ತತ್ವನಿಷ್ಠ ಪತ್ರಕರ್ತ, ಭಾರತ-ಪಾಕ್ ಶಾಂತಿದೂತ ಕುಲದೀಪ್ ನಯ್ಯರ್
►► ಇಂಗ್ಲಿಷ್ನಲ್ಲಿ ಬರೆಯಲು ಹೇಳಿದ ಮೌಲಾನ ಹಸ್ರತ್ ಮೊಹಾನಿ
ನಾನು ವೃತ್ತಿಜೀವನ ಪ್ರಾರಂಭಿಸಿದ್ದು ಉರ್ದು ಪತ್ರಿಕೆಯೊಂದರ ವರದಿಗಾರನಾಗಿ. ಪಾಕಿಸ್ತಾನದಿಂದ ಭಾರತಕ್ಕೆ ಬಂದಾಗ ದಿಲ್ಲಿಯ ಚಾಂದಿನಿ ಚೌಕ್ನಲ್ಲಿ ನಾನು ವಾಸಿಸತೊಡಗಿದೆ. ನಾನಿದ್ದ ವಠಾರದಲ್ಲೇ ಒಬ್ಬರು ವಾಸವಿದ್ದರು. ಅವರು ದಿನವಿಡೀ ಕೆಮ್ಮುತ್ತಿದ್ದರು. ಇದರಿಂದ ನನಗೆ ಕಿರಿಕಿರಿಯಾಗುತ್ತಿತ್ತು. ಅವರ ಬಗ್ಗೆ ವಿಚಾರಿಸಿದಾಗ ಅವರು ಮೌಲಾನ ಹಸ್ರತ್ ಮೊಹಾನಿ (‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆ ಬರೆದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ಕವಿ) ಎಂದು ತಿಳಿಯಿತು. ನಾನು ಅವರನ್ನು ಭೇಟಿಯಾದೆ. ನಾನು ಏನು ಮಾಡುತ್ತಿದ್ದೇನೆ ಎಂದು ಮೌಲಾನ ವಿಚಾರಿಸಿದರು. ಆಗ ನಾನು ‘ವಹಾದತ್’ ಪತ್ರಿಕೆಗೆ ವರದಿಗಾರನಾಗಿದ್ದೆ. ಅದನ್ನು ಅವರಿಗೆ ಹೇಳಿದೆ. ಕ್ರಮೇಣ ನಾವು ಆತ್ಮೀಯರಾದೆವು. ಆಗ ಅವರು ನನಗೆ ಎರಡು ಬಹಳ ಮುಖ್ಯ ಸಲಹೆ ನೀಡಿದರು : ಒಂದು - ಕವಿತೆ ಬರೆಯುವುದನ್ನು ಬಿಡು ಮತ್ತು ಎರಡನೆಯದು - ಇಂಗ್ಲಿಷ್ನಲ್ಲಿ ಬರೆಯಲು ಪ್ರಾರಂಭಿಸು, ಈ ದೇಶದಲ್ಲಿ ಉರ್ದುವಿಗೆ ಭವಿಷ್ಯವಿಲ್ಲ ಎಂಬುದು. - 2010ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಕುಲದೀಪ್ ನಯ್ಯರ್
ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಗುರುವಾರ ಮುಂಜಾನೆ ವಿಧಿವಶರಾಗಿದ್ದು ಭಾರತದ ಪತ್ರಿಕಾ ರಂಗದಲ್ಲಿ ಒಂದು ದೊಡ್ಡ ಶೂನ್ಯತೆಯನ್ನು ಸೃಷ್ಟಿಸಿದೆ. 95 ವರ್ಷ ಪ್ರಾಯದ ಈ ಪ್ರಸಿದ್ಧ ಪತ್ರಕರ್ತರು 71 ವರ್ಷಗಳ ತನ್ನ ಲೇಖನಿಯ ಹೋರಾಟದಲ್ಲಿ ತತ್ವನಿಷ್ಠ ಪತ್ರಿಕೋದ್ಯಮದ ದೊಡ್ಡ ಆಸ್ತಿಯನ್ನು ಬಿಟ್ಟಗಲಿದ್ದಾರೆ ಮಾತ್ರವಲ್ಲ ನಮ್ಮಂತಹ ಪತ್ರಕರ್ತರ ಪಾಲಿಗೆ ದಾರಿದೀಪವಾಗುವಂತಹ ಜವಾಬ್ದಾರಿಯನ್ನು ನಿರ್ವಹಿಸಿ ನಿರ್ಗಮಿಸಿದ್ದಾರೆ.
ಅದು 1977ರ ಕೊನೆಯ ತಿಂಗಳು. ಅಂದು ಅವರೊಂದಿಗೆ ಮದ್ರಾಸ್ನಒಂದು ಹೋಟೆಲೊಂದರಲ್ಲಿ ನನ್ನ ಪ್ರಥಮ ಭೇಟಿಯಾಗಿತ್ತು. ಆಗ ನಾನು ಮದ್ರಾಸ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದೆ. 'Kuldip Nayar as a Journalist' ವಿಷಯದಲ್ಲಿ ಸಂಶೋಧನಾ ಅಧ್ಯಯನದ ದೀರ್ಘ ಪ್ರಬಂಧ ಮಂಡಿಸಲು ಆಯ್ಕೆಯಾಗಿದ್ದೆ. ನಮ್ಮ ವಿಭಾಗದ ಅಧ್ಯಕ್ಷರು ಕುಲದೀಪ್ ನಯ್ಯರ್ ಅವರ ಸಂದರ್ಶನ ಮಾಡುವಂತೆ ಸಲಹೆ ನೀಡಿದ್ದರು. ಅವರ ಇಚ್ಛೆಯಂತೆ ಈ ಸಂದರ್ಶನವು ಅಧ್ಯಯನದ ಒಂದು ಭಾಗವಾಯಿತು.
ಇದಕ್ಕಿಂತ ಮುಂಚಿನ ಒಂದು ವಿಚಾರವನ್ನು ನಾನಿಲ್ಲಿ ತಿಳಿಸಬಯಸುತ್ತೇನೆ. ಅದೇನೆಂದರೆ ನಾನು ಪತ್ರಿಕೋದ್ಯಮ ರಂಗವನ್ನು ಆಯ್ದುಕೊಳ್ಳಲು ಕಾರಣ ಅವರ ಒಂದು ಲೇಖನದಿಂದ ಸಿಕ್ಕಿದ ಪ್ರೇರಣೆ. 1975ರಿಂದ 1977ರ ತುರ್ತು ಪರಿಸ್ಥಿತಿಯ ಕರಾಳ ಕಾಲದಲ್ಲಿ ಕುಲದೀಪ್ ನಯ್ಯರ್ ಇಂಡಿಯನ್ ಎಕ್ಸ್ಪ್ರೆಸ್ನ ಪ್ರಧಾನ ಸಂಪಾದಕರಾಗಿದ್ದರು. ಜೂನ್ 26ರಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಇಂಡಿಯನ್ ಎಕ್ಸ್ಪ್ರೆಸ್ ತನ್ನ ಸಂಪಾದಕೀಯವನ್ನು ಪ್ರತಿಭಟನಾರ್ಥವಾಗಿ ಖಾಲಿ ಬಿಟ್ಟಿತ್ತು. ಇಂದಿರಾ ಗಾಂಧಿ ಅವರ ಸಂಕುಚಿತ ಧೋರಣೆ ವಿರುದ್ಧ ಇಂಡಿಯನ್ ಎಕ್ಸ್ಪ್ರೆಸ್ನ ಧೋರಣೆಯೂ ಬಿಗಿಯಾಗಿತ್ತು. ಪ್ರಜಾಪ್ರಭುತ್ವ ಪ್ರೇಮಿ ಪತ್ರಕರ್ತರಾದ ಕುಲದೀಪ್ ನಯ್ಯರ್ ಆ ಪತ್ರಿಕೆಯ ನೇತೃತ್ವ ವಹಿಸಿರುವಾಗ ಹಾಗೆ ಆಗದಿರಲು ಸಾಧ್ಯವೇ ಇರಲಿಲ್ಲ. ಹೆಚ್ಚು ದಿನಗಳೇನೂ ಕಳೆದಿರಲಿಲ್ಲ. ಕುಲದೀಪ್ ನಯ್ಯರ್ ಸೆರೆವಾಸಕ್ಕೆ ಗುರಿಯಾದರು. ಪತ್ರಿಕೆಗಳಲ್ಲಿ ಆ ಬಗ್ಗೆ ಪ್ರಸ್ತಾಪವಾಗಲೇ ಇಲ್ಲ. ಎರಡು ತಿಂಗಳ ನಂತರ ಬಿಡುಗಡೆಯಾಗಿ ಬಂದ ಅವರು ತನ್ನ ಅಂಕಣದಲ್ಲಿ ಹೀಗೆ ಬರೆದರು: ‘‘ವಿಶ್ವವಿದ್ಯಾನಿಲಯಗಳ ದಾಖಲಾತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳು ತಮ್ಮ ಹೊಸ ಕೆರಿಯರ್ನ ಹುಡುಕಾಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರಿಗೆ ಸಲಹೆ ನೀಡುವುದೇನೆಂದರೆ, ಒಂದು ವೇಳೆ ತಮ್ಮ ಪ್ರಾಣವನ್ನು ಕಷ್ಟಕ್ಕೆ ಗುರಿಪಡಿಸಬಯಸಿದರೆ ಮಾತ್ರ ಪತ್ರಿಕೋದ್ಯಮ ಕೋರ್ಸ್ ಮತ್ತು ವೃತ್ತಿಯನ್ನು ಆಯ್ದುಕೊಳ್ಳಿರಿ’’. ವಾಸ್ತವದಲ್ಲಿ ಈ ಲೇಖನ ತುರ್ತುಪರಿಸ್ಥಿತಿಯ ಆ ಕಾಲದಲ್ಲಿ ಪತ್ರಕರ್ತರು ಮತ್ತು ಲೇಖಕರ ಪಾಲಿಗೆ ಸತ್ವಪರೀಕ್ಷೆಗಳ ವೃತ್ತಾಂತವಾಗಿದೆ. ದೇಶದ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಅದರ ಬಲಿಪಶುಗಳಾಗಿದ್ದರು. ಈ ಲೇಖನವು ಪತ್ರಿಕೋದ್ಯಮದಲ್ಲಿ ಎದುರಾಗಿರುವ ಅಪಾಯಗಳ ಬಗ್ಗೆ ಎಚ್ಚರಿಸಿತ್ತು. ಮಾತ್ರವಲ್ಲ, ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸುವ ಸ್ಫೂರ್ತಿಯನ್ನು ನೀಡಿತ್ತು.
ಕುಲದೀಪ್ ನಯ್ಯರ್ ಅವರ ಜೀವನ ವೃತ್ತಾಂತವು ವಾರ್ತಾ ಪತ್ರಿಕೆಗಳ ಪುಟಗಳನ್ನು ಶೋಭಿಸುವ ಕೆಲಸ ಮಾಡಬಹುದು ನಿಜ. ಆದರೆ ಈ ತತ್ವನಿಷ್ಠ ಪತ್ರಕರ್ತರು ವಿಶೇಷವಾಗಿ ಮಾಡಿದ್ದ ಈ ಅಪರಿಚಿತ ಪ್ರಯತ್ನಗಳನ್ನು ಚಿತ್ರಿಸುವ ಕೆಲಸ ಮಾಡುವವರು ಕಡಿಮೆಯೇ. ಅವರು 1947ರಲ್ಲಿ ಸಿಯಾಲ್ಕೋಟ್ (ಹುಟ್ಟಿದ ಊರು)ನಿಂದ ದಿಲ್ಲಿಗೆ ವಲಸೆ ಹೋದರು. ಆದರೆ ಅವರ ಸ್ವಭಾವದಲ್ಲಿ ಮುಸ್ಲಿಮರ ವಿರುದ್ಧ ಪ್ರತೀಕಾರದ ಕುರುಹು ಕೂಡಾ ಕಾಣಿಸಲಿಲ್ಲ. ತನ್ನ ಇಡೀ ಪತ್ರಿಕಾ ಜೀವನದಲ್ಲಿ ಈ ಸಹೃದಯಿ ವ್ಯಕ್ತಿಯು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಶಾಂತಿ ಸ್ಥಾಪಿಸುವಂತೆ ನಿರಂತರವಾಗಿ ವಾದಿಸಿದರು. ಅದನ್ನು ಅವರು ಹಿಂದೂ-ಮುಸ್ಲಿಮರ ನಡುವಿನ ಸಹೋದರತ್ವದ ಪ್ರಧಾನ ಮೂಲಾಂಶವೆಂದು ನಿಶ್ಚಯಿಸಿಕೊಂಡಿದ್ದರು.
ಕುಲದೀಪ್ ನಯ್ಯರ್ 1971ರ ಭಾರತ-ಪಾಕ್ ಯುದ್ಧದ ಬಳಿಕ ಪಾಕಿಸ್ತಾನಕ್ಕೆ ಭೇಟಿಯಿತ್ತ ಪ್ರಥಮ ಪತ್ರಕರ್ತರಾಗಿದ್ದರು. ಆ ಭೇಟಿಯ ನಂತರ ಬರೆದ Distant Neighbour ಪುಸ್ತಕವು ಭಾರತದ ವಿಭಜನೆಯಿಂದಾಗಿ ಉಪಭೂಖಂಡದ ಎರಡು ಜನಾಂಗಗಳ ನಡುವೆ ಸೃಷ್ಟಿಯಾದ ಮತ್ತು ಎರಡು ದೇಶಗಳ ನಡುವೆ ನಡೆದ ನಿರಂತರ ಹೋರಾಟ ಮತ್ತು ಯುದ್ಧಗಳ ಬಗ್ಗೆ ನೋವಿನ ಪ್ರಕಟನೆಯಾಗಿತ್ತು. ಆ ಭೇಟಿಯ ಸಂದರ್ಭದಲ್ಲಿ ಅವರು ಹಿಂದಿನ ಸಿಯಾಲ್ಕೋಟ್ನಲ್ಲಿನ ತಮ್ಮ ಮನೆಯನ್ನೂ ನೋಡಿದರು. ಆ ಮನೆಯ ಹಿಂಭಾಗದಲ್ಲಿದ್ದ ಮುಸ್ಲಿಮ್ ಗಣ್ಯ ವ್ಯಕ್ತಿಯೊಬ್ಬರ ಗೋರಿಯ ಪ್ರಸ್ತಾಪವನ್ನೂ ಅವರು ಮಾಡಿದರು. ಆ ಗೋರಿಗೆ ಅವರ ತಾಯಿ ಪೂರ್ಣಾದೇವಿ ಪ್ರತಿದಿನ ಸಂಜೆ ಗೌರವಪೂರ್ಣವಾಗಿ ದೀಪ ಉರಿಸುತ್ತಿರುವುದನ್ನು ಅವರು ಕಂಡಿದ್ದರು.
ದೇಶ ವಿಭಜನೆಯ ಪರಿಣಾಮವಾಗಿ ಸೃಷ್ಟಿಯಾದ ಗಲಭೆ, ರಕ್ತದೋಕುಳಿಗಳನ್ನು ಕಣ್ಣಾರೆ ಕಂಡ ಪತ್ರಕರ್ತರಲ್ಲಿ ಕುಲದೀಪ್ ನಯ್ಯರ್ ಮುಖ್ಯರೆಂದು ಪರಿಗಣಿಸಲ್ಪಡುತ್ತಾರೆ. ಪಂಜಾಬ್ ಭೂನೆಲವನ್ನು ಹಾದು ಅವರು ದಿಲ್ಲಿಗೆ ಬಂದರು. ಆದರೆ ದೇಶದ ಕೋಮುವಾದಿ ಮತ್ತು ಮುಸ್ಲಿಮ್ ವಿರೋಧಿ ರಾಜಕೀಯ ಶಕ್ತಿಗಳನ್ನು ಅನುಮೋದಿಸಿರಲಿಲ್ಲ. ಅವರು ತಾನು ನಂಬಿದ ತತ್ವದಲ್ಲಿ ಅಚಲರಾಗಿದ್ದರು. ಧರ್ಮ ಮತ್ತು ಜಾತಿ ಮತಗಳ ಹೆಸರಲ್ಲಿ ಸಮಾಜವನ್ನು ಒಡೆಯುವುದರ ವಿರುದ್ಧ ಜನರನ್ನು ಜಾಗೃತಗೊಳಿಸುತ್ತಿದ್ದರು. 2000ನೇ ಇಸವಿಯಲ್ಲಿ ಅವರು ಹಾಗೂ ಅವರಂತಹ ಹಲವಾರು ಶಾಂತಿಯ ಧ್ವಜವಾಹಕರು ವಾಘಾ ಗಡಿಯಲ್ಲಿ ಆಗಸ್ಟ್ 14 ಮತ್ತು 15ರಂದು ಭಾರತ ಮತ್ತು ಪಾಕಿಸ್ತಾನದ ಎರಡೂ ದಿಕ್ಕಿನಲ್ಲಿ ದೀಪ ಬೆಳಗಲು ಒಟ್ಟುಗೂಡುತ್ತಾರೆ. ಎರಡೂ ದೇಶಗಳಲ್ಲಿ ಸಂಬಂಧಗಳನ್ನು ಉತ್ತಮಗೊಳಿಸಲು ಬಯಸುವ ಜನರ ಪ್ರಯತ್ನಗಳನ್ನು ಪ್ರೋತ್ಸಾಹಿಸಲು ಈ ಪ್ರಯತ್ನ ಮಾಡಲಾಗಿತ್ತು.
