ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಬ್ಯಾರಿ ಸಂಸ್ಕೃತಿ- ಪೆರ್ನಾಲ್ ಗೆ ಬಂದ 'ಪುಟ್ಟ ಬೆಲೆಮ'
ನಿನ್ನೆ (ಬಕ್ರೀದ್ ದಿನ) ಯಾರೋ ಒಬ್ಬರು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ, ಹೆಚ್ಚೆಂದರೆ ಮೂರರ ಹರೆಯದ ಈ ಪುಟ್ಟ ಕಂದಮ್ಮ ಹೀನಾ ಮುಸ್ಕಾನಳ ಫೋಟೋ ಇಂದು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆಯುವಷ್ಟು ವೈರಲ್ ಆಗಿಬಿಟ್ಟಿತು.
ಆ ಮಗುವಿಗೆ ತೊಡಿಸಲಾದ ವೇಷಭೂಷಣ ಅದ್ಭುತವಾಗಿತ್ತು. ನಮ್ಮ ಕರಾವಳಿಯ ಟಿಪಿಕಲ್ ಬ್ಯಾರಿ ಲೇಡಿ ಹೇಗಿರ್ತಾರೆ ಎನ್ನುವುದಕ್ಕೆ ಉದಾಹರಣೆ ಆ ಚಿತ್ರ.
ಸೀರೆ ಉಟ್ಟು ಅದರ ಸೆರಗನ್ನು ಉದ್ದಕ್ಕೆ ಹಿಂಬದಿಗೆ ಇಳಿಬಿಟ್ಟು, ಕುಪ್ಪಾಯ ತೊಟ್ಟು (ಉದ್ದ ತೋಳಿನ ದೊಗಲೆ ಕಾಟನ್ ರವಿಕೆ), ಕಿವಿಗೆ ಹಳೇ ಕಾಲದ ಬ್ಯಾರಿ ಮತ್ತು ಮಾಪ್ಲಾ ಮಹಿಳೆಯರು ಮಾತ್ರ ಹಾಕಿಕೊಳ್ಳುವ ಅಲಿಕಾತು. ಅಲಿಕಾತೆಂದರೆ ಕಿವಿಯೊಂದಕ್ಕೆ ಮೇಲ್ಭಾಗಕ್ಕೆ ತೊಡುವ ನಾಲ್ಕು ಚಿನ್ನದ ಎಲೆಯಂತಹ ಗಿಜಿಗಿಜಿ ಓಲೆ. ಈ ಅಲಿಕಾತಿನ ಭಾರಕ್ಕೆ ಕಿವಿಯ ತುದಿ ಭಾಗ ಸ್ವಲ್ಪ ಕೆಳಕ್ಕೆ ಬಾಗಿರುತ್ತದೆ.
ತಲೆಗೆ ಯಲಾಸರ (ರುಮಾಲು) .ಯಲಾಸರವನ್ನು ತಲೆಯ ಮುಂಭಾಗದ ಕೂದಲು ಪೂರ್ತಿ ಮುಚ್ಚುವಂತೆ ಮುಂಭಾಗಕ್ಕೆ ಟೊಪ್ಪಿ ಆಕಾರದಲ್ಲಿ ಬಿಗಿಯಾಗಿ ಸುತ್ತಿ ಹಿಂಭಾಗ ಜಡೆಯಂತೆ ಇಳಿ ಬಿಡುವುದು. ಸೊಂಟದಲ್ಲೊಂದು ವೀಳ್ಯದೆಲೆಯ ಸಂಚಿ ( ಬಟ್ಟೆಯ ಪುಟ್ಟ ಚೀಲ).
ಇಂತಹ ವೇಷಭೂಷಣದ ಮಹಿಳೆಯರು ಈಗ ಸಿಕ್ಕರೆ ಅವರನ್ನು ಕನಿಷ್ಠ ಅರವತ್ತೈದು ವಯಸ್ಸು ದಾಟಿದವರೆಂದು ಲೆಕ್ಕ ಹಾಕಿಕೊಳ್ಳುವುದು ಸುಲಭ. ಈ ವೇಷಭೂಷಣದ ತಲೆಮಾರು ಮುಂದಿನ ಹದಿನೈದಿಪ್ಪತ್ತು ವರ್ಷಗಳಲ್ಲಿ ಮುಗಿಯುತ್ತದೆ. ಮುಂದೆ ಏನಿದ್ದರೂ ಅಂತಹ ವೇಷಭೂಷಣದ ಮಹಿಳೆಯನ್ನು ಎಲ್ಲಾದರೂ ಛದ್ಮವೇಷದ ಪಾರ್ಟ್ ಆಗಿ ಮಾತ್ರ ಕಾಣಲು ಸಾಧ್ಯ...
