ದಿಲ್ಲಿ ದರ್ಬಾರ್
ಶಾ ಮನೆಗಾಗಿ ಹುಡುಕಾಟ
ಯಾವುದೇ ಪ್ರಮುಖ ಚುನಾವಣೆಗೂ ಮುನ್ನ ಕಾರ್ಯಪ್ರವೃತ್ತರಾಗುವುದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾರ್ಯಶೈಲಿ. ಸದ್ಯ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅತೀಹೆಚ್ಚು ಸ್ಥಾನಗಳನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಅಮಿತ್ ಶಾ ತಂಗಲು ಒಂದು ಉತ್ತಮ ಮನೆಯ ಹುಡುಕಾಟದಲ್ಲಿ ರಾಜ್ಯ ಬಿಜೆಪಿಯ ನಾಯಕರು ನಿರತರಾಗಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಶಾ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಿದ್ಧತೆಗಳನ್ನು ನೋಡಿಕೊಳ್ಳುವ ಉದ್ದೇಶದಿಂದ ಇನ್ನು ಮುಂದೆ ಹೆಚ್ಚಿನ ಸಮಯವನ್ನು ತಾನು ಕೋಲ್ಕತಾದಲ್ಲಿ ಕಳೆಯುವುದಾಗಿ ತಿಳಿಸಿದ್ದಾರೆ. ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ ಪ.ಬಂಗಾಳದಲ್ಲಿನ 42 ಲೋಕಸಭಾ ಸ್ಥಾನಗಳ ಪೈಕಿ ಪಕ್ಷವು ಏನಿಲ್ಲವೆಂದರೂ ಕನಿಷ್ಠ20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. 2014ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಕೇವಲ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಕರ್ನಾಟಕದಲ್ಲೂ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ತಾನು ತಂಗಲು ಒಂದು ಮನೆಯನ್ನು ಹುಡುಕುವಂತೆ ಅಮಿತ್ ಶಾ ರಾಜ್ಯದ ಬಿಜೆಪಿ ನಾಯಕರಿಗೆ ಸೂಚಿಸಿದ್ದರು. ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಗಳಿಸುವಲ್ಲಿ ವಿಫಲವಾಗಿತ್ತು. ಇದೀಗ ಕೋಲ್ಕತಾದಲ್ಲಿ ಶಾ ತಂಗಲು ನಿರ್ಧರಿಸಿರುವುದರಿಂದ ಪೂರ್ವ ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮವಾಗಲಿದೆ ಎಂಬುದನ್ನು ಕಾಲವೇ ತಿಳಿಸಬೇಕು.
ಭಾರತ ರತ್ನ ರಾಜಕೀಯ
