ಬಸ್ರೂರಿನ ವ್ಯಕ್ತಿ ಕುವೈಟ್ ಜೈಲಿನಲ್ಲಿ ಬಂಧಿ: ಬಿಡುಗಡೆಗೆ ಪತ್ನಿಯ ಮನವಿ
ಉಡುಪಿ, ಆ.28: ಊರಿನಿಂದ ಬೇರೆಯವರ ಪಾರ್ಸೆಲ್ನ್ನು ಕುವೈತ್ ಗೆ ತೆಗೆದುಕೊಂಡು ಹೋಗಿದ್ದ ಕುಂದಾಪುರದ ಬಸ್ರೂರು ನಿವಾಸಿ ಶಂಕರ ಪೂಜಾರಿ (40) ಎಂಬವರು ಕಳೆದ ಮೂರು ತಿಂಗಳುಗಳಿಂದ ಕುವೈಟ್ ಜೈಲಿನಲ್ಲಿ ಬಂಧಿಯಾಗಿದ್ದಾರೆ.
‘ಕಳೆದ ನಾಲ್ಕು ವರ್ಷಗಳಿಂದ ಕುವೈತ್ ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತಿ (ಶಂಕರ ಪೂಜಾರಿ), ಮೂರು ತಿಂಗಳ ಹಿಂದೆ ಕೇವಲ ಹತ್ತು ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದರು. ನಂತರ ಅವರು ವಾಪಾಸು ಕುವೈತ್ಗೆ ಹೋಗುವಾಗ ತನ್ನ ಸಹೋದ್ಯೋಗಿಯ ವಿನಂತಿಯಂತೆ ಉಡುಪಿಯ ವ್ಯಕ್ತಿಯೊಬ್ಬರು ನೀಡಿದ ಪಾರ್ಸೆಲ್ನ್ನು ಪಡೆದುಕೊಂಡಿದ್ದರು. ಅದನ್ನು ಕುವೈತ್ ನಲ್ಲಿ ಕೆಲಸ ಮಾಡುತ್ತಿರುವ ಅವರ ಅತ್ತೆಗೆ ತಲುಪಿಸುವಂತೆ ಅವರು ಹೇಳಿದ್ದರು’ ಎಂದು ಶಂಕರ ಪೂಜಾರಿಯ ಪತ್ನಿ ಜ್ಯೋತಿ ತಿಳಿಸಿದ್ದಾರೆ.
ಕುವೈತ್ ವಿಮಾನ ನಿಲ್ದಾಣದಲ್ಲಿ ಇಳಿದ ಅವರನ್ನು ತಪಾಸಣೆಗೆ ಒಳ ಪಡಿಸಿದ ಪೊಲೀಸರಿಗೆ ಮಾತ್ರೆಗಳಿರುವ ಪಾರ್ಸೆಲ್ ಸಿಕ್ಕಿತ್ತು. ವಿಚಾರಣೆ ವೇಳೆ ಪತಿ, ಇದನ್ನು ತನ್ನ ಸಹೊದ್ಯೋಗಿಯ ವಿನಂತಿಯಂತೆ ಕುವೈತ್ನಲ್ಲಿರುವ ಮಹಿಳೆಗೆ ನೀಡಲು ತಂದಿರುವುದಾಗಿ ಹೇಳಿದ್ದರು. ಆದರೆ ಪೊಲೀಸರ ಮುಂದೆ ಅವರ ಸಹೋದ್ಯೋಗಿ ನಮಗೂ ಪಾರ್ಸೆಲ್ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿ ನನ್ನ ಪತಿಗೆ ಮೋಸ ಮಾಡಿದ್ದಾರೆ ಎಂದು ಜ್ಯೋತಿ ಆರೋಪಿಸಿದ್ದಾರೆ.
ನನ್ನ ಪತಿ ಯಾವುದೇ ತಪ್ಪು ಮಾಡದಿದ್ದರೂ ಕಳೆದ ಮೂರು ತಿಂಗಳುಗಳಿಂದ ಕುವೈತ್ ಜೈಲಿನಲ್ಲಿದ್ದಾರೆ. ಈ ಬಗ್ಗೆ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಚಿವೆ ಸುಷ್ಮಾ ಸ್ವರಾಜ್ ಸೇರಿದಂತೆ ಹಲವಾರು ಜನಪ್ರತಿ ನಿಧಿಗಳ ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ನನ್ನ ಪತಿಯನ್ನು ಊರಿಗೆ ವಾಪಾಸ್ಸು ಕರೆಸಿಕೊಳ್ಳಲು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಯಿಂದ ಮಾಹಿತಿ ಸಂಗ್ರಹ
ಕುವೈಟ್ನ ಜೈಲಿನಲ್ಲಿ ಬಂಧಿಯಾಗಿರುವ ಶಂಕರ್ ಪೂಜಾರಿ ಪ್ರಕರಣದ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇತರ ಅಧಿ ಕಾರಿಗಳ ಸಮ್ಮುಖದಲ್ಲಿ ಜ್ಯೋತಿಯನ್ನು ಇಂದು ಕಚೇರಿಗೆ ಕರೆಸಿ ಪ್ರಕರಣದ ಮಾಹಿತಿ ಪಡೆದುಕೊಂಡು ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ, ಕುಂದಾಪುರ ಸಹಾಯ ಆಯುಕ್ತ ಭೂಬಾಲನ್, ಮಾನವ ಹಕ್ಕುಗಳ ಪ್ರತಿ ಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಮೊದಲಾದವರು ಹಾಜರಿದ್ದರು.
‘ಜ್ಯೋತಿ ಅವರನ್ನು ಕರೆಸಿ ಪತಿಯ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳ ಲಾಗಿದೆ. ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ನಾವೇ ಕುವೈತ್ನಲ್ಲಿ ರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ಅಲ್ಲಿನ ಮಾಹಿತಿಯಂತೆ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪತ್ರಿಕೆಗೆ ತಿಳಿಸಿದ್ದಾರೆ.