ಪದೇ ಪದೇ ನೆಗಡಿ ಕಾಡುತ್ತಿದೆಯೇ? ನಿಮಗೆ ಬಹುಶಃ ಗೊತ್ತಿಲ್ಲದ ಕಾರಣಗಳಿಲ್ಲಿವೆ....
ಮಳೆಗಾಲ ಮತ್ತು ಚಳಿಗಾಲದಲ್ಲಿ ನೆಗಡಿ ಕಾಡುವುದು ಸಾಮಾನ್ಯ. ಅದಕ್ಕೆ ಹವಾಮಾನ ಕಾರಣವೆನ್ನುವುದು ಸಾಮಾನ್ಯ ಜ್ಞಾನ. ಆದರೆ ಇದನ್ನು ಹೊರತುಪಡಿಸಿ ನಿಮಗೆ ಆಗಾಗ್ಗೆ ನೆಗಡಿಯುಂಟಾಗಲು ಇತರ ಕಾರಣಗಳೂ ಇವೆ.
ಅಷ್ಟಕ್ಕೂ ಸಾಮಾನ್ಯ ಶೀತವೆಂದರೇನು? ಅದು ಹೆಚ್ಚಾಗಿ ರಿನೊವೈರಸ್ ಎಂಬ ವೈರಾಣು ಉಂಟು ಮಾಡುವ ಕಾಯಿಲೆಯಾಗಿದೆ. ಉಸಿರಾಟ ಸಂಬಂಧಿ ಸಿನ್ಸಿಷಿಯಲ್ ವೈರಸ್,ಕರೋನಾವೈರಸ್,ಇನ್ಫ್ಲುಯೆಂಜಾ ಮತ್ತು ಪ್ಯಾರಾ ಇನ್ಫ್ಲುಯೆಂಜಾ ವೈರಾಣುಗಳೂ ಶೀತವನ್ನುಂಟು ಮಾಡುತ್ತವೆ. ನಿಮಗೆ ಆಗಾಗ್ಗೆ ನೆಗಡಿ ಕಾಡಲು ಕಾರಣಗಳಿಲ್ಲಿವೆ....
►ಕೈಗಳನ್ನು ತೊಳೆಯದಿರುವುದು
ನೀವು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿರುವುದು ಪದೇ ಪದೇ ಶೀತವುಂಟಾಗಲು ಕಾರಣಗಳಲ್ಲೊಂದಾಗಿದೆ. ಕೈಗಳನ್ನು ಸೂಕ್ಷ್ಮಜೀವಿಗಳಿಂದ ಮುಕ್ತವಾಗಿಸಲು ಸಾಬೂನಿನಿಂದ ಕನಿಷ್ಠ 20 ಸೆಕೆಂಡ್ಗಳಾದರೂ ತೊಳೆದುಕೊಳ್ಳಬೇಕು. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ನೋಡಿಕೊಳ್ಳುವ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಸ್ಪರ್ಶಿಸುವ ಮುನ್ನ ಮತ್ತು ನಂತರ,ಟಾಯ್ಲೆಟ್ ಬಳಕೆಯ ಬಳಿಕ,ಗಾಯಕ್ಕೆ ಚಿಕಿತ್ಸೆ ಮಾಡಿಕೊಳ್ಳುವ ಮುನ್ನ ಮತ್ತು ನಂತರ,ಆಹಾರ ಸೇವನೆಯ ಮುನ್ನ,ಅಡುಗೆ ತಯಾರಿಸುವಾಗ,ಅದಕ್ಕೂ ಮುನ್ನ ಮತ್ತು ನಂತರ,ಸೀನಿದಾಗ,ಮೂಗನ್ನು ಸೀಟಿದ ಬಳಿಕ,ಪ್ರಾಣಿಯ ವಿಸರ್ಜನೆಯನ್ನು ಮುಟ್ಟಿದರೆ ಮತ್ತು ತ್ಯಾಜ್ಯಗಳನ್ನು ಸ್ಪರ್ಶಿಸಿದರೆ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳಬೇಕು.