ಈ ವರ್ಷ ಸರಕಾರವು ದೇಶಕ್ಕಾಗಿ ಅಭೂತಪೂರ್ವ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ನೀಡಲಾಗುವ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪಟ್ಟಿಯಲ್ಲಿ ಕೆಲವೊಂದು ಆಸಕ್ತಿಕರ ಹೆಸರುಗಳು ಕಾಣಿಸಿಕೊಳ್ಳಲಿವೆ. ಈ ಪೈಕಿ ಒಂದು ಹೆಸರು ಡಾ. ಬಿ. ಆರ್. ಅಂಬೇಡ್ಕರ್ ನಂತರ ಅತ್ಯಂತ ಪ್ರಮುಖ ದಲಿತ ನಾಯಕ ಎಂದೇ ಪರಿಗಣಿಸಲ್ಪಟ್ಟಿರುವ ಕಾನ್ಶೀರಾಮ್ ಅವರದ್ದು. ದಲಿತ ಸಮುದಾಯದ ಏಳಿಗೆಗಾಗಿ ಮಾಡಿರುವ ಪ್ರಯತ್ನಕ್ಕಾಗಿ ಕಾನ್ಶೀರಾಮ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದಲೂ ಕೇಳಿಬರುತ್ತಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಇತರ ಪಕ್ಷಗಳು ದಲಿತ ವಿರೋಧಿ ಪಕ್ಷ ಎಂದೇ ಸಂಬೋಧಿಸುತ್ತಾರೆ. ಈ ಆರೋಪದಿಂದ ಹೊರಬರುವ ಪ್ರಯತ್ನ ವಾಗಿ ಮೋದಿ ಸರಕಾರ ಕಾನ್ಶೀರಾಮ್ ಅವರಿಗೆ ಭಾರತ ರತ್ನ ನೀಡಿ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ಹಾಗೂ ಇತರ ಪಕ್ಷಗಳಿಗೆ ಆಘಾತ ನೀಡಲು ಯೋಜನೆ ರೂಪಿಸಿದ್ದಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಒಂದಂತೂ ನಿಜ, ಮೋದಿ ಬಳಿ ಇನ್ನೂ ಕೆಲವು ಬ್ರಹ್ಮಾಸ್ತ್ರಗಳು ಬಾಕಿಯುಳಿದಿದ್ದು, ಸದ್ಯ ದಲಿತ ಮುಖಂಡರಿಗೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ವಿಪಕ್ಷಗಳನ್ನು ಹಣಿಯುವ ಕಾರ್ಯಕ್ಕೆ ಕೈಹಾಕಿದ್ದಾರೆ.
ವಿವಾದ ಪ್ರಿಯ ಕೈಲಾಶ್ ವಿಜಯವರ್ಗೀಯ
ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ನೇತೃತ್ವ ವಹಿಸಿದ್ದ ಕಪಿಲ್ ದೇವ್ ಕೆಲದಿನಗಳ ಹಿಂದೆ ಬಹಳ ಖುಷಿಯಲ್ಲಿದ್ದರು. ಪ್ರತಿಷ್ಠಿತ ವ್ಯಕ್ತಿಗಳ ವಿಭಾಗದಲ್ಲಿ ತನ್ನ ಹೆಸರನ್ನು ರಾಜ್ಯಸಭೆಗೆ ನಾಮಾಂಕಿತಗೊಳಿಸುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಮ್ಮ ಗೆಳೆಯರಲ್ಲಿ ಅವರು ಹೇಳುತ್ತಿದ್ದಾಗ ಅವರ ಮುಖದಲ್ಲಿ ಸಂತೋಷದ ಗೆರೆಯೊಂದು ಮೂಡಿ ಮಾಯವಾಗುತ್ತಿತ್ತು. ಆದರೆ ಸರಕಾರ ಅಂತಿಮವಾಗಿ ರಾಜ್ಯಸಭೆಗೆ ಹೆಸರುಗಳನ್ನು ಸೂಚಿಸಿದಾಗ ಅದರಲ್ಲಿ ಎಲ್ಲೂ ಕಪಿಲ್ ದೇವ್ ಹೆಸರು ಕಾಣಿಸಿಕೊಳ್ಳಲೇ ಇಲ್ಲ. ಇದರಿಂದ ಕ್ರಿಕೆಟ್ ದಿಗ್ಗಜನಿಗೆ ಆದ ದುಃಖ ಅಷ್ಟಿಷ್ಟಲ್ಲ. ಕೇವಲ ಕಪಿಲ್ ದೇವ್ ಮಾತ್ರವಲ್ಲ, ನಟಿ ಮಾಧುರಿ ದಿಕ್ಷಿತ್ ಕೂಡಾ ಈ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆಕೆಯ ಹೆಸರೂ ಮಾಯವಾಗಿತ್ತು. ಇದರಿಂದಾಗಿ ಮಾಧ್ಯಮಗಳು ಪ್ರಕಟಿಸಿದ ಸುದ್ದಿ ಬರೀ ಸುಳ್ಳು ಎಂದು ಸಾಬೀತಾಗಿತ್ತು. ಎಲ್ಲ ಮುಗಿದ ಮೇಲೆ, ಪತ್ರಿಕೆಗಳ ಸಂಪಾದಕರು ಮತ್ತು ವರದಿಗಾರರು ಕುಳಿತು ಈ ಬಗ್ಗೆ ಚರ್ಚೆ ನಡೆಸಿದರು. ಅಷ್ಟಕ್ಕೂ ಕಪಿಲ್ ಮತ್ತು ಮಾಧುರಿ ಹೆಸರು ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿದೆ ಎಂಬ ಸುದ್ದಿ ನಿಮಗೆ ಸಿಕ್ಕಿದ್ದಾದರೂ ಎಲ್ಲಿ ಮತ್ತು ನಿಮ್ಮ ಸುದ್ದಿಯ ಮೂಲ ಯಾವುದು ಎಂದು ಸಂಪಾದಕರು ವರದಿಗಾರರಲ್ಲಿ ವಿಚಾರಿಸಿದಾಗ ಹಲವು ವರದಿಗಾರರು ಒಬ್ಬ ವ್ಯಕ್ತಿಯತ್ತ ಬೆರಳು ತೋರಿಸಿದ್ದಾರೆ. ಅವರೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು. ಯಾರೂ ಕೂಡಾ, ನೀವು ಯಾಕೆ ಈ ರೀತಿ ಸುಳ್ಳು ಸುದ್ದಿಯನ್ನು ಹರಡಿದ್ದೀರಿ ಎಂದು ಪ್ರಶ್ನಿಸಲು ವರ್ಗೀಯ ಬಳಿ ಹೋಗಲಿಲ್ಲ. ಆದರೆ ಒಬ್ಬ ಸುದ್ದಿಯ ಮೂಲವಾಗಿ ಅವರ ಗೌರವಕ್ಕೆ ಧಕ್ಕೆಯಾಗಿರುವುದಂತೂ ಸುಳ್ಳಲ್ಲ.
ರಾಜನಾಥ್‌ರ ಅನಾಸಕ್ತಿ
ಕೇಂದ್ರ ಸಚಿವರ ಪೈಕಿ ವೈಯಕ್ತಿಕ ಮೊಬೈಲ್ ಫೋನ್ ಇಲ್ಲದ ವ್ಯಕ್ತಿಯೊಬ್ಬರಿದ್ದರೆ ಅವರು ಗೃಹ ಸಚಿವ ರಾಜನಾಥ ಸಿಂಗ್ ಮಾತ್ರ. ಹಳೆ ತತ್ವಗಳನ್ನು ಬಲವಾಗಿ ನಂಬಿರುವ ಸಿಂಗ್, ಮೊಬೈಲ್‌ನಂಥ ಗೀಳಿಗೆ ಸಿಲುಕುವ ಅಗತ್ಯ ನನಗಿಲ್ಲ ಎಂದೇ ಹೇಳುತ್ತಾರೆ. ಆದರೆ ಇದರಿಂದಾಗಿ ಅವರು ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಅರ್ಥವಲ್ಲ. ಅವರ ಆಪ್ತ ಸಹಾಯಕರ ಮೊಬೈಲ್‌ಗೆ ಕರೆ ಮಾಡಿದರೆ ಸಿಂಗ್ ಜೊತೆ ಮಾತನಾಡಬಹುದಾಗಿದೆ. ಇನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಚಟುವಟಿಕೆಯಿಂದಿರಲು ಸಿಂಗ್ ಆಸಕ್ತಿ ಹೊಂದಿಲ್ಲ. ಹಾಗಾಗಿ ಅವರ ಸಾಮಾಜಿಕ ಮಾಧ್ಯಮ ತಂಡವು ಸಂಪುಟದ ಇತರ ಸಚಿವರ ತಂಡಕ್ಕಿಂತ ಸಾಕಷ್ಟು ಚಿಕ್ಕದಾಗಿದೆ. ರಾಜನಾಥ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಇದಕ್ಕಿಂತ ದೊಡ್ಡ ವ್ಯತ್ಯಾಸವಿರಬಹುದೇ? ಈ ಕಾರಣದಿಂದಾಗಿಯೇ ಸಿಂಗ್ ವಿರೋಧ ಪಕ್ಷಗಳ ನಾಯಕರ ಮಧ್ಯೆಯೂ ಜನಪ್ರಿಯರಾಗಿದ್ದಾರೆ. ಬಹುಶಃ ಸಿಂಗ್, 2019ರ ಲೋಕಸಭಾ ಚುನಾವಣೆಯ ಫಲಿತಾಂಶಕಾಗಿ ಕಾಯುತ್ತಿದ್ದು ಒಂದು ವೇಳೆ ಫಲಿತಾಂಶವು ಮೋದಿ ಪರವಾಗಿ ಇಲ್ಲದಿದ್ದಲ್ಲಿ ಪಕ್ಷದ ಒಳಗೆ ಶಸ್ತ್ರಚಿಕಿತ್ಸೆ ನಡೆಸಿ ತಾನು ಪ್ರಧಾನ ಮಂತ್ರಿ ಪಟ್ಟದಲ್ಲಿ ಕುಳಿತುಕೊಳ್ಳುವ ನಿರೀಕ್ಷೆಯಲ್ಲಿದ್ದಂತಿದೆ.
ಶೌರಿಯ ಕೋಪ
ಕಳೆದ ವಾರ ನ್ಯಾಯವಾದಿ-ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಜೊತೆ ಕೈಜೋಡಿಸಿದ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ, ರಫೇಲ್ ಯುದ್ಧವಿಮಾನ ಒಪ್ಪಂದವನ್ನು ಭಾರತದ ಇತಿಹಾಸದಲ್ಲೇ ನಡೆದಿರುವ ಅತ್ಯಂತ ದೊಡ್ಡ ರಕ್ಷಣಾ ಹಗರಣ ಎಂದು ವ್ಯಾಖ್ಯಾನಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶದ ಭದ್ರತೆಯ ಜೊತೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ಇದು ಬೊಫೋರ್ಸ್‌ಗಿಂತಲೂ ದೊಡ್ಡ ಹಗರಣ ಎಂದು ತಿಳಿಸಿರುವ ಅರುಣ್ ಶೌರಿ ರಫೇಲ್ ಒಪ್ಪಂದದ ವೈಜ್ಞಾನಿಕ ಆಡಿಟ್ ನಡೆಸುವ ಮೂಲಕ ಅದಕ್ಕೆ ಹೊಣೆ ಯಾರೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. 80ರ ದಶಕದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ ಶೌರಿ, ಬೊಫೋರ್ಸ್ ಹಗರಣದಲ್ಲಿ ಅಂದಿನ ರಾಜೀವ್ ಗಾಂಧಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಅವರು ಪತ್ರಕರ್ತರಿಗೆ ಈ ಹಗರಣದ ಪ್ರತಿಯೊಂದು ವಿವರವನ್ನು ನೀಡಿದ ರೀತಿಯಿಂದ ಎಲ್ಲರನ್ನೂ ಚಕಿತಗೊಳಿಸಿದ್ದರು. ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದ ಶೌರಿ ಸದ್ಯ ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದು ಇದರಿಂದ ಮೋದಿ ಸರಕಾರದ ಮೇಲೆ ಒತ್ತಡ ಹೆಚ್ಚಲಿದೆ ಎಂದು ನಂಬಲಾಗಿದೆ. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಕೇಂದ್ರ ವಿತ್ತ ಸಚಿವರ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಹೆಸರು ಅರುಣ್ ಶೌರಿಯವರದ್ದು. ಆದರೆ ಅವರನ್ನು ಬದಿಗೊತ್ತಿ ನಿರ್ಲಕ್ಷಿಸಲ್ಪಟ್ಟ ಕಾರಣ ಆಕ್ರೋಶಗೊಂಡ ಶೌರಿ ಅಂದಿನಿಂದ ಮೋದಿ ಸರಕಾರದ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ.