varthabharthi


Social Media

ಸ್ವಾತಂತ್ರ್ಯೋತ್ಸವ ವಿಶೇಷ

ನೆಹರೂಗೆ ಸಾರಥಿಯಾಗಿದ್ದರು ಈ ಹಿರಿಯಜ್ಜ !

ವಾರ್ತಾ ಭಾರತಿ : 14 Aug, 2018
ದುರ್ಗಾಕುಮಾರ್ ನಾಯರ್ಕೆರೆ

►ಕಾಮರಾಜ ನಾಡಾರ್ , ಕೆಂಗಲ್ ಹನುಮಂತಯ್ಯ ಮನೆಯಲ್ಲಿ ತಂಗಿದ್ದರು   

►ನಾಲ್ಕು ವರ್ಷ ಶಿವರಾಮ ಕಾರಂತರ ಕಾರು ಚಾಲಕರಾಗಿದ್ದರು

ಭಾರತದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನಹರೂ ಅವರಿಗೆ ಸಾರಥಿಯಾದ, ನಾಡಿನ ಸಾಕ್ಷಿ ಪ್ರಜ್ಞೆ ಡಾ. ಶಿವರಾಮ ಕಾರಂತರ ಕಾರು ಚಾಲಕರಾಗಿದ್ದ, ಅಪರೂಪದ ವ್ಯಕ್ತಿಯೊಬ್ಬರು ಸುಳ್ಯ ತಾಲೂಕಿನಲ್ಲಿದ್ದಾರೆ. ವಯೋವೃದ್ದರಾದರೂ ತನ್ನ ಗತಕಾಲದ ಶತ ಶತ ನೆನಪುಗಳೊಂದಿಗೆ ಬದುಕಿನ ಬಂಡಿ ಚಲಾಯಿಸುತ್ತಿದ್ದಾರೆ.

ಇವರು ಕನಕಮಜಲು ಗ್ರಾಮದ ಕೊರಂಬಡ್ಕ ಮೋನಪ್ಪ ಗೌಡ. ಇವರಿಗೀಗ 97 ವರ್ಷ ವಯಸ್ಸು . ಕೊರಂಬಡ್ಕದಲ್ಲಿರುವ ತನ್ನ ಮಗನ ಮನೆಯಲ್ಲಿ ವಾಸಿಸುತ್ತಿದ್ದಾರೆ . 
ಮೋನಪ್ಪ ಗೌಡರ ಮನೆತನದ್ದು ಶ್ರೀಮಂತ ಕುಟುಂಬವಾಗಿತು. ಒಂದು ಕಾಲದಲ್ಲಿ ಇನ್ನೂರ ಐವತ್ತು ಮುಡಿ ಭತ್ತ ಬೆಳೆಯುತ್ತಿದ್ದರಂತೆ. ಬೇರೆ ಬೇರೆ ಕಾರಣಗಳಿಗಾಗಿ ಆಸ್ತಿ ಜೀರ್ಣಿಸುತ್ತಾ ಹೋಯಿತು . ಮೋನಪ್ಪ ಗೌಡರು ಬಾಲ್ಯದಿಂದಲೇ ಶಾಲೆಯ ಮುಖ ಕಂಡವರಲ್ಲ. ಹದಿನಾಲ್ಕು ವರುಷದಿಂದಲೇ ತಂದೆಯೊಂದಿಗೆ ಕೃಷಿ ಕಾಯಕಕ್ಕೆ ಮುಂದಾದರು. 

ಆ ಬಳಿಕ ವೃತ್ತಿಯೆಡೆಗೆ ಬದುಕಿನ ಪಯಣ. ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲ . ಸಿ.ಪಿ.ಸಿ. ಕಂಪೆನಿಯ ವಾಹನಗಳ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದರು. ಸಿ.ಪಿ.ಸಿ. ಸಂಸ್ಥೆಗೆ ಆಗ ಮುನ್ನೂರರಷ್ಟು ಬಸ್‌ಗಳು , ನೂರರಷ್ಟು ಲಾರಿಗಳಿತ್ತು . ಆಗ ಮೋನಪ್ಪ ಗೌಡರ ತಿಂಗಳ ಪಗಾರ ಬರೋಬ್ಬರಿ 5 ರೂಪಾಯಿ.