ಈ ರೀತಿಯ ವೇಷಭೂಷಣ ಕರಾವಳಿಯ ಬ್ಯಾರಿ ಮುಸ್ಲಿಂ ಮಹಿಳೆಯರಲ್ಲಿ ಮತ್ತು ಕಾಸರಗೋಡು ಚಂದ್ರಗಿರಿ ತೀರದವರೆಗಿನ ಮಹಿಳೆಯರಲ್ಲಿ ಮಾತ್ರ ಕಾಣಲು ಸಾಧ್ಯ. ಚಂದ್ರಗಿರಿ ತೀರದವರೆಗಿನ ಮುಸ್ಲಿಮರು ಅಪ್ಪಟ ಬ್ಯಾರಿಗಳೆನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ. ಎಲ್ಲಿಯವರೆಗೆ ನೀರಿಗೆ "ತನ್ನಿ" ಎನ್ನುತ್ತಾರೋ ಅಲ್ಲಿಯವರೆಗೆ ಅದು ಬ್ಯಾರಿ ಏರಿಯಾ ಎಂದು ಲೆಕ್ಕ. ಮಲಯಾಳಿಗಳು ನೀರಿಗೆ "ವೆಲ್ಲಂ" ಎನ್ನುತ್ತಾರೆ. ತಮಿಳರು ತನ್ನಿ ಎನ್ನುತಾರೆ. ಇದಕ್ಕೆ ಕೊಡಬಹುದಾದ ಕಾರಣ "ಬ್ಯಾರಿ ಭಾಷೆಯ ಉಚ್ಚಾರಣಾ ಶೈಲಿ "ತಮಿಳನ್ನು ಹೋಲುತ್ತದೆ. ಬ್ಯಾರಿ ಭಾಷೆಯೆಂದರೆ ಹಲವು ಭಾಷೆಗಳ ಮಿಶ್ರಣ. ಅರೆಬಿಕ್ ಮತ್ತು ಉರ್ದು ಬಿಟ್ಟರೆ ಉಳಿದವುಗಳೆಲ್ಲಾ ದ್ರಾವಿಡ ಭಾಷೆಗಳೇ ಆಗಿವೆ.
ತಮಿಳು, ತುಳು, ಮಲಯಾಳಂ, ಕೊಡವ ಇತ್ಯಾದಿ ದ್ರಾವಿಡ ಭಾಷೆಗಳ ಪ್ರಭಾವ ದಟ್ಟವಾಗಿರುವ ಸ್ವತಂತ್ರ ಭಾಷೆ ಬ್ಯಾರಿ ಭಾಷೆ. ಅರೆಬಿಕ್ ಮತ್ತು ಉರ್ದು ಶಬ್ಧಗಳು ಬ್ಯಾರಿಯಲ್ಲಿರಲ್ಲು ಕಾರಣ ಬ್ಯಾರಿಗಳೆಂದರೆ ಮೂಲತಃ ಅರೇಬಿಯನ್ ತಂದೆ ಮತ್ತು ದ್ರಾವಿಡಿಯನ್ ತಾಯಿಗೆ ಹುಟ್ಟಿದ ಮಕ್ಕಳು. ಮೂಲತಃ ಬ್ಯಾರಿಗಳದ್ದು ದ್ರಾವಿಡಿಯನ್ ವರ್ಣ ತಂತುವಾದರೂ ಅವರ ಗೋಧಿ ಬಣ್ಣಕ್ಕೆ ಕಾರಣ ಇದೇ ಅರೇಬಿಯನ್ ಮತ್ತು ದ್ರಾವಿಡಿಯನ್ ವರ್ಣ ಸಂಕರ.
ಬ್ಯಾರಿಗಳಲ್ಲಿ ಭಾರತದ ಇತರ ಯಾವುದೇ ಭಾಗದ ಮುಸ್ಲಿಮರಿಗಿಂತ ತುಸು ಹೆಚ್ಚೇ ಎನ್ನುವಷ್ಟು ಸ್ಥಳೀಯ ನೆಲದ ಸಂಸ್ಕೃತಿಯ ಪ್ರಭಾವ ಎದ್ದು ಕಾಣುತ್ತದೆ.
ತಮಿಳಿನ ತನ್ನಿಯ ಬಗ್ಗೆ ಹೇಳಿದೆ. ತಮಿಳು ಬ್ಯಾರಿ ಭಾಷೆಗೆ ಸನಿಹವಿರುವ ಭಾಷೆಯೆನ್ನುವುದಕ್ಕೆ ಒಂದು ಉದಾಹರಣೆ ನೋಡಿ. ನಮ್ಮ ಕರಾವಳಿ ಕರ್ನಾಟಕಕ್ಕೆ ಬರುವ ತಮಿಳು ಕ್ಷೌರಿಕರು ಕೇವಲ ಒಂದು ತಿಂಗಳೊಳಗಾಗಿ ಬ್ಯಾರಿ ಭಾಷೆಯಲ್ಲಿ ಹಿಡಿತ ಸಾಧಿಸುತ್ತಾರೆ. ಆದರೆ ತುಳುವಿನಲ್ಲಿ ಹಿಡಿತ ಸಾಧಿಸಲು ಅವರಿಗೆ ಕನಿಷ್ಠ ಆರು ತಿಂಗಳುಗಳಾದರೂ ಬೇಕಾಗುತ್ತದೆ.
