ಚಳವಳಿಯ ಕತೆ ಹೇಳುವ ಶಿವಪುರ ಧ್ವಜಸತ್ಯಾಗ್ರಹ ಸೌಧ
ಮಂಡ್ಯ: ದೇಶದ ಸ್ವಾತಂತ್ರ ಚಳವಳಿಯಲ್ಲಿ ಮೈಸೂರ್ ಕಾಂಗ್ರೆಸ್‌ನ ಪ್ರಥಮ ಅಧಿವೇಶನ ಮತ್ತು ಮಂಡ್ಯ ಜಿಲ್ಲೆಯ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಅಚ್ಚಳಿಯದ ಗುರುತು. ಈ ಧ್ವಜ ಸತ್ಯಾಗ್ರಹದ ಸೌಧ ಭಾರತೀಯ ಸ್ವಾತಂತ್ರ ಚಳವಳಿಯಲ್ಲಿ ಕರ್ನಾ ಟಕ ರಾಜ್ಯದ ಪಾತ್ರವನ್ನು ಹೇಳುತ್ತದೆ. ಈ ಧ್ವಜ ನಿರ್ಮಾಣದ ಹಿಂದೆ ಕರ್ನಾಟಕದ ನೆಲದಲ್ಲಿ ಸ್ವಾತಂತ್ರ ಚಳವಳಿಯ ಕಿಚ್ಚು ಹೊತ್ತಿಕೊಂಡ ಕತೆಯಿದೆ.
ಬ್ರಿಟಿಷರ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವ ದಲ್ಲಿ ದೇಶದ ವಿವಿಧೆಡೆ ನಡೆಯುತ್ತಿದ್ದ ಚಳವಳಿ ಮೈಸೂರು ಸಂಸ್ಥಾನ ದಲ್ಲಿ ಮಹತ್ವ ಪಡೆದಿರಲಿಲ್ಲ. ರಾಜರ ಅಧೀನದಲ್ಲಿದ್ದ ದೇಶೀಯ ಪ್ರಾಂತಗಳ ಕಡೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಳವಳಿ ಅಷ್ಟೇನೂ ಆಸಕ್ತಿ ವಹಿಸಿರಲಿಲ್ಲ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಈ ಧೋರಣೆ ದೇಶೀಯ ಸಂಸ್ಥಾನಗಳ ದೇಶಪ್ರೇಮಿಗಳಿಗೆ ಬೇಸರ ತಂದಿತ್ತಲ್ಲದೆ, ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊಂದುವಂತೆ ಮಾಡಿತ್ತು. ದೇಶೀಯ ಸಂಸ್ಥಾನಗಳಲ್ಲೂ ಕಾಂಗ್ರೆಸ್ ಅಧಿವೇಶನ ನಡೆಸಲು ಒತ್ತಾಯಪಡಿಸಿದರೂ, ಅದಕ್ಕೆ ಮಹತ್ವ ಕೊಡಲಿಲ್ಲ. ಆ ಸಂದರ್ಭ ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಧುಮುಕಿದ್ದ ಟಿ.ಸಿದ್ದಲಿಂಗಯ್ಯ, ಎಚ್.ಕೆ.ವೀರಣ್ಣ ಗೌಡ, ಕೆಂಗಲ್ ಹನುಮಂತಯ್ಯ, ಕೆ.ಸಿ.ರೆಡ್ಡಿ, ವಿ.ವೆಂಕಟಪ್ಪ, ಮೊದಲಾದವರು ಚರ್ಚಿಸಿ ಮೈಸೂರ್ ಕಾಂಗ್ರೆಸ್ ಸ್ಥಾಪನೆ (28-02-1938) ಮಾಡಿಕೊಂಡರು. ಕಾನೂನು ಪದವೀಧರ, ವಿಶ್ವಪರ್ಯಟನೆ ಮಾಡಿ ಅನುಭವಗಳಿಸಿದ್ದ ದೊಡ್ಡಬಳ್ಳಾಪುರದ ಟಿ.ಸಿದ್ದಲಿಂಗಯ್ಯ ಅವರನ್ನು ಮೈಸೂರು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು. ಬ್ರಿಟಿಷ್ ಸರಕಾರದ ದಬ್ಬಾಳಿಕೆ ಪ್ರತಿಭಟಿಸಲು, ಜವಾಬ್ದಾರಿ ಸರಕಾರದ ಕನಸನ್ನು ನನಸಾಗಿಸಲು ಆದಷ್ಟು ಬೇಗ ಅಧಿವೇಶನ ನಡೆಸಲು ಉದ್ದೇಶಿಸಿ ಮೈಸೂರು ಕಾಂಗ್ರೆಸ್ ಮುಖಂಡರು ಮೈಸೂರಿನ ಸಾಹುಕಾರ್ ಚೆನ್ನಯ್ಯ ಅವರ ಮನೆಯಲ್ಲಿ ಚರ್ಚಿಸಿದರು. ಮಂಡ್ಯದ ಪಿ.ತಿರುಮಲೇಗೌಡ, ಎಚ್.ಕೆ.ವೀರಣ್ಣ ಗೌಡ, ಇಂಡುವಾಳು ಹೊನ್ನಯ್ಯ, ಪಾಲಹಳ್ಳಿ ಸೀತಾರಾಮಯ್ಯ ಮೊದಲಾದವರು ಆ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಂಡ್ಯ ಜಿಲ್ಲೆಯ ಶಿವಪುರದ ಪಿ.