ಬೆಂಗಳೂರು ಕಳಪೆ ನಗರ!?
ಛತ್ತೀಸ್‌ಗಡದ ರಾಯ್‌ಪುರ್ (7ನೇ ಸ್ಥಾನ), ಇಂಧೋರ್ (8ನೇ ಸ್ಥಾನ) ಮತ್ತು ಭೋಪಾಲ್ (10ನೇ ಸ್ಥಾನ) ನಗರಗಳ ಕಳಪೆ ಆಡಳಿತ ಜನಜನಿತವಾಗಿರುವಾಗಲೂ ಈ ನಗರಗಳು ಟಾಪ್ ಟೆನ್ ನಗರಗಳಲ್ಲಿ ಸ್ಥಾನ ಪಡೆದಿವೆ. ವಾರಣಾಸಿ ಮತ್ತು ಆಗ್ರಾ ಕೂಡ ನಗರಗಳ ರೇಟಿಂಗ್‌ನಲ್ಲಿ ಬೆಂಗಳೂರಿಗಿಂತ ಮುಂದಿವೆ. ಕರ್ನಾಟಕದ ರಾಜಧಾನಿಗೆ ಹೋಲಿಸಿದಾಗ ಈ ನಗರಗಳ ನಾಗರಿಕ ಸೌಕರ್ಯಗಳು ತೀರಾ ಅಸಮರ್ಪಕವಾಗಿವೆ. ಬಿಜೆಪಿ ಆಡಳಿತದ ಪ್ರತಿಷ್ಠೆಯನ್ನು ಹೆಚ್ಚಿಸುವುದೇ ಸಮೀಕ್ಷೆಯ ಉದ್ದೇಶ ವಾಗಿದ್ದಿರಬಹುದೆಂಬ ಭಾವನೆ ಮೂಡುತ್ತದೆ.
2018ರ ಆ.13ರಂದು ಕೇಂದ್ರ ಗೃಹ ಮತ್ತು ನಗರ ವ್ಯವಹಾರ ಸಚಿವಾಲಯವು (ಎಂಒಎಚ್‌ಯುಎ) ಆರಾಮ ಬದುಕಿನ ಸೂಚ್ಯಂಕ (ಈಸ್ ಆಫ್ ಲಿವಿಂಗ್ ಇಂಡೆಕ್ಸ್)ವನ್ನು ಬಿಡುಗಡೆ ಮಾಡಿತು. ನಗರಗಳ ಉದ್ದವಾದ ಯಾದಿಯಲ್ಲಿ ತಮ್ಮ ನಗರ ಮಧ್ಯದ ಸ್ಥಾನದಲ್ಲಿರುವುದನ್ನು ತಿಳಿದು ಹೆಚ್ಚಿನ ಬೆಂಗಳೂರಿಗರು ನಿರಾಶರಾದರು. ರಾಷ್ಟ್ರದ 111 ನಗರಗಳಲ್ಲಿ ಬೆಂಗಳೂರು 58ನೇ ಸ್ಥಾನ ಪಡೆದಿವೆ. ಹೆಚ್ಚಿನ ಬೆಂಗಳೂರಿಗರು ಕೇಳಿದರು ‘‘ನಮ್ಮ ನಗರ ವಾಸಿಸಲು ಅಷ್ಟೂ ಕೆಟ್ಟದೇ? ಮಾನದಂಡಗಳನ್ನು ಸರಿಯಾಗಿ ನ್ಯಾಯಯುತವಾಗಿ ಅನ್ವಯಿಸಲಾಗಿದೆಯೇ? ಅಥವಾ ಅಲ್ಲೂ ಪೂರ್ವಾಗ್ರಹದ ಅಂಶವಿದೆಯೇ?’’ ಕೆಲವರಂತೂ ನಗರಗಳ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ.
