ಗೋಜಲುಗಳ ಮುಸುಕು ಹೊದಿಸುವ ದೌರ್ಬಲ್ಯ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವ್ಯಕ್ತಿತ್ವವನ್ನು ಆತ್ಮರತಿ ಆವರಿಸಿಕೊಳ್ಳು ತ್ತಿದೆಯೇ? ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಅವರು ನೀಡುತ್ತಿರುವ ಹೇಳಿಕೆಗಳು ಮತ್ತು ಅವರ ವರ್ತನೆ ಇಂತಹದ್ದೊಂದು ಪ್ರಶ್ನೆ ಮೂಡಲು ಕಾರಣವಾಗಿದೆ.
ತಮ್ಮ ಪಕ್ಷ ಕೇವಲ 37 ಸ್ಥಾನ ಗಳಿಸಿದ್ದರೂ ಮುಖ್ಯಮಂತ್ರಿಯಾಗುವ ಅವಕಾಶ ದಕ್ಕಿಸಿಕೊಂಡ ಅವರು, ತಮಗೆ ಒಲಿದು ಬಂದಿರುವ ಸದವಕಾಶವನ್ನು ರಾಜ್ಯ ಹಾಗೂ ತಮ್ಮ ಪಕ್ಷದ ಏಳಿಗೆಗೆ ಪೂರಕವಾಗುವಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ವಿನಿಯೋಗಿಸುವ ಬದಲು, ಹೊಸ ಗೋಜಲುಗಳ ಸೃಷ್ಟಿಗೆ ಇಂಬು ನೀಡುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಏನನ್ನು ಸೂಚಿಸುತ್ತದೆ?
‘‘ನಾನು ಸಂದರ್ಭದ ಶಿಶು’’ ಎಂದುಕೊಂಡೇ ಬಂದಿರುವ ಅವರ ವರ್ತನೆಗಳು, ತಮಗೆ ಅಧಿಕಾರ ದಕ್ಕಲು ನೆರವಾಗಿರುವ ಕಾಂಗ್ರೆಸ್ ಪಕ್ಷಕ್ಕೂ ಮುಜುಗರವನ್ನುಂಟು ಮಾಡುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಚುನಾವಣೆ ಎದುರಿಸಿ ಶಾಸಕರಾಗಿ ಆಯ್ಕೆಯಾಗಿ, ಆನಂತರ ಮೈತ್ರಿಯ ಕಾರಣಕ್ಕೆ ಮುಖ್ಯಮಂತ್ರಿಯೂ ಆಗಿರುವ ವ್ಯಕ್ತಿ, ‘‘ತಾನು ಸಿಎಂ ಆಗಿರುವುದು ದೇವರ ಅನುಗ್ರಹದಿಂದ’’ ಎಂದು ಪದೇ ಪದೇ ಹೇಳುವುದು, ತಮಗೆ ಬೆಂಬಲವಾಗಿ ನಿಂತಿರುವ ಶಾಸಕರನ್ನು, ಚುನಾಯಿಸಿದ ರಾಜ್ಯದ ಜನರಿಗೆ ಮಾಡುವ ಅಪಮಾನವಲ್ಲವೇ? ಮುಖ್ಯಮಂತ್ರಿ ಮತ್ತವರ ಕುಟುಂಬ ವರ್ಗದವರಲ್ಲಿ ಬೇರೂರಿರುವ ಅಪರಿಮಿತ ದೈವ ಭಕ್ತಿ, ತಮ್ಮನ್ನು ಜನನಾಯಕನಾಗಿ ನೋಡಲು ಅಪೇಕ್ಷಿಸುತ್ತಿರುವ ಜನಸಮುದಾಯವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತೆ ಪರಿಗಣಿಸುವಷ್ಟು ಅತಿರೇಕಕ್ಕೆ ಹೋಗುವುದು ವಿಪರ್ಯಾಸವೇ ಸರಿ.
ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆಗಳನ್ನು ಅಧಿಕಾರಕ್ಕೇರಿದ ನಂತರ ಈಡೇರಿಸಬೇಕಿರುವುದು ನೈತಿಕ ನಡವಳಿಕೆ ಅಲ್ಲವೇ? ರೈತ ಸಮುದಾಯದ ಬೆಂಬಲ ದಕ್ಕಿಸಿಕೊಳ್ಳುವ ಸಲುವಾಗಿ ತಾವು ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸುವ ಮುನ್ನ ಅದರ ಸಾಧಕ ಬಾಧಕಗಳ ಕುರಿತು ಪರಾಮರ್ಶಿಸಿ, ತಮಗೆ ತಾವೇ ಕೇಳಿಕೊಳ್ಳಬೇಕಿದ್ದ ಕೆಲ ಮೂಲಭೂತ ಪ್ರಶ್ನೆಗಳನ್ನು ಇದೀಗ ತಾವು ನೀಡಿದ ಆಶ್ವಾಸನೆಗೆ ಬದ್ಧರಾಗಿ ಎಂದು ಆಗ್ರಹಿಸುವವರೆಡೆಗೆ ತೂರಿ ಬಿಡುತ್ತಿರುವುದು ನಾಯಕತ್ವದ ಲಕ್ಷಣವೇ?
ತಾವೇ ಸ್ವತಃ ಬಡಿಗೆ ಕೊಟ್ಟು, ಕುಂಟು ನೆಪ ಹೇಳಿದರೆ ಬಡಿಯಿರಿ ಎಂಬ ಸಂದೇಶ ರವಾನಿಸಿ, ಈಗ ಅದರಿಂದ ಹೊರ ಬರಲೂ ಸಾಧ್ಯವಾಗದೆ, ಪೂರ್ಣ ಪ್ರಮಾಣದಲ್ಲಿ ಸಾಲ ಮನ್ನಾ ಮಾಡಲೂ ಆಗದೆ ತ್ರಿಶಂಕು ಸ್ಥಿತಿ ತಲುಪಿ, ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆ ನೆನಪಿಸುವವರ ಮೇಲೆ ಅಸಹನೆ ಹೊರ ಹಾಕುವುದು ಬೂಟಾಟಿಕೆಯ ಬಹಿರಂಗ ಪ್ರದರ್ಶನವೆಂಬಂತೆ ಭಾಸವಾಗುವುದಿಲ್ಲವೇ?
ಒಂದು ವೇಳೆ ಸಂಪೂರ್ಣ ಸಾಲ ಮನ್ನಾ ಅಸಾಧ್ಯವೆನ್ನುವುದು ತಮಗೆ ಈಗಾಗಲೇ ಮನದಟ್ಟಾಗಿದ್ದರೆ, ಸಾಲ ಮನ್ನಾದ ಆಚೆಗೂ ರೈತರ ಸಂಕಷ್ಟಗಳನ್ನು ಪರಿಹರಿಸಲು ಇರುವ ಮಾರ್ಗೋಪಾಯಗಳನ್ನು ಅವಲೋಕಿಸಿ, ರೈತರ ಬವಣೆ ನೀಗಲು ತಮ್ಮ ಸರಕಾರ ಜಾರಿಗೆ ತರಲಿರುವ ಯೋಜನೆಗಳ ಕುರಿತಾದರೂ ತಿಳಿವಳಿಕೆ ನೀಡಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಬಾರದೆ? ಸಾಲ ಮನ್ನಾದ ಆಚೆಗೂ ಸರಕಾರ ಚಲಿಸಬೇಕಲ್ಲವೇ?
ಬಜೆಟ್ ಮಂಡನೆ ನಂತರ ಉದ್ಭವಿಸಿದ ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ಕುರಿತ ಅಪಸ್ವರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿರ್ವಹಿಸಿದ ರೀತಿ ಆಘಾತಕಾರಿಯಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಸ್ಥಾನದಲ್ಲಿ ತಾನಿದ್ದೇನೆ ಎನ್ನುವ ಎಚ್ಚರದ ಪ್ರಜ್ಞೆಯೇ ತನ್ನಲ್ಲಿಲ್ಲವೆಂಬಂತೆ ವರ್ತಿಸಿದ ಅವರು, ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಹ ಮಾತುಗಳನ್ನೇ ಆಡಿದರು. ಕೇಂದ್ರ ಸರಕಾರದ ಹಿಂದಿ ಹೇರಿಕೆ ಧೋರಣೆಗೆ ಪರ್ಯಾಯವಾಗಿ ಕನ್ನಡ ಅಸ್ಮಿತೆಯ ಅಸ್ತ್ರವನ್ನು ಪ್ರಯೋಗಿಸಬೇಕಿದ್ದವರೇ, ನುಡಿಯ ಆಧಾರದಲ್ಲಿ ಒಂದಾದ ನಾಡೊಂದನ್ನು ಒಡೆಯಲು ಹೊರಡುವವರ ಕೈಗೆ ಅಸ್ತ್ರಗಳನ್ನು ದಯಪಾಲಿಸಿದ್ದು ಹೊಣೆಗೇಡಿತನವಲ್ಲವೇ?
‘‘ಜನರ ಸಂಕಷ್ಟಗಳನ್ನು ಪರಿಹರಿಸುವ ಸಲುವಾಗಿ ತಾನು ಎಲ್ಲ ರೀತಿಯ ನೋವನ್ನೂ ನುಂಗಿಕೊಳ್ಳುತ್ತಿದ್ದೇನೆ’’ ಎಂದು ಒಂದೆಡೆ ಭಾವನಾತ್ಮಕವಾಗಿ ಮಾತನಾಡುತ್ತ, ಮತ್ತೊಂದೆಡೆ ಮುಖ್ಯಮಂತ್ರಿಯಾಗಿ ತಾವು ನಿರ್ವಹಿಸಬೇಕಿರುವ ಹೊಣೆಗಾರಿಕೆಯನ್ನು ಮನದಟ್ಟು ಮಾಡಿಕೊಡಲು ಯಾರಾದರೂ ಮುಂದಾದರೆ ಅವರ ಮೇಲೆ ಹರಿಹಾಯುವುದು ಯಾವ ಸಂದೇಶ ರವಾನಿಸುತ್ತದೆ?
ಮುಖ್ಯಮಂತ್ರಿಗಿರುವ ಜನಪರ ಕಾಳಜಿ ಅವರ ಕೆಲಸದ ಮೂಲಕ ಜನಸಾಮಾನ್ಯರ ಅರಿವಿಗೆ ನಿಲುಕಬೇಕೇ ಹೊರತು, ಆತ್ಮಪ್ರಶಂಸೆಯ ಮಾತುಗಳ ಮೂಲಕ ಖಂಡಿತ ಅಲ್ಲ. ಉದ್ದೇಶ ಒಳ್ಳೆಯದೇ ಇದ್ದರೂ, ಅದರ ಅನುಷ್ಠಾನಕ್ಕೆ ಇರುವ ಅಡೆತಡೆಗಳ ಕುರಿತ ಅರಿವೂ ನಾಯಕ ನಿಗಿರಬೇಕಾಗುತ್ತದೆ. ಇತರರೆಡೆಗೆ ಬೆಟ್ಟು ಮಾಡುತ್ತಲೇ ಎಷ್ಟು ಕಾಲ ನೂಕಲು ಸಾಧ್ಯ?
