ಹೈಪೊಥೈರಾಯ್ಡಿಸಂ ಬಗ್ಗೆ ಎಚ್ಚರವಿರಲಿ
ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಬಹುದು ನಿಮ್ಮ ನಿರ್ಲಕ್ಷ್ಯತನ
ಯಾವುದೇ ವ್ಯಕ್ತಿ ಹೈಪೊಥೈರಾಯ್ಡಿಸಂ(ಥೈರಾಯ್ಡಿ ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗುವಿಕೆ)ನಿಂದ ಬಳಲುತ್ತಿದ್ದರೆ ನಿಯಮಿತವಾಗಿ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಈ ಕಾಯಿಲೆಯನ್ನು ಕಡೆಗಣಿಸಿದರೆ ಅಥವಾ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಅದು ಹೃದ್ರೋಗ,ಬಂಜೆತನ ಮತ್ತು ನರಸಮಸ್ಯೆಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಅವುಗಳ ಬಗ್ಗೆ ಮಾಹಿತಿಗಳಿಲ್ಲಿವೆ.....
►ಗಳಗಂಡ: ಹೈಪೊಥೈರಾಯ್ಡಿಸಮ್‌ಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಥೈರಾಯ್ಡ್ ಗ್ರಂಥಿಯು ದೊಡ್ಡದಾಗಿ ಗಳಗಂಡಕ್ಕೆ ಕಾರಣವಾಗುತ್ತದೆ. ಥೈರಾಯ್ಡೆ ಹಾರ್ಮೋನ್‌ಗಳ ಮಟ್ಟ ಕುಸಿದಾಗ ಪಿಟ್ಯುಟರಿ ಅಥವಾ ನಿರ್ನಾಳ ಗ್ರಂಥಿಗೆ ಸಂಕೇತ ರವಾನೆಯಾಗುತ್ತದೆ ಮತ್ತು ಥೈರಾಯ್ಡೆನ್ನು ಉದ್ದೀಪಿಸುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡಲು ಥೈರಾಯ್ಡಿ ಗ್ರಂಥಿಯನ್ನು ಪ್ರಚೋದಿಸುತ್ತದೆ ಮತ್ತು ಇದರಿಂದಾಗಿ ಅದು ದೊಡ್ಡದಾಗುತ್ತದೆ. ಹೆಚ್ಚಾಗಿ ಅಯೋಡಿನ್ ಕೊರತೆಯಿಂದ ಉಂಟಾಗುವ ಹೈಪೊಥೈರಾಯ್ಡಿಸಂ ಇದಕ್ಕೆ ಕಾರಣವಾಗುತ್ತದೆ.
►ಹೃದಯ ಸಮಸ್ಯೆಗಳು: ಸೌಮ್ಯ ಸ್ವರೂಪದ ಹೈಪೊಥೈರಾಯ್ಡಿಸಂ ಕೂಡ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಥೈರಾಯ್ಡ್ ಹಾರ್ಮೋನ್‌ಗಳ ಮಟ್ಟ ಕುಸಿದಾಗ ಅದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನುಂಟು ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದರೆ ಅದು ರಕ್ತನಾಳಗಳು ಪೆಡಸಾಗುವ ಮತ್ತು ಸಂಕುಚಿತಗೊಳ್ಳುವ ಅಪಧಮನಿ ಕಾಠಿಣ್ಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಗುರಿಯಾಗುವ ಅಪಾಯ ಹೆಚ್ಚಾಗುತ್ತದೆ. ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅದು ಹೃದಯದಲ್ಲಿ ಮತ್ತು ಅದರ ಸುತ್ತ ಹೆಚ್ಚುವರಿ ದ್ರವ ಶೇಖರಗೊಳ್ಳಲು ಕಾರಣವಾಗುತ್ತದೆ. ಇದರಿಂದಾಗಿ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಕಷ್ಟವಾಗುತ್ತದೆ. ಅಲ್ಲದೆ ಟಿ3 ಹಾರ್ಮೋನ್‌ಗಳ ಕಡಿಮೆ ಮಟ್ಟವೂ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು.