►ಅತಿಯಾಗಿ ಮುಖವನ್ನು ಮುಟ್ಟಿಕೊಳ್ಳುತ್ತಿದ್ದರೆ
ನಿಮಗೆ ಆಗಾಗ್ಗೆ ಅನಾರೋಗ್ಯವುಂಟಾಗಲು ಇದೂ ಒಂದು ಕಾರಣವಾಗಿದೆ. ದಿನವಿಡೀ ನೀವು ಒಂದಲ್ಲೊಂದು ಒಂದು ವಸ್ತುವನ್ನು ಸ್ಪರ್ಶಿಸುತ್ತಲೇ ಇರುವುದರಿಂದ ನಿಮ್ಮ ಕೈಗಳಿಗೆ ಬ್ಯಾಕ್ಟೀರಿಯಾಗಳು ಅಂಟಿಕೊಂಡಿರುತ್ತವೆ ಮತ್ತು ನಿಮಗೆ ತಿಳಿಯದೇ ಮುಖವನ್ನು ಆಗಾಗ್ಗೆ ಮುಟ್ಟಿಕೊಳ್ಳುತ್ತಿದ್ದರೆ ನೀವು ಶೀತ ಮತ್ತು ಇತರ ಅನಾರೋಗ್ಯಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಶೀತದ ವೈರಸ್ಗಳು ನಿಮ್ಮ ಕಣ್ಣುಗಳು,ಬಾಯಿ ಮತ್ತು ಮೂಗಿನ ಮೂಲಕ ಶರೀರವನ್ನು ಪ್ರವೇಶಿಸುತ್ತವೆ. ಹೀಗಾಗಿ ಆಗಾಗ್ಗೆ ಮುಖವನ್ನು ಅನಗತ್ಯವಾಗಿ ಮುಟ್ಟಿಕೊಳ್ಳುವ ಅಭ್ಯಾಸ ನಿಮಗಿದ್ದರೆ ಮೊದಲು ಅದನ್ನು ಬಿಡಿ.
►ಸಾಕಷ್ಟು ನೀರು ಕುಡಿಯದಿರುವುದು
ನೀವು ಸಾಕಷ್ಟು ನೀರು ಕುಡಿಯುತ್ತಿರದಿದ್ದರೆ ಶರೀರದಲ್ಲಿ ಉಂಟಾಗುವ ನಿರ್ಜಲೀಕರಣದಿಂದ ರೋಗ ನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ ಮತ್ತು ಶೀತ ಹಾಗೂ ಇತರ ಕಾಯಿಲೆಗಳಿಗೆ ಸುಲಭವಾಗಿ ಗುರಿಯಾಗುತ್ತೀರಿ. ಸಾಕಷ್ಟು ನೀರು ಕುಡಿಯುವುದರಿಂದ ಶರೀರದಲ್ಲಿಯ ಸೂಕ್ಷ್ಮಕ್ರಿಮಿಗಳನ್ನು ಹೊರಗೆ ಹಾಕಲು ಮತ್ತು ಶೀತದಂತಹ ಕಾಯಿಲೆಗಳನ್ನು ದೂರವಿಡಲು ನಿರೋಧಕ ಶಕ್ತಿಗೆ ನೆರವಾಗುತ್ತದೆ.
►ಆಗಾಗ್ಗೆ ಪ್ರಯಾಣ ಮಾಡುತ್ತಿದ್ದರೆ
ಕೆಲಸದ ನಿಮಿತ್ತ ಆಗಾಗ್ಗೆ ಪ್ರಯಾಣಗಳನ್ನು ಕೈಗೊಳ್ಳುತ್ತಿದ್ದರೆ ಸೇವಿಸುವ ಗಾಳಿಯ ಗುಣಮಟ್ಟ ಮತ್ತು ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳಲು ಸಾಧ್ಯವಾಗದಿರುವುದು ನೀವು ಶೀತಕ್ಕೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿಯಲ್ಲಿ ದುಡಿಯುವ ಉದ್ಯೋಗ ನಿಮ್ಮದಾಗಿದ್ದರೂ ಸುಲಭವಾಗಿ ಶೀತಕ್ಕೆ ಗುರಿಯಾಗುವ ಅವಕಾಶವಿರುತ್ತದೆ. ಏಕೆಂದರೆ ನಿಮ್ಮ ಸಹೋದ್ಯೋಗಿ ಶೀತದಿಂದ ಬಳಲುತ್ತಿದ್ದರೆ ಮತ್ತು ನಿರಂತರವಾಗಿ ಸೀನುತ್ತಿದ್ದರೆ ಅದರಿಂದಾಗಿ ಸೂಕ್ಷ್ಮಜೀವಿಗಳು ಗಾಳಿಯಲ್ಲಿ ಹರಡಿ ಇತರರನ್ನೂ ಅನಾರೋಗ್ಯಕ್ಕೀಡು ಮಾಡಬಹುದು.
