ಹಿಂದೀ ರಾಜಕಾರಣದ ಗೊಂದಲ
ಭಾಗ-6
ಹಿಂದೂಸ್ಥಾನಿಯರಿಗೂ, ಬ್ರಿಟಿಷರಿಗೂ ಪರಸ್ಪರ ಕಾಳಜಿಯಿರಬೇಕಾದ ಕಾರಣವಿಲ್ಲ. ಅವರೊಳಗೆ ರಕ್ತಮಾಂಸದ ಸಂಬಂಧವಿಲ್ಲ. ಇದಕ್ಕೊಂದು ಕಾರಣವಿದೆಯೆಂದು ನಮಗನಿಸುತ್ತದೆ. ಇಂಗ್ಲಿಷ್ ರಾಜ್ಯವೊಂದು ಸಾಮ್ರಾಜ್ಯವಾಗಿದ್ದು, ಅದರ ವಿಸ್ತಾರದ ಮೇಲೆ ಅನೇಕರ ಕಣ್ಣಿದೆ. ಪೃಥ್ವಿಯ ಪೃಷ್ಠಭಾಗದ ವಿಸ್ತೀರ್ಣ 5 ಕೋಟಿ, 55 ಲಕ್ಷ ಚದರ ಮೈಲು. ಇದರ ಪೈಕಿ 1 ಕೋಟಿ 40 ಲಕ್ಷ ಚದರ ಮೈಲು ಪ್ರದೇಶ ಇಂಗ್ಲಿಷರ ಅಧೀನದಲ್ಲಿದೆ. 82 ಲಕ್ಷ, 50 ಸಾವಿರ ಚದರ ಮೈಲು ಸೋವಿಯೆತ್ ರಶ್ಯಾದ ಕೈಯಲ್ಲಿದೆ. 43 ಲಕ್ಷ 30 ಸಾವಿರ ಚದರ ಮೈಲು ಪ್ರದೇಶ ಫ್ರೆಂಚರ ಕೈಯಲ್ಲಿದೆ. 43 ಲಕ್ಷ, 50 ಸಾವಿರ ಪ್ರದೇಶ ಚೀನಿಯರ ವಶದಲ್ಲಿದೆ ಮತ್ತು 38 ಲಕ್ಷ, 50 ಸಾವಿರ ಅಮೆರಿಕದ ವಶದಲ್ಲಿದೆ. ಉಳಿದ ದೇಶಗಳ ವಿಸ್ತೀರ್ಣ ತುಂಬ ಸಣ್ಣದಿದೆ. 5 ಕೋಟಿ ವಿಸ್ತೀರ್ಣದಲ್ಲಿ ಇಂಗ್ಲಿಷರಿಗೇ 1 ಕೋಟಿ ವಿಸ್ತೀರ್ಣ ಇರುವುದು ಯಾರಿಗೇ ಆದರೂ, ಆಶ್ಚರ್ಯ ಮತ್ತು ಜಿಗುಪ್ಸೆ ಹುಟ್ಟಿಸದಿರದು. ಇಂತಹ ಇಂಗ್ಲಿಷರ ಸಾಮ್ರಾಜ್ಯಕ್ಕಾಗಿ ನಾವು ಹೋರಾಡುವುದೆಂದರೆ, ಆ ಸಾಮ್ರಾಜ್ಯವನ್ನು ಶಾಶ್ವತವಾಗಿರಿಸಲು ಯತ್ನಿಸಿದಂತೆ ಎಂದು ಹಿಂದೂಗಳಿಗೆ ಅನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ.
