ಬಣ್ಣಗಳಲ್ಲೂ ನಡೆಯುತ್ತಿತ್ತು ಕಲಬೆರಕೆ!
ನರೇಂದ್ರ ನಾಯಕ್ ಜೀವನ ಕಥನ
ಭಾಗ 53
ಆಹಾರ ಪದಾರ್ಥಗಳಿಗೆ ಬಳಸಲಾಗುವ ಬಣ್ಣಗಳಲ್ಲೂ ಕಲಬೆರಕೆ ನಡೆಯುತ್ತದೆ. ತಿಂಡಿ ತಿನಿಸುಗಳಿಗೆ ಸಾಮಾನ್ಯವಾಗಿ ಸನ್‌ಸೆಟ್ ಎಲ್ಲೋ (ಹಳದಿ ಬಣ್ಣ)ವನ್ನು ಬಳಸಲು ಅನುಮತಿ ಇದೆ. ಇದು ಸ್ವಲ್ಪ ದುಬಾರಿ. ಇದಕ್ಕೆ ಬದಲಾಗಿ ಮೆಟಾಲಿಕ್ ಎಲ್ಲೋ ಬಣ್ಣವನ್ನು ಹಾಕಲಾಗುತ್ತದೆ. ಶೀರಾ, ಐಸ್‌ಕ್ರೀಂನಂತಹ ಪದಾರ್ಥಗಳಿಗೆ ಇದನ್ನು ಬಳಸಲಾಗುತ್ತದೆ. ಕಡಿಮೆ ಬೆಲೆಯಲ್ಲಿ ಸಿಗುವ ಈ ಬಣ್ಣ ಆರೋಗ್ಯಕ್ಕೆ ತೀರಾ ಮಾರಕ. ಇದು ಕಾರ್ಸೊನೊಜೆನಿಕ್. ನಾನೊಂದು ಹಳ್ಳಿ ಪ್ರದೇಶದ ಹೊಟೇಲ್‌ನಲ್ಲಿ ಕುಳಿತಿದ್ದಾಗ ಅಲ್ಲೊಂದು ಬಾಟಲಿಯಲ್ಲಿ ಈ ಹಳದಿ ಬಣ್ಣವನ್ನು ನೋಡಿದೆ. ಇದೇನು ಎಂದು ಹೊಟೇಲ್ ಮಾಲಕನಲ್ಲಿ ವಿಚಾರಿಸಿದಾಗ, ಅದು ಬಣ್ಣ, ಅದನ್ನು ಶೀರಾ, ಜಿಲೇಬಿಗೆ ಬಳಸುತ್ತೇವೆ ಎಂದು ಉತ್ತರಿಸಿದ. ಇದರ ಬಗ್ಗೆ ನಿನಗೆ ಅರಿವಿದೆಯೇ? ಈ ಬಣ್ಣ ಆಹಾರದ ಜತೆ ಸೇವನೆಯಿಂದ ವ್ಯಕ್ತಿಗಳಿಗೆ ಕ್ಯಾನ್ಸರ್‌ನಂತಹ ರೋಗಕ್ಕೂ ಕಾರಣವಾಗುತ್ತದೆ ಎಂದು ಆತನಿಗೆ ಹೇಳಿದೆ. ಆತ ಓಹ್ ಹೌದಾ, ನನಗೆ ಗೊತ್ತಿರಲಿಲ್ಲ ಎಂದು ಹೇಳಿ ಅದನ್ನು ನನ್ನ ಎದುರಲ್ಲೇ ಕಸದ ಬುಟ್ಟಿಗೆ ಎಸೆದ. ಈ ರೀತಿ ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ನಾವು ನಮ್ಮ ದಿನನಿತ್ಯದ ಆಹಾರ ಪದಾರ್ಥಗಳ ಮೂಲಕ ಕಲಬೆರಕೆ ವಸ್ತುಗಳನ್ನು ಸೇವಿಸುತ್ತೇವೆ. ಇದು ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನೇ ಬೀರುತ್ತದೆ. ಆದರೆ ನಮಗೆ ಇದು ಯಾವುದೂ ಅರಿವಾಗುವುದು, ಅದರ ಬಗ್ಗೆ ಮಾಹಿತಿ ಇರುವುದು ಮಾತ್ರ ಅಪರೂಪ.
