ವಿಶ್ವಮಾನವ ಪ್ರಜ್ಞೆಯ ನೈಪಾಲ್
ನೈಪಾಲ್ ಅವರ ಕೃತಿಗಳಲ್ಲಿ ಕಂಡುಬರುವ ರಾಜಕೀಯ ಧೋರಣೆಯೂ ಅವರು ವಿವಾದಾತ್ಮಕ ಲೇಖಕ ಎನ್ನಿಸಿಕೊಳ್ಳಲು ಇನ್ನೊಂದು ಕಾರಣ. ಅವರ ಕೃತಿಗಳಲ್ಲಿ ಕಂಡುಬರುವ ವಾಮ ಪಂಥೀಯ ಸಿದ್ಧಾಂತ ಕುರಿತ ಧೋರಣೆ ಅವರ ವಿವಾದಾತ್ಮಕತೆಯ ಇನ್ನೊಂದು ತಿರುವು. ಬಡವರು ಮತ್ತು ಅವಕಾಶವಂಚಿತರ ಕೈಗೆ ಅಧಿಕಾರದ ಹಸ್ತಾಂತರವಾಗಬೇಕು ಎನ್ನುವ ವಾದದಲ್ಲಿ ಅವರಿಗೆ ಒಲವಿರುವಂತಿಲ್ಲ. ಬಡವರ ಕೈಗೆ ಅಧಿಕಾರ ಕೊಟ್ಟಲ್ಲಿ, ಆ ಬಡವರು ಅಧಿಕಾರಕ್ಕೆ ಬಂದಾಗ ನ್ಯಾಯಯುತವಾಗಿ ನಡೆದುಕೊಳ್ಳುವರೆಂಬ ಭರವಸೆ ಇದೆಯೇ-ಖಾತ್ರಿ ಇದೆಯೇ?ನೀವು ಅವಕಾಶ ವಂಚಿತರು ನಿಜ,ನಿಮಗೊಂದು ಅವಕಾಶ ಕೊಟ್ಟರೆ, ನೀವು ಮತ್ತೊಬ್ಬರನ್ನು ಅವಕಾಶ ವಂಚಿತರನ್ನಾಗಿಸುವುದಿಲ್ಲ ಎಂಬುದಕ್ಕೆ ಭರವಸೆ ಏನಿದೆ?ಖಾತ್ರಿ ಇದೆಯೇ? ಇದು ನೈಪಾಲರು ಕೇಳುವ ಪ್ರಶ್ನೆಗಳು.
ಜೀವಿತಾವಧಿಯಲ್ಲೇ ವಿಶ್ವವಿಖ್ಯಾತಿಯನ್ನೂ ವಿವಾದಾತ್ಮಕ ಸಾಹಿತಿ ಎಂಬ ‘ಹಣೆಪಟ್ಟಿಯ’ನ್ನೂ ಗಳಿಸಿದ ಕೆಲವೇ ಧೀಮಂತ ಇಂಗ್ಲಿಷ್ ಲೇಖಕರಲ್ಲಿ ಒಬ್ಬರಾದ ವಿದ್ಯಾಧರ ಸೂರಜ್ ಪ್ರಸಾದ ನೈಪಾಲ್, ಜಗತ್ತಿನ ಕಟುವಾಸ್ತವಗಳನ್ನು ನಾಗರಿಕ ಪ್ರಪಂಚದ ಮುಖಕ್ಕೆ ರಾಚುವಂತೆ ಬಿಂಬಿಸುತ್ತಲೇ ಅಖಂಡ ವಿಶ್ವ ನಾಗರಿಕತೆಯ ಕನಸುಕಂಡ ಬಹುಮುಖ ಪ್ರತಿಭೆಯ ಬರಹಗಾರ ಮತ್ತು ಪ್ರಖರ ವೈಚಾರಿಕತೆಯ ನಿಶಿತಮತಿ. ಇದೇ 11ರಂದು ಶನಿವಾರ ಲಂಡನ್ನಿನಲ್ಲಿ ಕೊನೆಯುಸಿರೆಳೆದಾಗ ನೈಪಾಲ್ ಅವರಿಗೆ ಎಂಬತ್ತಾರರ ಪ್ರಾಯ. ಎಂಬತ್ತಾರು ವರ್ಷ ತುಂಬಲು ಕೇವಲ ಆರು ದಿನಗಳು ಬಾಕಿ ಇದ್ದವು. ತುಂಬು ಜೀವನವನ್ನು ಕಂಡು, ತಾನು ಕಂಡದ್ದನ್ನು ಬೊಗಸೆ ತುಂಬ ಸಾಹಿತ್ಯ ರಸಿಕರಿಗೆ ಕೊಟ್ಟ ನೈಪಾಲ್ ಅವರ ಬದುಕು-ಬರಹಗಳು ವೈವಿಧ್ಯಮಯವೂ ಹೌದು ವಿವಾದಾತ್ಮಕವೂ ಹೌದು. ನೈಪಾಲ್ ಹುಟ್ಟಿದ್ದು 1932ರ ಆಗಸ್ಟ್ 17ರಂದು ಟ್ರಿನಿಡಾಡ್‌ನ ಚಗುಣಾಸ್ ಎಂಬ ಪಟ್ಟಣದಲ್ಲಿ. 1880ರಿಂದ ಅವರ ಕುಟುಂಬ ಇಲ್ಲಿ ನೆಲೆಸಿತ್ತು.
ಅವರ ತಾತ ಇಲ್ಲಿನ ಕಬ್ಬಿನ ಗದ್ದೆಗಳಲ್ಲಿ ಕರಾರು ಕೂಲಿಯಾಗಿ ಕೆಲಸ ಮಾಡಲು ಭಾರತದಿಂದ ಇಲ್ಲಿಗೆ ವಲಸೆ ಬಂದವರು.(ಆ ಕಾಲದಲ್ಲಿ ಭಾರತ ಮೊದಲಾದ ದೇಶಗಳಿಂದ ಹರಾಜಿನಲ್ಲಿ ಕೂಲಿಕಾರ್ಮಿಕರನ್ನು ಖರೀದಿಸಿ ಅಗತ್ಯ ದೇಶಗಳಿಗೆ ಪೂರೈಸುವ ಪದ್ಧತಿಯೊಂದಿತ್ತು). ನೈಪಾಲ್ ಅವರ ಶಿಕ್ಷಣ ಟ್ರಿನಿಡಾಡ್‌ನ ಇಂಗ್ಲಿಷ್ ಶಾಲೆಗಳಲ್ಲಿ ಮತು ಆಕ್ಸ್‌ಫರ್ಡ್‌ನಲ್ಲಿ ನಡೆಯಿತು. ಹುಡುಗನಾಗಿದ್ದಾಗಲೇ ಸಾಹಿತ್ಯದಲ್ಲಿ ಅಭಿರುಚಿ ಮೂಡಿದ್ದು ತಂದೆ ಓದಿ ಹೇಳುತ್ತಿದ್ದ ಕಥೆಗಳನ್ನು ಆಲಿಸಿದ್ದರಿಂದ. ತಂದೆ ಬೂಕರ್ ಟಿ.ವಾಶಿಂಗ್ಟನ್‌ನ ‘ಅಪ್ ಫ್ರಂ ಸ್ಲೇವರಿ’ ಅಂಥ ಪುಸ್ತಕಗಳನ್ನು ಓದಿ ಹೇಳುತ್ತಿದ್ದರಂತೆ. ಮುವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ನೈಪಾಲರ ಮೊದಲ ಕೃತಿ ‘ದಿ ಮಿಸ್ಟಿಕ್ ಮ್ಯಾಸರ್’(1957).ಗಣೇಶ ರಾಮ್‌ಸುಮೇರ್ ಎಂಬವನ ಬದುಕನ್ನು ನಿರೂಪಿಸುವ ಈ ಕೃತಿ ನೈಪಾಲರ ಮೊದಲ ಕಾದಂಬರಿ.ಶಾಲಾ ಮಾಸ್ತರಿಕೆಯಲ್ಲಿ ವಿಫಲನಾಗಿ ಮಾಲೀಸುಗಾರನಾಗುವ ಗಣೇಶ ಮುಂದೆ ಟ್ರಿನಿಡಾಡ್‌ನಲ್ಲಿ ಯಶಸ್ವಿ ರಾಜಕಾರಣಿಯಾಗಿ ಪ್ರಸಿದ್ಧನಾಗುತ್ತಾನೆ. ರೋಚಕವಾದ ಈ ಕೃತಿಗೆ ದೊರೆತ ಸ್ವಾಗತ ನೈಪಾಲರನ್ನು ಜೀವನಪೂರ್ತಿ ಬರವಣಿಗೆಗೆ ಕಟ್ಟಿಹಾಕಿತು. ಐದು ದಶಕಗಳ ಕಾಲ ಸತತವಾಗಿ ಬರೆದ ಅವರು ಅಲ್ಲಿಂದ ಹಿಂದಿರುಗಿ ನೋಡಿದ್ದಿಲ್ಲ. ಅವರು ಒಮ್ಮೆ ಹೀಗೆ ಹೇಳಿರುವುದುಂಟು:ನನ್ನೆಲ್ಲ ಕೃತಿಗಳು ಒಂದೇ ಗ್ರಂಥವಿದ್ದಂತೆ.
ನಾನೊಂದು ಬೃಹತ್ ಗ್ರಂಥವನ್ನು ಬರೆಯುತ್ತಿದ್ದೇನೆ. ಈ ಬೃಹತ್ ಗ್ರಂಥದಲ್ಲಿ ಅವರು ಕಾಲಾನುಕ್ರಮಣಿಕೆಯನ್ನು ಹಿಂದುಮುಂದು ಮಾಡುತ್ತ ವಸಾಹತುಶಾಹಿ ಹೇಗೆ ಆಧುನಿಕ ಪ್ರಪಂಚವನ್ನು ರೂಪಿಸಿತು ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದರು. ವರ್ಷಂಪ್ರತಿ ಒಂದೊಂದು ಪುಸ್ತಕವನ್ನು ಪ್ರಕಟಿಸುತ್ತಿದ್ದ ನೈಪಾಲರಿಗೆ ಇಂಗ್ಲಿಷ್ ಸಾಹಿತ್ಯ ಲೋಕದಲ್ಲಿ ಸ್ಥಾನಮಾನ ತಂದುಕೊಟ್ಟದ್ದು ಅವರ ನಾಲ್ಕನೆಯ ಕಾದಂಬರಿ ‘ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್’(1961). ಆತ್ಮಕಥನ ಸ್ವರೂಪದ ಈ ಕೃತಿ ನಿರಂಕುಶಾಧಿಕಾರ ಪ್ರವೃತ್ತಿಯ ಹೆಂಡತಿಯ ಕುಟುಂಬದಿಂದ ಮುಕ್ತನಾಗ ಬಯಸುವ ಪತ್ರಕರ್ತನೊಬ್ಬನ ಕಥೆ. ‘ಇನ್ ಎ ಫ್ರೀ ಸ್ಟೇಟ್’, ‘ಗೆರಿಲ್ಲಾಸ್’, ‘ಎ ಬೆಂಡ್ ಇನ್ ದಿ ರಿವರ್’ (1979) ಅವರ ಇತರ ಪ್ರಮುಖ ಕಾದಂಬರಿಗಳು. ‘ಇನ್ ಎ ಫ್ರೀ ಸ್ಟೇಟ್’ ಬೂಕರ್ ಪ್ರಶಸ್ತಿ ತಂದುಕೊಟ್ಟರೆ ‘ಗೆರಿಲ್ಲಾಸ್’ 1975ರ ಶ್ರೇಷ್ಠ ಕಾದಂಬರಿ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್ ಬುಕ್ ರೆವ್ಯೆ’ ಸಂಪಾದಕರ ಪ್ರಶಂಸೆಗೆ ಪಾತ್ರವಾಯಿತು. ‘ಎ ಬೆಂಡ್ ಇನ್ ದಿ ರಿವರ್’ ವಸಾಹತೋತ್ತರ ಮಧ್ಯ ಆಫ್ರಿಕಾದ ಬದುಕನ್ನು ಶೋಧಿಸುವ ಮಹತ್ವದ ಕಾದಂಬರಿ.
ಸುಭಗ ಶೈಲಿ, ವ್ಯಂಗ್ಯ-ವಿಡಂಬನೆ, ಬದುಕಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ಕಣ್ಮನ ಸೆಳೆವಂತೆ ವಿವರಿಸುವ ಲಹರಿ, ಹರಿತವಾದ ಸಂವೇದನೆ-ಹೀಗೆ ಸೃಜನಶೀಲ ಲೇಖಕನೊಬ್ಬನಿಗೆ ಬೇಕಾದ ಸಾಧನಸಂಪತ್ತುಗಳ ಪ್ರತಿಭಾಶಾಲಿ ನೈಪಾಲ್ ಕಥಾಸಾಹಿತ್ಯದಿಂದ ಕಥಾಸಾಹಿತ್ಯೇತರ ಗದ್ಯ ಪ್ರಕಾರಕ್ಕೆ,ವಿಶೇಷವಾಗಿ ಪ್ರವಾಸ ಕಥನಕ್ಕೆ ಹೊರಳಿದ್ದು ಒಂದು ಆಶ್ಚರ್ಯವೆ.ಅವರ ಪ್ರಕಾರ ಕಥಾವಸ್ತು (ಪ್ಲಾಟ್)ಮುಖ್ಯವಾಗುವ ಕಾಲ್ಪನಿಕ ಕಥಾ ಸಾಹಿತ್ಯ (ಫಿಕ್ಷನ್) ಎನ್ನುವುದು ಈಗಾಗಲೇ ಪ್ರಪಂಚವನ್ನು ಬಲ್ಲವರಿಗೆ ಸರಿಯಾದ ಪ್ರಕಾರ.ಸಂಕಥನ(ನೆರೇಷನ್) ಲೋಕಾನ್ವೇಷಣೆ ಮಾಡಬಯಸುವವರಿಗೆ ಸರಿಯಾದುದು.ಕಥಾಸಾಹಿತ್ಯೇತರ ಬರವಣಿಗೆ ನಾವು ಅರಿಯದ ಇನ್ನೊಂದು ಪ್ರಪಂಚದ ಅನ್ವೇಷಣೆಗೆ ಒಂದು ಅರ್ಥಕೊಡುವ ಮಾರ್ಗವಾದೀತು. ಎಂದೇ ಅನ್ವೇಷಣಾ ಪ್ರವೃತ್ತಿಯ ನೈಪಾಲರಿಗೆ ಈ ಹೊಸ ಪ್ರಕಾರ ಆಕರ್ಷಣೀಯವಾಗಿ ಕಂಡಿರಬೇಕು.ನೈಪಾಲ್ ಪರ್ಯಟನಕಾರರಾಗಿದ್ದುದಕ್ಕೂ ಅವರ ಈ ಅನ್ವೇಷಣಾ ಪ್ರವೃತ್ತಿಯೇ ಕಾರಣವಿರಬಹುದು. ನೊಬೆಲ್ ಪ್ರಶಸ್ತಿ ಉಪನ್ಯಾಸದಲ್ಲಿ ಅವರು,ಟ್ರಿನಿಡಾಡ್‌ನ್‌ದಲ್ಲಿ ತಮ್ಮ ಬಾಲ್ಯ ಅಂಧಕಾರಮಯ ಪ್ರದೇಶಗಳಿಂದ ಆವೃತವಾಗಿತ್ತೆಂದು ಹೇಳಿದ್ದಾರೆ. ಈ ಅಂಧಕಾರಮಯ ಪ್ರದೇಶಗಳೇ ಮುಂದೆ ಅವರ ಬರಹಕ್ಕೆ ವಸ್ತುಗಳಾದವು.ಅವರು ಖಂಡಾಂತರಗಳ ಉದ್ದಗಲ ಪರ್ಯಟನ ಮಾಡಿದರು. ಪ್ರಪಂಚ ಸುತ್ತಿ ಅವರು ಬರೆದ ಈ ಅನ್ವೇಷಣಾ ಸಾಹಿತ್ಯವೇ ಅವರನ್ನು ಅತ್ಯಂತ ವಿವಾದಾಸ್ಪದ ವ್ಯಕ್ತಿಯನ್ನಾಗಿಯೂ ಮಾಡಿತು. ಅವರ ಈ ಬಗೆಯ ಮೊದಲ ಕೃತಿ ‘ದಿ ಮಿಡ್ಲ್ ಪ್ಯಾಸೇಜ್’(1960). ಈ ಕೃತಿಯಲ್ಲಿ ವೆಸ್ಟಿಂಡೀಸ್ ದ್ವೀಪಗಳ ವಸಾಹತು ಚಹರೆಯ ಬದುಕನ್ನು ಸಾಂಸ್ಕೃತಿಕ ಅಣಕವಾಡ ಎಂದು ಬಣ್ಣಿಸಿರುವ ನೈಪಾಲ್ ಅಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಮನುಕುಲದ ಹೊಸಗುಲಾಮಗಿರಿಯನ್ನು ಕಂಡಿದ್ದಾರೆ.(ನಮ್ಮಲ್ಲಿ ಕ್ರಿಕೆಟ್ ಆಟಗಾರರನ್ನು ಹರಾಜು ಹಾಕುವ ಗುಲಾಮರ ವ್ಯಾಪಾರ-ಇಪ್ಪತ್ತೊಂದನೆಯ ಶತಮಾನದ ಇಂಡೆಂಚರ್ಡ್ ಲೇಬರ್- ಶುರುವಾಗಿದೆಯಲ್ಲ ಅದಕ್ಕೆ ನೈಪಾಲ್ ಎನನ್ನುತ್ತಿದ್ದರೊ?).
