ಓ ಮೆಣಸೇ...
ರಾಜಕಾರಣ ನಿಂತ ನೀರಲ್ಲ - ಎಚ್. ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
► ಅದು ಕೊಳೆತ ನೀರು.
---------------------
ರಾಹುಲ್‌ಗಾಂಧಿ ಸುಳ್ಳನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
► ನರೇಂದ್ರ ಮೋದಿಯವರನ್ನು ತಬ್ಬಿಕೊಂಡಾಗ ಅಂಟಿಕೊಂಡ ವೈರಸ್ ಅದು.
---------------------
ಕಾಂಗ್ರೆಸನ್ನು ನಿರ್ನಾಮ ಮಾಡುವ ಪಕ್ಷ ಇನ್ನೂ ಹುಟ್ಟಿಲ್ಲ - ಜಯಮಾಲಾ, ಸಚಿವೆ
► ಅದನ್ನು ನಿರ್ನಾಮ ಮಾಡಲು ಪಕ್ಷದೊಳಗೇ ಸಾಕಷ್ಟು ಜನರಿದ್ದಾರೆ.
---------------------
ಪತ್ರಿಕೋದ್ಯಮ ಇಂದು ಉದ್ಯಮವಾಗುತ್ತಿರುವುದು ಬಹು ದೊಡ್ಡ ದುರಂತ - ವೈ.ಎಸ್.ವಿ.ದತ್ತ, ಮಾಜಿ ಶಾಸಕ
► ಉದ್ಯಮಗಳು ಹೆಚ್ಚಬೇಕು ಎನ್ನುವುದೇ ಪ್ರಧಾನಿ ಮೋದಿಯ ಕನಸು.
---------------------
ಮಾಜಿ ಪ್ರಧಾನಿ ದೇವೇಗೌಡರು ವಿಶ್ವಕೋಶವಿದ್ದಂತೆ - ಪ್ರಜ್ವಲ್ ರೇವಣ್ಣ, ಜೆಡಿಎಸ್ ಪ್ರ.ಕಾರ್ಯದರ್ಶಿ
► ಮನೆಯೇ ಅವರ ವಿಶ್ವ.
---------------------
ಕಾರ್ಯಕರ್ತರಿಗಿಂತ ವಿಶ್ವಾಸಾರ್ಹ ಮಾಧ್ಯಮ ಮತ್ತೊಂದಿಲ್ಲ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಅದಕ್ಕೇ ಹೆಚ್ಚಿನ ಪತ್ರಿಕೆಗಳಲ್ಲಿ ನಿಮ್ಮ ಕಾರ್ಯಕರ್ತರೇ ಪತ್ರಕರ್ತರ ವೇಷದಲ್ಲಿರುವುದು.
---------------------
ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಏಳಿಗೆ ಹೊಂದುತ್ತಿರುವುದು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ - ಆದಿತ್ಯನಾಥ್, ಉ.ಪ. ಮುಖ್ಯಮಂತ್ರಿ
►ಯಾವ ದೇಶದ ಏಳಿಗೆ ಎನ್ನುವುದು ಪ್ರಶ್ನೆ.
---------------------
ಉದ್ಯೋಗವೇ ಇಲ್ಲದಿರುವಾಗ ಮೀಸಲಾತಿ ಎಲ್ಲಿರುತ್ತದೆ? - ನಿತಿನ್ ಗಡ್ಕರಿ, ಕೇಂದ್ರ ಸಚಿವ
►ಮೀಸಲಾತಿ ಅಳಿಸುವುದಕ್ಕಾಗಿ ಉದ್ಯೋಗ ಇಲ್ಲದಂತೆ ಮಾಡಿರುವುದೇ?
---------------------
ಇಂದು ಸ್ವಾಮಿ ವಿವೇಕಾನಂದರು ಇರುತ್ತಿದ್ದರೆ ಅವರೂ ಹಿಂಸಾತ್ಮಕ ದಾಳಿಗೆ ತುತ್ತಾಗುತ್ತಿದ್ದರು -ಶಶಿತರೂರು, ಕಾಂಗ್ರೆಸ್ ನಾಯಕ
► ಮತ್ತು ಉಳಿದವರು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದರು.
---------------------
ನನ್ನ ಇಬ್ಬರು ಮಕ್ಕಳಿಗೆ ಮದುವೆ ಮಾಡಲು ಸುಂದರಿಯರನ್ನು ಹುಡುಕಿ ಕೊಡಿ -ಅಶೋಕ್ ಖೇಣಿ, ಕಾಂಗ್ರೆಸ್ ಮುಖಂಡ
► ಅದಕ್ಕಾಗಿಯೇ ವಿಶೇಷ ತನಿಖಾ ತಂಡವೊಂದನ್ನು ರಚಿಸಿದರೆ?
---------------------
ಸಂವಿಧಾನದಲ್ಲಿ ಹಿಂಸೆಗೆ ಸ್ಥಾನವಿಲ್ಲ - ರಾಮನಾಥ್ ಕೋವಿಂದ್, ರಾಷ್ಟ್ರಪತಿ
► ಅದಕ್ಕೆ ಸಂವಿಧಾನವನ್ನೇ ಸುಡಲು ಹೊರಟಿರುವುದು.
---------------------
ಲೋಕಸಭಾ ಚುನಾವಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲುರಿಗೆ ಬಿಜೆಪಿ ಟಿಕೆಟ್ ತಪ್ಪಿಸಲು ಪಿತೂರಿ ನಡೆಯುತ್ತಿದೆ - ಪ್ರತಾಪ ಸಿಂಹ, ಸಂಸದ
► ಪಿತೂರಿಯಲ್ಲಿ ನಿಮ್ಮ ಪಾಲೆಷ್ಟು?