ಚುನಾವಣೆಗಳು ನಡೆಯಲಿರುವ ಬಿಜೆಪಿ ಆಡಳಿತವಿರುವ ರಾಜ್ಯಗಳ ನಗರಗಳಿಗೆ ಉತ್ತಮ ರೇಟಿಂಗ್ ದೊರಕಿರುವುದು ಇಲ್ಲಿ ಕುತೂಹಲ ಕೆರಳಿಸುವ ವಿಷಯವಾಗಿದೆ. ಛತ್ತೀಸ್‌ಗಡದ ರಾಯ್‌ಪುರ್ (7ನೇ ಸ್ಥಾನ), ಇಂಧೋರ್ (8ನೇ ಸ್ಥಾನ) ಮತ್ತು ಭೋಪಾಲ್ (10ನೇ ಸ್ಥಾನ) ನಗರಗಳ ಕಳಪೆ ಆಡಳಿತ ಜನಜನಿತವಾಗಿರುವಾಗಲೂ ಈ ನಗರಗಳು ಟಾಪ್ ಟೆನ್ ನಗರಗಳಲ್ಲಿ ಸ್ಥಾನ ಪಡೆದಿದೆ. ವಾರಣಾಸಿ ಮತ್ತು ಆಗ್ರಾ ಕೂಡ ನಗರಗಳ ರೇಟಿಂಗ್‌ನಲ್ಲಿ ಬೆಂಗಳೂರಿಗಿಂತ ಮುಂದಿವೆ. ಕರ್ನಾಟಕದ ರಾಜಧಾನಿಗೆ ಹೋಲಿಸಿದಾಗ ಈ ನಗರಗಳ ನಾಗರಿಕ ಸೌಕರ್ಯಗಳು ತೀರಾ ಅಸಮರ್ಪಕವಾಗಿವೆ. ಬಿಜೆಪಿ ಆಡಳಿತದ ಪ್ರತಿಷ್ಠೆಯನ್ನು ಹೆಚ್ಚಿಸುವುದೇ ಸಮೀಕ್ಷೆಯ ಉದ್ದೇಶವಾಗಿದ್ದಿರಬಹುದೆಂಬ ಭಾವನೆ ಮೂಡುತ್ತದೆ.
ನಗರಗಳು ದೊಡ್ಡದಿರಬಹುದು, ತುಂಬಾ ಜನಸಂಖ್ಯೆ ಹೊಂದಿರಬಹುದು ಮತ್ತು ಪ್ರವಾಸೋದ್ಯಮಕ್ಕೆ ಆಕರ್ಷಣೀಯವಾಗಿರಬಹುದು ಆದರೆ ‘ಈಸ್ ಆಫ್ ಲಿವಿಂಗ್’ದ ಭಾರತವಿರುವುದು ಒಂದು ನಗರ ನೀಡುವ ಜೀವನದ ಗುಣಮಟ್ಟವನ್ನು ಅಧರಿಸಿಯೇ ಹೊರತು ಬೇರೇನನ್ನೂ ಆಧರಿಸಿ ಅಲ್ಲ. ವಿದೇಶಿ ನೇರ ಹೂಡಿಕೆ, ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳು, ಸುರಕ್ಷತೆ, ಮೂಲಭೂತ ಸೌಕರ್ಯಗಳ ಲಭ್ಯತೆ ಇವುಗಳನ್ನೆಲ್ಲಾ ಒದಗಿಸುವ ಜವಾಬ್ದಾರಿ ಹೊತ್ತಿರುವ ಸಂಸ್ಥೆಗಳ ದಕ್ಷತೆ ಹಾಗೂ ನಾಗರಿಕರ ಅಹವಾಲುಗಳಿಗೆ ಅವು ನೀಡುವ ಸ್ಪಂದನೆ, ಉತ್ತರದಾಯಿತ್ವ ಇವೆಲ್ಲವೂ ಜೀವನದ ಗುಣಮಟ್ಟದಲ್ಲಿ ಅಡಕವಾಗಿದೆ.
ಈ ವರ್ಷ ಜನವರಿಯಲ್ಲಿ ಎಂಒಎಚ್‌ಯುಎ ನಡೆಸಿದ ಸಮೀಕ್ಷೆಯಲ್ಲಿ ಪೂನಾ ಪ್ರಥಮ ಸ್ಥಾನ ಪಡೆದಿತ್ತು. ನವೀ ಮುಂಬೈ ಮತ್ತು ಬೃಹನ್ಮುಂಬೈ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದವು. ತಿರುಪತಿ, ಚಂಡಿಗಡ, ಥಾಣೆ, ರಾಯ್‌ಪುರ್, ಇಂಧೋರ್, ವಿಜಯವಾಡ, ಭೋಪಾಲ್ ಅನುಕ್ರಮವಾಗಿ 10ರ ವರೆಗಿನ ರ್ಯಾಂಕ್ ಪಡೆದಿವೆ. ವಾರಣಾಸಿಗೆ 33ನೇ ರ್ಯಾಂಕ್ ಮತ್ತು ಆಗ್ರಾಕ್ಕೆ 55ನೇ ರ್ಯಾಂಕ್ ನೀಡಿರುವುದನ್ನು ನೋಡಿದರೆ, ರ್ಯಾಂಕಿಂಗ್‌ನಲ್ಲಿ ಪೂರ್ವಾಗ್ರಹ ಕೆಲಸ ಮಾಡಿದೆಯೇ ಎಂಬ ಅನುಮಾನ ಮೂಡುತ್ತದೆ.
ಜೀವನದ ಗುಣಮಟ್ಟವನ್ನು ಅಳೆಯಲು ಆರಾಮ ಬದುಕಿನ ಸೂಚ್ಯಂಕವು ನಾಲ್ಕು ಸ್ತಂಭಗಳಲ್ಲಿ ಹಾಗೂ 15 ವಿಭಾಗ (ಕೆಟಗರಿ)ಗಳಲ್ಲಿ ನಗರಗಳನ್ನು ವರ್ಗೀಕರಿಸುತ್ತದೆ. ನಾಲ್ಕು ಸ್ತಂಭಗಳು ಹೀಗಿವೆ (1) ಸಾಂಸ್ಥಿಕ (2) ಸಾಮಾಜಿಕ (3) ಆರ್ಥಿಕ ಮತ್ತು (4) ದೈಹಿಕ
ಹದಿನೈದು ಕೆಟಗರಿಗಳು
ನಗರಗಳನ್ನು ಈ ಕೆಳಗಿನ ಹದಿನೈದು ಕೆೆಟಗರಿಗಳನ್ನಾಧರಿಸಿ ಅಳೆಯಲಾಗಿದೆ : (1) ಸಾರಿಗೆ ಮತ್ತು ಸಂಚಾರ (2) ನೀರು ಪೂರೈಕೆ (3) ವಿದ್ಯುತ್ ಪೂರೈಕೆ (4) ಭದ್ರತೆ ಹಾಗೂ ಸುರಕ್ಷತೆ (5) ಶಿಕ್ಷಣ (6) ಆಡಳಿತ (7) ಆರೋಗ್ಯ (8) ಅಸ್ಮಿತೆ ಮತ್ತು ಸಂಸ್ಕೃತಿ (9) ಘನ ತ್ಯಾಜ್ಯ ನಿರ್ವಹಣೆ (10) ಸಾರ್ವಜನಿಕ ತೆರೆದ ಬಯಲು (11) ಗೃಹ ಮತ್ತು ಒಳಗೊಳ್ಳುವಿಕೆ (ಇನ್‌ಕ್ಲೂಸಿವ್‌ನೆಸ್) (12) ತ್ಯಾಜ್ಯನೀರು ನಿರ್ವಹಣೆ (15) ಮಿಶ್ರ ಭೂಮಿ ಬಳಕೆ ಮತ್ತು ಕ್ರೋಡೀಕರಣ.
ಸಮೀಕ್ಷೆಯು ಬೆಂಗಳೂರಿಗೆ ನ್ಯಾಯ ಒದಗಿಸಿಲ್ಲ ಎಂಬುದು ಬೆಂಗಳೂರಿಗರ ಸಾಮಾನ್ಯ ಭಾವನೆಯಾಗಿದೆ.
ಪೂರ್ವಾಗ್ರಹ ಪೀಡಿತ:
ಓರ್ವ ಪರಿಸರವಾದಿ ಹಾಗೂ ಮಾಜಿ ಟೆಲಿಕಾಂ ಇಂಜಿನಿಯರ್ ಸುದರ್ಶನ್ ನಿತ್ಯಾನಂದ್, ದಿಲ್ಲಿ, ಹೈದರಾಬಾದ್, ಮೊಹಾಲಿಯಲ್ಲಿ ಸಾಕಷ್ಟು ದೀರ್ಘಾವಧಿಯವರೆಗೆ ವಾಸವಾಗಿದ್ದವರು. ಅವರು ಪಾಟ್ನಾ ಮತ್ತು ಲಕ್ನೋದಲ್ಲಿಯೂ ಸ್ವಲ್ಪ ಸಮಯ ಇದ್ದರು. ಅವರ ಪ್ರಕಾರ, ಬೆಂಗಳೂರಿಗೆ ಮೇಲಿನ ರ್ಯಾಂಕ್ ಬರಬೇಕಿತ್ತು. ಆದ್ದರಿಂದ ಈ ಸಮೀಕ್ಷೆ ಪೂರ್ವಾಗ್ರಹಪೀಡಿತವಾಗಿದೆ. ಆದರೆ ಓರ್ವ ಮಾಜಿ ನೌಕಾಧಿಕಾರಿ ಕ್ಯಾ ಸುಬ್ಬರಾವ್ ಪ್ರಭಾಲ, ಬೆಂಗಳೂರಿಗೆ ತುಂಬ ಕೆಳಗಿನ ಸ್ಥಾನ ನೀಡಿರುವುದರಿಂದ ತನಗೆ ಆಶ್ಚರ್ಯವಾಗಿಲ್ಲ ಎಂದಿದ್ದಾರೆ. ಅವರು ಹೇಳುವಂತೆ, ಬೆಂಗಳೂರಿನ ರಸ್ತೆಗಳು ಕಳಪೆಯಾಗಿವೆ, ಕಳಪೆ ಸಾರ್ವಜನಿಕ ಸಾರಿಗೆ, ಅಸಮರ್ಪಕ ನೀರು ಪೂರೈಕೆ, ಹೆಚ್ಚುತ್ತಿರುವ ಲಂಚಗುಳಿತನ, ಕಳಪೆ ಘನತ್ಯಾಜ್ಯ ನಿರ್ವಹಣೆ, ವಿದ್ಯುತ್ ಕಡಿತ-ಇತ್ಯಾದಿಗಳು ಬೆಂಗಳೂರಿನ ಪ್ರತಿಷ್ಠೆಗೆ ಕುಂದು ತಂದಿವೆ.