ಪ್ರವಾಸ ಸಾಹಿತ್ಯದ ಮಾದರಿಯ ನೈಪಾಲ್ ಅವರ ಕೃತಿಗಳ ಪೈಕಿ ಬಿರುಗಾಳಿ ಸ್ವರೂಪದ ವಿವಾದಗಳನ್ನೆಬ್ಬಿಸಿದ್ದು ಭಾರತ ತ್ರಿವಳಿ ಕೃತಿಗಳು.‘ಅನ್ ಏರಿಯಾ ಆಫ್ ಡಾರ್ಕ್‌ನೆಸ್’(1964),‘ಎ ವೂಂಡೆಡ್ ಸಿವಿಲಿಸೇಷನ್’(1977) ಮತ್ತು ‘ಎ ಮಿಲಿಯನ್ ಮ್ಯುಟಿನೀಸ್ ನೌ’(1990). ಈ ಕೃತಿಗಳು ನೈಪಾಲ್‌ನ ಭಾರತ ಕುರಿತ ತಿರಸ್ಕಾರದ,ಅತಿರೇಕದ ಧೋರಣೆಗಳಿಂದಾಗಿ ತೀವ್ರ ಟೀಕೆಗಳಿಗೆ ಗುರಿಯಾದವು. ಕವಿ ನಿಸ್ಸಿಮ್ ಎಜಿಕಲ್ ಅವರು ಇದಕ್ಕೆ ಪತ್ಯುತ್ತರವಾಗಿ ‘ನೈಪಾಲ್ಸ್ ಇಂಡಿಯಾ ಆ್ಯಂಡ್ ಮೈನ್’ ಎಂಬ ಲೇಖನವನ್ನೇ ಬರೆದರು. ಅರ್ಜೆಂಟೀನಾ, ಕಾಂಗೊ, ಇಂಡೊನೇಶಿಯಾ, ಇರಾನ್, ಪಾಕಿಸ್ತಾನ ದೇಶಗಳಲ್ಲಿ ವ್ಯಾಪಕವಾಗಿ ಪರ್ಯಟನೆ ನಡೆಸಿರುವ ನೈಪಾಲರ ಪ್ರವಾಸ ಸಾಹಿತ್ಯದಲ್ಲಿ ಈ ದೇಶಗಳ ವಿದ್ಯಮಾನಗಳ ಚಿತ್ರವಿದೆ.ಅವರು ಆಫ್ರಿಕಾ ಸಮಾಜದಲ್ಲಿರುವ ‘ಅನಾಗರಿಕತೆ’,‘ಬರ್ಬರತೆ’ಗಳ ಬಗ್ಗೆ ಬರೆದಿದ್ದಾರೆ.ಅವರು ಭಾರತವನ್ನು, ಗುಡ್ಡಬೆಟ್ಟಗಳು, ನದಿ ತೀರ, ರಸ್ತೆಬದಿಗಳಲ್ಲಿ ತಂಬಿಗೆ ಹಿಡಿದುಕೊಂಡು ಬಹಿರ್ದೆಸೆಗೆ ಹೋಗುವ ದೇಶವಾಗಿ ಕಂಡಿದ್ದಾರೆ. ಹಾಗೆಯೇ ಇಸ್ಲಾಂ ಬಗ್ಗೆಯೂ ಬರೆದಿದ್ದಾರೆ. ಈ ಬರಹಗಳಲ್ಲಿ ಕಂಡುಬರುವ ವಸಾಹತೋತ್ತರ ಪ್ರಪಂಚ ಕುರಿತ ಅವರ ಅನುಕಂಪರಹಿತ ಧೋರಣೆ ಹೆಚ್ಚು ಟೀಕೆಗೆ ಗುರಿಯಾಗಿದೆ.
