ಇಷ್ಟವೆಂಬುದು ಗುರುವಿನ ಹಂಗು
ಇಷ್ಟವೆಂಬುದು ಗುರುವಿನ ಹಂಗು
ಆ ಗುರುವಿಂಗೆಯು, ಇಷ್ಟಲಿಂಗಕ್ಕೆಯು,
ಜಂಗಮವೆ ಪ್ರಾಣಪದವೆಂದರಿತ ಬಳಿಕ
ಆ ಗುರುವೂ ಇಷ್ಟವೂ ಜಂಗಮದಲ್ಲಿಯೇ ಅಡಕ ನೋಡಾ!
ಆ ಗುರುವೂ ಲಿಂಗವೂ ಜಂಗಮದ ಹಂಗಿಗರು!
ಇದು ಕಾರಣ ಚಂದೇಶ್ವರಲಿಂಗಕ್ಕೆ ಕಣ್ಣಿಯ ಮಾಡಬಲ್ಲಡೆ
ಬಾರಾ ಎನ್ನ ತಂದೆ.
-ನುಲಿಯ ಚೆಂದಯ್ಯ
ಇಷ್ಟಲಿಂಗವೆಂಬುದು ಗುರುವಿನ ಹಂಗಿನಿಂದ ದೊರೆತದ್ದು, ಆ ಗುರುವಿಗೆ ಮತ್ತು ಇಷ್ಟಲಿಂಗಕ್ಕೆ ಜಂಗಮವೇ (ಸಕಲ ಜೀವರಾಶಿಯಿಂದ ಕೂಡಿದ ಜಗತ್ತು ಮತ್ತು ಸಮಾಜ) ಪ್ರಿಯವಾದುದು. ಆ ಗುರು ಮತ್ತು ಇಷ್ಟಲಿಂಗ ಜಂಗಮದ ಒಳಗೇ ಸೇರಿರುವುದರಿಂದ ಗುರು ಮತ್ತು ಇಷ್ಟಲಿಂಗ ಜಂಗಮದ ಹಂಗಿನಲ್ಲೇ ಇರುವವರು. ಈ ಕಾರಣದಿಂದಾಗಿ ‘ಚಂದೇಶ್ವರಲಿಂಗಕ್ಕೆ ಕಣ್ಣಿಯ ಮಾಡುವುದಾದರೆ ಬಾ ಎನ್ನ ತಂದೆ’ ಎಂದು ನುಲಿಯ ಚಂದಯ್ಯ ನಿರಾಕಾರ ದೇವರನ್ನು ಸಾಕಾರದೇವರಾದ ಸಮಾಜದ ಕಡೆಗೆ ಕರೆಯುತ್ತಾನೆ. ಇಲ್ಲಿ ಚಂದೇಶ್ವರಲಿಂಗ ಸಮಾಜದೇವನಾಗಿ ಕಂಗೊಳಿಸುತ್ತಾನೆ. ಚಂದಯ್ಯ ಆ ಮೂಲಕ ಸರ್ವಶಕ್ತನಾದ ದೇವರು ಮತ್ತು ಜ್ಞಾನವೆಂಬ ಗುರುವನ್ನು ಸಮಾಜಸೇವೆಗಾಗಿ ಆಹ್ವಾನಿಸಿ ಕಾಯಕದ ಮಹತ್ವ ಸಾರುತ್ತಾನೆ.
‘‘ಪೂಜೆ-ಪುಣ್ಯ ಮಹಾದೇವನ ಹಂಗು; ಎನ್ನ ದಾಸೋಹ ಆರ ಹಂಗೂ ಇಲ್ಲ.’’ ಎಂದು ಇನ್ನೊಂದು ವಚನದಲ್ಲಿ ಹೇಳುವ ಮೂಲಕ ಕಾಯಕದ ನಂತರ ಬರುವ ದಾಸೋಹದ ಮಹತ್ವವನ್ನು ತಿಳಿಸುತ್ತಾನೆ. ಕಾಯಕ ಮತ್ತು ದಾಸೋಹ ಸುಂದರ ಬದುಕಿನ ಎರಡು ಮಹತ್ವದ ಆಧಾರ ಸ್ತಂಭಗಳು ಎಂಬುದನ್ನು ಚಂದಯ್ಯ ಮನದಟ್ಟು ಮಾಡಿಕೊಟ್ಟಿದ್ದಾನೆ.
