varthabharthi


ವಾರದ ವ್ಯಕ್ತಿ

ವಾರದ ವ್ಯಕ್ತಿ

ಗಾಂಧಿ ಎಂದಾಕ್ಷಣ ಗೆಲುವಾಗುವ ರಾಜಶೇಖರನ್

ವಾರ್ತಾ ಭಾರತಿ : 12 Aug, 2018
-ಬಸು ಮೇಗಲಕೇರಿ

‘‘ಬ್ರಿಟಿಷರ ಬಿಗಿಮುಷ್ಟಿಯಿಂದ ಬಿಡುಗಡೆ ಪಡೆದ ಭಾರತ, ಸ್ವತಂತ್ರವಾಗಿ ಇದೇ ಆಗಸ್ಟ್ 15ಕ್ಕೆ 71 ವರ್ಷಗಳಾಯಿತು. ನೀವು ಗಾಂಧಿಯಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದವರು. ಆ ದಿನಗಳನ್ನು, ಹೋರಾಟದ ನೆನಪುಗಳನ್ನು ಮೆಲುಕು ಹಾಕಬಹುದೆ’’ ಎಂದೆ. ಅದಕ್ಕೆ ಅವರು, ‘‘ನನಗೀಗ 90 ವರ್ಷ. ಕಿವಿ ಮಂದ, ಕಣ್ಣು ಸರಿಯಾಗಿ ಕಾಣಲ್ಲ. ಆರೋಗ್ಯವೂ ಸರಿಯಿಲ್ಲ. ಹೊರಗೆ ಹೋಗುವುದೇ ಕಮ್ಮಿಯಾಗಿದೆ’’ ಎಂದು ಕೊಂಚ ನಿರಾಸಕ್ತಿಯಿಂದಲೇ ಮಾತಿಗಿಳಿದರು ಕೇಂದ್ರ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಎಂ.ವಿ.ರಾಜಶೇಖರನ್.
1946. ನನಗಾಗ 18 ವರ್ಷ. ವಿದ್ಯಾರ್ಥಿ. ಕನಕಪುರದ ಕರಿಯಪ್ಪನವರ ರೂರಲ್ ಎಜುಕೇಷನ್ ಸಂಸ್ಥೆಯಲ್ಲಿ ಓದುತ್ತಿದ್ದೆ. ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದೆ. ಮದ್ರಾಸ್‌ನಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಗೆ ಮಹಾತ್ಮಾ ಗಾಂಧೀಜಿ ಬರುತ್ತಾರೆಂದು, ಭಾಷಣವಿದೆಯೆಂದು ತಿಳಿಯಿತು. ಐದಾರು ಹುಡುಗರು ಮದ್ರಾಸಿಗೆ ಹೋಗುವುದೆಂದು ನಿರ್ಧರಿಸಿದೆವು. ನಮ್ಮ ತಾತ ದೊಡ್ಡ ಜಮೀನ್ದಾರರು- ಮುದ್ದಮಲ್ಲಶೆಟ್ಟರು- ಸುತ್ತಮುತ್ತಲ ಹಳ್ಳಿಯ ಜನ ಅವರ ಮಾತು ಕೇಳುತ್ತಿದ್ದರು. ಅವರಿಗೆ ಗಾಂಧಿ ಕಂಡರೆ ವಿಶೇಷ ಗೌರವ. ಹೋಗಿ ಬಾ ಎಂದರು. ಜೊತೆಗೆ ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಗಾಂಧಿವಾದಿ ಕರಿಯಪ್ಪನವರು ಅನುಮತಿ ನೀಡಿದರು. ಹಾಗಾಗಿ ನಾವೊಂದಿಷ್ಟು ಹುಡುಗರು ಮದ್ರಾಸಿಗೆ ಹೋದೆವು. ಅದೇ ನೋಡಿ, ಮೊದಲ ಬಾರಿಗೆ ಮಹಾತ್ಮಾ ಗಾಂಧೀಜಿಯವರನ್ನು ಬಹಳ ಹತ್ತಿರದಿಂದ ನೋಡಿದ್ದು. ನಮ್ಮ ವಯಸ್ಸು, ಉತ್ಸಾಹಕ್ಕೆ ಚೈತನ್ಯ ತುಂಬುವಂತಹ ವ್ಯಕ್ತಿತ್ವವದು. ಅವರ ಮಾತು, ಮಾನವೀಯತೆ, ಸರಳ ಸಜ್ಜನಿಕೆಯನ್ನು ಖುದ್ದಾಗಿ ಕಂಡು ಕರಗಿಹೋದೆವು. ಇನ್ನು ಅವರ ‘ಮಾಡು ಇಲ್ಲವೇ ಮಡಿ’ ಘೋಷವಾಕ್ಯವಂತೂ ಹೋರಾಟಕ್ಕೆ ಹುಚ್ಚೆಬ್ಬಿಸಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿತ್ತು.
