ದೇವರ ಫೋಟೋ ಯಾಕೆ ಇಟ್ಟಿಲ್ಲ?
ಪತ್ರಕರ್ತ ಎಂಜಲು ಕಾಸಿಯ ಮನೆಗೆ ರಾತ್ರೋ ರಾತ್ರಿ ಪೊಲೀಸರು ದಾಳಿ ಮಾಡಿದರು.
‘‘ಸಾರ್...ಯಾಕೆ ಸಾರ್? ಏನಾಯಿತು ಸಾರ್?’’ ಕಾಸಿ ಕಂಗಾಲಾಗಿ ಕೇಳಿದ.
‘‘ಮಾಡೋದೆಲ್ಲ ಮಾಡಿ....ಏನಾಯಿತು ಎಂದು ಕೇಳು ತ್ತೀರಾ?’’ ಪೊಲೀಸ್ ಅಧಿಕಾರಿ ನಿಗೂಢ ಭಾಷೆಯಲ್ಲಿ ಉತ್ತರಿಸಿ ‘‘ತಪಾಸಣೆ ಮುಂದುವರಿಸಿರಿ...’’ ಎಂದು ಆದೇಶ ನೀಡಿದ.
ಪೊಲೀಸರೆಲ್ಲ ಇದ್ದ ಬಿದ್ದದ್ದನ್ನೆಲ್ಲ ಜಾಲಾಡಿಸ ತೊಡಗಿ ದರು. ಕಪಾಟಿನಲ್ಲಿದ್ದ ಹಳೆ ಪುಸ್ತಕ, ಪತ್ರಿಕೆ ಇತ್ಯಾದಿಗಳನ್ನೆಲ್ಲ ಎಳೆದು ಹಾಕತೊಡಗಿದರು.
‘‘ಸಾರ್...ತಿಂಗಳ ಕೊನೆಯಲ್ಲಿ ರದ್ದಿಗೆ ಕೊಡಬೇಕು ಎಂದು ಕಟ್ಟಿಟ್ಟದ್ದು ಸಾರ್...ನಾಳೆ ಗುಜರಿಯವ ಬರ್ತಾನೆ ಸಾರ್...’’ ಕಾಸಿ ಅಂಗಲಾಚ ತೊಡಗಿದ.
ಪೊಲೀಸ್ ಅಧಿಕಾರಿ ಇಡೀ ಮನೆಯನ್ನೊಮ್ಮೆ ಅವಲೋಕಿಸಿ ಕೇಳಿದ ‘‘ಏನ್ರೀ...ಕಾಸಿಯವ್ರೇ...ಮನೆಯಲ್ಲಿ ದೇವರ ಕೋಣೆಯೇ ಇಲ್ಲ?’’
‘‘ಸಾರ್...ನಾನು ನನ್ನ ಹೆಂಡ್ತಿ ಮಲಗೋದಕ್ಕೆ ಇಲ್ಲಿ ಸರಿಯಾಗಿ ಕೋಣೆಯಿಲ್ಲ....ಇನ್ನು ದೇವರಿಗೆ ಒಂದು ಕೋಣೆಯನ್ನು ಎಲ್ಲಿಂದ ತರ್ಲಿ ಸಾರ್...?’’ ಕಾಸಿ ಅಸಹಾಯಕನಾಗಿ ಕೇಳಿದ.
‘‘ಸರಿ, ಒಂದೇ ಒಂದು ದೇವರ ಫೋಟೊ ಇಲ್ಲ....ಅದ್ಯಾಕೆ?’’ ಅದೇನೋ ಪತ್ತೆ ಹಚ್ಚಿದವನಂತೆ ಪೊಲೀಸ್ ಅಧಿಕಾರಿ ಕೇಳಿದ.
ಕಾಸಿಗೆ ಪೊಲೀಸರು ಯಾಕೆ ಕೇಳುತ್ತಿದ್ದಾರೆ ಎನ್ನುವುದು ಅರ್ಥವಾಗಲಿಲ್ಲ ‘‘ಸಾರ್...ನಮ್ಮ ಮನೆಯಲ್ಲಿ ದೇವರ ಫೋಟೊ ಹಾಕುವುದಿಲ್ಲ ಸಾರ್...’’ ವಿವರಿಸಿದ.
‘‘ಓಹೋ...ಯಾಕೋ?’’ ಅಧಿಕಾರಿ ವ್ಯಂಗ್ಯದಿಂದ ಕೇಳಿದ.
‘‘ನಾವು ಹಾಕುವುದಿಲ್ಲ ಅಷ್ಟೇ...’’ ಕಾಸಿ ಸ್ಪಷ್ಟಪಡಿಸಿದ.
