ಉಡುಪಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
ಉಡುಪಿ, ಆ.23: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ 118.ಬೈಂದೂರು, 119.ಕುಂದಾಪುರ, 120.ಉಡುಪಿ, 121. ಕಾಪು ಹಾಗೂ 122. ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯ ಗುರುತಿಸುವ ಕಾರ್ಯವನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಓ) ನಡೆಸುವ ಅವಧಿಯನ್ನು ಆ.28ರವರೆಗೆ ವಿಸ್ತರಿಸಲಾಗಿದೆ.
ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿ ಯಲ್ಲಿ ಹೆಸರು ನೊಂದಣಿ ಆಗದೇ ಇದ್ದಲ್ಲಿ ಹಾಗೂ 2018ರ ಜ.1ಕ್ಕೆ 18 ವರ್ಷ ಪೂರ್ಣಗೊಂಡಿರುವ ಅರ್ಹ ಭಾರತೀಯ ನಾಗರೀಕರ ಮಾಹಿತಿಯನ್ನು ಕಲೆ ಹಾಕಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾವಣಿಗೆ ಕ್ರಮ ತೆಗೆದುಕೊಳ್ಳಲಿದ್ದಾರೆ.
ಅದೇ ರೀತಿ ಮತದಾರರ ಪಟ್ಟಿಯಲ್ಲಿ ಹೆಸರು ಪುನಾರಾವರ್ತನೆಗೊಂಡಿರುವ ಬಗ್ಗೆ, ಮತದಾರರ ಪಟ್ಟಿಯಲ್ಲಿ ಮೃತ ಮತದಾರರ ಹೆಸರಿರುವ ಬಗ್ಗೆ, ಮತದಾರರ ಪಟ್ಟಿಯಲ್ಲಿರುವ ಮತದಾರರು ಶಾಶ್ವತವಾಗಿ ವಲಸೆ/ಗುಳೆ ಹೋಗಿರುವ ಬಗ್ಗೆ, ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಇತ್ಯಾದಿಗಳಲ್ಲಿ ದೋಷಗಳ ತಿದ್ದುಪಡಿ ಬಗ್ಗೆ, ವಿಕಲಚೇತನ ಮತದಾರ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.
ಮತಗಟ್ಟೆ ಅಧಿಕಾರಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಕ್ತ ಮಾಹಿತಿಯನ್ನು ನೀಡುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.