ನೋಡಿ, ಗಾಂಧಿ ಎಂದಾಕ್ಷಣ ಸೊಪ್ಪಿನ ಥರ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಮೈಮನಸ್ಸು ಹೇಗೆ ಅರಳಿತು. ಸ್ವಾತಂತ್ರ್ಯ ಸಂಗ್ರಾಮವೆಂದಾಕ್ಷಣ ಎಲ್ಲಿಲ್ಲದ ಚೈತನ್ಯ ಬಂದುಬಿಟ್ಟಿತು. ಅದಕ್ಕೆ ಕಾರಣ ಆ ಮಹಾತ್ಮಾ ಗಾಂಧಿ ಎಂದು ಗೆಲುವಾದರು. ಮಾತಿನ ಉಮೇದಿಗಿಳಿದರು.
ನಾನು ಹುಟ್ಟಿದ್ದು(12.9.1928) ಕನಕಪುರ ತಾಲೂಕಿನ ಮರಳವಾಡಿಯಲ್ಲಿ. ನನಗೆ ತುಂಬಾ ಪ್ರಿಯವಾದ ಹಳ್ಳಿಯದು. ಆ ಹಳ್ಳಿಯ ನಿರ್ಮಲ ಪರಿಸರ, ಮುಗ್ಧ ಜನ, ಕಷ್ಟದ ಕೃಷಿ ಬದುಕು ನನ್ನನ್ನು ರೂಪಿಸಿವೆ. ನಮ್ಮೂರೇ ಒಂದು ಪುಟ್ಟ ಭಾರತದಂತಿತ್ತು. ಎಲ್ಲ ಜಾತಿಯ ಜನರೂ ಇದ್ದರು. ನಮ್ಮ ಮನೆಯ ಮುಂದೆ ಒಕ್ಕಲಿಗರು, ಹಿಂದಕ್ಕೆ ಮುಸ್ಲಿಮರು, ಆ ಕಡೆಗೆ ತಿಗಳರು, ಅಗಸರು, ಮೇದರು, ಕುಂಬಾರರು, ಮರಾಠರು, ಆಚಾರರು, ಮುಂದಿನ ಬೀದಿಯಲ್ಲಿ ಬ್ರಾಹ್ಮಣರು, ಊರ ಹೊರಗೆ ದಲಿತರು ಇದ್ದರು. ನಾನು ಹುಡುಗನಾಗಿದ್ದಾಗ ನನಗೆ ಎಲ್ಲ ಜಾತಿಯ ಸ್ನೇಹಿತರಿದ್ದರು. ಎಲ್ಲರೊಂದಿಗೂ ಕೂಡುವುದು, ಕಲಿಯುವುದು ರೂಢಿಯಾಗಿತ್ತು. ಬ್ರಿಟಿಷರ ಆಳ್ವಿಕೆಗೆ ಒಳಗಾಗಿದ್ದ ದಿನಗಳವು. ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳೇ ಇರಲಿಲ್ಲ. ನಾಡಂಚಿನ ಮನೆಗಳು, ಗುಡಿಸಲುಗಳು. ಎಲ್ಲರೂ ಬಡವರೇ. ಆದರೂ, ಹಸಿವಿನಿಂದ ಸತ್ತಿದ್ದನ್ನು ನಾನು ನೋಡಿಲ್ಲ. ಮಳೆ ಬಂದರೆ ಕೃಷಿ, ಇಲ್ಲವೆಂದರೆ ಇಲ್ಲ. ಕೂಲಿನಾಲಿ ಮಾಡಿ ಬದುಕಿದರೂ ಬೇಸರವಿಲ್ಲ. ಆದರೂ ಜೀವನ ನಿರ್ವಹಿಸುವುದು ಕಷ್ಟ ಅನ್ನಿಸಿರಲಿಲ್ಲ. ಶ್ರೀಮಂತ ಜಮೀನ್ದಾರರು ಉದಾರಿಗಳಾಗಿದ್ದರು. ಹಂಚಿ ತಿನ್ನುವ ಮನಸ್ಸುಳ್ಳ ಮನುಷ್ಯರಾಗಿದ್ದರು. ವಿದ್ಯೆ-ಕಲಿಯುವವರೂ ಇಲ್ಲ, ಕಲಿಸುವವರೂ ಇಲ್ಲ. ಸಮಾಜದಲ್ಲಿ ಅಜ್ಞಾನ ಮನೆ ಮಾಡಿತ್ತು. ಮೂಢನಂಬಿಕೆ, ಕಂದಾಚಾರ, ಸಂಪ್ರದಾಯಗಳು ಹೆಚ್ಚಾಗಿದ್ದು, ಶೋಷಣೆ ಸಾಮಾನ್ಯವಾಗಿತ್ತು. ಆದರೆ ಹಳ್ಳಿಯ ಆ ಪರಿಸ್ಥಿತಿಯೇ, ಅವರ ಬದುಕೇ ಮಾನವೀಯತೆಯಿಂದ ಕೂಡಿತ್ತು. ಅದೇ ನನ್ನನ್ನು ಮನುಷ್ಯನನ್ನಾಗಿಸಿತು.
ನಾವು ಹುಡುಗರಾಗಿದ್ದಾಗ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದು, ಗುಂಪು ಕಟ್ಟಿಕೊಂಡು, ವೈಷ್ಣವ ಜನತೋ ಹಾಡು ಹೇಳುತ್ತಾ, ಭಜನೆ ಮಾಡುತ್ತಾ, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಮಹಾತ್ಮಾ ಗಾಂಧೀಜಿಯವರ ‘ಮಾಡು ಇಲ್ಲವೇ ಮಡಿ’ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೆವು. ನಮ್ಮ ಗುಂಪಿಗೆ ನಾಯಕರಂತಿದ್ದವರು ಪಿಜಿಆರ್ ಸಿಂಧ್ಯಾ ಅವರ ತಂದೆ ಪಾಂಡುರಂಗರಾವ್ ಶಿಂಧೆ. ಇವರು ನಮಗಿಂತ ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರು. ಹಾರ್ಮೋನಿಯಂ ನುಡಿಸುವುದರಲ್ಲಿ ಪರಿಣಿತರು. ನಮ್ಮ ಭಜನೆ, ಅವರ ಹಾರ್ಮೋನಿಯಂ- ಬೆಳಗ್ಗೆಯಿಂದ ಸಂಜೆಯವರೆಗೆ ಸುಮಾರು ಹತ್ತರಿಂದ ಹನ್ನೆರಡು ಹಳ್ಳಿ ಸುತ್ತುತ್ತಿದ್ದೆವು. ವೆಂಕಟಾಚಲಪತಿ ಅಂತ ಒಬ್ಬರಿದ್ದರು, ಸೈಕಲ್ ಶಾಪ್ ಮಾಲಕರು. ಅವರು ನಮ್ಮ ಪ್ರಭಾತ ಫೇರಿಗೆ, ಹಳ್ಳಿ ಸುತ್ತುವ ಹುಡುಗರಿಗೆ ಉಚಿತವಾಗಿ ಸೈಕಲ್ ಕೊಟ್ಟು ಹುರಿದುಂಬಿಸುತ್ತಿದ್ದರು. ಈ ವೈಷ್ಣವ ಜನತೋ ಇದೆಯಲ್ಲ, ಇದು ನನ್ನ ಬದುಕಿನ ಗತಿಯನ್ನೇ ಬದಲಿಸಿತು.
