ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನವೀನ, ಅತ್ಯಾಧುನಿಕ ರೋಬೊಟಿಕ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ
ಸಾಂದರ್ಭಿಕ ಚಿತ್ರ
ಮಂಗಳೂರು, ಆ.21: ರೋಬೊಟಿಕ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿ ಉಂಟು ಮಾಡಿದೆ. ಈ ಸೌಲಭ್ಯ ಹೊಂದಿರುವ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಕರ್ನಾಟಕದಲ್ಲಿ ಪ್ರಪ್ರಥಮ ಹಾಗೂ ದೇಶದಲ್ಲಿ 2ನೇ ವೈದ್ಯಕೀಯ ಕಾಲೇಜು ಆಗಿದ್ದು, ಈ ತಂತ್ರಜ್ಞಾನದ ಮೂಲಕ ರೋಗಿಯೊಬ್ಬರಿಗೆ ಯಶಸ್ವಿ ಶಸ್ತ್ರಚಿತ್ಸೆ ಮಾಡಲಾಗಿದೆ.
ಸತೀಶ್ (ಹೆಸರು ಬದಲಿಸಲಾಗಿದೆ) ಅವರು ತಮ್ಮ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದರು. ಅನಾರೋಗ್ಯಕ್ಕೀಡಾಗಿದ್ದ ಇವರು ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೂತ್ರಪಿಂಡ ರೋಗಗಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಪೈಯವರನ್ನು ಸಂದರ್ಶಿಸಿದಾಗ ಇವರು ಮೂತ್ರ ಪಿಂಡದ ವೈಫಲ್ಯದಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಅವರಿಗೆ ಹೆಚ್ಚಿನ ಚಿಕಿತ್ಸೆಯ ಭಾಗವಾಗಿ ಕಿಡ್ನಿ ಕಸಿ ಮಾಡುವುದೇ ಸೂಕ್ತವೆಂದು ವೈದ್ಯರು ಸೂಚಿಸಿದರು. ಅದರಂತೆ ಅವರಿಗೆ ಸ್ವಂತ ಅಕ್ಕನೇ ಸ್ವಇಚ್ಛೆಯಿಂದ ಕಿಡ್ನಿದಾನ ಮಾಡಲು ಒಪ್ಪಿಕೊಂಡರು. ಬಳಿಕ ಇಬ್ಬರಿಗೂ ಎಲ್ಲಾ ನಮೂನೆಯ ಪರೀಕ್ಷೆಗಳಿಗೆ ಒಳಪಡಿಸಿ ರೋಬೊಟಿಕ್ ತಂತ್ರಜ್ಞಾನದಿಂದ ಶಸ್ತ್ರ ಚಿಕಿತ್ಸೆ ಮಾಡಲು ಯೆನೆಪೊಯ ವೈದ್ಯರ ತಂಡ ನಿರ್ಧರಿಸಿತು.
ಮೂತ್ರರೋಗ ಶಸ್ತ್ರ ಚಿಕಿತ್ಸೆಯ ತಜ್ಞ ಡಾ.ಮುಜೀಬ್ ರಹ್ಮಾನ್, ಡಾ ಅಲ್ತಾಫ್ ಖಾನ್, ಮತ್ತು ಡಾ.ನಿಶ್ಚಿತ್ ಡಿಸೋಜ, ಹಾಗೂ ಅರಿವಳಿಕೆ ತಜ್ಞ ಡಾ.ಪದ್ಮನಾಭರ ತಂಡ ದಾನಿಯ ಕಿಡ್ನಿಯನ್ನು 3ಡಿ ಲ್ಯಾಪ್ರೋಸ್ಕೋಪಿಕ್ ಮೂಲಕ ಶಸ್ತ್ರಕ್ರಿಯೆ ನೆರವೇರಿಸಿ, ಕಿಡ್ನಿ ಸ್ವೀಕರಿಸಿದ ವ್ಯಕ್ತಿಯ ಕಸಿ ಶಸ್ತ್ರಕ್ರಿಯೆ ಕಾರ್ಯವನ್ನು ರೋಬೋಟ್ ಸಹಾಯದಿಂದ ಯಶಸ್ವಿಯಾಗಿ ನಿರ್ವಹಿಸಿದೆ.
ರೊಬೋಟ್ ಶಸ್ತ್ರಕ್ರಿಯೆಯ ಹಳೆಯ ನಮೂನೆಯ ತೆರೆದ ಶಸ್ತ್ರಕ್ರಿಯೆಯಿಂದ ಭಿನ್ನವಾಗಿದ್ದು ಅನೇಕ ಅನುಕೂಲಗಳಿವೆ. ಕನಿಷ್ಠ ಗಾಯದ ಗುರುತಿನೊಂದಿಗೆ ತ್ವರಿತವಾಗಿ ಚೇತರಿಕೆಯನ್ನು ಕೂಡಾ ಕಾಣಬಹುದು. ಅಲ್ಲದೆ ಹಳೆಯ ವಿಧಾನದಲ್ಲಾದರೆ ರೋಗ ಚೇತರಿಕೆ ಕಾಣಲು ತಿಂಗಳುಗಳೇ ಬೇಕಾದರೆ ರೊಬೋಟಿಕ್ ವಿಧಾನದಲ್ಲಿ ಸಾಧಾರಣವಾಗಿ 2ರಿಂದ 3 ದಿನದೊಳಗೆ ರೋಗಿಯು ಚೇತರಿಕೆಯನ್ನು ಕಾಣುತ್ತಾರೆ.
ರೊಬೋಟಿಕ್ ತಂತ್ರಜ್ಞಾನ ವಿಶ್ವದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನ. ಇದರ ಸಹಾಯದಿಂದ ಕಿಡ್ನಿಕಸಿ ಶಸ್ತ್ರಕ್ರಿಯೆ ಮಾಡಲು ತುಂಬಾ ನೈಪುಣ್ಯತೆ ಬೇಕು. ಇಂತಹ ನೈಪುಣ್ಯತೆಯು ಯೆನೆಪೋಯ ವೈದ್ಯಕೀಯ ಕಾಲೇಜಿನ ವೈದ್ಯ ತಂಡದಲ್ಲಿ ಇದೆ ಎಂದು ಯೆನೆಪೋಯ ವಿವಿ ಉಪಕುಲಪತಿ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಎಂ.ವಿಜಯಕುಮಾರ್ ಹೇಳಿದರು.
ಯೆನೆಪೊಯ ವಿವಿ ಹಣಕಾಸು ನಿರ್ದೇಶಕ ಫರ್ಹಾದ್ ಯೆನೆಪೊಯ ವೈದ್ಯರ ಪ್ರಯತ್ನಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ದುಬಾರಿ ಶಸ್ತ್ರ ಚಿಕಿತ್ಸೆಯನ್ನು ಬಡಜನರಿಗೆ ರಿಯಾಯಿತಿ ದರದಲ್ಲಿ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಅಶ್ವಾಸನೆ ನೀಡಿದ್ದಾರೆ.
ಕಿಡ್ನಿಕಸಿ ಹಾಗೂ ಮೂತ್ರಪಿಂಡದ ವೈಫಲ್ಯ ಹಾಗೂ ಇನ್ನಿತರ ರೋಗಗಳ ಬಗ್ಗೆ ಮಾಹಿತಿಗೆ ರೊಬೋಟಿಕ್ ಮತ್ತು ಕಿಡ್ನಿಕಸಿ ಕೋ-ಆರ್ಡಿನೇಟರ್ ನೆಲ್ವಿನ್ ನೆಲ್ಸನ್ (ಮೊ.8123018855) ರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.