ಮಣಿಪಾಲ ಮಣ್ಣಪಳ್ಳದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ
ಮಣಿಪಾಲ, ಆ.14: ಒಂದೆರೆಡು ದಿನಗಳ ನವಜಾತ ಹೆಣ್ಣು ಶಿಶುವೊಂದು ಮಣಿಪಾಲ ಮಣ್ಣಪಳ್ಳದ ಕಲ್ಲುಬೆಂಚಿನ ಅಡಿಯಲ್ಲಿ ರವಿವಾರ ಸಂಜೆ 5.40ರ ಸುಮಾರಿಗೆ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಣ್ಣಪಳ್ಳದಲ್ಲಿ ವಾಕಿಂಗ್ ತೆರಳಿದ್ದ ಡೆಂಟಲ್ ವಿದ್ಯಾರ್ಥಿಯೊಬ್ಬರು ಕಲ್ಲು ಬೆಂಚಿನ ಕೆಳಗೆ ಇರುವ ಕಲ್ಲು ಪಾದೆಯ ಮೇಲೆ ಆಳುತ್ತಿರುವ ಹಸುಗೂಸನ್ನು ನೋಡಿದ್ದು, ಆಕೆ ಕೂಡಲೇ ಆ ಮಗುವನ್ನು ಸಮೀಪದ ಚರ್ಚ್ಗೆ ಕರೆದೊಯ್ದು ಸಿಸ್ಟರ್ಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.
ಸಿಸ್ಟರ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿ, ನಂತರ ಮಗುವನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರುಳ ಬಳ್ಳಿ ತುಂಡರಿಸದ ಒಂದೆರೆಡು ದಿನಗಳ ಹಸುಗೂಸನ್ನು ಯಾರೋ ಸುರಿಯುವ ಭಾರೀ ಮಳೆಯ ಮಧ್ಯೆಯು ಕಲ್ಲು ಬೆಂಚಿನ ಕೆಳಗೆ ಬಿಟ್ಟು ಹೋಗಿದ್ದಾರೆನ್ನಲಾಗಿದೆ.
‘ಮಳೆಯಲ್ಲಿ ನೆನೆದು ಅನಾರೋಗ್ಯಕ್ಕೆ ಒಳಗಾಗಿರುವ ಮಗುವಿಗೆ ಚಿಕಿತ್ಸೆ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಮಗುವನ್ನು ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಮುಂದೆ ಈ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.