1947ರಲ್ಲಿ ಮೈಸೂರು ಚಲೋ ನಡೆಯಿತು. ಪರಕೀಯರ ಆಳ್ವಿಕೆಯಿಂದ ದೇಶ ಸ್ವತಂತ್ರವಾಗಿತ್ತು. ಆದರೆ ಮೈಸೂರು ಅರಸರ ರಾಜಪ್ರಭುತ್ವ ಹಾಗೆಯೇ ಮುಂದುವರಿದಿತ್ತು. ಇದರ ವಿರುದ್ಧ, ಜವಾಬ್ದಾರಿಯುತ ಸರಕಾರಕ್ಕಾಗಿ, ಪ್ರಜಾಸತ್ತೆಗಾಗಿ ‘ಮೈಸೂರು ಚಲೋ’ ಹೋರಾಟ ನಡೆದಿತ್ತು. ಅಂದರೆ ಸ್ವರಾಜ್ಯವಾದ ಮೇಲೆ ಸುರಾಜ್ಯಕ್ಕಾಗಿ ಹೋರಾಟ. ಈ ಹೋರಾಟದಲ್ಲಿ ಭಾಗವಹಿಸಲು ನಾವು ಅರವತ್ತೆಪ್ಪತ್ತು ಹುಡುಗರು ಕನಕಪುರದಿಂದ ಮೈಸೂರಿಗೆ, ಸುಮಾರು 100 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋಗಿದ್ದೆವು. ಕಾಲ್ನಡಿಗೆಯ ಉದ್ದಕ್ಕೂ ನಮಗೆ ಊಟ, ತಿಂಡಿ ಕೊಟ್ಟು ಜನ ಸತ್ಕರಿಸುತ್ತಿದ್ದರು, ನಮ್ಮ ಹೋರಾಟವನ್ನು ಬೆಂಬಲಿಸುತ್ತಿದ್ದರು. ಇಲ್ಲೊಂದು ಸ್ವಾರಸ್ಯಕರ ಘಟನೆ ಜರುಗಿತು. ನಾವು ಎಂಟತ್ತು ಹುಡುಗರು ಒಂದು ಮನೆಗೆ ಊಟಕ್ಕೆ ಹೋದೆವು. ನಮ್ಮನ್ನು ಅತ್ಯಂತ ಗೌರವದಿಂದ ಕಂಡು, ಊಟ ಬಡಿಸಿ ಸತ್ಕರಿಸಿದರು. ಬರುವಾಗ ಮನೆಯ ವರಾಂಡದಲ್ಲಿ ರಾಗಿ ಮೂಟೆಯ ಮೇಲೆ ಪೊಲೀಸ್ ಟೋಪಿ ಇದೆ! ಅದು ಪೊಲೀಸ್ ಪೇದೆ ಮನೆ! ಅಂದರೆ ಪ್ರಭುತ್ವದ ಪರವಾಗಿದ್ದ ಸರಕಾರಿ ಸೇವಕನ ಮನೆ. ನಾವು ಅದರ ವಿರುದ್ಧ ಹೋರಾಡುವ ಹುಡುಗರು. ಆಶ್ಚರ್ಯವೆಂದರೆ, ಆ ಪೊಲೀಸ್ ಪೇದೆ ಸ್ವಾತಂತ್ರ್ಯ ಪ್ರೇಮಿ, ಗಾಂಧಿ ಬಗ್ಗೆ ಅಪಾರ ಭಕ್ತಿ-ಗೌರವಗಳನ್ನಿಟ್ಟುಕೊಂಡವ. ನೇರವಾಗಿ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಆತನಿಗೆ ಆಸೆಯಿದ್ದರೂ, ಪೊಲೀಸ್ ಕೆಲಸ ಅಡ್ಡಿಯಾಗಿತ್ತು. ಆ ಅಡ್ಡಿಯನ್ನು ಆತ ಹೋರಾಟಗಾರ ಹುಡುಗರಿಗೆ ಊಟ ಹಾಕಿ, ಬೆಂಬಲಿಸುವ ಮೂಲಕ ತಣಿಸಿಕೊಂಡಿದ್ದ. ಅಂದಿನ ಅಂತಹ ಉದಾರಿಗಳ ದೇಶಪ್ರೇಮವೇ ನನಗೆ ಮಾರ್ಗದರ್ಶನವಾಗಿದ್ದು.
