ಭಿನ್ನ ಭಾಷಾಛಾಯೆಯ ಗೋವಿನ ಜಾಡು
ನಾನು ಓದಿದ ಪುಸ್ತಕ
ಗುರುಪ್ರಸಾದ್ ಕಂಟಲಗೆರೆ
ಕನ್ನಡ ಕಥೆಗಳು ಮಿಂಚಂತೆ ಮಿಂಚಿನ ಸ್ಪರ್ಶ ಪಡೆದು ಕಾಪೋರೇಟ್ ಕಾರಿಡಾರ್‌ಗಳಲ್ಲಿ ಹರಿದಾಡುತ್ತ ಟೆಕ್‌ಪಾರ್ಕ್ ಕೊಳಗಳಲ್ಲಿ ಮಿಂದೇಳುತ್ತ ಜಾಲತಾಣಗಳಲ್ಲಿ ಸುಳಿಯುವ ಶಕ್ತಿ ಸಾಮರ್ಥ್ಯಗಳನ್ನು ಕ್ಷಣಾರ್ಧದಲ್ಲಿ ಪಡೆದುಕೊಂಡು ಬ್ರಹ್ಮಾಂಡದ ಯಾವ ಮೂಲೆಯಲ್ಲಾದರೂ ಪ್ರತ್ಯಕ್ಷಗೊಳ್ಳುವ ಈ ಹೊತ್ತಿನಲ್ಲಿ ಗೆಳೆಯ ಗುರುಪ್ರಸಾದ್ ಕಂಟಲಗೆರೆಯವರ ಎಂಟೂ ಕಥೆಗಳನ್ನು ನಾನು ಒಳಗೊಂಡು ಓದುವುದಕ್ಕೆ ಸಿಕ್ಕ ವಿಶೇಷ ಕುಮ್ಮಕ್ಕು ನನ್ನ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸುತ್ತಮುತ್ತಲ ಭಾಷೆಯಿಂದಾಗಿ. ನನಗೊಂದು ಸಮೃದ್ಧ ಬಾಲ್ಯಕಾಲ ಸಿಕ್ಕಿದ್ದು ಇದೇ ಸುತ್ತಮುತ್ತಲ ಪ್ರದೇಶದಲ್ಲಿ. ಇಲ್ಲಿ ಕನ್ನಡ ಭಾಷೆಗೆ ಸಿಕ್ಕ ಒಂದು ಛಾಯೆಯನ್ನು ನಾನು ಒಂದು ಪ್ರತ್ಯೇಕ ಪ್ರಾದೇಶಿಕ ಭಾಷೆಯೆಂದು ಗೆರೆಕೊರೆದು ಹೇಳುತ್ತಿಲ್ಲ. ನಮ್ಮಲ್ಲಿ ಹುಬ್ಬಳ್ಳಿ ಧಾರವಾಡ, ರಾಯಚೂರು, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮುಂತಾಗಿ ಕೆಲವು ಪ್ರಾದೇಶಿಕ ಭಾಷೆಗಳನ್ನು ಗುರುತಿಸುತ್ತೇವೆ ಅಲ್ಲವೇ? ಅಂಥ ಒಂದು ಪ್ರತ್ಯೇಕ ಪ್ರಭೇದ ಎಂದು ನಾನು ಹೇಳುವುದಿಲ್ಲ. ಆದರೆ ಈ ಭಾಗಕ್ಕೊಂದು ವಿಶಿಷ್ಟತೆಯಿದೆ. ಇಲ್ಲಿನ ಒಂದು ವರಸೆಯನ್ನು ಗಮನಿಸಿರಿ. ಮನೇಲಿ ಅಸೀಟು ಎಂಬುದು ಮಡಿಕೆ ತಳ ಸೇರಿ ವಾರ ಕಳೆದಿತ್ತು. ಮುದ್ದೆ ಇಲ್ಲ ಅಂದ್ರೆ ಉಂಡಿದ್ದು ಮೈಗತ್ತಲ್ಲ ಅಂತ ವಾರವೆಲ್ಲ ಅವರಿವರ ಮನೆ ತಿರಿದು, ಮುಂದ್ಲರಿಗೆ ಕಾಣ್ದಂಗೆ ಹಿಂದ್ಲರ್ತವ, ಹಿಂದ್ಲರಿಗೆ ಕಾಣ್ದಂಗೆ ಮುಂದ್ಲರ್ತವ, ಸೆರಗ ಸಂದಿಲಿ ಮುಚ್ಕಂಡು ಅಸೀಟ್ ತಂದು ಮುದ್ದೆ ತಿರಿವ್ಕೆಂಡು ಉಂಡ ಬಂಡ ಬದುಕು ಸಾಕಾಗಿ ಹೋಗಿತ್ತು.