ಮತ್ತೆ ಬ್ಯಾರಿ ಮಹಿಳೆಯರ ವೇಷಭೂಷಣಕ್ಕೆ ಬರುತ್ತೇನೆ. ಅದು ಕಾಸರಗೋಡು ನಮ್ಮ ದಕ್ಷಿಣ ಕನ್ನಡದ ಭಾಗ ಎಂಬುವುದನ್ನು ಈ ರೀತಿಯ ಡ್ರೆಸ್ ಕೋಡ್ ಗಳೂ ಸಾಬೀತು ಪಡಿಸುತ್ತವೆ. ಇದು ಬ್ಯಾರಿಗಳದ್ದೇ ಅನುಪಮವಾದ ವೇಷಭೂಷಣ.
ಈ ಪುಟ್ಟ ಬ್ಯಾರಿ ಬೆಲೆಮ (ಅಜ್ಜಿ)ಳ ಚಿತ್ರ ನೋಡಿದಾಗ ಎರಡು ಘಟನೆಗಳು ನೆನಪಾಯಿತು.
1. ಸುಮಾರು ಐದಾರು ವರ್ಷಗಳ ಹಿಂದೆ ಪತ್ರಕರ್ತ ಸುದೀಪ್ತೋ ಮೊಂಡಲ್ ಅವರು ತೆಗೆದ ಓರ್ವ ಟಿಪಿಕಲ್ ಬ್ಯಾರಿ ಅಜ್ಜಿಯ ಫೋಟೋವನ್ನು
ದ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆ ಚಿತ್ರ ಅಪಾರ ಜನಮಣ್ಣನೆ ಗಳಿಸಿತ್ತು.
2. 2014 ರ ನವೆಂಬರ್ ತಿಂಗಳಲ್ಲಿ ನನ್ನ (ಈ ಲೇಖಕನ) ಮದುವೆಗೆ ಬಂದಾಗ ಅಕ್ಕ ಗೌರಿ ಲಂಕೇಶ್ ನನ್ನಜ್ಜಿಯ ವಿವಿಧ ಭಂಗಿಯ ಫೋಟೋ ತೆಗೆದಿದ್ದರು. ಅವರಿಗೆ ನನ್ನಜ್ಜಿಯ ಅಲಿಕಾತಿನ ಬಗ್ಗೆಯಂತೂ ವಿಪರೀತ ಕುತೂಹಲ ಹುಟ್ಟಿತ್ತು. ಅವರು ನನ್ನಜ್ಜಿಯ ಕಿವಿಯ ತುದಿ ಅಲಿಕಾತಿನ ಭಾರಕ್ಕೆ ಕೆಳಕ್ಕೆ ಬಾಗಿದ್ದರಿಂದ ಕೇಳಿದ ಪ್ರಶ್ನೆ
"ನಿಮ್ಮ ಕಿವಿಗೆ ಇದು ಭಾರವೆಂದೆನಿಸುವುದಿಲ್ಲವೇ...?"
ಒಟ್ಟಿನಲ್ಲಿ ಬ್ಯಾರಿ ಸಂಸ್ಕೃತಿ ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಿಗರ ಗಮನ ಸೆಳೆದ ಪುಟ್ಟ ಬೆಲೆಮ ಈ ಚರ್ಚೆಗೆ ಕಾರಣವಾಗಿದ್ದಾಳೆ. ಮತ್ತು ನಮಗ ಬ್ಯಾರಿ ಅಜ್ಜಿಯಂದಿರ ಸ್ವಾಭಾವಿಕ ವೇಷಭೂಷಣ ಕಂಡಾಗ ಅದರಲ್ಲೇನೂ ವಿಶೇಷ ಕಾಣುವುದಿಲ್ಲ. ಪುಟ್ಟ ಮಗುವಿಗೆ ಅಜ್ಜಿಯ ವೇಷಭೂಷಣ ತೊಡಿಸಿದ್ದರಿಂದ ಅದು ಎಲ್ಲರ ಗಮನಸೆಳೆದಿದೆ.
ಈ ಬರಹಕ್ಕೆ ವಸ್ತು ಒದಗಿಸಿದ ಪುಟ್ಟ ಬೆಲೆಮನಿಗೆ ನನ್ನ ಕೃತಜ್ಞತೆಗಳು.