ಹಾಗೆಯೇ ಅರ್ಕಾಟ್ ರಾಮಸ್ವಾಮಿ ಅಯ್ಯಂಗಾರ್ ಮೈಸೂರು ರಾಜಸತ್ತೆಯಲ್ಲಿ ದಿವಾನರಾಗಿದ್ದರೂ, ರಾಜಸತ್ತೆಯ ವಿರುದ್ಧವಿದ್ದರು. ಪ್ರಜಾಸತ್ತೆ ಹೋರಾಟಗಾರರ ಬೆಂಬಲಿಗರಾಗಿದ್ದರು. ನಮ್ಮಂತೆಯೇ ನಾಡಿನ ನಾನಾ ಭಾಗಗಳಿಂದ ಮೈಸೂರು ಚಲೋಗಾಗಿ ಹಲವಾರು ಹೋರಾಟಗಾರರು ಮೈಸೂರಿಗೆ ಬಂದಿದ್ದರು. ನಮ್ಮ ತಂಡ ಮೈಸೂರು ಪ್ರವೇಶಿಸುತ್ತಿದ್ದಂತೆಯೇ ಪೊಲೀಸರು ನಮ್ಮನ್ನು ಬಂಧಿಸಿ ಜೈಲಿಗೆ ತುಂಬಿದರು. ಜನರ ಆಕ್ರೋಶ ಹೆಚ್ಚಾದಾಗ, ಠಾಣೆಗೆ ಕಲ್ಲು ಹೊಡೆದು ಪ್ರತಿಭಟಿಸಿದಾಗ ನಮ್ಮನ್ನು ಬಿಡುಗಡೆ ಮಾಡಿದರು. ಕೆ.ಸಿ.ರೆಡ್ಡಿ, ಕೆ.ಟಿ.ಭಾಷ್ಯಂ, ರಾಮರಾವ್, ತಿಮ್ಮಾರೆಡ್ಡಿ, ಯಶೋದರಮ್ಮ, ಟಿ.ಮರಿಯಪ್ಪರಂತಹ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಮುಂದಾಳುಗಳಾಗಿದ್ದರು. ಹಾಗೆ ನೋಡಿದರೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ನಮ್ಮ ನಾಡು ಬಹಳ ದೊಡ್ಡ ಕೊಡುಗೆಯನ್ನೇ ನೀಡಿದೆ. ವಿಧುರಾಶ್ವತ್ಥದಲ್ಲಾದ ಗೋಲಿಬಾರ್‌ಗೆ ಹನ್ನೊಂದು ಜನ ಬಲಿಯಾದರು. ಹಾವೇರಿಯ ಸ್ವಾತಂತ್ರ್ಯ ಹೋರಾಟಗಾರರಾದ ತಂದೆ-ಮಗ ಒಟ್ಟಿಗೆ ನೇಣಿಗೇರಿಸಲ್ಪಟ್ಟರು. ಸಂಗೊಳ್ಳಿ ರಾಯಣ್ಣ, ಮೈಲಾರ ಮಲ್ಲಪ್ಪ, ಮಹದೇವ ದೇಸಾಯಿ, ಸಿಂಧೂರ ಲಕ್ಷ್ಮಣ... ಒಬ್ಬರೆ ಇಬ್ಬರೆ. ಇವರೆಲ್ಲರೂ ನಮಗೆ ಸ್ಫೂರ್ತಿಯಾಗಿದ್ದರು. ಇದರ ಜೊತೆಗೆ, ಬಹಳ ದೊಡ್ಡ ಶಕ್ತಿಯಾಗಿ, ಸ್ಫೂರ್ತಿಯಾಗಿ ಗಾಂಧೀಜಿ ಇದ್ದರು. ಇವರೆಲ್ಲರ ತ್ಯಾಗ-ಬಲಿದಾನದ ಫಲ ಇವತ್ತಿನ ಸ್ವಾತಂತ್ರ್ಯ. ಅದು ಎಷ್ಟು ಜನಕ್ಕೆ ಗೊತ್ತಿದೆ?
