ಬಂಟ್ವಾಳ ಪುರಸಭೆ ಚುನಾವಣೆ: 13 ಮಂದಿಯಿಂದ ನಾಮಪತ್ರ ಹಿಂತೆಗೆತ
ಬಂಟ್ವಾಳ, ಆ. 23: ಬಂಟ್ವಾಳ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಿಂಪಡೆಯುವ ದಿನವಾದ ಗುರುವಾರ ಬಂಟ್ವಾಳದಲ್ಲಿ ಒಟ್ಟು 13 ಮಂದಿ ಅಭ್ಯರ್ಥಿಗಳು ನಾಮಪತ್ರವನ್ನು ಹಿಂತೆಗೆದಿದ್ದಾರೆ.
ಈಗ ಕಾಂಗ್ರೆಸ್ ನ 25, ಬಿಜೆಪಿಯ 27, ಜೆಡಿಎಸ್ ನ 5, ಎಸ್ಡಿಪಿಐನ 12, ಸಿಪಿಐ 1, ಪಕ್ಷೇತರ 1 ಸೇರಿ ಒಟ್ಟು 71 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇವರ ಪೈಕಿ ಕಾಂಗ್ರೆಸ್ ಜೆಡಿಎಸ್ ನ ಒಂದು ಅಭ್ಯರ್ಥಿ ಮತ್ತು ಸಿಪಿಐನ ಒಂದು ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ. ಪುರಸಭೆಗೆ ಒಟ್ಟು 101 ನಾಮಪತ್ರಗಳು ಸಲ್ಲಿಕೆಯಾಗಿದ್ದು, 84 ನಾಮಪತ್ರಗಳು ಪರಿಶೀಲನೆ ಬಳಿಕ ಅಂಗೀಕಾರಗೊಂಡಿದ್ದವು. ಬಿಜೆಪಿಯ 43, ಕಾಂಗ್ರೆಸ್ ನ 25, ಜೆಡಿಎಸ್ ನ 5, ಸಿಪಿಐನ 2, ಎಸ್ಡಿಪಿಐನ 22 ಮತ್ತು ಪಕ್ಷೇತರರು 4 ಮಂದಿ ಸೇರಿ ಒಟ್ಟು 99 ಮಂದಿಯಿಂದ 101 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಬಿಜೆಪಿಯ 16, ಸಿಪಿಐನ 1 ಸೇರಿ ಒಟ್ಟು 17 ನಾಮಪತ್ರಗಳು ತಿರಸ್ಕೃತಗೊಂಡಿದ್ದವು.
ಯಾರೆಲ್ಲ ಹಿಂತೆಗೆತ: ಎಸ್ಡಿಪಿಐನ 10, ಪಕ್ಷೇತರ 2, ಸ್ವತಂತ್ರ 1 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡರು. ಪಕ್ಷೇತರ ಅಭ್ಯರ್ಥಿ ಹರೀಶ್ ಬಿ (9ನೇ ವಾರ್ಡ್) ಎಸ್ಡಿಪಿಐನ ಬದಲಿ ಅಭ್ಯರ್ಥಿಗಳಾದ ವಾರ್ಡ್ 1ರ ಆಸಿದ್, 8ರ ಇರ್ಷಾದ್ ಅಲಿ, 13ರ ಅಮೀನಮ್ಮ, 14ರ ಮುಬೀನಾ, 16ರ ಮುಹಮ್ಮದ್ ಇಕ್ಬಾಲ್, 17ರ ಅಕ್ಬರಾಲಿ, 18ನೆ ವಾರ್ಡಿನ ಅಬುಬಕರ್ ಸಿದ್ದಿಕ್, 19ರ ಮುಹಮ್ಮದ್ ಮುಸ್ತಾಕ್, 23ರ ಮುಹಮ್ಮದ್ ಇಮ್ರಾನ್, 24ರ ಇಸ್ಮಾಯಿಲ್ ಬಾವ, 24ರ ಪಕ್ಷೇತರ ಮಹಮ್ಮದ್ ಅಮಾನುಲ್ಲ ಮತ್ತು 23ರ ಸ್ವತಂತ್ರ ಅಭ್ಯರ್ಥಿ ಮುಹಮ್ಮದ್ ಇರ್ಫಾನ್ ನಾಮಪತ್ರ ಹಿಂತೆಗೆದಿದ್ದಾರೆ.
ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಬಹುತೇಕ ವಾರ್ಡ್ ಗಳಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ ಕಂಡು ಬಂದಿದೆ.