ಬಾಲ್ಯವಿವಾಹ: ಆಮಂತ್ರಣ ಮುದ್ರಕರಿಗೂ ಕಠಿಣ ಶಿಕ್ಷೆ
ಮಂಗಳೂರು, ಆ.28: ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಮದುವೆ ಆಮಂತ್ರಣ ಮುದ್ರಿಸುವ ಮುದ್ರಣ ಸಂಸ್ಥೆಗಳು ಮದುವೆ ಆಮಂತ್ರಣ ಮುದ್ರಿಸುವ ಮೊದಲು ವಧು-ವರರ ವಯಸ್ಸಿನ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಮದುವೆಯು ಬಾಲ್ಯವಿವಾಹವೆಂದು ಕಂಡು ಬಂದಲ್ಲಿ ಮದುವೆ ಆಮಂತ್ರಣ ಮುದ್ರಿಸಿದ ಮುದ್ರಣ ಸಂಸ್ಥೆಗಳನ್ನು ಕೂಡ ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬಾಲ್ಯವಿವಾಹ ನಿಷೇಧ ಕಾಯ್ದೆ 2006 ತಿದ್ದುಪಡಿ 2016ರ ಪ್ರಕಾರ 18 ವರ್ಷದೊಳಗಿನ ಯಾವುದೇ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಯಾವುದೇ ಗಂಡು ಮಕ್ಕಳಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗಿದೆ.
ಈ ಕಾಯ್ದೆ ಪ್ರಕಾರ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿಸಿದರೆ ಕೇವಲ ಹುಡುಗ, ಹುಡುಗಿಯರ ತಂದೆ ತಾಯಿ ಮಾತ್ರವಲ್ಲದೆ ಮದುವೆ ಮಾಡಿಸಿದ ಪುರೋಹಿತರು, ಧಾರ್ಮಿಕ ಮುಖಂಡರು, ಸಂಬಂಧಿಗಳು, ಮದುವೆ ಮಾಡಲು ಉತ್ತೇಜನ ನೀಡಿದವರು, ಭಾಗವಹಿಸದವರು ಎಲ್ಲರೂ ಅಪರಾಧಿಗಳಾಗುತ್ತಾರೆ. ಅಂತಹವರು ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಎರಡು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ ದಂಡದ ಶಿಕ್ಷೆಗೆ ಗುರಿಯಾಗುತ್ತಾರೆ.
ಮದುವೆ ನಡೆಸುವ ಮಠ/ಚರ್ಚ್/ಮಸೀದಿಗಳ ಧಾರ್ಮಿಕ ಮುಖಂಡರು, ಸಾಮೂಹಿಕ ವಿವಾಹಗಳನ್ನು ನೆರವೇರಿಸು ಆಯೋಜಕರು, ಕಲ್ಯಣ ಮಂಟಪಗಳ ವ್ಯವಸ್ಥಾಪಕರು ಕೂಡ ಮದುವೆ ಆಗುವ ಹುಡುಗ, ಹುಡುಗಿಯರ ವಯಸ್ಸಿನ ದಾಖಲೆಗಳನ್ನು ಪಡೆದುಕೊಂಡು ಖಚಿತ ಪಡಿಸಿಕೊಂಡ ನಂತರವೇ ಮದುವೆಗೆ ಸ್ಥಳ ಮತ್ತು ದಿನಾಂಕ ನಿಗದಿಪಡಿಸಲು ಒಪ್ಪಿಕೊಳ್ಳಬೇಕು.
ಒಂದು ವೇಳೆ ನಡೆದಂತಹ ಮದುವೆಯು ಬಾಲ್ಯವಿವಾಹವೆಂದು ನಂತರ ತಿಳಿದಲ್ಲಿ ಸಂಬಂಧ ಪಟ್ಟವರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಒಳಪಡಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇಲಾಖೆಯ ಅಧಿಕಾರಿಗಳು ಮದುವೆ ನಡೆಯುವ ಸಂಸ್ಥೆ/ಕಲ್ಯಾಣ ಮಂಟಪಗಳಿಗೆ ದಾಖಲೆಗಳನ್ನು ಪರಿಶೀಲಿಸಲು ಬಂದಾಗ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲ ಧಾರ್ಮಿಕ ಸಂಸ್ಥೆಗಳಿಗೆ, ಕಲ್ಯಾಣ ಮಂಟಪಗಳಿಗೆ ಹಾಗೂ ಮುದ್ರಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಯಿಂದ ಈಗಾಗಲೇ ವಿಶೇಷ ಸೂಚನಾ ಪತ್ರಗಳನ್ನು ಹೊರಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.