ಬೆಂಗಳೂರಿನ ಹವೆ ಅದರ ಹೆವ್ಮೆು; ಆರಾಮ ಬದುಕಿಗೆ ತನ್ನ ಕೊಡುಗೆ ನೀಡುವ ಮುಖ್ಯ ಅಂಶ ಹವೆ. ಇದನ್ನು ಸಮೀಕ್ಷೆಯು ಗಣನೆಗೆ ತೆಗೆದುಕೊಂಡಿಲ್ಲ ಎನ್ನುತ್ತಾರೆ ಬೆಂಗಳೂರು ಪರಿಸರ ಟ್ರಸ್ಟ್‌ನ ಸದಸ್ಯ ಜಿ.ಟಿ. ದೆವರೆ. ಆದರೂ ಸಮೀಕ್ಷೆಯಲ್ಲಿ ಬೆಂಗಳೂರಿಗೆ ದೊರಕಿರುವ ರ್ಯಾಂಕ್, ನಗರ ಪಿತೃಗಳಿಗೆ ಎಚ್ಚರಿಕೆಯ ಒಂದು ಕರೆ ಎಂದು ತಿಳಿಯಬೇಕು ಎಂದು ಅವರು ಹೇಳುತ್ತಾರೆ. ಇದಕ್ಕೆ ಉದಾಹರಣೆಯಾಗಿ ಅವರು ಒಂದು ಪ್ರಕರಣವನ್ನು ಉಲ್ಲೇಖಿಸುತ್ತಾರೆ; ಕಳೆದ ಆರು ತಿಂಗಳುಗಳಲ್ಲಿ ಅವರು ಬಿಬಿಎಂಪಿಗೆ 10 ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳನ್ನು ಸಲ್ಲಿಸಿದ್ದರೂ, ಇದುವರೆಗೆ ಅವರ ಒಂದೇ ಒಂದು ಅರ್ಜಿಗೆ ಪ್ರತಿಕ್ರಿಯೆ ಬಂದಿಲ್ಲ.
ನಿವೃತ್ತ ಕೆಎಸ್ ಅಧಿಕಾರಿ ಹಾಗೂ ತೋಟಗಾರಿಕಾ ಇಲಾಖೆಯ ಮಾಜಿ ಸಯ್ಯದ್ ತಹ್ಸಿನ್ ಅಹ್ಮದ್‌ರ ಪ್ರಕಾರ, ಸಮೀಕ್ಷೆಯಲ್ಲಿ ಬೆಂಗಳೂರಿಗೆ ದೊರಕಿರುವ ಸ್ಥಾನವು ಬೆಂಗಳೂರಿನ ಶೋಚನೀಯ ಸ್ಥಿತಿಯನ್ನು ತೋರಿಸುತ್ತದೆ. ಅಭಿವೃದ್ಧಿಯಲ್ಲಿ ಇತರ ಹಲವು ರಾಜ್ಯಗಳು ಹಿಂದುಳಿದಿರುವುದರ ಪರಿಣಾಮವಾಗಿ ಅಲ್ಲಿಂದ ಬೆಂಗಳೂರಿಗೆ ವಲಸೆ ಬಂದವರು ನಗರದ ಅಸಹಜ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇದರ ಹೊರೆಯನ್ನು ಬೆಂಗಳೂರು ನಗರ ಹೊರಬೇಕಾಗಿ ಬಂದಿದೆ. ಸಾರಿಗೆ ಗೊಂದಲ, ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು, ವಲಯ ನಿಯಮಗಳ ಉಲ್ಲಂಘನೆ ಹಾಗೂ ನಾಗರಿಕ ಸೌಕರ್ಯಗಳ ಮೇಲೆ ಬೀಳುತ್ತಿರುವ ಅತಿಯಾದ ಒತ್ತಡ ಇವೆಲ್ಲವೂ ಸಮೀಕ್ಷೆಯಲ್ಲಿ ಬೆಂಗಳೂರಿಗೆ ಈಗ ದೊರಕಿರುವ ಸ್ಥಾನಕ್ಕೆ ಕಾರಣವಾಗಿವೆ.