ಮಂಗಳೂರು: ಕೋಕೆನ್ ಹೊಂದಿದ ಐವರ ಸೆರೆ; 20 ಲಕ್ಷ ರೂ. ಮೌಲ್ಯದ ಸೊತ್ತು ವಶ
ಮಂಗಳೂರು, ಆ.17: ಮಾದಕ ವಸ್ತು ಕೋಕೆನ್ನ್ನು ಅಕ್ರಮವಾಗಿ ಹೊಂದಿ, ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸಿದ ಮಂಗಳೂರು ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಜೇಶ್ವರ ಕುಂಜತ್ತೂರು ನಿವಾಸಿ, ವ್ಯಾಪಾರಿ ವಿಜೇಶ್ಕುಮಾರ್ (34), ಪುತ್ತೂರು ನರಿಮೊಗರು ನಿವಾಸಿ, ಜಿಮ್ ಟ್ರೈನರ್ ನಿತಿನ್ (35), ನಗರದ ಬಿಜೈ ಚರ್ಚ್ ರಸ್ತೆಯ ನಿವಾಸಿ, ರಿಯಲ್ ಎಸ್ಟೇಟ್ ವ್ಯಾಪಾರಿ ಸಂತೋಷ್ಕುಮಾರ್ (36), ಬೊಂದೇಲ್ ಕೆಎಚ್ಬಿ ಕಾಲನಿ ನಿವಾಸಿ, ಚಾಲಕ ಸಂದೀಪ್ಕುಮಾರ್ (34), ಬಿಕರ್ನಕಟ್ಟೆಯ 2ನೇ ಕ್ರಾಸ್ ಸೌಜನ್ಯಲೇನ್ ನಿವಾಸಿ ರಾಹುಲ್ (26) ಬಂಧಿತ ಆರೋಪಿಗಳು.
4-5 ಮಂದಿ ತಮ್ಮ ಕಾರುಗಳಲ್ಲಿ ಯುವಕರಿಗೆ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳಿಂದ 50 ಸಾವಿರ ರೂ. ಮೌಲ್ಯದ ಮಾದಕ ವಸ್ತು ಕೋಕೆನ್, ಹೊಂಡಾ ಜಾಝ್, ಹುಂಡೈ ಐ20, ಮಾರುತಿ ಝೆನ್, 7 ಮೊಬೈಲ್ ಫೋನ್ ಹಾಗೂ 1,02,000 ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 19,57,000 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಗೋವಾದಿಂದ ಈ ಮಾದಕ ವಸ್ತುಗಳನ್ನು ತಂದು ಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಶಾಂತಾರಾಮ, ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ನಾಯಕ್ ಹಾಗೂ ಸಿಸಿಬಿ ಘಟಕದ ಪಿಎಸ್ಸೈ ಶ್ಯಾಮ್ ಸುಂದರ್, ಎಚ್.ಡಿ. ಕಬ್ಬಾಳ್ ರಾಜ್ ಹಾಗೂ ಸಿಸಿಬಿ ಘಟಕದ ಸಿಬ್ಬಂದಿ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.