►ಮೂತ್ರಪಿಂಡ ಸಮಸ್ಯೆ: ತೀವ್ರ ಸ್ವರೂಪದ ಹೈಪೊಥೈರಾಯ್ಡಿಸಂ ಮೂತ್ರಪಿಂಡಗಳಿಗೆ ರಕ್ತದ ಹರಿವು ಕಡಿಮೆಯಾಗುವಂತೆ ಮಾಡುತ್ತದೆ ಮತ್ತು ಇದರಿಂದಾಗಿ ಅವುಗಳ ಕಾರ್ಯನಿರ್ವಹಣೆಗೆ ವ್ಯತ್ಯಯವುಂಟಾಗುತ್ತದೆ ಮತ್ತು ಹೆಚ್ಚುವರಿ ನೀರನ್ನು ಹೊರಹಾಕುವ ಮತ್ತು ಮೂತ್ರದಲ್ಲಿನ ಸೋಡಿಯಂ ಅನ್ನು ಹೀರಿಕೊಳ್ಳುವ ಶರೀರದ ಸಾಮರ್ಥ್ಯ ಕಡಿಮೆಯಾಗುತ್ತದೆ. ಪರಿಣಾಮವಾಗಿ ಸೋಡಿಯಂ ಕೊರತೆಯುಂಟಾಗುತ್ತದೆ. ಅಲ್ಲದೆ ಥೈರಾಯ್ಡ್ ಹಾರ್ಮೋನ್‌ಗಳು ಮೂತ್ರಪಿಂಡಗಳ ಬೆಳವಣಿಗೆಯ ಮೇಲೂ ಪ್ರಭಾವ ಹೊದಿವೆ.
►ನರಸಂಬಂಧಿ ಸಮಸ್ಯೆಗಳು: ದೀರ್ಘಾವಧಿಯ,ಅನಿಯಂತ್ರಿತ ಹೈಪೊಥೈರಾಯ್ಡಿಸಂ ಬಾಹ್ಯ ಮತ್ತು ಕೇಂದ್ರ ನರಮಂಡಲದ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಬಾಹ್ಯನರಗಳಿಗೆ ಹಾನಿಯುಂಟಾಗುತ್ತದೆ ಮತ್ತು ಮರಗಟ್ಟುವಿಕೆ ಹಾಗೂ ಜುಮುಗುಟ್ಟುವಿಕೆ ಅನುಭವ,ಸ್ನಾಯುಗಳಲ್ಲಿ ನಿಶ್ಶಕ್ತಿ ಮತ್ತು ಕೈಕಾಲುಗಳಲ್ಲಿ ನೋವು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಜನ್ಮಜಾತ ಹೈಪೊಥೈರಾಯ್ಡಿಸಂ ಹೊಂದಿರುವ ಶೇ.40ರಷ್ಟು ಮಕ್ಕಳು ಮತ್ತು ವಯಸ್ಕರಲ್ಲಿ ಮಿದುಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದರಿಂದಾಗಿ ನಡಿಗೆ,ಚಲನವಲನ ಮತ್ತು ಓಡುವ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ.
►ಬಂಜೆತನ: ಥೈರಾಯ್ಡ್ ಹಾರ್ಮೋನ್‌ಗಳು ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನ್‌ಗಳ ಚಯಾಪಚಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಹೀಗಾಗಿ ಥೈರಾಯ್ಡ್ ಹಾರ್ಮೋನ್‌ಗಳ ಮಟ್ಟ ಕಡಿಮೆಯಾದರೆ ಅದು ಫಲವಂತಿಕೆಯನ್ನು ಕುಂದಿಸುತ್ತದೆ. ಮಹಿಳೆಯರಲ್ಲಿ ಹೈಪೊಥೈರಾಯ್ಡಿಸಂ ಅಂಡೋತ್ಪತ್ತಿಗೆ ಅಡ್ಡಿಯನ್ನುಂಟು ಮಾಡುತ್ತದೆ ಮತ್ತು ಋತುಚಕ್ರದಲ್ಲಿ ಏರುಪೇರುಗಳಿಗೆ ಕಾರಣವಾಗುತ್ತದೆ ಮತ್ತು ಇದು ಬಂಜೆತನವನ್ನುಂಟು ಮಾಡಬಹುದು. ಪುರುಷರಲ್ಲಿ ಹೈಪೊಥೈರಾಯ್ಡಿಸಂ ವೀರ್ಯಾಣಗಳ ಗಾತ್ರ ಮತ್ತು ಆಕಾರದಲ್ಲಿ ವ್ಯತ್ಯಾಸಗಳನ್ನುಂಟು ಮಾಡುತ್ತದೆ ಮತ್ತು ನಿಮಿರು ದೌರ್ಬಲ್ಯಕ್ಕೆ ಕಾರಣವಾಗುತ್ತದೆ.