‘‘ಏನ್ರೀ... ಎದುರುತ್ತರ ನೀಡುತ್ತೀರಾ...? ಯಾಕೆ ಹಾಕುವುದಿಲ್ಲ? ಎನ್ನುವುದಕ್ಕೆ ನಮಗೆ ಸ್ಪಷ್ಟ ಉತ್ತರ ನೀಡದೇ ಇದ್ದರೆ ನಾವು ಪ್ರಕರಣ ದಾಖಲಿಸಬೇಕಾಗುತ್ತೆ’’ ಪೊಲೀಸ್ ಅಧಿಕಾರಿ ಗಂಭೀರವಾಗಿ ಉತ್ತರಿಸಿದಂತೆ, ಕಾಸಿಯ ತೊಡೆಯ ಸಂಧಿಯಲ್ಲಿ ಸಣ್ಣಗೆ ನಡುಕ ಹುಟ್ಟಿತು. ಇದೊಂದು ಗಂಭೀರ ಅಪರಾಧ ಎಂದು ಗೊತ್ತಿದ್ದರೆ ಕಾಸಿ ಖಂಡಿತವಾಗಿಯೂ ಮನೆ ತುಂಬಾ ದೇವರ ಫೋಟೊಗಳನ್ನು ಅಂಟಿಸಿ ಬಿಡುತ್ತಿದ್ದ.
‘‘ಸಾರ್...ಭಾವನೆಗಳಿಗೆ ಧಕ್ಕೆಯಾಗುತ್ತೆ ಅಂತ ಹಾಕಲಿಲ್ಲ....’’ ಕಾಸಿ ಉತ್ತರಿಸಲು ಪ್ರಯತ್ನಿಸಿದ.
‘‘ಏನ್ರೀ...ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗತ್ತೆ ಎಂದು ನೀವು ಪೋಟೊ ಹಾಕಿಲ್ಲ ಎಂದು ಹೇಳಲು ನಾಚಿಕೆಯಾಗುವುದಿಲ್ಲವೆ?’’ ಅಧಿಕಾರಿ ಅಬ್ಬರಿಸಿದ.
‘‘ಹಾಗಲ್ಲ ಸಾರ್...ದೇವರುಗಳ ಭಾವನೆಗಳಿಗೆ ಧಕ್ಕೆಯಾಗುತ್ತೆ ಎಂದು ನಾವು ದೇವರ ಫೋಟೊ ಹಾಕಲಿಲ್ಲ....’’ ಕಾಸಿ ಅಂಜುತ್ತಾ ಹೇಳಿದ.
ಈಗ ಕಕ್ಕಾಬಿಕ್ಕಿಯಾಗುವ ಸರದಿ ಪೊಲೀಸ್ ಅಧಿಕಾರಿಗಳದ್ದು. ‘‘ಅದು ಹೇಗೆ ದೇವರ ಫೋಟೋ ಹಾಕಿದರೆ ದೇವರ ಭಾವನೆಗಳಿಗೆ ಧಕ್ಕೆಯಾಗು ತ್ತದೆ?’’ ಅಧಿಕಾರಿ ಕೇಳಿದ.
‘‘ಸಾರ್... ರಾಮನ ಫೋಟೋ ಹಾಕಿ ಮಾಲೆ ಹಾಕಿದರೆ, ಕೃಷ್ಣನಿಗೂ ಅವನ ಭಕ್ತರ ಭಾವನೆಗಳಿಗೂ ಧಕ್ಕೆ ಯಾಗುತ್ತೆ. ಶಿವನ ಫೋಟೊ ಹಾಕಿ ಅದಕ್ಕೆ ಮಾಲೆ ಹಾಕಿದರೆ ವಿಷ್ಣುವಿನ ಭಕ್ತರ ಭಾವನೆಗಳಿಗೆ ಧಕ್ಕೆಯಾಗತ್ತೆ. ಇದೇ ರೀತಿ ಗಣಪತಿಯ ಫೋಟೊ ಹಾಕಿದರೆ ಸುಬ್ರಹ್ಮಣ್ಯನ ಭಕ್ತರಿಗೆ, ಆ ದೇವರ ಫೋಟೊ ಹಾಕಿದರೆ ಈ ದೇವರ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತೆ ಎಂದು, ವಿವಾದವೇ ಬೇಡ ಎಂದು ಫೋಟೊ ಹಾಕಿಲ್ಲ ಸಾರ್....’’
ಅಧಿಕಾರಿಗೆ ಸರಿ ಅನ್ನಿಸಿತು. ಸುಮ್ಮನೆ ಭಾವನೆಗಳಿಗೆ ಧಕ್ಕೆ ಮಾಡಿ, ಕೋಮುಸೌಹಾರ್ದವನ್ನು ಕೆಡಿಸಿದರೆ ಇಲಾಖೆಗೇ ತಲೆನೋವು.