ಹಿಂದೀಯರ ಈ ಯೋಚನೆ ತಪ್ಪು ಮತ್ತು ಅದರಿಂದಾಗಿ ಅವರ ಕೈಯಿಂದಾಗುವ ಕೆಲಸ, ಅವರಿಗೇ ಘಾತುಕವಾಗುವಂತಿದೆ ಎಂದು ನಮಗನಿಸುತ್ತದೆ. ಹಾಗೆಂದೇ ಈ ಕೆಳಗಿನ ಪ್ರಶ್ನೆಗಳ ಬಗ್ಗೆ ಯೋಚಿಸಿ, ನಿರ್ಧಾರಕ್ಕೆ ಬನ್ನಿ ಎಂದು ನಮ್ಮ ಸೂಚನೆ. ಕೆನಡಾ ದೇಶವು ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದೆ, ಅದರೆ ಇಂದು ಕೆನಡಾ ಬ್ರಿಟಿಷರ ಆಳ್ವಿಕೆಯಲ್ಲಿದೆ, ಎನ್ನಬಹುದೇ? ಸೌತ್ ಆಫ್ರಿಕಾ, ಬ್ರಿಟಿಷ್ ಸಾಮ್ರಾಜ್ಯದ ಒಂದು ಭಾಗ ನಿಜ, ಆದರೆ ಅದು ಬ್ರಿಟಿಷರ ಆಳ್ವಿಕೆಯಲ್ಲಿದೆ ಎನ್ನಬಹುದೇ? ಹಾಗೆಯೇ ಆಸ್ಟ್ರೇಲಿಯಾ, ಐರ್ಲ್ಯಾಂಡ್ ದೇಶಗಳೂ ಸಹ? ಇದೇ ಪ್ರಶ್ನೆಯನ್ನು ವಿಭಿನ್ನ ರೀತಿಯಲ್ಲಿ ಕೇಳುವುದಾದರೆ, ಕೆನಡಾ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದರೂ ಇಂಗ್ಲಿಷರಿಗೆ ಕೆನಡಾ ಕೊಡುವ ಸೌಲಭ್ಯವನ್ನು ಜರ್ಮನರಿಗೆ ಕೊಡಲಾಗದೇ? ಹಾಗೆಯೇ ಆಸ್ಟ್ರೇಲಿಯಾ ಬ್ರಿಟಿಷರಿಗೆ ಕೊಡುವ ಸೌಲಭ್ಯವನ್ನು ಜರ್ಮನರಿಗೆ ಕೊಡಲಾಗದೇ? ಹಾಗೆಯೇ ಸೌತ್ ಆಫ್ರಿಕಾ, ಐರ್ಲ್ಯಾಂಡ್ ಸಹ? ಹಾಗೆಯೇ ಎಲ್ಲ ದೇಶಗಳು ಮಾಡಲು ಬಯಸಿಯೂ, ಇಂಗ್ಲೆಂಡ್ ಮಾಡಲು ಬಿಡದಂತಹುದು ಏನಿರಬಹುದು? ಈ ಎಲ್ಲ ದೃಷ್ಟಿಯಿಂದ ನೋಡಿದರೆ, ಇಂಗ್ಲಿಷರ ರಾಜ್ಯ ಪದ್ಧತಿಯನ್ನು ಸಾಮ್ರಾಜ್ಯಶಾಹಿ ಎನ್ನುವುದು ತಪ್ಪು ತಿಳುವಳಿಕೆ ಎಂದು ನಮಗನಿಸುತ್ತದೆ. ಸಾಮ್ರಾಜ್ಯಶಾಹಿ ಎನ್ನುವುದು ಒಂದು ರೀತಿಯ ಸಾರ್ವಭೌಮ ಪದ್ಧತಿ ಎಂದು ನಮಗನಿಸುತ್ತದೆ. ಇಂಗ್ಲಿಷರ ಸಾಮ್ರಾಜ್ಯಶಾಹಿಯಲ್ಲಿ ಇದಕ್ಕೆ ಶಾಶ್ವತ ಸ್ಥಾನವಿಲ್ಲ. ಅವರ ಆಳ್ವಿಕೆಯಲ್ಲಿರುವ ದೇಶವು ಸ್ವತಂತ್ರವಾಗಬಲ್ಲುದು ಎಂಬುದೇ ಅವರ ಇತಿಹಾಸವನ್ನು ಸಿದ್ಧಗೊಳಿಸುತ್ತದೆ.
ಕೆನಡಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಸೌತ್ ಆಫ್ರಿಕಾ, ಐರ್ಲ್ಯಾಂಡ್ ಮುಂತಾದ ದೇಶಗಳು ಇಂಗ್ಲೆಂಡ್ನ ಸಾರ್ವಭೌಮತ್ವದ ಅಡಿಯಲ್ಲಿ ನಡೆಸಲ್ಪಡುತ್ತವೆ. ಇಂದು ಅವೇ ದೇಶಗಳು ಯಾವುದೇ ಪ್ರಕಾರದ ರಕ್ತಪಾತ ಇಲ್ಲವೇ ಯಾದವೀ ಕಲಹಕ್ಕಿಳಿಯದೆ ಈ ಇಂಗ್ಲಿಷ್ ಸಾರ್ವಭೌಮತ್ವದಿಂದ ಸ್ವತಂತ್ರವಾಗಿವೆ ಮತ್ತು ಅವರ ಮೇಲೆ ಯಾವುದೇ ರೀತಿಯ ಅಂಕೆ ಉಳಿದಿಲ್ಲ. ಆ ದೃಷ್ಟಿಯಿಂದ ನೋಡಿದರೆ ಬ್ರಿಟಿಷ್ ಸಾಮ್ರಾಜ್ಯವನ್ನು ಇಷ್ಟೊಂದು ವಿಸ್ತಾರವೆನ್ನುವುದರಲ್ಲಿ ಅರ್ಥವೇ ಇಲ್ಲ. ಈಗದು ಸಾಕಷ್ಟು ಕಿರಿದಾಗಿದೆ.
ಉಳಿದ ದೇಶಗಳು ಬ್ರಿಟಿಷರ ಸಾರ್ವಭೌಮತ್ವದಿಂದ ಮುಕ್ತವಾಗಿದ್ದರೂ, ಹಿಂದೂಸ್ಥಾನವು ಈಗಲೂ ಅದರಡಿಯಲ್ಲಿ ದಮನಿಸಲ್ಪಟ್ಟಿಲ್ಲವೇ? ಮತ್ತೇಕೆ ಯುದ್ಧದಲ್ಲಿ ಬ್ರಿಟಿಷರ ಸಹಾಯಕ್ಕೆ ಹೋಗಬೇಕು?
ಇದಕ್ಕೆ ಎರಡು ಉತ್ತರಗಳಿವೆ.
ಮೊದಲ ಉತ್ತರ, ಹಿಂದೂಸ್ಥಾನವೂ ಬ್ರಿಟಿಷರ ಸಾರ್ವಭೌಮತ್ವದಿಂದ ಮುಕ್ತವಾಗುವ ದಾರಿಯಲ್ಲಿದೆ. ಇಂದಲ್ಲ ನಾಳೆ ಕೆನಡಾ, ಆಸ್ಟ್ರೇಲಿಯಾದ ದರ್ಜೆ ಈ ದೇಶಕ್ಕೆ ಪ್ರಾಪ್ತವಾಗದೆ ಇರುವುದಿಲ್ಲ. ಇದು ಕತ್ತಲಲ್ಲೂ ಕಾಣುವಷ್ಟು ಸ್ಪಷ್ಟವಿದೆ. ಹೀಗಿರುವಾಗ, ಹಿಂದೀಯರು ಯುದ್ಧದಲ್ಲಿ ಸಹಾಯ ಮಾಡದಿರುವುದು ಅನುಚಿತವಾಗುವುದು. ಇಂದಿಗೆ ಇಂದೇ ಈ ಸ್ವಾತಂತ್ರ ಸಿಗಬೇಕೆಂದು ಕಿಡಿ ಕಾರುವುದರಲ್ಲಿ ಯಾವ ಅರ್ಥವೂ ಇಲ್ಲ. ಈ ವಿಳಂಬದ ಎಲ್ಲ ಹೊಣೆಯನ್ನೂ ಬ್ರಿಟಿಷರ ಮೇಲೆ ಹೊರಿಸುವುದರಲ್ಲಿ ಅರ್ಥವಿಲ್ಲ. ಹಿಂದೀಯರ ಒಳಗಿನ ಕಲಹವೇ ಈ ವಿಳಂಬಕ್ಕೆ ಕಾರಣ, ಎಲ್ಲರ ಐಕಮತ್ಯವಿದ್ದರೆ ಆ ದರ್ಜೆ ಪ್ರಾಪ್ತವಾಗುವುದರಲ್ಲಿ ಯಾವ ಸಂದೇಶವೂ ಇಲ್ಲ. ಎರಡನೆಯ ಉತ್ತರ, ಯುದ್ಧದಲ್ಲಿ ಇಂಗ್ಲಿಷರ ಪರಾಭವವಾಗಿ, ಹಿಂದೂಸ್ಥಾನದಲ್ಲಿ ಹಿಟ್ಲರ್ನ ರಾಜ್ಯವಾದರೆ, ಹಿಂದೀಯರು ರಾಜಕಾರಣದಲ್ಲಿ ಪುನಃ ಹೊಸದಾಗಿ ಆರಂಭಿಸಬೇಕಾಗುವುದು. ಹಾಗಾದರೆ, ಹಿಂದೀಯರ ಗತಿ ಏನಾಗುವುದೋ ಹೇಳಲಾಗದು. ಕರಿವರ್ಣದವರ ವಿಷಯದಲ್ಲಿ ಹಿಟ್ಲರ್ನ ಮನ ಹೇಗಿರುವುದೋ ಅರಿಯುವುದು ಅವಶ್ಯ. ಅದರ ಪೂರ್ಣ ಕಲ್ಪನೆ ಸಿಗಲು ಅವನ ‘‘ಮೈನ್ ಕಾಫ್’’ ಪುಸ್ತಕದ ವಾಕ್ಯಗಳನ್ನು ನೋಡಬಹುದು.
‘‘ಕಪ್ಪು ಜನಾಂಗವನ್ನು ವಿದ್ಯೆಯಿತ್ತು ಉದ್ಧರಿಸುವುದು ಜಗದಾದಿ ಪರಮೇಶ್ವರನ ವಿರುದ್ಧ ಮಾಡುವ ಪಾತಕ. ಅವರನ್ನು ನಾಯಿಗಳಂತೆ ತರಬೇತಿಗೊಳಿಸಬೇಕು. ಪುರಾತನ ಮಾನವ ಜನಾಂಗದ ನಾಗರಿಕತೆ, ಪ್ರಾಣಿಗಳಿಗಿಂತಲೂ ಹೆಚ್ಚಾಗಿ ಕೀಳು ಜನಾಂಗದವರನ್ನು ಮಣಿಸುವುದರಿಂದ ಸಾಧ್ಯ ಆಗಿದೆ. ವಿಶ್ವವನ್ನಾಳುವ ಆ ಅನಂತ ಶಕ್ತಿಯ ಇಚ್ಛೆಯಂತೆ ಉತ್ತಮವೂ, ಬಲಾಢ್ಯವೂ ಆದುದು, ಅಧಮ, ದುರ್ಬಲರನ್ನಾಳುವುದು ಪ್ರಕೃತಿ ನಿಯಮ’’.
ಹಾಗೆಯೇ ಹಿಟ್ಲರ್ನ ಆಳ್ವಿಕೆಯಲ್ಲಿ ರಾಜಕೀಯ ಚಳವಳಿಗೆ ಎಷ್ಟು ಅವಕಾಶ ಸಿಗುವುದು ಮತ್ತು ಯುದ್ಧ ರಾಜಕಾರಣ ಎಷ್ಟರ ಮಟ್ಟಿಗೆ ನಡೆಯುವುದು ಎಂಬುದರ ಕಲ್ಪನೆಗಾಗಿ ಇ.ಟಿ. ರೊಬ್ಯಾಶ್ ಬರೆದ ‘ಜರ್ಮನಿ ಇನ್ ದ ಕ್ಯಾಮರೂನ್ಸ್’ ಕೃತಿಯ ಆಯ್ದ ಭಾಗವನ್ನು ಕೊಡುತ್ತಿದ್ದೇವೆ.