ತಿರುಮಲೇಗೌಡರ ವಿಶಾಲ ವಾದ ಜಮೀನಿನಲ್ಲಿ ಮೈಸೂರ್ ಕಾಂಗ್ರೆಸ್‌ನ ಪ್ರಥಮ ಅಧಿವೇಶನ ನಡೆಸಲು ವೇದಿಕೆ ಸಿದ್ಧ್ದವಾಯಿತು. ಆದರೆ, ಅಧಿವೇಶನ ನಡೆಸದಂತೆ ಸರಕಾರ ನಿಷೇಧಾಜ್ಞೆ ಜಾರಿಗೊಳಿಸಿತು. ಆದರೆ, ಕಾಂಗ್ರೆಸ್ ನಾಯಕರು, ದೇಶ ಪ್ರೇಮಿ ಜನರು ಇದಕ್ಕೆ ಜಗ್ಗಲಿಲ್ಲ. ಅಧಿವೇಶನ ಸಿದ್ಧತೆ ಮುಂದು ವರಿಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಸಾಗರೋಪಾದಿ ಯಲ್ಲಿ ಜನ ಆಗಮಿಸತೊಡಗಿದರು. ಅಧಿವೇಶನದ ದಿನ ಸುಮಾರು 40 ಸಾವಿರ ಜನ ಆಗಮಿಸಿ ದ್ದರು. ಎಲ್ಲರೂ ಶಾಂತವಾಗಿ ಕುಳಿತಿದ್ದರು. ಸುತ್ತಲೂ ಪೊಲೀಸ್‌ಕಾವಲು. ಜಿಲ್ಲಾಧಿಕಾರಿ ಕಟ್ಟೆಚ್ಚರ ನೀಡುತ್ತಿದ್ದರು. ಮೆಲ್ಲಗೆ ಧ್ವಜ ಸ್ತಂಭದ ಕಡೆಗೆ ಹೆಜ್ಜೆಹಾಕಿದ ಟಿ.ಸಿದ್ದಲಿಂಗಯ್ಯ ರಾಷ್ಟ್ರ ಧ್ವಜದ ದಾರವನ್ನು ಎಳೆದೇಬಿಟ್ಟರು. ನೆರೆದಿದ್ದವರು ಹರ್ಷದಿಂದ ಜಯಘೋಷ ಮೊಳಗಿಸಿದರು. ಕೂಡಲೇ ಪೊಲೀಸರು ಟಿ. ಸಿದ್ದಲಿಂಗಯ್ಯ, ಎಂ.ಎನ್.ಜೋಯಿಸ್ ಸೇರಿದಂತೆ ನೂರಾರು ಮಂದಿಯನ್ನು ದಸ್ತಗಿರಿ ಮಾಡಿದರು. ತಮ್ಮ ಮೇಲೆ ಪೊಲೀಸರು ಗುಂಡು ಹಾರಿಸಬಹುದೆಂದು ಜನರು ಭಾವಿಸಿದ್ದರಂತೆ, ಆದರೆ, ಆ ರೀತಿ ನಡೆಯಲಿಲ್ಲ. ಶಾಂತ ರೀತಿಯಿಂದಲೇ ಹೋರಾಟ ಗಾರರನ್ನು ಬಂಧಿಸಲಾಯಿತು. ಗೋಲಿಬಾರ್ ಮಾಡಲು ಐಜಿಪಿ ಹ್ಯಾಮಿಲ್ಟನ್ ಆದೇಶವಿಟ್ಟಿದ್ದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಕ್ರಿ ಸಾಹೇಬರು ಪಾಲಿಸಿದ್ದರೆ ಅಲ್ಲಿ ಹೆಣಗಳ ರಾಶಿಯೇ ಉರುಳುತ್ತಿ ದ್ದವು ಎಂಬುದು ದಾಖಲಾಗಿದೆ.
ಕರ್ನಾಟಕ ಸ್ವಾತಂತ್ರ ಚಳವಳಿಯಲ್ಲಿ ಮೈಸೂರ್ ಕಾಂಗ್ರೆಸ್ ಪ್ರಥಮ ಅಧಿವೇಶನ ಮಹತ್ವದ ಹೆಜ್ಜೆಯಾಗಿ ಗುರುತಿಸಿಕೊಂಡಿತು.ಇಂತಹ ಐತಿಹಾಸಿಕ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸ ಬೇಕೆಂಬ ಆಸೆಯೊಂದಿಗೆ ಕೆಂಗಲ್ ಹನುಮಂತಯ್ಯ ಕಾರ್ಯ ಪ್ರವೃತ್ತ ರಾದರು. ಅವರ ಆಶಯದಂತೆ ಶಿವಪುರ ಧ್ವಜ ಸತ್ಯಾಗ್ರಹ ಸೌಧ 26 ಅಕ್ಟೋಬರ್ 1979ರಂದು ಲೋಕಾರ್ಪಣೆಗೊಂಡಿತು.
ಮದ್ದೂರಿನ ಶಿವಪುರದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಸತ್ಯಾಗ್ರಹ ಸೌಧ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟವಾದ ಕಟ್ಟಡವಾಗಿದೆ. ಹೊರಗಡೆಯಿಂದ ನೋಡಿದಾಗ ಗೋಲಾಕಾರವಾಗಿ ಆಕರ್ಷಕವಾಗಿ ಕಾಣುತ್ತದೆ. ವಿಶಾಲ ಸಭಾಂಗಣ, ಆರ್ಟ್‌ಗ್ಯಾಲರಿ ಹೊಂದಿದೆ. ಸುತ್ತಲಿನ ಉದ್ಯಾನವನ ಸ್ಮಾರಕದ ಸೊಬಗನ್ನು ಹೆಚ್ಚಿಸಿದೆ.