►ಗರ್ಭಾವಸ್ಥೆಯಲ್ಲಿ ಸಮಸ್ಯೆಗಳು
ಮಹಿಳೆಯರಲ್ಲಿ ಅನಿಯಂತ್ರಿತ ಹೈಪೊಥೈರಾಯ್ಡಿಸಂ ಗರ್ಭಧಾರಣೆ ಮತ್ತು ಹೆರಿಗೆಯ ಸಮಸ್ಯೆಗಳ ಜೊತೆಗೆ ಭ್ರೂಣದ ಬೆಳವಣಿಗೆಯ ಮೇಲೂ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಅದು ಗರ್ಭಿಣಿಯರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ,ಅವಧಿಗೆ ಮುನ್ನವೇ ಹೆರಿಗೆಗೆ ಕಾರಣವಾಗುತ್ತದೆ.ಅಲ್ಲದೆ ಗರ್ಭಪಾತ,ಹೆರಿಗೆ ನಂತರದ ಖಿನ್ನತೆ ಮತ್ತು ರಕ್ತಸ್ರಾವ ಇತ್ಯಾದಿ ಸಮಸ್ಯೆಗಳನ್ನೂ ಸೃಷ್ಟಿಸಬಹುದು. ಗರ್ಭದಲ್ಲಿಯೇ ಶಿಶುವಿನ ಸಾವು,ಭ್ರೂಣದ ದೈಹಿಕ ಮತ್ತು ಮಾನಸಿಕ ಬೆಳವಳಣಿಗೆಯಲ್ಲಿ ಹಿನ್ನಡೆ ಮತ್ತು ಜನ್ಮಜಾತ ಕಾಯಿಲೆಗಳಿಗೂ ಹೈಪೊಥೈರಾಯ್ಡಿಸಂ ಕಾರಣವಾಗುತ್ತದೆ. ತಾಯಿ ಮತ್ತು ಮಗುವಿನ ಅಸ್ವಸ್ಥತೆ ಮತ್ತು ಸಾವುಗಳ ಅಪಾಯವನ್ನೂ ಅದು ಹೆಚ್ಚಿಸುತ್ತದೆ.
►ಮೈಕ್ಸೆಡೆಮಾ
ಇದು ಅಪರೂಪದ,ಆದರೆ ಜೀವಕ್ಕೆ ಅಪಾಯ ತರುವ ಸ್ಥಿತಿಯಾಗಿದ್ದು ಸುದೀರ್ಘ ಕಾಲ ಪತ್ತೆಯಾಗದ ಹೈಪೊರ್ಥೈರಾಯ್ಡಿಸಂ ಇದಕ್ಕೆ ಕಾರಣವಾಗುತ್ತದೆ. ಚಳಿಗೆ ಅಸಹಿಷ್ಣುತೆ,ದಣಿವು,ತಲೆ ಸುತ್ತುವಿಕೆ ಮತ್ತು ಪ್ರಜ್ಞೆ ಕಳೆದುಕೊಳ್ಳುವಿಕೆ ಇದರ ಲಕ್ಷಣಗಳಾಗಿವೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಮೈಕ್ಸೆಡೆಮಾ ಕೋಮಾ ಸ್ಥಿತಿಯನ್ನುಂಟು ಮಾಡುತ್ತದೆ. ಹೀಗಾಗಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ.