ಕೇರಳದ ನೈಸರ್ಗಿಕ ವಿಪತ್ತಿನ ಕೆಲವು ಪಾಠಗಳು
ಎಷ್ಟೇ ಪರಸ್ಪರ ಬೈದಾಟಗಳು ನಡೆಯುತ್ತಿದ್ದರೂ ಕೇರಳದ ದುರಂತಕ್ಕೆ ಪ್ರತಿಕ್ರಿಯೆಯಾಗಿ ಹರಿದುಬರುತ್ತಿರುವ ಮಾನವೀಯ ಸ್ಪಂದನೆ ಅದಕ್ಕಿಂತ ಎಷ್ಟೋಪಟ್ಟು ಹೆಚ್ಚಿದೆ.
ಪ್ರವಾಹ ಸೃಷ್ಟಿಸಿದ ದುರಂತದ ನಂತರ ಆಡಳಿತ ವರ್ಗ ಮತ್ತು ಸರಕಾರಿ ಅಧಿಕಾರಿಗಳು ಮತ್ತು ಅವರೊಡನೆ ವೀರೋಚಿತವಾದ ರಕ್ಷಣಾ ಕಾರ್ಯಚಟುವಟಿಕೆಗಳನ್ನು ನಡೆಸಿದ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು, ರಾಷ್ಟ್ರೀಯ ರಕ್ಷಣಾ ಮತ್ತು ಬಚಾವು ಪಡೆಗಳು ಹಾಗೂ ರಾಜ್ಯದ, ದೇಶದ ಮತ್ತು ವಿದೇಶಗಳಿಂದ ಬಂದ ವೈದ್ಯರ ತಂಡಗಳು ಮೂರುಬಗೆಯ ಪ್ರತಿಸ್ಪಂದನೆಗಳ ನಡುವೆಯೂ ಮತ್ತು ಅದರಾಚೆಗೂ ನಡೆಸುತ್ತಿರುವ ರಕ್ಷಣಾ ಮತ್ತು ಪರಿಹಾರ ಚಟುವಟಿಕೆಗಳು ಮಾತ್ರ ಅತ್ಯಂತ ಶ್ಲಾಘನೀಯವಾಗಿವೆ.
ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ದುರಂತವು ಮೂರು ಹಂತದ ಸಾರ್ವಜನಿಕ ಪ್ರತಿಸ್ಪಂದನೆಯನ್ನು ಹುಟ್ಟುಹಾಕಿದೆ. ಮೊದಲ ಮತ್ತು ಪ್ರಾಥಮಿಕ ಹಂತದಲ್ಲಿ ಅದು ಸ್ವಯಂಪ್ರೇರಿತ ಮಾನವೀಯ ಅನುಕಂಪವನ್ನು ಹುಟ್ಟುಹಾಕಿದೆ. ಪ್ರಾದೇಶಿಕ ಮತ್ತು ರಾಷ್ಟ್ರೀಯ ಗಡಿಗಳನ್ನು ಮೀರಿ ಸಮಾಜದ ಎಲ್ಲಾ ವರ್ಗಗಳು ಈ ದುರಂತಕ್ಕೆ ಕೂಡಲೇ ಸ್ಪಂದಿಸಿದವು. ಈ ಪ್ರತಿಸ್ಪಂದನೆಯು ತತ್ಪ್ರೇರಿತವೂ ಸ್ವಯಂಪ್ರೇರಿತವೂ ಅಗಿತ್ತು. ಅದರ ಹಿಂದೆ ಯಾವ ಲೆಕ್ಕಾಚಾರಗಳೂ ಇರಲಿಲ್ಲ ಅಥವಾ ಪೂರ್ವಯೋಜಿತವೂ ಅಗಿರಲಿಲ್ಲ. ದೇಶವಿದೇಶಗಳಿಂದ ಸತತವಾಗಿ ಹರಿದುಬರುತ್ತಿರುವ ಸಹಾಯ ಮತ್ತು ಸಹಕಾರಗಳು ಅಗಾಧವಾಗಿವೆ ಮತ್ತು ಅದರಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದು ಸರಕಾರೇತರ ಸಂಘಟನೆಗಳೇ ಆಗಿವೆ. ಈ ಸಹಕಾರಗಳು ಶುದ್ಧ ಮಾನವೀಯತೆಯ ಭಾವಗಳಿಂದ ಪ್ರೇರೇಪಿತವಾಗಿದ್ದು ಮಾನವ ನಿರ್ಮಿತ ಎಲ್ಲ ಗಡಿಗಳನ್ನೂ ಮೀರಿ ಹರಿದುಬರುತ್ತಿವೆ. ಅದು ನಮ್ಮೆಲ್ಲರನ್ನು ಬಂಧಿಸಿಡುವ ಮಾನವೀಯತೆಯು ಎಲ್ಲಕ್ಕಿಂತ ಮುಖ್ಯವಾದದ್ದೆಂಬುದನ್ನು ಸಾಬೀತುಮಾಡುತ್ತಿದೆ. ಮೊದಲ ಹಂತದ ಈ ಸ್ಪಂದನೆಯು ಮೂರು ಕಾರಣಗಳಿಂದ ನೈತಿಕವಾಗಿ ಪರಿಶುದ್ಧವಾದದ್ದಾಗಿದೆ. ಮೊದಲನೆಯದಾಗಿ ಇದು ಮತ್ಯಾರನ್ನೋ ತೆಗಳುವ ಆಟದಲ್ಲಿ ತೊಡಗಿಲ್ಲ. ಎರಡನೆಯದಾಗಿ ರಕ್ಕಸ ಪ್ರವಾಹವು ಉಂಟುಮಾಡಿರುವ ಅನಾಹುತಕ್ಕೆ ಗುರಿಯಾದವರ ಜೊತೆ ಸೌಹಾರ್ದತೆಯನ್ನು ವ್ಯಕ್ತಪಡಿಸುತ್ತಾ ದುರಂತದ ಪ್ರಮಾಣವನ್ನು ತಮ್ಮ ಕೈಲಾದ ಮಟ್ಟಿಗೆ ತಗ್ಗಿಸುವ ನೈತಿಕ ಗ್ರಹಿಕೆಯಿಂದ ಪ್ರೇರೇಪಿತವಾಗಿ ಜನರು ತಮ್ಮ ಸ್ವಂತ ಆಸ್ತಿಪಾಸ್ತಿಗಳನ್ನು ಕೂಡಾ ಕೊಡುಗೆಯಾಗಿ ನೀಡುತ್ತಿದ್ದಾರೆ. ಅಂತಿಮವಾಗಿ ಅಂತಹ ನೈತಿಕ ಪ್ರೇರಣೆಗಳು ಮತ್ಯಾರದೋ ಮಾರ್ಗದರ್ಶನಕ್ಕೋ ಅಥವಾ ನಿರ್ದೇಶನಕ್ಕೋ ಕಾಯುವುದಿಲ್ಲ. ಅವು ತತ್‌ಕ್ಷಣದಲ್ಲೇ ತ್ಪ್ರೇರಿತವಾಗಿ ಹರಿಯತೊಡಗುತ್ತವೆ.
ಆದರೆ ಎರಡನೇ ಹಂತದ ಪ್ರತಿಸ್ಪಂದನೆಗಳು ಹೀಗಿರುವುದಿಲ್ಲ. ಅವು ದುರಂತ ಪರಿಸ್ಥಿತಿಯನ್ನು ನಿಭಾಯಿಸಿರುವುದರ ಬಗ್ಗೆ ಟೀಕೆಗಳ ಸುರಿಮಳೆಯನ್ನೇ ಮಾಡುತ್ತವೆ. ಈ ಬಾರಿ ಅದು ಪ್ರವಾಹ ಪರಿಹಾರದ ಪ್ರಮುಖ ಜವಾಬ್ದಾರಿಯನ್ನು ಹೊತ್ತಿರುವ ಕೇರಳ ಸರಕಾರವನ್ನು ಗುರಿಮಾಡಿಕೊಂಡಿದೆ. ಕೇರಳದ ಪ್ರಕರಣವು ತೋರಿಸುತ್ತಿರುವಂತೆ ಈ ಬಗೆಯ ಟೀಕೆಗಳಲ್ಲಿ ಎರಡು ಬಗೆಯಿವೆ: ಪರಿಸರವಾದಿಗಳ ಟೀಕೆಗಳು ಮತ್ತು ಕೇರಳದ ಆರ್ಥಿಕತೆಯಲ್ಲಿ ಹಿತಾಸಕ್ತಿಯುಳ್ಳವರ ಟೀಕೆಗಳು. ಪರಿಸರವಾದಿಗಳು ಇಂತಹ ದುರಂತವೊಂದರ ಸಂಭಾವ್ಯತೆಯ ಬಗ್ಗೆ ಅಧಿಕಾರದಲ್ಲಿದ್ದ ಎಲಾ ಸರಕಾರಗಳಿಗೂ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಕೇರಳ ಮಾದರಿ ಅಭಿವೃದ್ಧಿಯ ರಾಜಕೀಯ ಮತ್ತು ಹೊರದೇಶಗಳಲ್ಲಿ ಕೆಲಸ ಮಾಡುವವರು ಕಳಿಸಿಕೊಡುವ ಗಳಿಕೆಯ ಹಣದಿಂದ ಅಳತೆ ಮೀರಿ ಬೆಳೆಯುತ್ತಿರುವ ಗ್ರಾಹಕ ಮತ್ತು ವಸತಿ ಮಾರುಕಟ್ಟೆ ಹಾಗೂ ಅದರ ಜೊತೆಜೊತೆಗೆ ‘ಅಭಿವೃದ್ಧಿ’ಯ ಬಗೆಗಿನ ಗೀಳುಗಳು- ಇವು ಕೇರಳದ ಮತ್ತು ಹೊರಗಿನ ಪರಿಣಿತರು ಕಾಲಕಾಲಕ್ಕೆ ನೀಡುತ್ತಿದ್ದ ಎಲ್ಲಾ ಎಚ್ಚರಿಕೆಗಳನ್ನು ತಿರಸ್ಕರಿಸುವಂತೆ ಮಾಡಿತು. ಇತ್ತೀಚಿನ ದಿನಗಳಲ್ಲಿ ಇದೇ ಬಗೆಯ ನೈಸರ್ಗಿಕ ದುರಂತಕ್ಕೆ ಗುರಿಯಾಗಿದ್ದ ಇತರ ರಾಜ್ಯಗಳ ಸರಕಾರಗಳಿಗೂ ಪರಿಣಿತರು ಕಾಲಕಾಲಕ್ಕೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಅವೆಲ್ಲವನ್ನೂ ಅಭಿವೃದ್ಧಿ ಸಂಬಂಧಿ ಅನಿವಾರ್ಯ ರಿವಾಜಿನಂತೆ ಕಾಣಲಾಯಿತೇ ವಿನಃ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಹೀಗಾಗಿ ಅವರ ಶಿಫಾರಸುಗಳನ್ನು ಕಸದ ಡಬ್ಬಿಗೆ ಎಸೆಯಲಾಗದಿದ್ದರೂ ಪರಿಗಣಿಸಿದಂತೆ ಮಾಡಿ ಪಕ್ಕಕ್ಕೆ ಎತ್ತಿಡಲಾಯಿತು. ಹೀಗೆ ಉಪಭೋಗಿ ತರ್ಕಗಳಿಂದ ಪ್ರೇರೇಪಿತವಾದ ಅಭಿವೃದ್ಧಿ ಮಾದರಿಯು ಎಲ್ಲಾ ಬಗೆಯ ಎಚ್ಚರಿಕೆಗಳನ್ನೂ ಮತ್ತು ಮುಂಜಾಗರೂಕತೆಗಳನ್ನೂ ಕಡೆಗಣಿಸುವಂತೆ ಮಾಡುತ್ತವೆ ಮತ್ತು ಅದು ಮಾನವ ಕುಲಕ್ಕೆ ಭರಿಸಲಾಗದಷ್ಟು ಅಪಾಯಗಳನ್ನು ತಂದೊಡ್ಡುತ್ತದೆ. ಹೀಗೆ ಎರಡನೆ ಹಂತದ ಪ್ರತಿಕ್ರಿಯೆಗಳು ಭಾವನಾತ್ಮಕ ನೆಲೆಯಿಂದ ಹುಟ್ಟುವುದಿಲ್ಲ. ಬದಲಿಗೆ ಅವು ವೈಜಾನಿಕ ವೈಚಾರಿಕ ಸತ್ಯಗಳಿಂದ ಹುಟ್ಟುತ್ತವೆ. ಆದ್ದರಿಂದಲೇ ಅವು ಅನಾಹುತದ ಹೊಣೆಯನ್ನು ಪ್ರಕೃತಿಯ ಮೇಲಲ್ಲದೆ ಮನುಷ್ಯರ ಸ್ವಾರ್ಥ ಹಿತಾಸಕ್ತಿಗಳ ಮೇಲೆ ಮತ್ತು ಅವನ್ನು ರಕ್ಷಿಸುವ ಸಾರ್ವಜನಿಕ ಸಂಸ್ಥೆಗಳ ಮೇಲೆ ಹೊರಿಸಲು ಬೇಕಾದ ನೈತಿಕ ಬಲವನ್ನು ಪರಿಣಿತರಿಗೆ ನೀಡುತ್ತದೆ.