ನನಗೆ ಕೃಷಿ, ಹಳ್ಳಿ, ರೈತರು ಕಂಡರೆ ಪ್ರೀತಿ ಹೆಚ್ಚು. ರೈತ ಆಕಾಶ ನೋಡುತ್ತಾ ವ್ಯವಸಾಯ ಮಾಡುತ್ತಾನೆ. ಅವನ ಅದೃಷ್ಟ ಚೆನ್ನಾಗಿದ್ದರೆ ಮಳೆ ಆಗಬಹುದು, ಇಲ್ಲದಿದ್ದರೆ ಬಿತ್ತಿದ ಬೀಜ ಕಣ್ಮರೆಯಾಗಬಹುದು. ಒಳ್ಳೆಯ ಬೆಳೆ ಬಂದ ನಂತರವೂ ಅದರ ಪೂರ್ಣ ಲಾಭ ಆತನಿಗೆ ದೊರಕದಿರಬಹುದು. ಅವನ ಲಾಭವನ್ನು ಮಧ್ಯವರ್ತಿಗಳು ನುಂಗಿಹಾಕಬಹುದು. ಒಟ್ಟಾರೆ ಭಾರತೀಯ ರೈತ ಅಸಹಾಯಕ ಸ್ಥಿತಿಯಲ್ಲಿದ್ದಾನೆ. ದೇಶಕ್ಕೆ ಅನ್ನ ಹಾಕುವ ರೈತ ಇವತ್ತು ಕಷ್ಟದಲ್ಲಿದ್ದಾನೆ. ಆ ಕಾರಣಕ್ಕಾಗಿಯೇ, ಶಾಸಕನಾಗಿ, ಸಂಸದನಾಗಿ, ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಾಗ- ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬಗ್ಗೆ ನನ್ನ ಶಕ್ತಿಮೀರಿ ಸೇವೆ ಸಲ್ಲಿಸಿದೆ. ಹತ್ತಾರು ದೇಶ ಸುತ್ತಿ ನೂರಾರು ಪ್ರೌಢ ಪ್ರಬಂಧ ಮಂಡಿಸಿದೆ. ಅದಕ್ಕೂ ಗಾಂಧಿಯೇ ಕಾರಣ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾಗಾಂಧಿ, ಸರದಾರ್ ವಲ್ಲಭಭಾಯಿ ಪಟೇಲ್, ಡಾ. ಬಾಬು ರಾಜೇಂದ್ರ ಪ್ರಸಾದ್ ಸಹ ರೈತ ಸಂಘಟನೆಗೆ ಮುಂದಾಗಿದ್ದರು. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ಅವರ ಮುಖ್ಯ ಗುರಿಯಾಗಿತ್ತು. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅಪಾರವಾದ ಮಾನವ-ನೈಸರ್ಗಿಕ ಸಂಪನ್ಮೂಲವಿದೆ. ಪಾರಂಪರಿಕ ವೃತ್ತಿವಂತ ಕುಶಲಕರ್ಮಿಗಳಿದ್ದಾರೆ. ಇವುಗಳನ್ನು ನಾವು ಸರಿಯಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಬೇಕು. ಕೃಷಿಯ ಜೊತೆ ಗುಡಿ ಕೈಗಾರಿಕೆ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಕುರಿ, ಕೋಳಿ, ಅಣಬೆ ಬೇಸಾಯದ ಬಗೆಗೆ ನಮ್ಮ ರೈತರಿಗೆ ತಿಳಿವಳಿಕೆ ನೀಡಬೇಕು. ಮಹಾತ್ಮಾ ಗಾಂಧಿಯವರು ಹೇಳಿದಂತೆ ಯಂತ್ರಗಳ ಬಳಕೆ ಕಡಿಮೆ ಮಾಡಿ ಯಥೇಚ್ಛವಾಗಿರುವ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು. ಆದರೆ ಅಂದುಕೊಂಡಂತೆ ಆಗಲಿಲ್ಲ. ಸ್ವಾತಂತ್ರ್ಯಾನಂತರ ಕೂಡ ನಾವು ನಮ್ಮ ಆರ್ಥಿಕ ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿ ಮಾಡಲಾಗಲಿಲ್ಲ. ಇದೇ ಇಂದಿನ ಎಲ್ಲಾ ಸಮಸ್ಯೆಗಳಿಗೂ ಮೂಲ. ನಮ್ಮ ಆರ್ಥಿಕ ದೃಷ್ಟಿಯ ಚಿಂತನೆ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದೆ. ನಗರಗಳ ಆಕರ್ಷಣೆಯ ಬದುಕಿನ ಮುಂದೆ ಗ್ರಾಮೀಣ ಬದುಕು ಬರಡು ಎನಿಸಿದೆ... ಇದು ಬದಲಾಗದ ಹೊರತು ದೇಶ ಉದ್ಧಾರಾಗದು ಎನ್ನುತ್ತಾರೆ ರಾಜಶೇಖರನ್.
ಮೇಲ್ಜಾತಿಯಲ್ಲಿ ಹುಟ್ಟಿದರೂ, ಬಹಳ ದೊಡ್ಡ ಜಮೀನ್ದಾರರ ಕುಟುಂಬದಿಂದ ಬಂದಿದ್ದರೂ, ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಅಳಿಯ ಎಂಬ ಹೆಗ್ಗಳಿಕೆಯಿದ್ದರೂ, 1960ರಿಂದ ಇಲ್ಲಿಯವರೆಗೆ ರಾಜಕೀಯ ರಂಗದಲ್ಲಿದ್ದು, ಹಲವಾರು ಹುದ್ದೆಗಳನ್ನು ಅಲಂಕರಿಸಿದರೂ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆಗಳನ್ನು ಬಿಟ್ಟುಕೊಡದವರು. ಹಾಗೆಯೇ ತನ್ನೂರು, ತಾತ ಮುದ್ದಮಲ್ಲಶೆಟ್ಟರು, ತಾಯಿ ಬಸಮ್ಮನವರು, ಮಡದಿ ಗಿರಿಜಾ ಮತ್ತು ಗಾಂಧೀಜಿ ನನ್ನನ್ನು ಮನುಷ್ಯನನ್ನಾಗಿಸಿದರು ಎಂದು ಹೇಳುವುದನ್ನು ಮರೆಯದವರು. ನಾನು ಯಾವುದೇ ಮಹತ್ವಾಕಾಂಕ್ಷೆ ಇಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆ ಬಂದವನಲ್ಲ. ನನಗೆ ರಾಜಕೀಯಕ್ಕಿಂತ ಗ್ರಾಮೀಣಾಭಿವೃದ್ಧಿಯೇ ಬಹಳ ಮುಖ್ಯವಾದುದು. ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿ, ಅವರ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆಯಾದರೆ, ನಾನು ನಿರಾಳ ಎನ್ನುವ ಎಂ.ವಿ.ರಾಜಶೇಖರನ್, ಗಾಂಧಿಯ ಜೀವನ ವೌಲ್ಯಗಳನ್ನು ಇಂದಿಗೂ ಪಾಲಿಸಿಕೊಂು ಬರುತ್ತಿರುವ ಅಪರೂಪದವರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)