ನೈಪಾಲ್ ಅವರ ಕೃತಿಗಳಲ್ಲಿ ಕಂಡುಬರುವ ರಾಜಕೀಯ ಧೋರಣೆಯೂ ಅವರು ವಿವಾದಾತ್ಮಕ ಲೇಖಕ ಎನ್ನಿಸಿಕೊಳ್ಳಲು ಇನ್ನೊಂದು ಕಾರಣ. ಅವರ ಕೃತಿಗಳಲ್ಲಿ ಕಂಡುಬರುವ ವಾಮ ಪಂಥೀಯ ಸಿದ್ಧಾಂತ ಕುರಿತ ಧೋರಣೆ ಅವರ ವಿವಾದಾತ್ಮಕತೆಯ ಇನ್ನೊಂದು ತಿರುವು. ಬಡವರು ಮತ್ತು ಅವಕಾಶವಂಚಿತರ ಕೈಗೆ ಅಧಿಕಾರದ ಹಸ್ತಾಂತರವಾಗಬೇಕು ಎನ್ನುವ ವಾದದಲ್ಲಿ ಅವರಿಗೆ ಒಲವಿರುವಂತಿಲ್ಲ. ಬಡವರ ಕೈಗೆ ಅಧಿಕಾರ ಕೊಟ್ಟಲ್ಲಿ, ಆ ಬಡವರು ಅಧಿಕಾರಕ್ಕೆ ಬಂದಾಗ ನ್ಯಾಯಯುತವಾಗಿ ನಡೆದುಕೊಳ್ಳುವರೆಂಬ ಭರವಸೆ ಇದೆಯೇ-ಖಾತ್ರಿ ಇದೆದೇ?ನೀವು ಅವಕಾಶ ವಂಚಿತರು ನಿಜ,ನಿಮಗೊಂದು ಅವಕಾಶ ಕೊಟ್ಟರೆ, ನೀವು ಮತ್ತೊಬ್ಬರನ್ನು ಅವಕಾಶ ವಂಚಿತರನ್ನಾಗಿಸುವುದಿಲ್ಲ ಎಂಬುದಕ್ಕೆ ಭರವಸೆ ಏನಿದೆ?ಖಾತ್ರಿ ಇದೆಯೇ? ಇದು ನೈಪಾಲರು ಕೇಳುವ ಪ್ರಶ್ನೆಗಳು. ಎಂದೇ ನೈಪಾಲರು ತೀವ್ರ ಸುಧಾರಣೆಯನ್ನಾಗಲೀ ಕ್ರಾಂತಿಕಾರಿ ಬದಲಾವಣೆಯನ್ನಾಗಲೀ ಬಯಸುವುದಿಲ್ಲ. ಸಂಪ್ರದಾಯವಾದಿ ಯಥಾಸ್ಥಿತಿ ಮುಂದುವರಿಕೆಯತ್ತಲೇ ಅವರ ಒಲವು.ತೀವ್ರಗಾಮಿಯಾದ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಬದಲು ಇಂಗ್ಲಿಷ್ ಮತ್ತು ಪುರೋಹಿತಶಾಹಿ ಬ್ರಾಹ್ಮಣ ಕೇಂದ್ರಿತ ಯಥಾಸ್ಥಿತಿಯನ್ನು ಅವರು ಬಯಸುತ್ತಾರೆ ಎಂಬುದು ವಿಮರ್ಶಕರ ಅಂಬೋಣ.
ಅವರ ಜೀವಿತಾವಧಿಯಲ್ಲೇ ನೈಪಾಲರನ್ನು ವಿಮರ್ಶಕರು ಜೋಸೆಫ್ ಕಾನ್ರಾಡ್, ಚಾರ್ಲ್ಸ್ ಡಿಕನ್ಸ್ ಮತ್ತು ಲಿಯೋ ಟಾಲಸ್ಟಾಯ್ ಅವರಿಗೆ ಹೋಲಿಸಿರುವುದುಂಟು. ಹಾಗೆಯೇ ತೃತೀಯ ವಿಶ್ವದ ಬುದ್ಧಿಜೀವಿಗಳು ಅವರನ್ನು ಬಿಳಿ ಜನಾಂಗದ ಹಿತಕರ ನಿಗೂಢಗಳ ಜೀರ್ಣೋದ್ಧಾರಕ, ನವ ವಸಾಹತುಶಾಹಿಯ ಕುತ್ಸಿತ ಕಾಲಾಳು ಎಂದೆಲ್ಲ ಟೀಕಿಸಿರುವುದುಂಟು. ಈ ಎಲ್ಲ ಟೀಕೆ ವಿಮರ್ಶೆಗಳಿಗೆ ನೈಪಾಲರ ಪ್ರತಿಕ್ರಿಯ ಗುಡುಗುಸಿಡಿಲು ಇದ್ದಂತೆ. ತೃತೀಯ ವಿಶ್ವ ಕುರಿತ ಅವರ ಬರಹಗಳನ್ನು ವಸಾಹತುಶಾಹಿಯ ಕ್ಷಮಾಪಣೆ ಎಂದು ಟೀಕಿಸುವವರನ್ನು ಕಂಡರೆ ಅವರಿಗೆ ಕಿಡಿ ಕಾರುವಷ್ಟು ಕೋಪ. ಅವರ ಕೋಪಕ್ಕೆ ಸ್ವಲ್ಪ ಕಾರಣವೂ ಉಂಟು. ಏಕೆಂದರೆ ವಸಾಹತೋತ್ತರ ಪ್ರಪಂಚದ ಬಗ್ಗೆ ಬರೆಯುವಾಗ ಅವರು ವಸಾಹತುಶಾಹಿಗಳ ಅಹಂಕಾರ ಮತ್ತು ಸ್ವಪ್ರಗತಿಗಳ ಬಗ್ಗೆಯೂ ಬರೆದಿದ್ದಾರೆ.ಟೀಕೆ-ವಿಮರ್ಶೆಗಳ ಬಗ್ಗೆ ಅವರು ಪ್ರಜ್ಞಾಪೂರ್ವಕರಾಗಿದ್ದುದು ಹೌದು.ಅವರು ಬರೆಯುತ್ತಾರೆ:ನನ್ನಂಥವನಿಗೆ ಸಮಸ್ಯೆಯೆಂದರೆ,ಬೌದ್ಧಿಕಜೀವನ ಇಲ್ಲದ ಸಮಾಜಗಳ ಬಗ್ಗೆ ಬರೆಯುವುದು. ಬರೆದರೆ ಜನರಿಗೆ ಕೋಪ ಬರುತ್ತದೆ.... ಈಗ ಭಾರತ ಸ್ವಲ್ಪ ಸುಧಾರಿಸಿದೆ...
2001ರಲ್ಲಿ ನೊಬೆಲ್ ಪ್ರಶಸ್ತಿ ನೀಡಿದಾಗ ಸ್ವೀಡಿಶ್ ಅಕಾಡಮಿ ನೈಪಾಲರನ್ನು ಪ್ರಪಂಚ ಸುತ್ತುವ ಸಾಹಿತಿ, ಅವರ ಆತ್ಮವೇ ಅವರ ಮನೆ ದೇಶ ಎಲ್ಲವೂ.ಅವರದು ಪ್ರಪಂಚ ಸುತ್ತುವವನ ಅನುಪಮ ದನಿ. ನೈಪಾಲರ ಪ್ರಪಂಚ ಸುತ್ತುವ ಗೀಳಿನಲ್ಲಿ ಅನಾಥ ಪ್ರಜ್ಞೆಯ ಒಂದು ಎಳೆಯೂ ಇದ್ದೀತು. ತಮ್ಮನ್ನು ಯಾವುದೇ ಒಂದು ನಿರ್ದಿಷ್ಟ ಜನಾಂಗಕ್ಕೆ ಅಥವಾ ಧರ್ಮಕ್ಕೆ ಸೇರಿದವನೆಂದು ಗುರುತಿಸುವುದನ್ನು ನೈಪಾಲರು ವಿರೋಧಿಸುತ್ತಿದ್ದರು.ಜನ್ಮತಹ ಹಿಂದೂ ಆದರೂ ಅವರು ಹಿಂದೂ ಧರ್ಮವನ್ನು ಆಚರಿಸುತ್ತಿರಲಿಲ್ಲ.ಅವರು ಪಾಶ್ಚಾತ್ಯ ನಾಗರಿಕತೆಯ ಕಟ್ಟಾ ಬೆಂಬಲಿಗರಾಗಿದ್ದರು.ವಿಶ್ವ ನಾಗರಿಕತೆ,ವಿಶ್ವ ಮಾನವ ಸಂಸ್ಕೃತಿ ಅವರ ಮಾರ್ಗದರ್ಶಿ ತತ್ವವಾಗಿತ್ತು. ನೈಪಾಲರನ್ನು, ಅವರ ಕೃತಿಗಳು ಹಾಗೂ ವೈಯಕ್ತಿಕ ವರ್ತನೆ ಸೇರಿ ಹಲವುಹನ್ನೊಂದು ಕಾರಣಗಳಿಂದ ಕಟುವಾಗಿ ಟೀಕಿಸುವವರೆಗೇನೂ ಕಡಿಮೆಯಿಲ್ಲ. ಈ ಟೀಕಾಕಾರರ ಮುಖ್ಯ ಆಕ್ಷೇಪಣೆಗಳೆಂದರೆ-
1.ಅಭಿವೃದ್ಧಿಶೀಲ ಪ್ರಪಂಚವನ್ನು ಸಮ್ರಾಜ್ಯಶಾಹಿ ಕಣ್ಣುಗಳಿಂದ ನೋಡಿ ಬರೆದ ಸಾಹಿತ್ಯ 2.ಮುಸ್ಲಿಂ ದೇಶಗಳ ಪ್ರವಾಸ ಸಾಹಿತ್ಯದಲ್ಲಿ ಮುಸ್ಲಿಂಭೀತಿ(ಅವರ ಮೂರನೆ ಪತ್ನಿ ಮುಸ್ಲಿಂ-ಪಾಕಿಸ್ತಾನದ ಪತ್ರಕರ್ತೆ)
3.ಭಾರತ ಕುರಿತ ತ್ರಿವಳಿ ಕೃತಿಗಳು ಎಬ್ಬಿಸಿದ ಆಕ್ರೋಶ -ಇವು ಸಾಹಿತ್ಯ ಕುರಿತಂತಾಯಿತು. ನೈಪಾಲರ ಎಡವಿರೋಧಿ ರಾಜಕೀಯ ಧೋರಣೆಯೂ ಯಥಾಸ್ಥಿತಿ ವಾದವೂ ಸಾಕಷ್ಟು ಟೀಕೆಗೆ ಗ್ರಾಸವಾಗಿದೆ. ವ್ಯಕ್ತಿಯಾಗಿ ನೈಪಾಲ್ ಮಾನವ ಸಹಜ ಸೌಜನ್ಯದಿಂದ ನಡೆದುಕೊಳ್ಳುತ್ತಿರಲಿಲ್ಲವೆಂಬುದು ಅವರ ಮೇಲಿನ ಗಂಭೀರ ಆರೋಪ. ನೈಪಾಲ್ ತೊಡಕಿನ ವ್ಯಕ್ತಿ. ಅವರದು ಒಂದು ರೀತಿಯ ತಿರಸ್ಕಾರದ,ಉಪೇಕ್ಷೆಯ ಮನೋವೃತ್ತಿ ಎಂದು ಬರೆದವರಿದ್ದಾರೆ. ಅವರು ಸಂದರ್ಶಕರನ್ನು, ಬೆಕ್ಕೊಂದು ಇಲಿಯನ್ನು ಹೇಗೆ ಕಾಣುವುದೊ ಹಾಗೆ ನೋಡುತ್ತಿದ್ದರೆಂಬುದು ಪತ್ರಕರ್ತರು ಕೆಲವರ ದೂರು. ಸಂದರ್ಶನ ನೀಡಿದ ಬಳಿಕ ಭೋಳೆಯ,ಹಾಸ್ಯಾಸ್ಪವಾದ ಪ್ರಶ್ನೆಗಳನ್ನು ಕೇಳುತ್ತೀರಿ ಎಂದು ಛೇಡಿಸುತ್ತಿದ್ದರೆಂದು ಕೆಲವರ ಅಂಬೋಣ. ಅವರ ಅಸಹನೆ,ಅವರ ದೃಷ್ಟಿಧೋರಣೆಗಳು,ಅವರ ನಿರಾಶಾ ವಾದ ಇತ್ಯಾದಿ ಏನೇ ಇರಲಿ ನೈಪಾಲ್ ಅವರ ಕೃತಿಗಳನ್ನು ಈ ಕಾರಣಗಳಿಂದ ತಳ್ಳಿಹಾಕಲಾಗದು. ಸಾಹಿತಿಯಾದವನು ವಿರೋಧವಿವಾದಗಳನ್ನು, ಜಗಳಗಳನ್ನು ಹುಟ್ಟಿಸದೇ ಹೋದಲ್ಲಿ ಅವನು ಇದ್ದೂ ಸತ್ತಂತೆಯೇ ಎನ್ನುವುದು ನೈಪಾಲರೇ ಆಡಿರುವ ಮಾತು ಇದಕ್ಕೆ ಸ್ವಯಂನಿದರ್ಶನ. ಅವರು ತಾವೇ ಬಣ್ಣಿಸಿದಂಥ ಸತ್ತ ಸಾಹಿತಿಯಾಗಿರಲಿಲ್ಲ. ತಮ್ಮ ಸಾಹಿತ್ಯ ಜೀವನದಲ್ಲಿ ಜೀವಂತವಾಗಿರುವ ನೈಪಾಲ್ ಇನ್ನಿಲ್ಲ. ಅಧ್ಯಯನಯೋಗ್ಯವಾದ ಸಜೀವ ಸಾಹಿತ್ಯವನ್ನು ಬಿಟ್ಟು ವಿದ್ಯಾಧರ ಸೂರಜ್ ಪ್ರಸಾದ ನೈಪಾಲ್ ನಮ್ಮನ್ನು ಅಗಲಿದ್ದಾರೆ.