►ನೀವು ವ್ಯಾಯಾಮವನ್ನು ತಪ್ಪಿಸುತ್ತಿದ್ದರೆ
ನೀವು ವ್ಯಾಯಾಮ ಮಾಡುವುದನ್ನು ಆಗಾಗ್ಗೆ ತಪ್ಪಿಸುತ್ತಿದ್ದರೆ ಅದೂ ಶೀತಕ್ಕೆ ಕಾರಣವಾಗುತ್ತದೆ. ನಿಯಮಿತವಾಗಿ ಹಿತಮಿತವಾದ ವ್ಯಾಯಾಮವು ನಿಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಾಯಾಮವು ನಿಮ್ಮ ಜೊಲ್ಲಿನಲ್ಲಿ ಇಮ್ಯುನೊಗ್ಲೋಬುಲಿನ್ ಎ(ಐಜಿಎ) ಮಟ್ಟವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಟಗೊಂಡ ಸಂಶೋಧನಾ ವರದಿಯು ಬೆಳಕಿಗೆ ತಂದಿದೆ. ಅದು ರೋಗ ನಿರೋಧಕ ವ್ಯವಸ್ಥೆಯ ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಲೋಳೆಯಲ್ಲಿರುವ ಪ್ರತಿಜೀವಕವಾಗಿದೆ.
ಶೀತವುಂಟಾದಾಗ ಯಾವಾಗ ವೈದ್ಯರನ್ನು ನೋಡಬೇಕು?
ಗಂಟಲಿನ ಕಿರಿಕಿರಿ,ಸೀನು,ಮೂಗು ಕಟ್ಟಿರುವುದು,ಮೂಗು ಸೋರಿಕೆ,ಕಣ್ಣುಗಳಲ್ಲಿ ನೀರು ಬರುವುದು,ಜ್ವರ ಮತ್ತು ಮಾಂಸಖಂಡಗಳಲ್ಲಿ ನೋವು ಇವು ಸಾಮಾನ್ಯ ಶೀತದ ಲಕ್ಷಣಗಳಾಗಿವೆ. ಸಾಮಾನ್ಯ ನೆಗಡಿ ಸುಮಾರು 7ರಿಂದ 10 ದಿನಗಳ ಕಾಲ ಕಾಡುತ್ತದೆ. ಆದರೆ ನಂತರವೂ ಈ ಲಕ್ಷಣಗಳು ಉಳಿದುಕೊಂಡಿದ್ದರೆ ನೀವು ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಬಹುದು.
ನೀವು 102 ಡಿಗ್ರಿ ಫ್ಯಾರೆನ್ಹೀಟ್ ಜ್ವರದಿಂದ ಬಳಲುತ್ತಿದ್ದರೆ ಮತ್ತು ಅದು ಕಡಿಮೆಯಾಗದಿದ್ದರೆ ಕಳವಳಕಾರಿಯಾಗುತ್ತದೆ. ನೀವು ಸಾಮಾನ್ಯ ಶೀತದಿಂದ ಬಳಲುತ್ತಿದ್ದು,ಉಸಿರಾಟದಲ್ಲಿ ತೊಂದರೆ ಮತ್ತು ಎದೆ ಕಟ್ಟಿದಂತೆ ಅನುಭವವಾಗುತ್ತಿದ್ದರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಸಾಮಾನ್ಯ ಶೀತವಾದಾಗ ಗಂಟಲು ನೋಯುತ್ತಿದ್ದರೆ ಆಹಾರ ನುಂಗಲು ಕಷ್ಟವಾಗುವುದು ಸಾಮಾನ್ಯ. ಆದರೆ ನುಂಗುವಾಗ ನಿಮ್ಮ ಗಂಟಲು ತುಂಬ ನೋಯುತ್ತಿದ್ದರೆ ಅದು ಸೋಂಕು ಅಥವಾ ಗಾಯವನ್ನು ಸೂಚಿಸಬಹುದು. ನಿಮ್ಮ ಕೆಮ್ಮು ನಿರಂತರವಾಗಿದ್ದರೆ ಮತ್ತು ಅದು ತೀವ್ರವಾಗಿದ್ದರೆ ನಾಯಿಕೆಮ್ಮಿನ ಲಕ್ಷಣವಾಗಿರಬಹುದು. ಸಾಮಾನ್ಯ ಶೀತವಾದಾಗ ಮೂಗಿನಲ್ಲಿ ಸಿಂಬಳ ಸಂಗ್ರಹವಾಗಿ ಮೂಗು ಕಟ್ಟುತ್ತದೆ ಮತ್ತು ಇದು ಕೆಲವೊಮ್ಮೆ ಸೈನಸ್ ಸೋಂಕಿಗೆ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.