ಹೋಗಲಿಲ್ಲ. ಸಂಗೀತ ಕಲಿಯುವ ಪ್ರಯತ್ನ ಬಿಟ್ಟು ಸಂಗೀತ ಕೇಳಿ ಸವಿಯಲು ಸಮಯ ಮಾಡಿಕೊಂಡರು. ಕೆಲಸದ ನಂತರದ ಬಿಡುವಿನ ವೇಳೆಯನ್ನು ಸಂಗೀತ ಸುಖಕ್ಕೆ ವಿನಿಯೋಗಿಸಿದ ಹಾಗೆ ದುಡಿಮೆಯಿಂದ ಬಂದ ಗಳಿಕೆಯಲ್ಲಿ ಒಂದಿಷ್ಟು ಹಣವನ್ನು ಸಂಗೀತಕ್ಕೆಂದು ವಿನಿಯೋಗಿಸುವ ಆಲೋಚನೆ ಬಂತು.
ಸ್ವಂತದ ಲ್ಯಾಬೊರೆಟರಿಯ ಸಂಪಾದನೆಯಲ್ಲಿ ಸಂಸಾರ ತೂಗಿಸಿ ಮಿಕ್ಕಿದ್ದನ್ನು ಸಂಗೀತಕ್ಕೆ ಚೆಲ್ಲುವ ಪ್ರಯೋಗ ಶುರುವಾಯಿತು. ಹಲವು ಬಗೆಯ ಹಲವು ಪ್ರತಿಭೆಗಳ ಸ್ವರ-ಆಲಾಪನೆ-ರಾಗತಾಳಗಳ ವೈಶಿಷ್ಟ್ಯವನ್ನು ಸವಿಯುವ ಆಸೆ ಪ್ರಬಲವಾಗಿ ಮಿಕ್ಕ ಹಣದಲ್ಲಿ ಸಂಗೀತ ಕಚೇರಿಗಳನ್ನು ಏರ್ಪಡಿಸುವ ಕಾಯಕದಲ್ಲಿ ತೊಡಗಿಕೊಂಡರು. ರಾಘವೇಂದ್ರ ಏರ್ಪಡಿಸುತ್ತಿದ್ದ ಸಂಗೀತ ಕಚೇರಿಗಳು/ವಿದ್ವತ್ ಗೋಷ್ಠಿಗಳು ರಸಿಕರಿಗೆ ವೈವಿಧ್ಯಮಯ ಸಂಗೀತದ ರಸಾಸ್ವಾದನೆಗೆ ಸ್ವಾಗತಾರ್ಹವೆನಿಸಿದವು. ಕಲಾವಿದರಿಗೂ ಪ್ರೋತ್ಸಾಹ ಆಸರೆ ಸಿಕ್ಕಂತಾಯಿತು. ಸೋದರನ ಈ ಸಂಗೀತ ಮೋಹವನ್ನು ಕಂಡ ರಂಗಕರ್ಮಿ(ಈಗ ರಂಗಕರ್ಮಿ ಜೊತೆಗೆ ಕೈಮಗ್ಗ ಮೊದಲಾದ ಲೋಕಸೇವೆ) ಕಲೆಯ ಬಗ್ಗೆ ಇಷ್ಟೊಂದು ಆಸಕ್ತಿ ಇರುವವನು ನೀನೇ ಏಕೆ ಒಂದು ಟ್ರಸ್ಟ್ ಸ್ಥಾಪಿಸಬಾರದು ಎಂದು ಪ್ರೇರಕಶಕ್ತಿಯಾದರು. ಹೀಗೆ ಜನ್ಮತಾಳಿತು ಅನನ್ಯ ಸಂಸ್ಥೆ.
