ಕಾರು ಢಿಕ್ಕಿ: ಪಾದಾಚಾರಿ ಮೃತ್ಯು
ಉಡುಪಿ, ಆ.24: ಸಂತೆಕಟ್ಟೆ ಆಶೀರ್ವಾದ ಟಾಕೀಸ್ ಬಳಿಯ ವಿಜಯಾ ಬ್ಯಾಂಕ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆ. 23ರಂದು ರಾತ್ರಿ 10:30ರ ಸುಮಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ಡಿವೈಡರ್ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಅಶೋಕ್ ಎಂದು ಗುರುತಿಸಲಾಗಿದೆ. ಇವರು ತನ್ನ ಗೆಳೆಯ ಕೊಪ್ಪಳ ಜಿಲ್ಲೆಯ ಮುದಿಯಪ್ಪ ಎಂಬವರೊಂದಿಗೆ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಡಿವೈಡರ್ ಬಳಿ ನಿಂತಿದ್ದಾಗ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅಶೋಕ್ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story