ಬಂಟ್ವಾಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ; ಆರೋಪಿ ಸೆರೆ
ಬಂಟ್ವಾಳ, ಆ. 28: ಇಲ್ಲಿನ ಮೊಡಂಕಾಪು ಸಮೀಪದ ಮನೆಯೊಂದಕ್ಕೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಹಲ್ಲೆ, ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಕನಕಬೇಳೂರು ನಿವಾಸಿ ಪ್ರವೀಣ್ ಕೆ. (31) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಸುಲಿಗೆ ಮಾಡಿದ್ದ ಸುಮಾರು 75 ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಪ್ರಕರಣಲ್ಲಿ ಭಾಗಿಯಾದ ಇನ್ನೋರ್ವ ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗು ವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ:
ಆ. 8ರಂದು ರಾತ್ರಿ 9:30ಗಂಟೆಗೆ ಮೊಡಂಕಾಪುವಿನಲ್ಲಿರುವ ಜನಾರ್ದನ ಹೊಳ್ಳ ಎಂಬವರ ಮನೆಗೆ ಅಪರಿಚಿತ ವ್ಯಕ್ತಿಗಳಿಬ್ಬರು ನುಗ್ಗಿ, ಮಾರಾಕಾಸ್ತ್ರಗಳಿಂದ ಅವರ ತಲೆಗೆ ಹಲ್ಲೆ ಮಾಡಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದರು. ಘಟನೆಯಿಂದ ಗಂಭೀರ ಗಾಯಗೊಂಡ ಜನಾರ್ದನ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.