‘‘ಜರ್ಮನರು ಶ್ರೇಷ್ಠರಾದುದರಿಂದ ನಾಡವರು ಹೇಗೆ ಬದುಕಬೇಕೆಂದು ನಿರ್ಧರಿಸುವ ಹಕ್ಕು ಅವರಿಗಿದೆ ಮತ್ತು ಆ ನಾಡವರ ಬದುಕು, ಕೆಲಸ ಮತ್ತು ಚಟುವಟಿಕೆ ಜರ್ಮನರ ಇಚ್ಛಾನುಸಾರ ಅವರ ಅಂಕೆಯಲ್ಲಿರಬೇಕು. ಬ್ರಿಟಿಷರು ಈ ನಾಡವರನ್ನು ವಿದ್ಯಾವಂತರಾಗುವಂತೆ ಪ್ರೋತ್ಸಾಹಿಸುವುದನ್ನು, ಕಾಲೇಜ್ ವಿಶ್ವವಿದ್ಯಾನಿಲಯಗಳಲ್ಲಿ ಅವರಿಗೆ ಪ್ರವೇಶವೀಯುವುದನ್ನು ನಮ್ಮಿಂದ ಸಹಿಸಲಾಗುವುದಿಲ್ಲ. ತಮ್ಮ ಕಾಲನಿಗಳಲ್ಲೇ ಅವರು ಕಾರ್ಯಕಾರಿ ಸೇವೆಗೆ ಸೇರುವುದಂತೂ ವಿಪರ್ಯಾಸವೇ ಸರಿ. ಈಗಲೇ ತಡೆಯದಿದ್ದರೆ ಅವರು ಕಾರ್ಯಕಾರಿ ಸ್ಥಾನಗಳನ್ನೂ ಅಕ್ರಮಿಸುವರು. ಮುಂದೆ ಉಚ್ಚ ನ್ಯಾಯಾಲಯಗಳನ್ನೂ ಪ್ರವೇಶಿಸಿ ನ್ಯಾಯಾಧೀಶರಾದರೆ, ಬಿಳಿಯರು ಅವರ ಮುಂದೆ ತಲೆಬಾಗ ಬೇಕಾಗುವುದು ನಂಬಲಾಗದ ವಿಷಯ.
ದೇವರ ದಯೆ; ಜರ್ಮನರು ಹೃದಯದಿಂದಲ್ಲ, ತಲೆಯಿಂದಲೇ ಆಳುತ್ತಾರೆ. ತಮ್ಮ ನಾಡವರನ್ನು ಆಳಾಗಿ ಅವರು ಎಲ್ಲಿರಬೇಕೆಂಬುದನ್ನು ಚೆನ್ನಾಗಿಯೂ ಅರಿತಿದ್ದಾರೆ. ನಮ್ಮ ಪ್ರತಿಷ್ಠೆ, ಸ್ಥಾನವನ್ನು ಕಾಯಲು, ಜರ್ಮನರು ತಪ್ಪಿತಸ್ಥರಿದ್ದರೂ ಅವರನ್ನು ಶಿಕ್ಷಿಸಲಾಗಲಿಲ್ಲ. ಒಂದೋ ಸ್ಥಳಾಂತರಿಸಬೇಕಾಯ್ತು; ಇಲ್ಲವೇ ಮನೆಗೆ ಕಳುಹಿಸಬೇಕಾಯ್ತು.