ಕಲಬೆರಕೆ ಏನು ಎಂಬುದೇ ಜನರಿಗೆ ಗೊತ್ತಿರುವುದಿಲ್ಲ. ಕಡಿಮೆ ಬೆಲೆಗೆ ಸಿಗುವುದನ್ನು ನಾವು ಉಪಯೋಗಿಸುತ್ತೇವೆ. ಇದೇ ರೀತಿ ತುಪ್ಪಕ್ಕೆ ಡಾಲ್ಡಾ(ವನಸ್ಪತಿ)ಯನ್ನು ಬೆರೆಸಲಾಗುತ್ತದೆ. ಕೆಲವೊಮ್ಮೆ ತುಪ್ಪದ ಬದಲಿಗೆ ಡಾಲ್ಡಾವನ್ನು ಆಹಾರದಲ್ಲಿ ಬಳಕೆ ಮಾಡಲಾಗುತ್ತದೆ. ಇದು ಕಡಿಮೆ ಬೆಲೆಯಲ್ಲಿ ದೊರೆಯುವುದೇ ಇದರ ಹೆಚ್ಚಿನ ಬಳಕೆಗೆ ಕಾರಣ. ಆದರೆ ಇದನ್ನು ಅಷ್ಟು ಸುಲಭದಲ್ಲಿ ಪತ್ತೆ ಹಚ್ಚಲು ಆಗುವುದಿಲ್ಲ. ಹೈಡ್ರೋಕ್ಲೋರಿಕ್ ಆ್ಯಸಿಡ್ ಎಂಬ ರಾಸಾಯನಿಕವನ್ನು ಬಳಸಿ ತುಪ್ಪದಲ್ಲಿ ಬೆರಕೆ ಮಾಡಲಾಗಿರುವ ಡಾಲ್ಡಾವನ್ನು, ಅದರ ಪ್ರಮಾಣವನ್ನು ಕಂಡು ಹಿಡಿಯಬಹುದು. ಆದರೆ ಇದನ್ನು ಕಂಡು ಹಿಡಿಯುವುದು ಕಷ್ಟವಾದ್ದರಿಂದ ಈ ಕಲಬೆರಕೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿತ್ತು. ಸದ್ಯ ಡಾಲ್ಡಾ ಬಳಕೆ ಬಹುತೇಕವಾಗಿ ನಿಂತು ಹೋಗಿದೆ. ಅದೊಂದು ದಿನ ದೇವಸ್ಥಾನದ ಅರ್ಚಕರೊಬ್ಬರು ನನ್ನ ಬಳಿಗೆ ಬಂದು ‘ನಮ್ಮ ದೇವರಿಗೆ ದೀಪ ಹಚ್ಚುವ ತುಪ್ಪಕ್ಕೆ ಡಾಲ್ಡಾ ಬೆರೆಸುತ್ತಾರೆ’ ಎಂಬುದು ಅವರ ಆತಂಕವಾಗಿತ್ತು. ಅದನ್ನು ತನ್ನಿ ನೋಡೋಣ ಎಂದಾಗ, ನಿಜಕ್ಕೂ ಅದರಲ್ಲಿ ಭಾರೀ ಪ್ರಮಾಣದಲ್ಲಿ ಡಾಲ್ಡಾ ಬೆರೆಕೆಯಾಗಿರುವುದು ಗೋಚರಿಸುತ್ತಿತ್ತು. ಅದನ್ನು ಅವರಿಗೆ ತಿಳಿಸಿದ ಬಳಿಕ ಅವರು ತಾವು ಖರೀದಿಸುತ್ತಿದ್ದವರಿಂದ ತುಪ್ಪವನ್ನು ಖರೀದಿಸುವುದನ್ನು ನಿಲ್ಲಿಸಿಬಿಟ್ಟರು. ಡಾಲ್ಡಾ ಎಂಬುದು ಬ್ರಾಂಡ್ ಹೆಸರು. ಮೂಲತ: ಅದು ಹೈಡ್ರೋಜನೇಟೆಡ್ ಸಸ್ಯಜನ್ಯ ಎಣ್ಣೆ. ಅದನ್ನು ಬೇಕರಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. ಹಾಲಿನ ಕಲಬೆರಕೆ ಅತ್ಯಂತ ಸಾಮಾನ್ಯ. ಹಾಲಿನ ಗುಣಮಟ್ಟಕ್ಕೆ ಸಂಬಂಧಿಸಿ ಹಲವಾರು ಸ್ಟಾಂಡರ್ಡ್‌ಗಳಿವೆ. ದನದ ಹಾಲು, ಎಮ್ಮೆ ಹಾಗೂ ಇತರ ಪ್ರಾಣಿಗಳ ಹಾಲಿಗೆ ಬಹಳಷ್ಟು ವ್ಯತ್ಯಾಸವಿರುತ್ತದೆ. ಎಮ್ಮೆಯ ಹಾಲಿನಲ್ಲಿ ಫ್ಯಾಟ್ ಶೇ. 7ರಷ್ಟಿರುತ್ತದೆ. ದನದ ಹಾಲಿನಲ್ಲಿ ಅದರ ಅರ್ಧದಷ್ಟಿರುತ್ತದೆ. ಈ ಬಗ್ಗೆ ಸುಮಾರು 25 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಲಭ್ಯವಿರುವ ಹಾಲಿನ ತಪಾಸಣೆಗೆ ನಾವು ಮುಂದಾದೆವು. ಹಲವಾರು ಕಡೆಗಳಿಂದ ಹಾಲನ್ನು ಖರೀದಿಸಲಾಯಿತು. ಮಂಗಳೂರು ಡೈರಿಯಿಂದಲೂ ಹಾಲು ತರಲಾಯಿತು. ಡೈರಿ ಹಾಲಿನಲ್ಲಿ ಶೇ. 3 ಫ್ಯಾಟ್ ಇದೆ ನಮೂದಿಸಲಾಗಿತ್ತು. ಆದರೆ ಅದರಲ್ಲಿ ಇದ್ದಿದ್ದು ಶೇ. 1.5ರಷ್ಟು ಮಾತ್ರ ಇತ್ತು. ಹಿಂದೆಲ್ಲಾ ಮಂಗಳೂರು ಡೈರಿಯಲ್ಲಿ ಭಾರೀ ಹಗರಣ ನಡೆಯುತ್ತಿತ್ತು. ಹಾಲಿನ ಫ್ಯಾಟ್ ತೆಗೆದು ಅದರಿಂದ ತುಪ್ಪ, ಬೆಣ್ಣೆ ಹಾಗೂ ಇತರ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಅದನ್ನು ನಾವು ಬಹಿರಂಗಪಡಿಸಿ, ಆರೋಗ್ಯ ಅಧಿಕಾರಿಗೆ ದೂರು ನೀಡಿದೆವು. ಅವರು ಅಂತಹ ಹಾಲನ್ನು ವಶಪಡಿಸಿ ತಪಾಸಣೆಗೆ ಕಳುಹಿಸಿದರು. ಆಗ ಕಲಬೆರಕೆ ಎಂಬ ವರದಿ ಬಂತು. ಬಳಿಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅದರ ವಿಚಾರಣೆಯೂ ನಡೆಯಿತು. ಸದ್ಯ 1984ರಲ್ಲಿ ಬಳಕೆದಾರರ ರಕ್ಷಣಾ ಕಾಯ್ದೆಯಡಿ ಆಹಾರ ಕಲಬೆರಕೆಯ ಬಗ್ಗೆ ಪ್ರಕರಣ ದಾಖಲಿಸಬಹುದಾಗಿದೆ. ಕಲಬೆರಕೆ ಎಂಬುದು ಸಾಬೀತಾದಲ್ಲಿ, ಮಾರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಖರೀದಿದಾರರಿಗೆ ಪರಿಹಾರವೂ ದೊರೆಯುತ್ತದೆ. ಬೇಳೆಗಳಲ್ಲಿ ತೊಗರಿ ಬೇಳೆ ಬದಲು ಕೇಸರಿ ಬೇಳೆಯನ್ನು ಬಳಸಲಾಗುತ್ತದೆ. ಇದನ್ನು ಪ್ರಾಣಿಗಳಿಗೆ ಆಹಾರವಾಗಿ ಮಾತ್ರವೇ ಬಳಸುವಂತದ್ದು. ಕಲಬುರಗಿಯಿಂದ ಕೆಲವರು ಅದನ್ನು ಮಂಗಳೂರಿಗೆ ತಂದು ಮಾರಾಟ ಮಾಡುವ ಪ್ರಸಂಗವೂ ಎದುರಾಗಿತ್ತು. ನಾವು ಹಲವು ಪ್ರದರ್ಶನಗಳು, ಕಾರ್ಯಕ್ರಮಗಳ ವೇಳೆ ಕಲಬೆರಕೆಯನ್ನು ಪತ್ತೆಹಚ್ಚುವ ವಿಧಾನಗಳನ್ನು ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದೇವೆ. ಅದೊಂದು ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರು ಈ ಕೇಸರಿ ಬೇಳೆಯನ್ನು ಹಿಡಿದು ತಂದು ಇದ್ಯಾವ ಬೇಳೆ ಎಂದು ನಮ್ಮನ್ನು ಪ್ರಶ್ನಿಸಿದ್ದರು. ನಾವು ಪರಿಶೀಲಿಸಿದಾಗ ಅದು ಕೇಸರಿ ಬೇಳೆಯಾಗಿತ್ತು. ಆ ಬಗ್ಗೆ ಸಾಕಷ್ಟು ಪ್ರಚಾರ ಮಾಡಿ ಅದನ್ನು ಖರೀದಿಸದಂತೆ ಮತ್ತು ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವ ಬಗ್ಗೆಯೂ ಜನರಿಗೆ ತಿಳಿ ಹೇಳುವ ಕೆಲಸ ಮಾಡಿದ್ದೆವು. ಬೆಣ್ಣೆಗೆ ಬೇಯಿಸಿದ ಆಲೂಗಡ್ಡೆ, ಅಕ್ಕಿಗೆ ಕಲ್ಲು ಬೆರೆಸುವ ಪ್ರಕರಣಗಳನ್ನೂ ನಾವು ಬಯಲಿಗೆಳೆದಿದ್ದೇವೆ.