ಕಾರಡ್ಕ ಗ್ರಾಪಂ: 18 ವರ್ಷಗಳ ಬಳಿಕ ಬಿಜೆಪಿಯೇತರ ಆಡಳಿತ ಅಧಿಕಾರಕ್ಕೆ
ಅಧಿಕಾರಕ್ಕೇರಿದ ಎಲ್ಡಿಎಫ್, ಯುಡಿಎಫ್ ಮೈತ್ರಿಕೂಟ
ಕಾಸರಗೋಡು, ಆ.30: 18 ವರ್ಷಗಳ ಬಳಿಕ ಬಿಜೆಪಿಯನ್ನು ಆಡಳಿತದಿಂದ ಹೊರಹಾಕಿದ ಎಲ್ಡಿಎಫ್, ಯುಡಿಎಫ್ ಮೈತ್ರಿಕೂಟವು ಕಾರಡ್ಕ ಗ್ರಾಪಂನಲ್ಲಿ ಆಡಳಿತ ಪಡೆದುಕೊಂಡಿದೆ.
ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅನಸೂಯಾ ರೈ ಮತ್ತು ಉಪಾಧ್ಯಕ್ಷರಾಗಿ ವಿನೋದ್ ಕುಮಾರ್ ಆಯ್ಕೆಯಾದರು.
ಬೆಳಗ್ಗೆ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಅನಸೂಯಾ ರೈ ಬಿಜೆಪಿಯ ಜಿ. ಸ್ವಪ್ನಾರನ್ನು 8-7 ಮತಗಳ ಅಂತರದಿಂದ ಸೋಲಿಸಿದರು. ಐದು ಸದಸ್ಯರನ್ನು ಹೊಂದಿರುವ ಎಲ್ಡಿಎಫ್ಗೆ ಯುಡಿಎಫ್ ಬೆಂಬಲ ನೀಡಿತ್ತು.
ಸಂಜೆ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿ.ಕೆ.ವಿನೋದ್ ನಂಬ್ಯಾರ್ ಆಯ್ಕೆಯಾಗಿದ್ದು, ಬಿಜೆಪಿಯ ಎಂ.ಗೋಪಾಲಕೃಷ್ಣ ಭಟ್ ರನ್ನು ಸೋಲಿಸಿದರು.
ಅನಸೂಯಾ ರೈ ಸಿಪಿಎಂ ಬೆಂಬಲಿತ ಸ್ವತಂತ್ರ ಸದಸ್ಯೆಯಾಗಿದ್ದು, ವಿನೋದ್ ಕುಮಾರ್ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದಾರೆ.
ಈ ಹಿಂದೆ ಎಲ್ಡಿಎಫ್ ಮಂಡಿಸಿದ್ದ ಸಿಪಿಎಂ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಯುಡಿಎಫ್ ಬೆಂಬಲಿಸಿದ್ದರಿಂದ 18 ವರ್ಷಗಳ ಬಿಜೆಪಿ ಆಡಳಿತ ಕಳೆದುಕೊಂಡಿತ್ತು. 15 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ ಏಳು, ಸಿಪಿಎಂ ಐದು, ಯುಡಿಎಫ್ ಮೂವರು ಸದಸ್ಯರನ್ನು ಹೊಂದಿದೆ.
ಕಾರಡ್ಕ ಬಳಿಕ ಎಣ್ಮಕಜೆ ಗ್ರಾಪಂ ಆಡಳಿತವನ್ನು ಬಿಜೆಪಿ ಕಳೆದುಕೊಂಡಿತ್ತು. ಜಿಲ್ಲೆಯ 39 ಗ್ರಾಪಂಗಳಲ್ಲಿ ಮಧೂರು, ಬೆಳ್ಳೂರು ಗ್ರಾಪಂನಲ್ಲಿ ಮಾತ್ರ ಬಿಜೆಪಿ ಆಡಳಿತ ಇದೆ.