1977ರ ಸಂದರ್ಶನದಲ್ಲಿ ಕುಲದೀಪ್ ನಯ್ಯರ್ ನನ್ನೊಂದಿಗೆ ಹೀಗೆ ಹೇಳಿದ್ದರು: ‘‘ದಿಲ್ಲಿಗೆ ಬಂದ ನಂತರ ನಾನು ನನ್ನ ವೃತ್ತಿಬದುಕನ್ನು ಉರ್ದು ದಿನಪತ್ರಿಕೆ ‘ಅಂಜಾಮ್’ನಿಂದ ಆರಂಭಿಸಿದ್ದೆ’’. ಅವರಿಗೆ ಉರ್ದು ಭಾಷೆಯೊಂದಿಗೆ ಅದಮ್ಯ ಪ್ರೀತಿಯಿತ್ತು. ಸ್ವಾತಂತ್ರಾ ನಂತರ ಭಾರತದಲ್ಲಿ ಉರ್ದುವಿನೊಂದಿಗೆ ತಳೆದ ವರ್ತನೆಯ ಬಗ್ಗೆ ವಿಷಾದವು ಅವರ ಮಾತುಕತೆಯಲ್ಲಿ ಪ್ರಕಟವಾಗುತ್ತಿತ್ತು.
ಸರಳ ಆಂಗ್ಲ ಭಾಷೆಯಲ್ಲಿ ಜಟಿಲ ವಿಷಯಗಳ ಬಗ್ಗೆಯೂ ಮಾತಾಡಬಲ್ಲ ಪಾಂಡಿತ್ಯ, ಹಿಡಿತ ಅವರಲ್ಲಿತ್ತು. ಅದು ಕಡಿಮೆ ಜನರಲ್ಲಿ ಕಂಡು ಬರುವುದು ಮಾತ್ರವಲ್ಲ, ಅಪರೂಪ ಹಾಗೂ ಅಪೂರ್ವವಾಗಿತ್ತು. ಆಡಳಿತ ವರ್ಗವನ್ನು ಪ್ರಜೆಗಳ ಸಂಕಷ್ಟಗಳ ಬಗ್ಗೆ ಎಚ್ಚರಿಸುವುದು ಕುಲದೀಪ್ ನಯ್ಯರ್ರ ಬರಹಗಳಲ್ಲಿ ಎದ್ದು ಕಾಣುತ್ತದೆ. ಅವರು ರಾಜಕೀಯ ದೃಷ್ಟಿಕೋನದಲ್ಲಿ ಎಡಪಂಥೀಯ ಒಲವನ್ನು ಹೊಂದಿದ್ದರು. ಬಂಡವಾಳಶಾಹಿ ವ್ಯವಸ್ಥೆ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸುವಲ್ಲಿ ಅವರು ಯಾವಾಗಲೂ ಮುಂದಿರುತ್ತಿದ್ದರು.
ಕುಲದೀಪ್ ನಯ್ಯರ್ ಮತ್ತು ದಿಲ್ಲಿ ಹೈಕೋರ್ಟ್ನ ಚೀಫ್ ಜಸ್ಟಿಸ್ ರಾಜಿಂದರ್ ಸಾಚಾರ್ ಅವರು ಪರಸ್ಪರರ ಸಹೋದರಿಯರನ್ನು ವಿವಾಹವಾಗಿದ್ದರು ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಈ ಇಬ್ಬರು ವ್ಯಕ್ತಿಗಳು ಕೂಡಾ ದೇಶದಲ್ಲಿ ಜಾತ್ಯತೀತ ಆಡಳಿತದ ಉಳಿವಿಗಾಗಿ ಜೀವನ ಪರ್ಯಂತ ಶ್ರಮಿಸಿದವರಾಗಿದ್ದರು. ಅನಿರೀಕ್ಷಿತವೆಂಬಂತೆ ಈ ದೇಶವು ಇದೇ ವರ್ಷದಲ್ಲಿ ಈ ಇಬ್ಬರು ಹಿತಚಿಂತಕರನ್ನು ಕಳೆದುಕೊಂಡಿದೆ.