ಹೀಗೆ ಮೂರು ವರ್ಷ ಕಾಲ ಕೆಲಸ ಮಾಡಿದರು. ತನ್ಮಧ್ಯೆ ವಾಹನ ಚಾಲನೆಯನ್ನೂ ಕಲಿತರು. ಬಳಿಕ ಕಂಡಕ್ಟರ್ ಆಗಿ ಭಡ್ತಿ . ಕೊನೆಗೆ ಚಾಲಕರೂ ಆದರು. 
ಅದಾಗಲೇ ನಾಡಿನ ಖ್ಯಾತ ಸಾಹಿತಿ, ಪುತ್ತೂರಿನ ಪರ್ಲಡ್ಕದಲ್ಲಿದ್ದ ಶಿವರಾಮ ಕಾರಂತರು ತನ್ನ ಹಿಲ್‌ಮ್ಯಾನ್ ಕಾರಿಗೆ ಚಾಲಕನನ್ನು ಹುಡುಕುತ್ತಿದ್ದರು. ಅಲ್ಲಿಗೆ ಹೋದ ಮೋನಪ್ಪ ಗೌಡರಿಗೆ ಕೆಲಸವೂ ನಿಕ್ಕಿಯಾಯಿತು. ಹಾಗೆ ನಾಲ್ಕು ವರ್ಷ ನಡೆದಾಡುವ ವಿಶ್ವಕೋಶದೊಂದಿಗೆ ಚಾಲಕನಾಗುವ ಅವಕಾಶ.

ಮತ್ತೆ ಬದುಕಿನ ಗೇರ್ ಬದಲಾಯಿತು. ನಂತರ ತೆರಳಿದ್ದು ಮಂಗಳೂರಿಗೆ . ಆಗಲೂ ಈಗಲೂ ಪ್ರಸಿದ್ದವಾಗಿರುವ ತಾಜ್‌ಮಹಲ್ ಹೋಟೆಲ್ ಸಂಸ್ಥೆಯ ವಾಹನದ ಚಾಲಕರಾಗಿ ಕೆಲಸ ಆರಂಭಿಸಿದರು. ಶ್ರೀನಿವಾಸ ಶೆಣೈ ಆಗ ತಾಜ್‌ಮಹಲ್ ಮಾಲಕ . ಆರಂಭದಲ್ಲಿ ಅಲ್ಲಿಯ ಲಾರಿ ಚಾಲನೆ ಮಾಡುತ್ತಿದ್ದ ಮೋನಪ್ಪ ಗೌಡರಿಗೆ ಬಳಿಕ ಚವರ್‌ಲೆಟ್ ಸೇರಿದಂತೆ ಕಾರುಗಳ ಚಾಲನೆಯ ಜವಾಬ್ದಾರಿ ವಹಿಸಲಾಯಿತು. ದಿ. ಶ್ರೀನಿವಾಸ ಮಲ್ಯ ಆಗ ಈ ಭಾಗದ ಲೋಕಸಭಾ ಸದಸ್ಯ. ಮಲ್ಯರವರು ಬಹಳ ಬಾರಿ ತನ್ನ ಸುತ್ತಾಟಗಳಿಗಾಗಿ ಉಪಯೋಗಿಸುತ್ತಿದ್ದುದು ತಾಜ್ ಮಹಲ್ ಸಂಸ್ಥೆಯ ಕಾರುಗಳನ್ನು . ಹೀಗಾಗಿ ಆ ಕಾರಿನ ಚಾಲನೆ ಮಾಡುತ್ತಿದ್ದ ಮೋನಪ್ಪ ಗೌಡರು ಸಹಜವಾಗಿಯೇ ಮಲ್ಯರೊಂದಿಗೆ ದೆಹಲಿ ಸಂಸತ್ತು ಸೇರಿದಂತೆ ದೇಶದ ಹಲವೆಡೆಗಳಲ್ಲಿ ಸುತ್ತಾಡಬೇಕಾಯಿತು.
ಇದೇ ಸಂದರ್ಭದಲ್ಲಿಯೇ ಮೋನಪ್ಪ ಗೌಡರು ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರಿಗೆ ಸಾರಥಿಯಾದದ್ದು. ನೆಹರೂರವರು ಮಂಗಳೂರಿಗೆ ಬರುತ್ತಿದ್ದಾಗ ವಿಮಾನ ನಿಲ್ದಾಣದಿಂದ ಅವರನ್ನು ತಾಜ್ ಮಹಲ್ ಹೋಟೇಲ್‌ಗೆ ಕರೆತರುತ್ತಿದ್ದದ್ದು ಮತ್ತು ವಾಪಾಸ್ ಬಿಡುತ್ತಿದ್ದದ್ದು ಮೋನಪ್ಪ ಗೌಡರು. ಹೀಗೆ ಮೂರು ಬಾರಿ ಅವರು ಪ್ರಧಾನಿಗೆ ಸಾರಥಿಯಾಗಿದ್ದರು.

