ಫಾ. ವಿಲಿಯಮ್ ಮೆನೆಝೆಸ್ಗೆ ಐಐಪಿಪಿಯಿಂದ ಸಮುದಾಯದ ಅತ್ಯುತ್ತಮ ನಾಯಕ ಪ್ರಶಸ್ತಿ
ಮಂಗಳೂರು, ಆ.14: ಸಮುದಾಯಕ್ಕೆ ಮಾಡಿದ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಫಾ. ವಿಲಿಯಮ್ ಮೆನೆಝೆಸ್ ಅವರಿಗೆ 2018ರ ಮಂಗಳೂರಿನ ಅತ್ಯುತ್ತಮ ಸಮುದಾಯ ನಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಲು ಅಂತಾರಾಷ್ಟ್ರೀಯ ಸಾರ್ವಜನಿಕ ನೀತಿ ಸಂಸ್ಥೆ (ಐಐಪಿಪಿ) ನಿರ್ಧರಿಸಿದೆ.
ಈ ಪ್ರಶಸ್ತಿಯನ್ನು ಅಮೆರಿಕದ ಟೆಕ್ಸಾಸ್ನ ಹೌಸ್ಟನ್/ಡಾಲಸ್ನಲ್ಲಿ ನೆಲೆಸಿರುವ ಮ್ಯಾಕ್ಸ್ ಮತ್ತು ಜೆಸ್ಸಿ ರೆಸ್ಕಿನ್ಹಾ ಪ್ರತಿವರ್ಷ ಸ್ವಾತಂತ್ರ ದಿನದಂದು ನೀಡುತ್ತಾ ಬಂದಿದ್ದಾರೆ. ಅಂತರ್ರಾಷ್ಟ್ರೀಯ ಸೈದ್ಧಾಂತಿಕ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಸಾರ್ವಜನಿಕ ನೀತಿ ಸಂಸ್ಥೆಯ ಸ್ಥಾಪಕರಾದ ರೆಸ್ಕಿನ್ಹಾ ದಂಪತಿ ಕಳೆದ 60 ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದರೂ ಮಂಗಳೂರನ್ನೇ ತಮ್ಮ ನೆಚ್ಚಿನ ಮನೆಯೆಂದು ಪರಿಗಣಿಸುತ್ತಾರೆ. ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಎಸ್ಟೇಟ್ ಮ್ಯಾನೇಜರ್ ಆಗಿ ಫಾ. ವಿಲಿಯಂ ಮೆನೆಝೆಸ್ ಬಿಶಪ್ ನಿವಾಸದಲ್ಲಿ ಕಳೆದ ಹತ್ತು ವರ್ಷಗಳಿಂದ ಸಲ್ಲಿಸಿರುವ ಸೇವೆಯ ಬಗ್ಗೆ ನಮಗೆ ಮಾಹಿತಿಯಿದೆ. ಸದ್ಯ ಅವರನ್ನು ಮಂಗಳೂರಿನ ನಾಗುರಿಯಲ್ಲಿರುವ ಗಾರ್ಡಿಯನ್ ಏಂಜೆಲ್ ಚರ್ಚ್ನಲ್ಲಿ ಮುಖ್ಯ ಪಾದ್ರಿಯಾಗಿ ನೇಮಿಸಲಾಗಿದೆ. ಅವರ ಜೀವನವೇ ಯಶಸ್ವೀ ಕತೆಯಾಗಿದೆ ಎಂದು ಮ್ಯಾಕ್ಸ್ ರೆಸ್ಕಿನ್ಹಾ ಅಮೆರಿಕದಿಂದ ನೀಡಿರುವ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಕೊನೆಯಲ್ಲಿ ರಸ್ಕಿನ್ಹಾ ದಂಪತಿ ತಮ್ಮ ತಾಯ್ನಾಡಿಗೆ ಆಗಮಿಸುತ್ತಿದ್ದು ಅಂದು ಫಾ. ವಿಲಿಯಂ ಅವರಿಗೆ ಅತ್ಯುತ್ತಮ ಸಮುದಾಯ ನಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.
ಮಂಗಳೂರಿನ ಮಾಜಿ ಬಿಶಪ್ ರೆ.ಅಲೋಶಿಯಸ್ ಡಿ.ಸೋಝ, ಪ್ರತಿಷ್ಠಿತ ಗಾಯಕ ಮತ್ತು ಸಂಗೀತ ನಿರ್ದೇಶಕ ವಿಲ್ಫಿ ರೆಬಿಂಬೊಸ್, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ದಾಯ್ಜಿವರ್ಲ್ಡ್ ಸ್ಥಾಪಕ ವಾಲ್ಟರ್ ನಂದಳಿಕೆ, ರೆ.ಫ್ರೆಡ್ ಪಿರೇರ, ಸಾಮಾಜಿಕ ಕಾರ್ಯ ಶಿಕ್ಷಕಿ ಮತ್ತು ಹೋರಾಟಗಾರ್ತಿ ಡಾ.ಒಲಿಂಡಾ ಪಿರೇರ, ದಿ. ರೆ.ಫಾ.ರೋನಿ ಪ್ರಭು ಎಸ್.ಜೆ, ಸಚಿತಾ ನಂದಗೋಪಾಲ್, ಜೋ ಗೊನ್ಸಾಲ್ವೆಸ್, ಶೃತಿ ಮತ್ತು ಜೇಮ್ಸ್ ಸೆರಾವೊ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.