ಈ ಸಂಕಲನದಲ್ಲಿ ಒಂದೆರಡು ಕಥೆಗಳನ್ನು ವಿನಾಯಿಸಿ ಉಳಿದೆಲ್ಲ ಕಥೆಗಳಲ್ಲಿ ಇಂಥ ಒಂದು ಭಿನ್ನ ಭಾಷಾಛಾಯೆಯನ್ನು ನಾವು ಕಾಣಬಹುದು. ಇಲ್ಲೇ ಇನ್ನೊಂದು ಮಾತನ್ನ ಹೇಳಿಬಿಡಬೇಕು. ಗುರುಪ್ರಸಾದ್ ತಮ್ಮ ಕಥಾ ನಿರೂಪಣೆಯಲ್ಲಿ ಪ್ರತಿಯೊಂದು ಸಣ್ಣ ಸಣ್ಣ ವಿವರಗಳನ್ನು ಚಿತ್ರಿಸುತ್ತಾರೆ. ದಪ್ಪ ದಪ್ಪ ಮಾತುಗಳಲ್ಲಿ ಮುಗಿಸಿಬಿಡುವ ಅವಸರ ತೋರದೆ ಹೀಗೆ ಸೂಕ್ಷ್ಮ ಸಂಗತಿಗಳನ್ನು ವಿವರಿಸುವ, ಚಿತ್ರಿಸುವ ಗುಣ ಒಳ್ಳೆಯ ಕತೆಗಾರನೊಬ್ಬನ ಪ್ರಮುಖ ಲಕ್ಷಣ. ಹಾಗೆ ಮಾಡುವಾಗ ಕಥೆಗಾರ ಬಳಸುವ ಪ್ರಾದೇಶಿಕ ನುಡಿಯ ಸೊಗಡು ಅಥವ ಬನಿ ಎದ್ದು ಕಾಣುತ್ತದೆ. ಅಷ್ಟಕ್ಕೂ ಅಂತಿಮವಾಗಿ ಕಥೆಯೆಂದರೇನು? ಅದದೇ ಅನುಭವಗಳನ್ನು ಬೇರೆ ಮಾತುಗಳಲ್ಲಿ ಹೇಳುವುದು ತಾನೆ?!
ಈ ಕಥಾ ಸಂಕಲನ ಧ್ವನಿಸುವ ಮುಖ್ಯ ಕಾಳಜಿಗಳನ್ನು ತಿಳಿಸುವ ಮುನ್ನ ಭಾಷೆ ಮತ್ತು ಅನುಭವಕ್ಕೆ ಸಂಬಂಧಿಸಿದಂತೆ ಇನ್ನೊಂದು ಮಾತನ್ನು ಹೇಳಬೇಕು. ‘ಮುಟ್ಟು’ ಈ ಸಂಕಲನದ ಬಹುಮುಖ್ಯ ಕಥೆಗಳಲ್ಲಿ ಒಂದು. ಮೇಲ್ನೋಟಕ್ಕೆ ಜೀತ ಪದ್ಧತಿಯ ವಸ್ತುವಿನಂತೆ ಕಾಣುವ ಈ ಕಥೆಯಲ್ಲಿ ಘಟಿಸುವುದು ಒಂದು ಪರಿವರ್ತನೆಯ ಸರಣಿ. ಕಥೆ ಪ್ರಾರಂಭವಾಗುವುದೇ ಚಲುವನ ಎಷ್ಟೋ ಕಾಲದಿಂದ ಚೌರ ಮಾಡಿಸಿಕೊಳ್ಳದೆ ಇದ್ದ ತಲೆಗೂದಲು ಮತ್ತು ಗಡ್ಡ ಮೀಸೆಗಳ ವಿವರಗಳಿಂದ. ನಿಜ ಅರ್ಥದಲ್ಲಿ ಚಲುವನ ಆಯುಷ್ಕರ್ಮಕ್ಕೆ ಒಳಗಾಗುವ ಪರಿವರ್ತನೆ, ಕಹಿ ಅನುಭವ ಸಿಹಿಯಾಗುವ, ಮುಟ್ಟಲಾರದ್ದನ್ನು ಮುಟ್ಟುವ ಕಡೆಗಿನ ಪರಿವರ್ತನೆ. ಹೀಗೆ ಕಥೆಯನ್ನು ವಿಶ್ಲೇಷಿಸುತ್ತ ಹೋಗಬಹುದು. ಆದರೆ ಇಲ್ಲಿ ಭಾಷೆಯೂ ಪರಿವರ್ತಿತವಾಗುವ ಸೋಜಿಗವನ್ನೂ ನಾವು ಕಾಣಬಹುದು. ಒಡೆಯನ ಪತ್ನಿ ಹಾಗೂ ಜೀತಗಾರ ಚಲುವನ ನಡುವಿನ ಸೆಳೆತನವನ್ನು ನಿರೂಪಿಸುವಾಗ ಕ್ರಮೇಣ ಭಾಷೆಯೂ ಬದಲಾಗಿ ಬಿಡುತ್ತದೆ. ಕಥೆಗಾರನ ಪ್ರಜ್ಞಾಪೂರ್ವಕ ಪ್ರಯತ್ನವೆನ್ನಲು ಸಾಧ್ಯವಿಲ್ಲ ವಾದರೂ ಅನುಭವ ಮತ್ತು ಭಾಷೆಯ ಶಿಫ್ಟ್ ಎದ್ದು ಕಾಣುತ್ತದೆ. ಅಲ್ಲದೆ ಒಡೆಯನ ಅಸಂತುಷ್ಟ ಪತ್ನಿ ಚಲುವನನ್ನು ಬಯಸುವ ಸನ್ನಿವೇಶವನ್ನು ಸಂಯಮದಿಂದಲೇ ಚಿತ್ರಿಸಿರುವ ಲೇಖಕರ ಶೈಲಿಯನ್ನು ಮೆಚ್ಚಬೇಕು.
ಇನ್ನು ಗುರುಪ್ರಸಾದ್ ರವರ ಮುಖ್ಯ ಕಾಳಜಿಯನ್ನು ಕುರಿತು ಎರಡು ಮಾತುಗಳನ್ನು ತಿಳಿಸಬೇಕು. ಇಲ್ಲಿನ ಕಥೆಗಳು ಇವತ್ತಿನ ಇಂಡಿಯಾದ ಸಮಕಾಲೀನ ಸಮಾಜದ ಬಿಕ್ಕಟ್ಟುಗಳನ್ನು, ಈವರೆಗೂ ನಡೆದು ಬಂದ ಹಸಿವು, ಅಸಮಾನತೆಯ ಶಾಪ ಪರಂಪರೆಗಳನ್ನು ಕೇಂದ್ರವಾಗಿಸಿಕೊಂಡಿವೆ. ಗೋವಿನ ಜಾಡು ಒಂದು ಅಪ್ಪಟ ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮವುಳ್ಳ ಕಥೆ. ಜನರ ಆಹಾರ ಸ್ವಾತಂತ್ರದ ಮೇಲಾಗುತ್ತಿರುವ ಹಲ್ಲೆಯನ್ನು ಅತ್ಯಂತ ಮಾರ್ಮಿಕವಾಗಿ ಈ ಕಥೆ ಚಿತ್ರಿಸುತ್ತದೆ. ಜನಮರುಳೋ ಜಾತ್ರೆ ಮರುಳೊ ಎಂಬಂತೆ ದೇಶದಲ್ಲಿರುವ ಪ್ರಸ್ತುತ ಪರಿಸ್ಥಿತಿಗೊಂದು ಪ್ರಾತಿನಿಧಿಕ ಸಂಭಾಷಣೆಯನ್ನು ಗಮನಿಸಬೇಕು. ನಾವು ಪೂಜೆ ಮಾಡಲು ಗೋಮಾತೆನೆ ಬೇಕಂತೆ ಅವ್ರಿಗೆ, ಅವ್ರ ನಮ್ಮ ದೇಶ್ದರಲ್ವಂತೆ ಕಂಡ್ರಿ ಪಾಕಿಸ್ಥಾನ್ದರಂತೆ, ಅವ್ರನ್ನ ಆ ದೇಶಕ್ಕೆ ಓಡಿಸ್ಬಿಡ್ಬೇಕು, ಸಾಬ್ರುದು ಜಾಸ್ತಿ ಆಗ್ಬಿಡ್ತು ಗಂಗಣ್ಣ, ಅಲ್ಲಿ ನೋಡಿರೆ ಬಾಂಬ್ ಹಾಕಿರಂತೆ, ಇಲ್ಲಿ ನೋಡಿರೆ ಭೂಕಂಪ ಮಾಡ್ಸಿರಂತೆ, ಆವಾಗ ನೋಡಿರೆ ರಾಜ್‌ಕುಮಾರ್ನ ಹಿಡ್ಕಂಡೋಗಿದ್ರು, ಏನ್ರಿ ಒಂದೊಂದೇನ್ರಿ ಆನನ್ಮಕ್ಳುದು, - ಹೀಗೆ ಸಾರ್ವಜನಿಕವಾಗಿ ಸಂಭಾಷಣೆಯಲ್ಲಿ ತೊಡಗಿಕೊಳ್ಳುವ, ಅಮಾಯಕರನ್ನು ಪ್ರಚೋದಿಸುವ ಸನ್ನಿವೇಶಗಳನ್ನ ಕಾಣುತ್ತೇವೆ. ಇಂಥ ಮಾತುಗಳನ್ನಾಡುವವರೇ, ಕೇಳಿಸಿಕೊಂಡವರೇ ಸಂಜೆಗೆ ಗುಪ್ತವಾಗಿಯೂ, ಮುಗ್ದವಾಗಿಯೂ ತಮ್ಮ ಆಹಾರವಾದ ಗೋಮಾಂಸವನ್ನ ಖರೀದಿಸುತ್ತಾರೆ. ಇದೊಂದು ತಣ್ಣನೆಯ ಈ ಕಾಲಕ್ಕೆ ಅಗತ್ಯವೆನಿಸುವ ಕ್ರಾಂತಿಯ ಮಾರ್ಗ. ಇದರ ನಡುವಿನ ರಾಜಕೀಯ ಹುನ್ನಾರದ ಕಡೆಗೆ ಕಥೆಗಾರ ಓದುಗರ ಗಮನ ಸೆಳೆಯುತ್ತಾರೆ.
ಇಂಡಿಯಾದ ಪಾರಂಪರಿಕ ಶಾಪಗಳೆನಿಸಿದ ಅನಕ್ಷರತೆ, ಹಸಿವು, ಮದ್ಯಪಾನ ವ್ಯಸನಗಳನ್ನ ಕೇಂದ್ರೀಕರಿಸಿ ತಮ್ಮ ಮುಖ್ಯ ಕಾಳಜಿಯನ್ನ ಕಲಾತ್ಮಕತೆಯ ಮೂಸೆಯಲ್ಲಿ ಕರಗಿಸುವ ಗುರುಪ್ರಸಾದ್ ರವರ ಕಾಳಜಿಯನ್ನ ಯಾರಾದರೂ ಮೆಚ್ಚಲೇಬೇಕು. ಸರಕಾರದ ಪಶು ಭಾಗ್ಯದ ಫಲಾನುಭವಿಯಾಗಲು ಪಡಿಪಾಟಲು ಬೀಳುವ ಚನ್ನಯ್ಯನ ಚಿತ್ರಣ ಈ ಹೊತ್ತು ನಮ್ಮ ದೇಶದಲ್ಲಿ ಆತಂಕ ಉಂಟುಮಾಡಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಣ್ಣಿಗೆ ರಾಚುತ್ತದೆ. ಚನ್ನಯ್ಯ ತನ್ನಲ್ಲಿರುವ ಪಶುಗಳನ್ನೆ ತೋರಿಸಿ ಪಶುಭಾಗ್ಯದ ಫಲಾನುಭವಿಯಾಗಬೇಕೆಂಬ ಸ್ವಾರ್ಥದ ಹಿಂದೆ ಒಂದು ನೈತಿಕ ಕಾರಣವನ್ನು ಮನಸ್ಸಿಗೆ ತಂದುಕೊಳ್ಳುತ್ತಾನೆ. ಅದು ತನ್ನ ಮಗಳಿಗೆ ಮಾಂಗಲ್ಯ ಸರ ಮಾಡಿಸಿಕೊಡುತ್ತೇನೆಂಬ ವಾಗ್ದಾನ! ಅವನ ಪ್ರಯತ್ನದಲ್ಲಿ ಸೋಲುವ ಪರಿಸ್ಥಿತಿ ಕಾವ್ಯನ್ಯಾಯದಂತೆ ಕಂಡರೂ ಕೋಟಿಗಟ್ಟಲೆ ಹಣವನ್ನು ಸಾಲದ ರೂಪದಲ್ಲಿ ಲೂಟಿ ಹೊಡೆದು ದೇಶಾಂತರಗೊಂಡಿರುವವರ ಮುಖಗಳನ್ನು ಚನ್ನಯ್ಯನ ಸ್ವರೂಪದಲ್ಲೂ ಕಾಣುವಂತಾಗುತ್ತದೆ. ಇಂಥಹ ಬ್ಯಾಂಕಿಂಗ್ ಹಗರಣಗಳು ಇತ್ತೀಚೆಗೆ ಬೆಳಕಿಗೆ ಬರುವ ಮುನ್ನವೇ ಗುರುಪ್ರಸಾದ್ ತನ್ನ ಕಲೆಯ ಜಗತಿನಲ್ಲಿ ಕಂಡಿರಿಸಿದ್ದಾರೆ. ಈ ಮಾದರಿಯಲ್ಲಿ ಸಬ್ಸಿಡಿ ಎಂಬ ಕಥೆ ರಚಿತವಾಗಿದೆ.
