ಉಡುಪಿಯಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ
ಉಡುಪಿ, ಸೆ.1: ಉಡುಪಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ಶನಿವಾರ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಉದ್ಘಾಟಿಸಿದರು. ಶ್ರೀಕೃಷ್ಣನ ಕುರಿತು ಪಲಿಮಾರು ಮಠ ಸತ್ಯ ಸಂಶೋಧನಾ ಸಂಸ್ಥಾನದ ಡಾ.ವಂಶಿಕೃಷ್ಣ ವಿಶೇಷ ಉಪನ್ಯಾಸ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಬ್ರಹಣ್ಯ ಜೋಶಿ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ, ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಪುಟ್ಟಣ್ಣ ಗೊಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಬಾಯರಿ ವಂದಿಸಿದರು. ಉಪನ್ಯಾಸಕ ದಯಾನಂದ್ ಮತ್ತು ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಶ್ರೀಕೃಷ್ಣ ವೇಷ ಧರಿಸಿದ ಎಲ್ಲಾ ಮಕ್ಕಳಿಗೆ ಸ್ಮರಣಿಕೆ ನೀಡಲಾಯಿತು.