ನೆಹರೂ ಮಾತ್ರವಲ್ಲ ಇಂತಹ ಅನೇಕ ನಾಯಕರನ್ನೂ, ಉನ್ನತ ಅಧಿಕಾರಿಗಳನ್ನೂ, ಚಿತ್ರನಟರನ್ನೂ ಅವರು ಕಾರಿನಲ್ಲಿ ಕರೆತಂದಿರುವುದಾಗಿ ನೆನಪು ಮಾಡಿಕೊಳ್ಳುತ್ತಾರೆ. ಶ್ರೀನಿವಾಸ ಮಲ್ಯರ ಜೊತೆ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಕಾಮರಾಜ ನಾಡಾರ್ ಮೊದಲಾದವರ ಮನೆಗಳಿಗೆ ತೆರಳಿ ಅಲ್ಲಿ ತಂಗಿದ್ದನ್ನೂ ಅವರು ನೆನಪಿಸುತ್ತಾರೆ. 
33 ವರ್ಷ ತಾಜ್‌ಮಹಲ್‌ನಲ್ಲಿ ಸೇವೆ ಸಲ್ಲಿಸಿದ ಸಂದರ್ಭ ಊರಿನಲ್ಲಿದ್ದ ಮೋನಪ್ಪ ಗೌಡರ ಸಹೋದರ ವಿಧಿವಶರಾದರು. ಹೀಗಾಗಿ ತನ್ನ ಐವತ್ತೆಂಟನೇ ವಯಸ್ಸಿನಲ್ಲಿ ಚಾಲಕ ವೃತ್ತಿಗೆ ಬ್ರೇಕ್ ಹಾಕಲೇಬೇಕಾಯಿತು. ತಾಜ್ ಮಹಲ್ ಕೆಲಸಕ್ಕೆ ಒಲ್ಲದ ಮನಸ್ಸಿನಿಂದಲೇ ಕೈ ಮುಗಿದ ಗೌಡರು ಮನೆಯತ್ತ ಬಂದರು. ಅಲ್ಲೆ ನೆಲೆ ನಿಂತರು. ಎಪ್ಪತ್ತು ವರ್ಷದ ವರೆಗೂ ಅವರು ಕೆಲವು ವಾಹನಗಳ ಚಾಲನೆ ಮಾಡುತ್ತಿದ್ದರು.

ಮೋನಪ್ಪ ಗೌಡರಿಗೀಗ 97 ವರ್ಷ ವಯಸ್ಸು . ವಯೋ ಸಹಜ ತೊಂದರೆಗಳ ಹೊರತಾಗಿ ಆರೋಗ್ಯವಂತರಾಗಿದ್ದಾರೆ. ಬಿ.ಪಿ. ಸಮಸ್ಯೆಗೆ ಔಷಧಿ ಪಡೆಯುತ್ತಿದ್ದಾರೆ . ದೃಷ್ಟಿ, ನೆನಪು ಶಕ್ತಿ ಪಸಂದಾಗಿಯೇ ಇದೆ. ಕನಕಮಜಲು ಪೇಟೆಗೆ ಒಬ್ಬರೇ ನಡೆದು ಹೋಗಿ ಬರುತ್ತಾರೆ. ಎದುರು ಸಿಕ್ಕಿದವರ ಗುರುತು ಹಿಡಿದು ಮಾತನಾಡಿಸುತ್ತಾರೆ. ಸಭೆ ಸಮಾರಂಭಗಳಿಗೂ ತೆರಳುತ್ತಾರೆ. ಹೀಗಾಗಿ ಮೋನಪ್ಪ ಗೌಡರ ಪಾಲಿಗೆ 97 ಎನ್ನುವುದು ಒಂದು ಸಂಖ್ಯೆಯಷ್ಟೆ.

ಕೃಷಿಕರಾಗಿರುವ ಪುತ್ರ ವೆಂಕಟ್ರಮಣರೊಂದಿಗೆ ಮೋನಪ್ಪ ಗೌಡರು ಬದುಕಿನ ಇಳಿ ಸಂಜೆಯಲ್ಲಿ ಉತ್ಸಾಹದಿಂದಲೇ ಬಾಳ್ವೆ ನಡೆಸುತ್ತಿದ್ದಾರೆ. ಬದುಕ ಬಂಡಿಯ ಚಕ್ರಗಳು ಸವೆಸಿ ಬಂದ ಪಥಗಳನ್ನು , ಅಲ್ಲಿ ಮೂಡಿಸಿದ ಗುರುತುಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.
------
" ಪ್ರಧಾನ ಮಂತ್ರಿ ನೆಹರೂ ಅವರೊಂದಿಗೆ ಪ್ರಯಾಣಿಸುವ ವೇಳೆ ಅವರು ತನ್ನೊಂದಿಗೆ ಯಾವುದೇ ಮಾತನಾಡಿಲ್ಲ. ಅವರು ಮಾತನಾಡಿದರೂ ನನಗೆ ಉತ್ತರಿಸಲು ಹಿಂದಿಯಾಗಲೀ ಇಂಗ್ಲೀಷ್ ಆಗಲೀ ಬರುತ್ತಿರಲಿಲ್ಲ. ಮೂರು ಬಾರಿಯೂ ನೆಹರೂ ಅವರು ಕಾರು ಇಳಿದು ಹೋಗುವಾಗ ನನಗಾಗಿ ನೂರು ರೂಪಾಯಿಯನ್ನು ಕಾರಿನಲ್ಲಿ ಇರಿಸಿ ಹೋಗಿದ್ದರು " ಎಂದು ಮೋನಪ್ಪ ಗೌಡರು ನೆನಪುಗಳ ಸುರುಳಿ ಬಿಚ್ಚುತ್ತಾರೆ.

" ಶಿವರಾಮ ಕಾರಂತರು ಕೋಪಿಷ್ಠ. ಆದರೆ ಅವರಂತಹ ಮಹಾನ್ ಮನುಷ್ಯ ಇನ್ನೊಬ್ಬರು ಸಿಗಲಾರರು. ಶಿವರಾಮ ಕಾರಂತರನ್ನು ಮಂಜಯ್ಯ ಹೆಗ್ಡೆಯವರು ಇಂಗ್ಲೆಂಡ್‌ಗೆ ಕಳುಹಿಸಿದ್ದರು. ಅಲ್ಲಿಂದ ಬಂದ ಬಳಿಕ ಕಾದಂಬರಿಯೊಂದನ್ನು ಬರೆದರು. ಈ ಸಂದರ್ಭ ನಾನು ಅವರ ಜೊತೆಗಿದ್ದೆ " ಎಂದರು ಗೌಡರು .

" ತಾಜ್ ಮಹಲ್ ಸಂಸ್ಥೆಯನ್ನು ನಾನು ಅನಿವಾರ್ಯವಾಗಿ ಬಿಡಬೇಕಾಯಿತು . ಅವರು ಕೂಡ ತುಂಬಾ ಒಳ್ಳೆಯ ಜನಗಳು . ನನ್ನ ನಿವೃತ್ತಿಯ ನಂತರವೂ ನನಗೆ ತುಂಬಾ ಸಹಾಯ ಮಾಡಿದ್ದಾರೆ " ಎಂದು ಮೋನಪ್ಪ ಗೌಡರು ಕೃತಜ್ಞತಾ ಭಾವದಿಂದ ನೆನಪು ಮಾಡಿಕೊಂಡರು.

ದೊಡ್ಡ ದೊಡ್ಡ ವ್ಯಕ್ತಿಗಳನ್ನು ಭೇಟಿಯಾದರೆ ಫೋಟೋ ತೆಗೆಸಿಕೊಳ್ಳುವುದು, ಸೆಲ್ಪಿ ತೆಗೆಸಿಕೊಳ್ಳುವುದು , ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಈ ಕಾಲದ ಟ್ರೆಂಡ್. ಮೋನಪ್ಪ ಗೌಡರ ಕಾಲ ಇಂತಹದ್ದಲ್ಲ. ಹೀಗಾಗಿ ಗಣ್ಯರೊಂದಿಗಿನ ಯಾವ ಫೊಟೋಗಳೂ ಇಲ್ಲ. ಇರುವುದು ಸುಂದರ ನೆನಪುಗಳು ಮಾತ್ರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)