ಭಗವದ್ಗೀತೆ-ಒಂದು ಗಂಭೀರ ಅವಲೋಕನ
ಈ ಹೊತ್ತಿನ ಹೊತ್ತಿಗೆ
ಇತ್ತೀಚಿನ ದಿನಗಳಲ್ಲಿ ಭಗವದ್ಗೀತೆ ಧಾರ್ಮಿಕೇತರ ಕಾರಣಗಳಿಗಾಗಿ ಸುದ್ದಿಯಾಗುತ್ತಿರುವ ಕೃತಿ. ಭಗವದ್ಗೀತೆಯ ಕುರಿತಂತೆ ರಾಜಕಾರಣಿಗಳು ಮಾತನಾಡಲು ಶುರು ಹಚ್ಚಿರುವ ದಿನಗಳು ಇವು. ಭಗವದ್ಗೀತೆಯನ್ನು, ಅದರೊಳಗಿರುವ ತಾತ್ವಿಕ ಸಂಗತಿಗಳನ್ನು ನಿಜಕ್ಕೂ ಅರಿತವರ ಧ್ವನಿ ಕೇಳಿಸುತ್ತಿಲ್ಲ. ಬದಲಿಗೆ ಭಗವದ್ಗೀತೆಯ ಒಂದು ಸಾಲನ್ನೂ ಓದದ, ಅದನ್ನು ಅರ್ಥ ಮಾಡಿಕೊಳ್ಳದ ರಾಜಕಾರಣಿಗಳು ಬೀದಿ ಬದಿಯಲ್ಲಿ ನಿಂತು ಗದ್ದಲ ಎಬ್ಬಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖ್ಯಾತ ಚಿಂತಕ ಜಿ. ರಾಮಕೃಷ್ಣ ಅವರು ‘ಭಗವದ್ಗೀತೆ- ಒಂದು ಅವಲೋಕನ’ ಕೃತಿಯನ್ನು ಹೊರತಂದಿದ್ದಾರೆ. ಇಲ್ಲಿ ಜಿ. ರಾಮಕೃಷ್ಣ ಅವರು ಅನಗತ್ಯವಾಗಿ ಭಗವದ್ಗೀತೆಯನ್ನು ವಿಮರ್ಶೆಗೆ ಇಳಿದಿಲ್ಲ. ಅಥವಾ ಟೀಕೆಯೂ ಅವರ ಉದ್ದೇಶವಲ್ಲ. ಅವೆಲ್ಲದರ ಬದಲಿಗೆ, ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆಯೇನು ಎಂಬುದರತ್ತ ಓದುಗರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಒಂದೆಡೆ ಭಗವದ್ಗೀತೆ ಪರಮಶ್ರೇಷ್ಠ ಎಂದು ನಂಬುವವರಾದರೆ, ಇನ್ನೊಂದೆಡೆ ಭಗವದ್ಗೀತೆಯನ್ನು ಸಾರಾಸಗಟಾಗಿ ಬದಿಗೆ ತಳ್ಳುವವರ ನಡುವೆ, ರಾಮಕೃಷ್ಣ ವಿಚಾರ ಒಂದು ಭಿನ್ನ ದಿಕ್ಕನ್ನು ತೋರಿಸಿಕೊಡುತ್ತದೆ. ಭಗವದ್ಗೀತೆಯು ಹುಟ್ಟಿಕೊಂಡ ಕಾಲದ ಚಾರಿತ್ರಿಕ ಸಂದರ್ಭ ಮತ್ತು ಒಲವು ನಿಲುವುಗಳನ್ನು ಗೌಣವಾಗಿಸಕೂಡದು ಮತ್ತು ಅವುಗಳಿಂದ ಪ್ರತ್ಯೇಕಿಸಿ ನೋಡಬಾರದು ಎಂಬ ಸಂದೇಶವನ್ನು ಈ ಕೃತಿಯಲ್ಲಿ ಲೇಖಕರು ಸಾದ್ಯಂತವಾಗಿ ಕಟ್ಟಿಕೊಡುತ್ತಾರೆ. ‘‘ಗೀತೆಯು ಸಂಕೀರ್ಣ ತತ್ವ ಶಾಸ್ತ್ರ ಪ್ರಮೇಯಗಳ ಆಗರ’’ ಎನ್ನುವ ವಿದ್ವಾಂಸರ ಹೇಳಿಕೆಯನ್ನು ವಿಸ್ತರಿಸುತ್ತಲೇ, ಈ ಕೃತಿಯಲ್ಲಿರುವ ವಿರೋಧಾಭಾಸವನ್ನೂ ಅವರು ಎತ್ತಿ ತೋರಿಸುತ್ತಾರೆ.
ಈ ಕೃತಿಯಲ್ಲಿ ಒಟ್ಟು 18 ಅಧ್ಯಾಯಗಳಿವೆ. ಮೊದಲನೇ ಅಧ್ಯಾಯ, ಗೀತೆಯ ಚಾರಿತ್ರಿಕ ಹಿನ್ನೆಲೆಯನ್ನು ಗುರುತಿಸಲು ಯತ್ನಿಸುತ್ತದೆ. ಬಳಿಕದ ಅಧ್ಯಾಯಗಳು, ಗೀತೆ ಏನನ್ನು ಹೇಳಲು ಪ್ರಯತ್ನ್ನಿಸುತ್ತದೆ, ಮತ್ತು ಅದರಲ್ಲಿ ಕಾಳೆಷ್ಟು, ಜೊಳ್ಳೆಷ್ಟು ಎನ್ನುವುದನ್ನು ಹಂತ ಹಂತವಾಗಿ ಶೋಧಿಸುತ್ತಾ ಹೋಗುತ್ತದೆ. ಗೀತೆಯನ್ನು ಲೇಖಕರು, ವೈಚಾರಿಕ ಸಾಹಿತ್ಯದ ಮರುಭೂಮಿ ಎಂದು ಒಂದೆಡೆ ಹೇಳುತ್ತಾರೆ. ಹಾಗೆಯೇ ಗೀತೆಯ ತತ್ವ ಧೋರಣೆಗಳಿಗೆ ಎದುರಾದ ಪ್ರತಿರೋಧಗಳನ್ನು ಅವರು ಎತ್ತಿ ತೋರಿಸುತ್ತಾರೆ. ಹಲವೆಡೆ ಎದ್ದು ಕಾಣುವ ವಿರೋಧಾಭಾಸ, ಹೇಗೆ ಜನರನ್ನು ಗೊಂದಲಕ್ಕೀಡು ಮಾಡಬಹುದು ಎನ್ನುವುದನ್ನು ವಿವರಿಸುತ್ತಾರೆ. ಹಾಗೆಯೇ ಮತಧರ್ಮ, ಅಧ್ಯಾತ್ಮ, ತತ್ವ ಶಾಸ್ತ್ರಗಳಂತೆ ಮೇಲ್ನೋಟಕ್ಕೆ ತನ್ನನ್ನು ತೋರಿಸಿಕೊಳ್ಳುತ್ತಲೇ ಹೇಗೆ ಶ್ರೇಣೀಕೃತ ಸಾಮಾಜಿಕ ನೀತಿಗೆ ಬದ್ಧವಾಗಿರಬೇಕು ಎನ್ನುವ ಸಂದೇಶವನ್ನು ಗೀತೆ ನೀಡುತ್ತದೆ ಎನ್ನುವುದನ್ನೂ ಅವರು ವಿವರಿಸುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ುಟಗಳು 164. ಮುಖಬೆಲೆ 150 ರೂ.