ಸಂಸ್ಥಾಪಕ ಅಧ್ಯಕ್ಷರು ಯು.ಆರ್. ಅನಂತ ಮೂರ್ತಿ. ಈಗಿನ ಅಧ್ಯಕ್ಷರು ಖ್ಯಾತ ಕಲಾವಿದರಾದ ಎಸ್.ಜಿ.ವಾಸುದೇವ್. ಅನನ್ಯ ಟ್ರಸ್ಟ್ ಚಟುವಟಿಕೆಗಳು ಶುರುವಿಗೆ ಸಂಗೀತ ಕಾರ್ಯಕ್ರಮಗಳು, ಸಂಗೀತ ಶಿಕ್ಷಣ ಮುಖೇನ ಅಭಿರುಚಿಯ ರೂಪಣೆಗೆ ಸೀಮಿತವಾಗಿತ್ತು. ಪ್ರಾರಂಭದ ದಿನಗಳಲ್ಲಿ ಇಂಡಿಯನ್ ಫೌಂಡೇಷನ್ ಫಾರ್ ಆರ್ಟ್ಸ್ ಸಹಕಾರದೊಂದಿಗೆ ನಡೆಸಿದ ‘ಹಾಡು ಹಕ್ಕಿ’ಯ ಯಶಸ್ಸಿನಿಂದ ರಾಘವೇಂದ್ರರ ಉತ್ಸಾಹದ ರೆಕ್ಕಗಳಿಗೆ ನೀರು ತಟ್ಟಿದಂತಾಯಿತು. ಆಕಾಶವಾಣಿಯಲ್ಲಿ ಇಪ್ಪತ್ತೊಂದು ಕಂತುಗಳಲ್ಲಿ ಪ್ರಸಾರಗೊಂಡ ‘ಹಾಡು ಹಕ್ಕಿ’ಗೆ ದೊರೆತ ಸ್ವಾಗತ ಶಾಲೆಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರೇರಣೆ ನೀಡಿತು. ಸಂಗೀತ ಕಚೇರಿಗಳಿಗಾಗಿ ಅನನ್ಯ ಸಂಗೀತ ಸಭಾಂಗಣ ಮೇಲೆದ್ದಿತು. ಶಾಲೆಗಳಲ್ಲಿನ ‘ಹಾಡು ಹಕ್ಕಿ’ಗಳನ್ನು ಬೆಳೆಸುವುದರ ಜೊತೆಗೆ ಅನನ್ಯ ಸಭಾಂಗಣದಲ್ಲಿ ಸಂಗೀತ ಕಚೇರಿಗಳು ಸಾರೋದ್ಧಾರವಾಗಿ ನಡೆಯತೊಡಗಿದವು. ಇದರೊಂದಿಗೆ ಅನನ್ಯದ ಚಟುವಟಿಕೆ ಕರ್ನಾಟಕದ ಬೇರೆಬೇರೆ ಪ್ರದೇಶಗಳಲ್ಲಿ ಕಲೋತ್ಸವಗಳನ್ನು ಏರ್ಪಡಿಸುವುದು, ಸಾಧಕರನ್ನು ಪುರಸ್ಕರಿಸುವುದು, ಸಂಗೀತ ಮತ್ತು ಸಂಗೀತ ಕಲಾವಿದರ ಕ್ಷೇಮಾಭ್ಯುದಯ ಇತ್ಯಾದಿ ದಿಕ್ಕುಗಳಿಗೂ ಚಾಚಿಕೊಂಡಿತು.
ಸಂಗೀತ ಕಚೇರಿಗಳು ಮತ್ತು ಸಂಗೀತ ಸಂಬಂಧಿತ ವಿದ್ವತ್‌ಗೋಷ್ಠಿಗಳನ್ನು ನಡೆಸುತ್ತಿರುವುದರ ಜೊತೆಗೆ ರಾಘವೇಂದ್ರರ ಇನ್ನು ಮೂರು ‘ಅನನ್ಯ’ ಕಾರ್ಯಗಳನ್ನು ಗಮನಿಸದೇ ಇರಲಾಗದು. 1.ಕಲಾವಿದರ ಕ್ಯಾಲೆಂಡರ್ 2) ‘ಅನನ್ಯ ಅಭಿವ್ಯಕ್ತಿ’ ಮಾಸ ಪತ್ರಿಕೆ ಪ್ರಕಟನೆ 3) ಆರೋಗ್ಯಧಾರ. ಇವು ಮೂರೂ ರಾಘವೇಂದ್ರರ ಸಾಂಸ್ಕೃತಿಕ ಕಾಳಜಿ ಮತ್ತು ದೂರದೃಷ್ಟಿಗೆ ಧ್ಯೋತಕವಾಗಿವೆ. ಶಾಲಾ ಮಕ್ಕಳಿಗೆ ಸಂಗೀತ ಕಾರ್ಯಕ್ರಮ ಮಾಡಲು ಹೊರಟಾಗ ಕಂಡು ಬಂದದ್ದೆಂದರೆ ಶಾಲೆಗಳಲ್ಲಿ ನಮ್ಮ ಸಾಹಿತಿ/ಕಲಾವಿದರ ಬಗೆಗಿನ ಮಾಹಿತಿಯ ಕೊರತೆ. ಕಲೆ ಮತ್ತು ಕಲಾವಿದರ ಬಗ್ಗೆ ಮಕ್ಕಳ ಅಜ್ಞಾನಕ್ಕೆ ಇದು ಮುಖ್ಯ ಕಾರಣವಾಗಿತ್ತು. ಈ ಕೊರತೆ, ಕಲೆ ಮತ್ತು ಕಲಾವಿದರನ್ನು ಪರಿಚಯಿಸುವ ಕ್ಯಾಲೆಂಡರುಗಳ ಪ್ರಕಟನೆಯ ಯೋಚನೆಗೆ ಮೀಟುಗೋಲಾಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಮೈಸೂರು ಸಂಸ್ಥಾನದ ಸಂಗೀತ ವಿದ್ವಾಂಸರು, ಯಕ್ಷಗಾನ ಕಲಾವಿದರು, ಸ್ವರಮಾಲಾ ಕಲಾಕೃತಿಗಳು, ರಾಜಸ್ಥಾನದ ರಾಗಮಾಲ ಕಲಾಕೃತಿಗಳು, ನೃತ್ಯ ಮುದ್ರೆಗಳು -ಹೀಗೆ ಕಲೆ ಮತ್ತು ಕಲಾವಿದರ ಸಚಿತ್ರ ಪರಿಚಯದ ಹದಿನೈದು ಕ್ಯಾಲೆಂಡರುಗಳನ್ನು ‘ಅನನ್ಯ’ಪ್ರಕಟಿಸಿದೆ.
ದಿನ ಪತ್ರಿಕೆಗಳು/ನಿಯತ ಕಾಲಿಕಗಳಲ್ಲಿ ಸಂಗೀತ ನೃತ್ಯ, ಚಿತ್ರಕಲೆಗಳಿಗೆ ಸಾಕಷ್ಟು ಸ್ಥಳ ಸಿಗುತ್ತಿಲ್ಲ ಎನ್ನಿಸಿದಾಗ, 1997ರಲ್ಲಿ ‘ಅನನ್ಯ ಅಭಿವ್ಯಕ್ತಿ’ ಸಂಗೀತ ಕಲೆಗಳಿಗೆ ಮೀಸಲಾದ ಮಾಸ ಪತ್ರಿಕೆ ಹುಟ್ಟಿತು. ಹದಿನಾರು ಪುಟಗಳ ಸಣ್ಣ ಪತ್ರಿಕೆಯಾಗಿ ಶುರುವಾದ ‘ಅನನ್ಯ ಅಭಿವ್ಯಕ್ತಿ’ ಈಗ ನಲವತ್ನಾಲ್ಕು ಪುಟಗಳ ಸುಂದರ ಸುಪುಷ್ಟ ‘ಅನನ್ಯ ಕಲಾಸಿಂಚನ’ವಾಗಿದೆ. ಸಂಗೀತ ಕಲೆಗಳ ಪರಿಚಯಾತ್ಮಕ ಲೇಖನಗಳ ಜೊತೆಗೆ ಸಂಗೀತ ಕಲೆಗಳ ವಿಮರ್ಶಾತ್ಮಕ ಲೇಖನಗಳು, ಎಸ್.ಕೆ.ರಾಮಚಂದ್ರರಾಯರು ಬರೆಯುತ್ತಿದ್ದ ಸಂಗೀತ ಕಲಾವಿದರ ಸಾಧನೆಯ ಕಿರುಚಿತ್ರಗಳು, ಬಿ.ವಿ.ಕೆ.ಶಾಸ್ತಿ, ಕೃಷ್ಣ ಮೂರ್ತಿ, ಸಂಗೀತಜ್ಞೆ ಡಾ.ಟಿ.ಎಸ್.ಸತ್ಯವತಿ, ಡಾ.ವಸಂತ ಮಾಧವಿ ಮೊದಲಾದವರ ಸಂಗೀತದ ಶಾಸ್ತ್ರೀಯ ಲೇಖನಗಳು ಮತ್ತು ಕಲಾವಿದರ ಜೀವನ ಪ್ರಸಂಗಗಳು, ಸಂಗೀತ ಲೋಕದ ಅಪರೂಪದ ಘಟನೆಗಳು, ಇತ್ತೀಚೆಗೆ ಶುರುವಾಗಿರುವ ಕಲಾವಿದರ ಸಂದರ್ಶನಗಳು, ಚಿತ್ರಕಲೆ ಕುರಿತ ಬೋಧಪ್ರದವಾದ ಲೇಖನಗಳಿಂದ ಕಲಾ ರಸಿಕರಿಗೆ ‘ಅನನ್ಯ ಕಲಾ ಸಂಚನ’ ಪ್ರತಿ ಸಂಚಿಕೆಯೂ ಸಂಗ್ರಹಯೋಗ್ಯವೆನಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಪಿಟೀಲುವಾದಕರೊಬ್ಬರಿಗೆ ಅಪಘಾತವಾಯಿತು. ಅಪಘಾತದಲ್ಲಿ ಅವರ ಜೀವನಾಧಾರವಾಗಿದ್ದ ಕೈಗೆ ಬಲವಾದ ಪೆಟ್ಟಾದ ಘಟನೆ ‘ಆರೋಗ್ಯಧಾರಾ’ ಯೋಜನೆಗೆ ಕುಮ್ಮಕ್ಕು ನೀಡಿತು. ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ನೀಡುವುದು ಮತ್ತು ಕಲಾವಿದರಿಗೆ ಆರೋಗ್ಯ ಶಿಬಿರಗಳನ್ನು ನಡೆಸುವುದು ಈ ಯೋಜನೆಯ ಮುಖ್ಯ ಆಶಯ. ಇದಕ್ಕೆ ಸಾರ್ವಜನಿಕರೂ ದೇಣಿಗೆ ನೀಡಬಹುದು. ಕಲಾವಿದರ ಯೋಗಕ್ಷೇಮಕ್ಕಾಗಿಯೇ ಬಳಸಲು ‘ಆರೋಗ್ಯಧಾರಾ’ಪ್ರತ್ಯೇಕ ಖಾತೆ ಇದೆ
ರಾಘವೇಂದ್ರ ಸಾಹಿತ್ಯಾಭಿಮಾನಿಗಳೂ ಹೌದು. ಸಾಹಿತ್ಯ, ಸಂಗೀತ ಮತ್ತು ಕಲೆಗಳ ಆಕರ ಗ್ರಂಥಾಲಯ ‘ಅನನ್ಯ ಸಂಗ್ರಹ’. 1998ರಲ್ಲಿ ಶುರುವಾದ ಈ ಗ್ರಂಥಾಲಯದಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಅನನ್ಯ ಹದಿನೆಂಟಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ‘ಅನನ್ಯ ಸಮರ್ಪಣ’ ರಾಘವೇಂದ್ರರ ಇನ್ನೊಂದು ನವೀನ ಪ್ರಯೋಗ. ಇದು ನೃತ್ಯೋತ್ಸವಕ್ಕೆ ಮೀಸಲಾದ ಕಾರ್ಯಕ್ರಮ. ಸಿಂಗಾಪುರದ ‘ಶೃತಿಲಯ ಸ್ಕೂಲ್ ಆಫ್ ಡಾನ್ಸ್’ ಸಂಸ್ಥೆಯ ಸಹಭಾಗಿತ್ವದಲ್ಲಿ 2013ರಿಂದ ಈ ನೃತ್ಯೋತ್ಸವ ಪ್ರತಿವರ್ಷ ನಡೆಯುತ್ತಿದೆ. ಇದೇ 12 ಮತ್ತು 13ರಂದು ಬೆಂಗಳೂರಿನ ಮಲ್ಲೇಶ್ವರದ ಸೇವಾ ಸದನದಲ್ಲಿ ಬೆಳಗ್ಗೆ ಮತ್ತು ಸಂಜೆ ಸಿಂಗಾಪುರ ಹಾಗೂ ಕರ್ನಾಟಕದ ಪ್ರಸಿದ್ಧ ನೃತ್ಯಪಟುಗಳು ಮತ್ತು ಉದಯೋನ್ಮುಖ ಕಲಾವಿದರ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ‘ಅನನ್ಯ’ಕ್ಕೆ ಈಗ ಇಪ್ಪತ್ಮೂರರ ಪ್ರಾಯ. ಪತ್ರಿಕೆಗೆ ಇಪ್ಪತ್ತು ತುಂಬಿದೆ. ಕಳೆದ ವರ್ಷ ಎರಡು ಸಾರ್ಥಕ ದಶಕಗಳ ಮೆಲುಕಿನ ಸಂಗೀತೋತ್ಸವವೂ ನಡೆಯಿತು. ಆಸಕ್ತಿ, ಕಾಳಜಿಗಳಿದ್ದಲ್ಲಿ ಯಾರ ಹಂಗೂ ಇಲ್ಲದೆ ವ್ಯಕ್ತಿಗತ ನೆಲೆಯಲ್ಲೇ ಕಲೆ ಸಂಸ್ಕೃತಿ ಪೋಷಣೆಯ ಕೆಲಸಗಳನ್ನು ಮಾಡಬಹುದು ಎನ್ನುವುದಕ್ಕೆ ಡಾ. ಆರ್. ವಿ.ರಾಘವೇಂದ್ರ ಒಂದು ಉತ್ತಮ ನಿದರ್ಶನ. ಪ್ರಚಾರದ ಅಬ್ಬರ ಆರ್ಭಟಗಳಿಲ್ಲದೆ ಸಂಗೀತ ಮತ್ತಿತರ ಕಲೆಗಳಲ್ಲಿ ಗಣನೀಯ ಕೆಲಸಮಾಡುತ್ತ ರಜತ ಮಹೋತ್ಸವದತ್ತ ಸಾಗಿರುವ ಈ ಏಕವ್ಯಕ್ತಿ ಸಾಧನೆ ಒಂದು ಅನುಕರಣೀಯ ಮಾದರಿ.