---------------------
ಬಿಜೆಪಿಯವರಿಗೆ ಶ್ರೀರಾಮ ದೇವರ ಶಾಪವಿದೆ - ವಿನಯ ಕುಮಾರ್ ಸೊರಕೆ, ಮಾಜಿ ಸಚಿವ
► ಅಧಿಕಾರ ಹಿಡಿಯಲು ಸಹಾಯಕವಾಗುವುದಾದರೆ ಅದೆಷ್ಟು ಶಾಪಗಳನ್ನೂ ಅವರು ಸ್ವೀಕರಿಸಲು ಸಿದ್ಧರಿದ್ದಾರೆ.
---------------------
ಜಿನ್ನಾ ಭಾರತದ ಪ್ರಧಾನಿಯಾಗಿದ್ದಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ -ದಲಾಯಿಲಾಮಾ, ಬೌದ್ಧ ಧರ್ಮ ಗುರು
► ಸದ್ಯಕ್ಕೆ ತಾವು ಟಿಬೆಟ್ ಕುರಿತಂತೆ ಹೇಳಿಕೆ ನೀಡಿದರೆ ಆರೋಗ್ಯಕ್ಕೆ ಉತ್ತಮ.
---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು 3 ತಿಂಗಳಲ್ಲಿ ಮೈತ್ರಿ ಸರಕಾರವನ್ನು ಉರುಳಿಸಲಿದ್ದಾರೆ - ಬಸವನ ಗೌಡ ಪಾಟೀಲ ಯತ್ನಾಳ, ಶಾಸಕ
► ಹಳೆ ಬಿಜೆಪಿ ಸರಕಾರದ ಅನುಭವದ ಮಾತೇ?
---------------------
ಮುಂದಿನ ಚುನಾವಣೆಯಲ್ಲಿ ಗೆದ್ದರೂ - ಸೋತರೂ ನಾನೇ ಹೊಣೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
► ಒಟ್ಟಿನಲ್ಲಿ ನಿಮ್ಮನ್ನು ಹೊಣೆಯಾಗಿಸಿ ಕಾಂಗ್ರೆಸ್ ಸೋಲಲು ಸಿದ್ಧತೆ ನಡೆಸುತ್ತಿದೆ ಎಂದಾಯಿತು.
---------------------
ನಮ್ಮ ಕತ್ತು ಕತ್ತರಿಸಿದರೂ ನಾವು ಮುಸಲ್ಮಾನರಾಗಿಯೇ ಮುಂದುವರಿಯುತ್ತೇವೆ -ಅಸದುದ್ದೀನ್ ಉವೈಸಿ, ಸಂಸದ
► ಒಳ್ಳೆಯ ಮುಸಲ್ಮಾನರನ್ನು ಯಾರೂ ಕತ್ತು ಕತ್ತರಿಸುವುದಿಲ್ಲ. ಬದಲಿಗೆ ತಬ್ಬಿಕೊಳ್ಳುತ್ತಾರೆ.
---------------------
ದೇವೇಗೌಡ , ಸೋನಿಯಾಗಾಂಧಿ ಮತ್ತು ತನಗೆ ಮಾತ್ರ ವಿಪಕ್ಷಗಳನ್ನು ಒಗ್ಗೂಡಿಸಲು ಸಾಧ್ಯವಿರುವುದು -ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ
► ಒಡೆಯುವುದಕ್ಕೆ ಯಾರ ಸಹಾಯ ಪಡೆಯುತ್ತೀರಿ?
---------------------
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮತದಾರರು ಕೊಟ್ಟ ಪೆಟ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆ ಪಡೆಯ ಬೇಕಾಯಿತು -ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
► ನಿಮ್ಮಂತೆ ಚಿಕಿತ್ಸೆ ಪಡೆಯದೇ ಏನೇನೋ ಮಾತನಾಡುವುದಕ್ಕಿಂತ, ಚಿಕಿತ್ಸೆ ಪಡೆದು ಗುಣಮುಖರಾಗುವುದು ಒಳ್ಳೆಯದು.
---------------------
ಪ್ರಧಾನಿ ನರೇಂದ್ರ ಮೋದಿ ಹತ್ತಿರ ಧೈರ್ಯವಾಗಿ ಮಾತನಾಡುವ ಶಕ್ತಿ ಬಿಜೆಪಿಯವರಿಗೇ ಇಲ್ಲ -ಪ್ರಿಯಾಂಕ್ ಖರ್ಗೆ, ಸಚಿವ
► ಸೋನಿಯಾ ಗಾಂಧಿಯ ಮುಂದೊಮ್ಮೆ ಧೈರ್ಯವಾಗಿ ಮಾತನಾಡಿ ನೋಡಿ.
---------------------
ಆಪರೇಶನ್ ಕಮಲ ಮಾಡುವ ಅಗತ್ಯ ನಮ್ಮ ಪಕ್ಷಕ್ಕಿಲ್ಲ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
► ಅಂದರೆ ವ್ಯವಹಾರ ಕುದುರಲಿಲ್ಲವೆಂದಾಯಿತು.
---------------------
ಕರುಣಾನಿಧಿ ನನ್ನ ತಂದೆ ಇದ್ದಂತೆ - ಸೋನಿಯ ಗಾಂಧಿ, ಕಾಂಗ್ರೆಸ್ ನಾಯಕಿ
► ಜಯಲಲಿತಾ ತಾಯಿ ಇದ್ದಂತೆ ಎಂದು ಹೇಳಿದ ನೆನಪು.