ಆದರೆ ಕೇರಳದ ಆರ್ಥಿಕತೆಯಲ್ಲಿ ಪಾಲುದಾರ ಹಿತಾಸಕ್ತಿಯನ್ನುಳ್ಳ ಶಕ್ತಿಗಳಿಗೆ ಈ ಅನಾಹುತವು ಆರ್ಥಿಕತೆಯ ಮೇಲೆ, ಅದರ ಉತ್ಪಾದಕ ವಲಯದ ಮೇಲೆ ಮತ್ತು ಸರಕು ಮತ್ತು ಸೇವೆಗಳ ಬೇಡಿಕೆಯ ಮೇಲೆ ಉಂಟುಮಾಡಬಹುದಾದ ಪರಿಣಾಮಗಳ ಹೆಚ್ಚಿನ ಕಾಳಜಿ. ಈ ಕಾಳಜಿಯನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಈ ಅನಾಹುತದಿಂದ ಕೇರಳದಲ್ಲಿ ವ್ಯವಹಾರ ಮಾಡುತ್ತಿದ್ದ ಬ್ಯಾಂಕಿಂಗ್ ಮತ್ತು ವಿಮಾ ಕಂಪೆನಿಗಳು, ಪ್ರವಾಸ ಮತ್ತು ವಸತಿ ಕ್ಷೇತ್ರಗಳು ಮತ್ತು ಸಹಜವಾಗಿಯೇ ಕೃಷಿ ಮತ್ತಿತರ ಪ್ರಾಥಮಿಕ ಕ್ಷೇತ್ರಗಳು ಹಾಗೂ ಸಾಂಪ್ರದಾಯಿಕ ಉದ್ದಿಮೆಗಳು ನಷ್ಟವನ್ನನುಭವಿಸಲಿವೆ. ಕೇರಳಕ್ಕಾಗಿರುವ ನಷ್ಟದ ಪ್ರಾಥಮಿಕ ಅಂದಾಜು 20,000 ಕೋಟಿ. ಆದರೆ ಕೇರಳ ಸರಕಾರದ ಪ್ರಕಾರ ನಷ್ಟದ ಕರಾರುವಾಕ್ಕಾದ ಅಂದಾಜುಗಳು ಲಭ್ಯವಾದಾಗ ನಷ್ಟದ ಮೊತ್ತ ಇನ್ನೂ ತುಂಬಾ ದೊಡ್ಡದಾಗಲಿದೆ. ಕೇರಳ ರಾಜ್ಯದ ಒಟ್ಟಾರೆ ಸ್ಥಳೀಯ ಉತ್ಪಾದನೆಯ ಶೇ.10ರಷ್ಟು ಎಂದರೆ ಅಂದಾಜು 30,000 ಕೋಟಿಯಷ್ಟಿರುವ ಮತ್ತು ಅಂದಾಜು 14 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದ್ದ ಪ್ರವಾಸೋದ್ಯಮ ಕ್ಷೇತ್ರಕ್ಕೆ ತೀವ್ರ ಹೊಡೆತ ಬಿದ್ದಿದೆ. ಈ ಸಾಲಿನಲ್ಲಿ ಅದರಲ್ಲೂ ಓಣಂ ಹಬ್ಬದ ಸಾಲಿನಲ್ಲಿ ಬಳಕೆದಾರ ಸಾಮಗ್ರಿಗಳ ಖರೀದಿ ಪ್ರಮಾಣ ಬಹಳಷ್ಟು ಕಡಿಮೆಯಾಗಲಿದೆ. ಇದೇ ಕಾರಣದಿಂದ ಹಬ್ಬದ ಸಾಲಿನಲ್ಲಿ ಹೆಚ್ಚಾಗುತ್ತಿದ್ದ ವಾಹನಗಳ ಬೇಡಿಕೆಯೂ ಈ ಬಾರಿ ಕಡಿಮೆಯಾಗಲಿದೆ. ಹೀಗಾಗಿ ಈ ಬಗೆಯ ಪ್ರತಿಸ್ಪಂದನೆಯು ಜೀವನೋಪಾಯಗಳ ಮೇಲಿನ ಪರಿಣಾಮದ ದೃಷ್ಟಿಯಿಂದ ಹುಟ್ಟಿಬರುತ್ತಿ್ದು ಅವನ್ನು ಪರಿಗಣಿಸಲೇ ಬೇಕಿದೆ.