ಮನುಷ್ಯ ಸಂಬಂಧಗಳು ಅದರಲ್ಲೂ ಹೆಣ್ಣು-ಗಂಡು ನಡುವಿನ ಸಂಬಂಧವನ್ನು ತಮ್ಮ ಕಥೆಗಳಲ್ಲಿ ಬಳಸಿಕೊಳ್ಳುವ ಕಥೆಗಾರರು ಈಗಾಗಲೇ ತಿಳಿಸಿರುವ ಹಾಗೆ ಸಂಯಮದ ಎಲ್ಲೆ ದಾಟದಂತೆ ನಿರ್ವಹಿಸುತ್ತಾರೆ. ‘ನೀಲಿಮಗಳು’ ಎಂಬ ಕಥೆಯಲ್ಲಿ ತಾನು ಕಲಿಯುತ್ತಿರುವ ಶಾಲೆಯಲ್ಲಿ ಓರ್ವ ಶಿಕ್ಷಕ ಮತ್ತು ತನ್ನ ತಾಯಿಯ ನಡುವಿನ ಒಂದು ಸಂಬಂಧ ಲೋಕದ ಕಣ್ಣಿಗೆ ಅನೈತಿಕವೆನಿಸಿ ಗೇಲಿಗೊಳಗಾಗುತ್ತಿರುವಾಗಲೇ, ಅದೇ ಸಂಬಂಧದ ಬಗ್ಗೆ ತನ್ನಲ್ಲಿ ಈಗಾಗಲೇ ರೂಪುಗೊಂಡಿದ್ದ ಗೌರವಯುತವೆನಿಸುವ ಮುಗ್ಧತೆ ಕ್ರಮೇಣ ಬಿರಿದು ಹೋಗುವ ಚಿತ್ರಣವನ್ನು ಈ ಕಥೆಯಲ್ಲಿ ಕಾಣುತ್ತೇವೆ. ಮನುಷ್ಯ ಜೀವನದ ತಾಕಲಾಟಗಳ ಅರಿವು ಈ ಕಥೆಗಾರರಲ್ಲಿ ದಟ್ಟವಾಗಿರುವುದನ್ನ್ನು ಕಾಣುತ್ತೇವೆ.
ಎಲ್ಲ ಕಥೆಗಳ ಬಗೆಗೂ ಇಲ್ಲಿ ಬರೆಯುವ ಅಗತ್ಯವಿಲ್ಲ. ಈ ಸಂಕಲನದ ಕಥೆಗಳಲ್ಲಿ ಕಂಡುಬರುವ ಬಹುತೇಕ ಎಲ್ಲ ಮಹಿಳೆಯರೂ ಛಲವಂತ ಮಹಿಳೆಯರಾಗಿದ್ದಾರೆ. ಇದು ಸ್ತ್ರೀ ಶಕ್ತಿಯಷ್ಟೆ ಅಲ್ಲ. ಇದು ಕಥೆಗಾರರಲ್ಲಿರುವ ಕಲಾವಂತಿಕೆಯ ಶಕ್ತಿ ಕೂಡ ಎಂದು ಹೇಳಲು ನನಗೆ ಯಾವ ಅಳುಕೂ ಇಲ್ಲ. ಕನ್ನಡ ಓದುಗರು ಇವರನ್ನು ಮತ್ತೊಬ್ಬ ಉತ್ತಮ ಕಥೆಗಾರನನ್ನಾಗಿ ಸ್ವಾಗತಿಸುತ್ತಾರೆಂಬ ವಿಶ್ವಾಸ ನನಗಿದೆ.