ಅಷ್ಟರಲ್ಲೇ ಪೊಲೀಸ್ ಪೇದೆಯೊಬ್ಬ ‘‘ಸಾರ್....ಸಿಕ್ಕಿತು...ಸಿಕ್ಕಿತು...’’ ಎಂದು ಚೀರಿದ.
‘‘ಕೈಯಲ್ಲಿ ಮುಟ್ಬೇಡಿ...ಸಾಕ್ಷ ನಾಶ ಆದೀತು...’’ ಅಧಿಕಾರಿ ತಕ್ಷಣ ಎಚ್ಚರಿಸಿದರು.
ಪೊಲೀಸರು ಕೊನೆಗೂ ‘ಸಿಕ್ಕಿದ್ದನ್ನು’ ತಂದರು.
‘‘ಏನ್ರೀ ಅದು...’’ ಅಧಿಕಾರಿ ಕೇಳಿದರು.
‘‘ಕೆಂಪು ಟವಲ್ ಸಾರ್?’’ ಪೇದೆ ಉತ್ತರಿಸಿದ.
‘‘ಓಹೋ...ಪತ್ರಕರ್ತರ ವೇಷದಲ್ಲಿ ಈ ಕೆಲಸ ಮಾಡು ತ್ತಿದ್ದೀರೇನ್ರೀ?’’ ಅಧಿಕಾರಿ ಕಾಸಿಯತ್ತ ತಿರುಗಿ ಅಬ್ಬರಿಸಿದ. ಕಾಸಿಗೆ ಅರ್ಥವಾಗಲಿಲ್ಲ. ಆ ಕೆಂಪು ಟವಲ್‌ನ್ನು ಆತ ಮೇಜು ಒರೆಸಲು ಬಳಸುತ್ತಿದ್ದ.
‘‘ಸಾರ್...ಅದು ಬರೇ ಟವೆಲ್ ಸಾರ್...’’ ಕಾಸಿ ಅಂಗಲಾಚಿದ.
‘‘ಕೆಂಪು ಟವೆಲ್‌ನ್ನೇ ಯಾಕೆ ಕೊಂಡು ಕೊಂಡಿರಿ...ಉದಾಹರಣೆಗೆ ಕೇಸರಿ ಟವೆಲ್ ಕೊಂಡು ಕೊಳ್ಳಬಹುದಿತ್ತಲ್ಲ?’’ ಅಧಿಕಾರಿ ಮರು ಪ್ರಶ್ನಿಸಿದ.
ಕಾಸಿ ಇಕ್ಕಟ್ಟಿನಲ್ಲಿ ಸಿಲುಕಿ ಕೊಂಡ. ತಕ್ಷಣ ಮೆದುಳು ಬಳಸಿ ಉತ್ತರಿಸಿದ ‘‘ಸಾರ್...ಕೇಸರಿ ಟವೆಲ್‌ನ್ನು ಮೇಜಿನ ಧೂಳು ಒರೆಸಲು ಬಳಸಿದರೆ ಭಾವನೆಗ ಳಿಗೆ ಧಕ್ಕೆಯಾಗುತ್ತಲ್ಲ...ಅದಕ್ಕೆ ಕೆಂಪುಟವಲ್‌ನ್ನು ಬಳಸಿದೆ...’’
ಅಧಿಕಾರಿ ತಲೆ ತುರಿಸತೊ ಡಗಿದ. ಏನು ಹೇಳಿದರೂ ಈತನಲ್ಲಿ ಉತ್ತರ ಇದೆ.
‘‘ಸರಿ, ಹಳದಿ, ಹಸಿರು ಟವಲ್ ಬಳಸಬಹುದಿತ್ತಲ್ಲ.... ?’’ ಅಧಿಕಾರಿ ಕೇಳಿದ.
‘‘ಅದರಿಂದ ಕೂಡ ಭಾವನೆಗಳಿಗೆ ಧಕ್ಕೆಯಾಗುತ್ತದೆ ಸಾರ್...ಹಸಿರು ಟವಲ್‌ನಲ್ಲಿ ಉಜ್ಜಿದರೆ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಭಯವಾಯಿತು. ಆದರೆ ಕಮ್ಯುನಿಸ್ಟರ ಭಾವನೆಗಳಿಗೆ ಧಕ್ಕೆಯಾದರೆ ಮೋದಿ ಯವರಿಗೆ ಖುಷಿಯಾಗುತ್ತೆ ಎಂದು ಕೆಂಪು ಟವೆಲ್ ಬಳಸುತ್ತಿದ್ದೆ....’’ ಉತ್ತರಿಸಿದವನೇ, ಬದುಕಿದೆಯ ಬಡಜೀವ ಎಂದು ನಿಟ್ಟುಸಿರು ಬಿಟ್ಟ.
ಎಲ್ಲ ತಪಾಸಣೆಯ ಬಳಿಕ ಸಿಕ್ಕಿದ ಸಾಕ್ಷಾಧಾರಗಳ ಬಳಿಕ ಪೊಲೀಸ್ ಅಧಿಕಾರಿ ಕಾಸಿಯ ಮೇಲೆ ‘ಅರ್ಬನ್ ನಕ್ಸಲ್’ ಎಂದು ಪ್ರಕರಣ ದಾಖಲಿಸಿ ಪೊಲೀಸ್ ಠಾಣೆಗೆ ಒಯ್ಯಲು ಹೊರಟ.
‘‘ನಾನು ಮಾಡಿದ ತಪ್ಪಾದರೂ ಏನು ಹೇಳಿ ಸಾರ್?’’ ಕಾಸಿ ಮತ್ತೆ ಅಂಗಲಾಚಿದ.
‘‘ನೋಡ್ರೀ...ಅಷ್ಟು ಪುಸ್ತಕ ಇಟ್ಕೊಂಡಿದ್ದೀರಿ, ಒಂದಾದರೂ ಎಸ್. ಎಲ್. ಭೈರಪ್ಪರ ಪುಸ್ತಕ ಇಟ್ಕೊಂಡಿ ದ್ದೀರಾ? ನಿಮ್ಮ ಕಪಾಟಿನಲ್ಲಿ ಭಗವದ್ಗೀತೆ ಪುಸ್ತಕ ಇಲ್ಲ. ಗೋಡೆಯಲ್ಲಿ ಫೋಟೊ ಇಲ್ಲ. ಆದುದರಿಂದ ನೀವು ನಾಸ್ತಿಕರು ಎಂದು ಸಾಬೀತಾಗುತ್ತದೆ. ನಾಸ್ತಿಕರಿಗೂ ನಕ್ಸಲರಿಗೂ ಸಂಬಂಧವಿರುವುದು ಈಗಾಗಲೇ ಸಾಬೀತಾ ಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮನ್ನು ಅರ್ಬನ್ ನಕ್ಸಲ್ ಎಂದು ಗುರುತಿಸಲಾಗಿದೆ. ಮೋದಿಯ ಹತ್ಯೆ ಸಂಚಿನ ಕುರಿತಂತೆ ಪತ್ರವೊಂದು ಸಿಕ್ಕಿದೆ. ಅದರ ಹಸ್ತಾಕ್ಷರಕ್ಕೂ ನಿಮ್ಮ ಹಸ್ತಾಕ್ಷರಕ್ಕೂ ಇರುವ ಹೋಲಿಕೆಯನ್ನು ತನಿಖೆ ಮಾಡಬೇಕಾಗಿದೆ....’’ ಎನ್ನುತ್ತಾ ಕಾಸಿಯನ್ನು ಜೀಪಿಗೇರಿಸಿದರು.
ಪೊಲೀಸ್ ಠಾಣೆಯಲ್ಲಿರುವಾಗಲೇ ಕಾಸಿಗೆ ಸಂಪಾದಕರಿಂದ ಪೋನ್ ಬಂತು ‘‘ಏನ್ರೀ...ಕಾಸಿಯವ್ರೇ..,. ಅದ್ಯಾರೋ ಕುಖ್ಯಾತ ಅರ್ಬನ್ ನಕ್ಸಲರನ್ನು ಹಿಡಿದಿದ್ದಾರಂತೆ. ಮೋದಿ ಹತ್ಯೆಗೆ ಬಳಸಿದ ಮಾರಕ ಅಸ್ತ್ರಗಳು ಪತ್ತೆಯಾಗಿದೆಯಂತೆ....ತಕ್ಷಣ ವಿವರವಾಗಿ ಸ್ಟೋರಿ ಮಾಡಿ ಕಳುಹಿಸಿ...’’ ಆ ಕಡೆಯಿಂದ ಅಬ್ಬರಿಸಿದರು.
‘‘ಸಾರ್..ಅವರು ಬಂಧಿಸಿದ ಅರ್ಬನ್ ನಕ್ಸಲ್ ನಾನೇ ಸಾರ್. ದಯವಿಟ್ಟು ನನ್ನನ್ನು ಬಂದು ಬಿಡಿಸಿ ಸಾರ್...’’ ಎನ್ನುತ್ತಾ ಕಾಸಿ ಗಳಗಳನೆ ಫೋನಲ್ಲೇ ಅಳತೊಡಗಿದ.