ಭೂಮಿಯಲ್ಲಿದ್ದುಕೊಂಡೇ ಅಂತರಿಕ್ಷದಲ್ಲಿ ಸೆಲ್ಫಿ ತೆಗೆಯಿರಿ!
ನಾಸಾ ಬಿಡುಗಡೆಗೊಳಿಸಿದ ಹೊಸ ಆ್ಯಪ್ ಬಗ್ಗೆ ಮಾಹಿತಿ ಇಲ್ಲಿದೆ
ವಾಷಿಂಗ್ಟನ್, ಆ.23: ವರ್ಚುವಲ್ ಸ್ಪೇಸ್‍ಸೂಟ್‍ನಲ್ಲಿ ಅದ್ಭುತ ನಕ್ಷತ್ರಪುಂಜಗಳ ನಡುವೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಡುವ ವಿನೂತನ ಆ್ಯಪ್ ಇದೀಗ ಲಭ್ಯವಿದೆ. ವಿಶ್ವದ ಅಗ್ರಗಣ್ಯ ಬಾಹ್ಯಾಕಾಶ ಸಂಸ್ಥೆಗಳಲ್ಲೊಂದಾದ ‘ನಾಸಾ’ ಇದನ್ನು ಬಿಡುಗಡೆ ಮಾಡಿದೆ. ಸೌರಮಂಡಲದ ವಿವಿಧ ಸ್ಥಳಗಳಲ್ಲಿ ಅಂದರೆ ‘ಒರಿಯನ್ ನೆಬುಲಾ’ ಅಥವಾ ಸೌರಮಂಡಲದ ಮಧ್ಯಭಾಗದಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡ ಅನುಭವವನ್ನು ಇದು ನೀಡುತ್ತದೆ.
NASA Selfies ಹೆಸರಿನ ಈ ಆ್ಯಪ್ ಜತೆಗೆ, ಅಮೆರಿಕದ ಈ ಬಾಹ್ಯಾಕಾಶ ಸಂಸ್ಥೆ ಎಕ್ಸೋಪ್ಲಾನೆಟ್ ಎಕ್ಸ್‍ಕರ್‍ಷನ್ಸ್ ವರ್ಚುವಲ್ ರಿಯಾಲಿಟಿ (ವಿಆರ್) ಎಂಬ ಆ್ಯಪ್ ಕೂಡಾ ಬಿಡುಗಡೆ ಮಾಡಿದೆ. ಇದು ವಿಆರ್ ಬಳಕೆದಾರರನ್ನು ಟ್ರಾಪಿಸ್ಟ್-1 ಗ್ರಹಮಂಡಲದಲ್ಲಿ ಮಾರ್ಗದರ್ಶನ ಸಹಿತ ಯಾನ ಕೈಗೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಸ್ಪಿಟ್ಸರ್ ಬಾಹ್ಯಾಕಾಶ ಟೆಲೆಸ್ಕೋಪ್‍ಗೆ ಚಾಲನೆ ನೀಡಿದ 15ನೇ ವರ್ಷಾಚರಣೆಗಾಗಿ ಈ ಡಿಜಿಟಲ್ ಉತ್ಪನ್ನಗಳನ್ನು ಸೃಷ್ಟಿಸಲಾಗಿದೆ ಎಂದು ನಾಸಾ ಹೇಳಿದೆ.
ಸೆಲ್ಫಿ ಆ್ಯಪ್‍ನ ಸರಳ ಇಂಟರ್‍ಫೇಸ್, ನೀವು ಫೋಟೊ ಕ್ಲಿಕ್ಕಿಸಿಕೊಂಡು, ನಿಮ್ಮ ಆಯ್ಕೆಯ ಹಿನ್ನೆಲೆಯನ್ನು ಸೃಷ್ಟಿಸಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಐಒಎಸ್ ಮತ್ತು ಆ್ಯಂಡ್ರಾಯ್ಡ್ ಡಿವೈಸ್ ಗಳಿಗೆ ಈ ಆ್ಯಪ್ ಲಭ್ಯವಿದೆ.