ಮಂಗಳೂರು: ವಸತಿಗೃಹದಲ್ಲಿ ವೇಶ್ಯಾವಾಟಿಕೆ ಆರೋಪ; ಸೈಬರ್ ಕ್ರೈಂ ಪೊಲೀಸರಿಂದ ದಾಳಿ
ಮಂಗಳೂರು, ಆ.26: ನಗರದ ಸ್ಟೇಟ್ಬ್ಯಾಂಕ್ ಸಮೀಪದ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಆರೋಪದ ಮೇಲೆ ನಗರದ ಎಕೋನಾಮಿಕ್ ಆ್ಯಂಡ್ ನಾರ್ಕೊಟಿಕ್, ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿದ್ದಾರೆ.
ನಗರದ ವಸತಿ ಗೃಹವೊಂದರಲ್ಲಿ ಯುವತಿಯರ ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮೈಸೂರಿನ ಒಡನಾಡಿ ಸಂಸ್ಥೆಯ ಜತೆಗೆ ಪೊಲೀಸರು ದಾಳಿ ನಡೆಸಿದರು. ಆದರೆ ಈ ಆರೋಪಕ್ಕೆ ಪೂರಕವಾಗುವ ಯಾವುದೇ ಸಾಕ್ಷ್ಯ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿಯಲ್ಲಿ ಇಕೋನಾಮಿಕ್ ಆ್ಯಂಡ್ ನಾರ್ಕೊಟಿಕ್ ಠಾಣಾ ಇನ್ಸ್ಪೆಕ್ಟರ್ ಮುಹಮ್ಮದ್ ಶರೀಫ್, ಸೈಬರ್ ಕ್ರೈಂ ಠಾಣಾ ಇನ್ಸ್ಪೆಕ್ಟರ್ ಸವಿತ್ರ ತೇಜ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಜನಜಂಗುಳಿ; ವಾಹನ ಸಂಚಾರಕ್ಕೆ ಧಕ್ಕೆ
ಎಕೋನಾಮಿಕ್ ಆ್ಯಂಡ್ ನಾರ್ಕೊಟಿಕ್, ಸೈಬರ್ ಕ್ರೈಂ ಪೊಲೀಸರು ವಸತಿ ಗೃಹಕ್ಕೆ ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿ ಗುಂಪು ಸೇರಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗಿದ್ದು, ಗಂಭೀರತೆಯನ್ನು ಅರಿತ ಪೊಲೀಸರು ಲಾಠಿ ಬೀಸಿ ಸಾರ್ವಜನಿಕರನ್ನು ಚದುರಿಸಿದರು.