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒಲಿದಿರುವ ಮುಖ್ಯಮಂತ್ರಿ ಪಟ್ಟವನ್ನು, ಜೆಡಿಎಸ್ ಪಕ್ಷದ ಬಲವರ್ಧನೆಗೆ ಸಿಕ್ಕಿರುವ ಕಡೆಯ ಅವಕಾಶವೆಂದು ಭಾವಿಸಲು ಒಂದಿಷ್ಟು ಸಕಾರಣಗಳಿವೆ. ರಾಜ್ಯದ ಹಿತದೃಷ್ಟಿಯಿಂದಲೂ ಪ್ರಾದೇಶಿಕ ಪಕ್ಷವೊಂದರ ಉಳಿವು ಅಪೇಕ್ಷಣೀಯವೇ. ಆದರೆ, ಕೌಟುಂಬಿಕ ವ್ಯಾಪ್ತಿಯಿಂದ ಹೊರ ಬರಲು ಬಯಸದ ಆ ಪಕ್ಷದ ಅಧಿನಾಯಕರ ಧೋರಣೆ ಗಮನಿಸಿದರೆ ಪಕ್ಷದ ಭವಿಷ್ಯದ ಕುರಿತು ಆಶಾಭಾವ ಹೊಂದುವುದು ತಿರುಕನ ಕನಸಿನಂತೆ ಭಾಸವಾಗುತ್ತಿದೆ. ಪಕ್ಷಕ್ಕಾಗಿ ದುಡಿದವರನ್ನು ಗೌರವಿಸುವ ಕನಿಷ್ಠ ಸೌಜನ್ಯವೂ ಇರದ, ಫ್ಯೂಡಲ್ ಮನಸ್ಥಿತಿಯಿಂದ ಹೊರ ಬಾರದ ಕುಟುಂಬದ ಮರಿ ಕುಡಿಗಳಿಗೆ ಪ್ರಜ್ವಲಿಸಲು ವೇದಿಕೆ ಅಣಿಗೊಳಿಸುವ ಉಮೇದಿನಲ್ಲಿ ರಾಜ್ಯದ ಅಸ್ಮಿತೆಯನ್ನು ಆವಾಹಿಸಿಕೊಳ್ಳುವ ಅವಕಾಶವನ್ನು ಜೆಡಿಎಸ್ ಮತ್ತೊಮ್ಮೆ ಕೈ ಚೆಲ್ಲುತ್ತಿರುವಂತೆ ಗೋಚರಿಸುತ್ತಿದೆ. ತಮ್ಮ ಪಕ್ಷದ ಅವನತಿಗೂ ಬಹುಶಃ ಜನರನ್ನು ಹೊಣೆಯಾಗಿಸದೆ, ತಾವು ಇನ್ನಿಲ್ಲದಂತೆ ನಂಬುವ ದೇವರನ್ನೇ ದೂಷಿಸುವರೇನೊ!
ಇದುವರೆಗೂ ಎಸಗಿರುವ ಸ್ವಯಂಕೃತ ಅಪರಾಧಗಳಿಗೆ ಕಾರಣಗಳನ್ನು ಮತ್ತೆಲ್ಲೋ ಹುಡುಕುವ ಬದಲಿಗೆ, ಆತ್ಮವಿಮರ್ಶೆ ಮಾಡಿಕೊಳ್ಳುವ ಮೂಲಕ ಈ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ವಿವೇಚನೆಯನ್ನು ಕುಮಾರಸ್ವಾಮಿ ಅವರು ಮೈಗೂಡಿಸಿಕೊಳ್ಳಬೇಕಿದೆ. ಮುಖ್ಯಮಂತ್ರಿ ಹುದ್ದೆಗಿರುವ ಹೊಣೆಗಾರಿಕೆಯನ್ನು ನೆಪಗಳ ಅಡಿಯಲ್ಲಿ ಹುದುಗಿಸಲಾಗದು.
ತಮ್ಮ ನಾಯಕನ ಬಗೆಗೆ ಜನ ಅಭಿಮಾನ ಹೊಂದಿರಬೇಕೆ ಹೊರತು ಅನುಕಂಪವನ್ನಲ್ಲ. ಅನುಕಂಪ ಗಳಿಸಿಕೊಳ್ಳುವುದು ಮುಖ್ಯಮಂತ್ರಿಯ ಸ್ಥಾನದಲ್ಲಿ ಆಸೀನರಾಗಿರುವ ಜನನಾಯಕನ ಆದ್ಯತೆಯಾಗಬೇಕೆ? ತಾವು ಮುನ್ನಡೆಸುತ್ತಿರುವ ಸರಕಾರವನ್ನು ಸುತ್ತುವರಿದಿರುವ ಅನಿಶ್ಚಿತತೆ ಹಾಗೂ ಅಸ್ಪಷ್ಟತೆಯನ್ನು ತೊಡೆದು ಹಾಕಬೇಕಿರುವವರೇ, ಗೋಜಲುಗಳ ಮುಸುಕು ಹೊದಿಸುವುದು ದೌರ್ಬಲ್ಯವಲ್ಲದೆ ಮತ್ತೇನೂ ಅಲ್ಲ.