ಮೂರನೆಯ ಪ್ರತಿಸ್ಪಂದನೆಯು ನಿರೀಕ್ಷಿತವಾಗಿದ್ದರೂ ಸ್ವಲ್ಪತಡವಾಗಿ ಬರುತ್ತಿದೆ. ಅದು ಭಾವನಾತ್ಮಕವಾದದ್ದೂ ಅಲ್ಲ, ವೈಜಾನಿಕವಾದದ್ದೂ ಅಲ್ಲ ಅಥವಾ ದುರಂತದ ಪರಿಣಾಮಗಳಿಂದ ಜೀವನಕ್ಕಾಗುವ ಅನಾಹುತಗಳನ್ನು ಗಮದಲ್ಲಿಟ್ಟುಕೊಂಡೂ ಅಂಥ ಪ್ರತಿಕ್ರಿಯೆಗಳು ಹುಟ್ಟುತ್ತಿಲ್ಲ. ಅದು ಅಗೋಚರ ದೈವಿಕ ಶಕ್ತಿಯಿಂದಾಗಿ ಇವೆಲ್ಲ ಪರಿಣಮಿಸಿದೆಯೆಂದು ಹೇಳುತ್ತದೆ. ಇದನ್ನು ಮುಂದಿಡುತ್ತಿರುವವರು ಬಲಪಂಥೀಯ ರಾಜಕಾರಣಿಗಳು ಮತ್ತವರ ಬೆಂಬಲಿಗರು. ಅವರು ಈ ಅನಾಹುತವನ್ನು ಬಳಸಿಕೊಂಡು ಕೇರಳ ಸರಕಾರದ ಮೇಲೆ ಮುಗಿಬೀಳಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಅದಕ್ಕೆ ಅವಕಾಶ ಸಿಗದಿದ್ದಾಗ ಬೇರೊಂದು ರೀತಿಯಲ್ಲಿ ಸುತ್ತಿಬಳಸಿ ಸರಕಾರವೇ ಇದಕ್ಕೆ ಕಾರಣವೆಂದು ಹೇಳುತ್ತಿವೆ. ಅವರ ಪ್ರಕಾರ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವನ್ನು ದೊರಕುವಂತೆ ಮಾಡಲು ಕೇರಳ ಸರಕಾರ ಪ್ರಯತ್ನಿಸಿದ್ದರಿಂದಲೇ ಈ ಅನಾಹುತ ಸಂಭವಿಸಿದೆ. ಹೀಗೆ ಹೇಳುತ್ತಾ ಅವರು ನೇರವಾಗಿ ಕೇರಳ ಸರಕಾರವನ್ನು ದೂರುತ್ತಿದ್ದಾರೆ. ಆದರೆ ಈ ವಾದ 1934ರಲ್ಲಿ ನೇಪಾಳ-ಬಿಹಾರದಲ್ಲಿ ಭೂಕಂಪ ಸಂಭವಿಸಿದಾಗ ಗಾಂಧಿ ನೀಡಿದ ಕಾರಣಗಳಿಗಿಂತಲೂ ತುಂಬಾ ಭಿನ್ನವಾದದ್ದೆಂಬುದನ್ನು ನಾವು ಮರೆಯಬಾರದು. ‘‘ಬಿಹಾರದ ಮೇಲ್ಜಾತಿಗಳು ತಮ್ಮ ಲಕ್ಷಾಂತರ ಸಹವಾಸಿಗಳ ಮೇಲೆ ತೋರುತ್ತಿದ್ದ ಅಸ್ಪೃಶ್ಯತೆಯೆಂಬ ಪಾಪಕ್ಕೆ ಶಿಕ್ಷೆಯಾಗಿ ಆ ಭೂಕಂಪವು ಸಂಭವಿಸಿದೆ’’ ಎಂದು ಆಗ ಗಾಂಧಿಯವರು ಹೇಳಿದ್ದರು. ಇಂದಿನ ಬಲಪಂಥೀಯರಂತೆ ಗಾಂಧಿಯವರು ಅನಾಹುತದ ಕಾರಣವನ್ನು ದೇವರ ತಲೆಗೆ ಕಟ್ಟಲು ಹೋಗದೆ ತನ್ನ ಸಹವಾಸಿಗಳನ್ನು ತಮ್ಮಂತೆ ಮನುಷ್ಯರೆಂದು ನೋಡದ ಮನುಷ್ಯರ ಸಾಮಾಜಿಕ ಬೇಜವಾಬ್ದಾರಿಯನ್ನು ಅದಕ್ಕೆ ಹೊಣೆಮಾಡಿದ್ದರು. ಈಗ ಬಲಪಂಥೀಯರು ದೇವರನ್ನು ಮಧ್ಯೆ ಎಳೆದುತರುತ್ತಿರುವುದು ಸಮಾಜದಲ್ಲಿ ಮನುಷ್ಯರು ಅಸಮಾನತೆಯನ್ನು ಮುಂದುವರಿಸುತ್ತಿರುವುದನ್ನು ಶಿಕ್ಷಿಸುವುದಕ್ಕಲ್ಲ ಬದಲಿಗೆ ಪೂಜೆ ಪುನಸ್ಕಾರಗಳಲ್ಲಿ ಲಿಂಗ ಅಸಮಾನತೆಯ ಆಚರಣೆಯನ್ನು ಬದಲಿಸಲು ಪ್ರಯತ್ನಿಸಿದ್ದಕ್ಕೆ.
ಅದೇನೇ ಇರಲಿ, ಪ್ರವಾಹ ಸೃಷ್ಟಿಸಿದ ದುರಂತದ ನಂತರ ಆಡಳಿತ ವರ್ಗ ಮತ್ತು ಸರಕಾರಿ ಅಧಿಕಾರಿಗಳು ಮತ್ತು ಅವರೊಡನೆ ವೀರೋಚಿತವಾದ ರಕ್ಷಣಾ ಕಾರ್ಯಚಟುವಟಿಕೆಗಳನ್ನು ನಡೆಸಿದ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು, ರಾಷ್ಟ್ರೀಯ ರಕ್ಷಣಾ ಮತ್ತು ಬಚಾವು ಪಡೆಗಳು ಹಾಗೂ ರಾಜ್ಯದ, ದೇಶದ ಮತ್ತು ವಿದೇಶಗಳಿಂದ ಬಂದ ವೈದ್ಯರ ತಂಡಗಳು ಈ ಮೂರುಬಗೆಯ ಪ್ರತಿಸ್ಪಂದನೆಗಳ ನಡುವೆಯೂ ಮತ್ತು ಅದರಾಚೆಗೂ ನಡೆಸುತ್ತಿರುವ ರಕ್ಷಣಾ ಮತ್ತು ಪರಿಹಾರ ಚಟುವಟಿಕೆಗಳು ಮಾತ್ರ ಅತ್ಯಂತ ಶ್ಲಾಘನೀಯವಾಗಿವೆ. ಮೀನುಗಾರ ಸಮುದಾಯವು ತಮ್ಮ ಪರಿಣಿತಿಯನ್ನು ಬಳಸಿಕೊಂಡು ಅತ್ಯಂತ ವೀರೋಚಿತವಾಗಿ ನಡೆಸಿದ ರಕ್ಷಣೆ ಮತ್ತು ಬಚಾವು ಪ್ರಯತ್ನಗಳು ಸ್ಪೂರ್ತಿದಾಯಕವಾಗಿದ್ದವು. ಕೇರಳದ ಬಹುಪಾಲು ಗ್ರಾಮೀಣ ಮತ್ತು ನಗರ ಭಾಗದ ಜನಜೀವನವು ತತ್ತರಗೊಂಡಿರುವ ಈ ಸಂದರ್ಭದಲ್ಲಿ ಕೇರಳದ ಜನತೆ ಎಲ್ಲಾ ತೋರಿಕೆಯ ಗಡಿಗಳನ್ನು ಮೀರುತ್ತಾ ತಮ್ಮೆಲ್ಲರನ್ನೂ ಸಮಾನವಾಗಿ ಬಾಧಿಸಿರುವ ದುರಂತದಿಂದ ಹೊರಬರಲು ಬೇಕಾದ ಧೀಶಕ್ತಿ, ಸ್ಫೂರ್ತಿ, ಸ್ಥೈರ್ಯ ಮತ್ತು ಐಕ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ.
ಕೃಪೆ: Economic and Political Weekly