ಚಾಟಿಯೇಟಿನ ಭಾಷೆಯೊಂದನ್ನೇ ಈ ನಾಡವರು ಅರಿಯುತ್ತಾರೆ. ಚೆನ್ನಾಗಿ ಹೊಡೆದು ಬಡಿದು ಮಾಡಿದರೆ ನೇರ ದಾರಿಯೇ ಉತ್ತಮ ಎಂದು ಅವರು ತಿಳಿಯುತ್ತಾರೆ.’’
ಇಂಗ್ಲಿಷರಿಗೆ ಸೋಲಾಗಲಿ, ಹಿಟ್ಲರ್ನಿಗೆ ಜಯವಾಗಲಿ, ಹಿಟ್ಲರ್ ಬಂದರೆ ನಮಗೆ ಸ್ವರಾಜ್ಯ ನೀಡುವನು, ಕಾಯ್ದೆಭಂಗ ಚಳವಳಿ ಮಾಡಗೊಡುವನು, ಜೈಲಿಗೆ ಹೋದರೆ ‘ಎ’ ದರ್ಜೆಯಲ್ಲಿರಿಸುವನು ಎಂದು ಆಶಿಸುವ ಹಿಂದೂಗಳಿಗೆ, ಹಿಟ್ಲರ್ ಮತ್ತು ಅವನ ಜೊತೆಗಾರರ ಮನೋರಚನೆಯ ಬಗ್ಗೆ ಮೊದಲು ತಿಳಿದುಕೊಂಡು, ಮತ್ತೆ ಇಂಗ್ಲಿಷರಿಗೆ ಸಹಾಯ ಮಾಡುವುದೋ ಬೇಡವೋ ಎಂದು ನಿರ್ಧರಿಸಿ ಎಂದು ನಾವು ಸೂಚಿಸುತ್ತೇವೆ.
ಕಳೆದ ಜೂನ್ ತಿಂಗಳಿಂದ ಹಿಂದೂಸ್ಥಾನದಲ್ಲಿ ಎರಡು ಪಂಥಗಳಿವೆ. ಷರತ್ತಿಲ್ಲದೆ ಸಹಾಯ ಮಾಡುವವರದು ಒಂದು ಮತ್ತು ಷರತ್ತಿನಂತೆ ಸಹಾಯ ಮಾಡುವವರದು ಇನ್ನೊಂದು. ಆದರೆ ಕಳೆದ ಜೂನ್ ತಿಂಗಳಿಂದ ಮೂರನೆಯ ಪಂಥವೊಂದೂ ಹುಟ್ಟಿಕೊಂಡಿದೆ. ಅದು ಗಾಂಧಿ ಅವರ ಮೂರನೆಯ ಪಂಥ.
ಇದು ಮೇಲಣ ಎರಡು ಪಂಥಗಳಿಗಿಂತ ತುಂಬ ಭಿನ್ನವಾಗಿದೆ. ಕಳೆದ ಜೂನ್ ತಿಂಗಳಲ್ಲಿ ದಿಲ್ಲಿಯಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಜಾರಿಗೆ ತಂದ ಯುದ್ಧ ವಿಷಯದ ಒಪ್ಪಂದ ಮತ್ತು ಅದರಲ್ಲಿ ‘‘ಇಂಗ್ಲಿಷರು ಕೆಲವು ವಿಷಯಗಳನ್ನು ಮಾನ್ಯ ಮಾಡಿದರೆ ನಾವು ಅಧಿಕಾರ ಗ್ರಹಣ ಮಾಡುವ ಮತ್ತು ಯುದ್ಧದಲ್ಲಿ ಸಹಾಯ ಮಾಡುವ’’ ಎಂದುದನ್ನು ಗಾಂಧಿ ಅವರು ವಿರೋಧಿಸಿದ್ದು ಎಲ್ಲರಿಗೂ ತಿಳಿದಿದೆ. ತಾವು ಇದನ್ನು ವಿರೋಧಿಸಿದ್ದು ಏಕೆಂದು ಗಾಂಧಿ ಸ್ಪಷ್ಟಪಡಿಸಿದ್ದು, ಅದರಿಂದ ಗಾಂಧಿ ಪಂಥದ ಭೂಮಿಕೆ ಏನೆಂದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಸ್ವಲ್ಪದರಲ್ಲಿ ಹೇಳಬೇಕೆಂದರೆ, ‘‘ನಾವು ಅಹಿಂಸಾವಾದಿಗಳು, ಇಂಗ್ಲಿಷರು ಅಹಿಂಸೆಯ ಮಾರ್ಗದಲ್ಲಿ ಹಿಟ್ಲರ್ಗೆ ಪ್ರತೀಕಾರ ಮಾಡಬೇಕು’’. ಎಂಬುದು ಗಾಂಧಿ ಅವರ ಭೂಮಿಕೆಯಾಗಿದ್ದು, ಅದರಂತೆ, ಕಾಂಗ್ರೆಸ್ ಈ ವೇಳೆ ಅಧಿಕಾರ ಗ್ರಹಣ ಮಾಡಿ, ಮಂತ್ರಿ ಮಂಡಳ ರೂಪಿಸುವ ಯೋಜನೆ ಮಾಡಬಾರದು. ಹಾಗೆ ಮಾಡಿದರೆ, ಈ ಮಂತ್ರಿ ಮಂಡಳವು ಯುದ್ಧದಲ್ಲಿ ಇಂಗ್ಲಿಷರಿಗೆ ಸಹಾಯ ಮಾಡಲು ಅವಶ್ಯವಿರುವುದನ್ನೆಲ್ಲ ಮಾಡುವುದು ಮತ್ತು ಹಾಗೆ ಮಾಡಿದಲ್ಲಿ ಕಾಂಗ್ರೆಸ್ ಮಂತ್ರಿ ಮಂಡಳಕ್ಕೆ ಹಿಂಸೆಯಲ್ಲಿ ಪಾಲುಗೊಂಡ ಪಾತಕ ಬರುವುದು ಮತ್ತು ಈವರೆಗೆ ಪಾಲಿಸಿಕೊಂಡು ಬಂದ ಅಹಿಂಸೆಯ ತತ್ವಕ್ಕೆ ಹಿಡಿಮಣ್ಣು ಹಾಕಿದಂತಾಗುವುದು. ಅರ್ಥಾತ್, ಇಂಗ್ಲಿಷರು ಈ ಯುದ್ಧದಲ್ಲಿ ಹಿಂಸಾತ್ಮಕ ಸಾಧನಗಳನ್ನು ಉಪಯೋಗಿಸುವುದರಿಂದ, ಈ ದೇಶದ ಜನರು ಅವರಿಗೆ ಸಹಾಯ ಮಾಡಬಾರದು. ಇದು ಈ ಗಾಂಧಿ ಪಂಥದ ವಿಚಾರ ವೈಶಿಷ್ಟ.
ಗಾಂಧಿ ಅವರ ವಿಚಾರ ಸರಣಿಯಿಂದ ಹಲವರು ಆಶ್ಚರ್ಯ ಚಕಿತರಾದುದರಲ್ಲಿ ಸಂಶಯವಿಲ್ಲ. ಅಹಿಂಸೆಯ ತತ್ವಕ್ಕೆ ಬಾಧೆ ಬರುವುದೆಂದು ಇಂಗ್ಲಿಷರಿಗೆ ಸಹಾಯ ಮಾಡಬಾರದೆನ್ನುವ ಗಾಂಧಿ ಅವರು, ಖಿಲಾಫತ್ ಚಳವಳಿಯಲ್ಲಿ ಯಾವ ಭೂಮಿಕೆ ವಹಿಸಿದರು ಮತ್ತು ಅವರ ಅಹಿಂಸೆಯ ತತ್ವವು ಆಗ ಅವರಿಗೆ ಸಹಾಯ ಮಾಡುವಲ್ಲಿ ಅಡ್ಡ ಬರಲಿಲ್ಲವೇ ಎಂದು ನಾವು ಕೇಳ ಬಯಸುತ್ತೇವೆ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)