ಕಲ್ಯಾಣದಲ್ಲಿದ್ದ ನುಲಿಯ ಚಂದಯ್ಯ ಮೂಲತಃ ವಿಜಾಪುರ ಜಿಲ್ಲೆಯ ಶಿವಣಗಿ ಗ್ರಾಮದ ದಲಿತ ಮೂಲದ ಶರಣ. (ಕೊರವರು ಮತ್ತು ಮಾದಿಗರು ಹುಲ್ಲಿನಿಂದ ಹಗ್ಗ ಹೊಸೆಯುವ ಕಾಯಕ ಮಾಡುವರು.) ಹಗ್ಗ ಮಾಡಲು ಯೋಗ್ಯವಾದ ಮೆದೆಹುಲ್ಲನ್ನು ತಂದು ಹೊಸೆದು ಹಗ್ಗ, ಕಣ್ಣಿ (ಸಣ್ಣಹಗ್ಗ) ತಯಾರಿಸಿ ಮಾರಿಬಂದ ಹಣದಿಂದ ದಾಸೋಹ ಕಾರ್ಯವನ್ನು ಮಾಡುತ್ತಿದ್ದ. ಬಸವಕಲ್ಯಾಣದ ತ್ರಿಪುರಾಂತ ಕೆರೆಯ ದಂಡೆಯ ಮೇಲೆ ಚಂದಯ್ಯನ ಗವಿ ಇದ್ದು ಪಕ್ಕದಲ್ಲೇ ಇರುವ ಬಾವಿಗೆ ಚಂದಯ್ಯನ ಬಾವಿ ಎಂದು ಕರೆಯುತ್ತಾರೆ. ಅಲ್ಲಿನ ಶಿವ ಪಾರ್ವತಿಯರ ಜೊತೆಗಿರುವ ಮೂರ್ತಿಯು ಚಂದಯ್ಯನ ಮೂರ್ತಿ ಎಂದು ಹೇಳಲಾಗಿದೆ.
ಕಲ್ಯಾಣ ಹತ್ಯಾಕಾಂಡದ ನಂತರ ಚಂದಯ್ಯ ಉಳವಿಗೆ ಹೋಗುವನು. ಚೆನ್ನಬಸವಣ್ಣನವರು ಲಿಂಗೈಕ್ಯರಾದ ನಂತರ ಅಕ್ಕನಾಗಮ್ಮನವರನ್ನು ಕರೆದುಕೊಂಡು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಎಣ್ಣಹೊಳೆಗೆ ಬರುವನು. ಅಕ್ಕನಾಗಮ್ಮನವರು ಲಿಂಗೈಕ್ಯರಾದ ನಂತರ ತರೀಕೆರೆ ತಾಲೂಕಿನ ನಂದಿಗ್ರಾಮದಲ್ಲಿ ಉಳಿಯುವನು. ಚಿತ್ರದುರ್ಗದ ನುಲೇನೂರಿನಲ್ಲಿ ಆತನ ಸಮಾಧಿ ಇದೆ ಎಂದು ಚೆನ್ನಪ್ಪ ಎರೆಸೀಮೆ ತಿಳಿಸಿದ್ದಾರೆ. (ಫ.ಗು. ಹಳಕಟ್ಟಿಯವರ ಪ್ರಕಾರ ಆತನ ಸಮಾಧಿ ನಂದಿಗ್ರಾಮದಲ್ಲಿದೆ.)