ಮಂಗಳೂರು: ವೀಕೆಂಡ್ ರಾತ್ರಿ ಯುವಕ ಯುವತಿಯರ ಬೈಕ್ ವೀಲಿಂಗ್
ಮೋಜುಮಸ್ತಿಯಿಂದ ಎಡವಟ್ಟು; ಸಾರ್ವಜನಿಕರ ಆಕ್ಷೇಪ
ಮಂಗಳೂರು, ಸೆ.2: ವೀಕೆಂಡ್ನಲ್ಲಿ ರಾತ್ರಿ ಹೊತ್ತು ಮೀರುತ್ತಿದ್ದಂತೆ ನಗರದ ರಸ್ತೆಗಳಲ್ಲಿ ಯುವಕ ಯುವತಿಯರ ಬೈಕ್ ವೀಲಿಂಗ್, ಸುತ್ತಾಟ, ಚೀರಾಟ ಜೋರಾಗಿರುತ್ತದೆ. ಅದರಲ್ಲೂ ಶನಿವಾರವಂತೂ ಕೆಲವು ರಸ್ತೆಗಳಲ್ಲಿ ಯುವಕ-ಯುವತಿಯರು ತಮ್ಮದೇ ಲೋಕ ಎಂಬಂತೆ ವೀಕೆಂಡ್ ಮೋಜಿನಲ್ಲಿರುತ್ತಾರೆ. ಈ ಮೋಜು ಮಸ್ತಿಯೇ ಕೆಲವೊಮ್ಮೆ ಎಡವಟ್ಟಿಗೆ ಕಾರಣವಾಗುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನ ಶನಿವಾರ ಪಿವಿಎಸ್ ಬಳಿ ನಡೆದ ಘಟನೆ.
ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ದ್ವಿಚಕ್ರ ವಾಹನವನ್ನು ಯದ್ವಾತದ್ವಾ ಸವಾರಿ ಮಾಡಿಕೊಂಡು ನಗರದ ಎಂ.ಜಿ. ರಸ್ತೆಯಲ್ಲಿ ಸಾಗಿದ್ದಾಳೆ. ಈ ಸಂದರ್ಭ ರಿಕ್ಷಾ ಸೇರಿದಂತೆ ಹಲವು ವಾಹನಗಳನ್ನು ಓವರ್ಟೇಕ್ ಮಾಡುವ ಭರದಲ್ಲಿ ಯುವತಿ ಇಡೀ ರಸ್ತೆಯಲ್ಲಿ ಸಂಚರಿಸುತ್ತಿದ್ದಳು. ಇದರಿಂದ ಅನ್ಯ ವಾಹನ ಸವಾರರಿಗೂ ಅಡಚರಣೆಯಾಗುತ್ತಿತ್ತು. ಇದನ್ನು ಗಮನಿಸಿದ ರಿಕ್ಷಾ ಚಾಲಕರೊಬ್ಬರು ಪಿವಿಎಸ್-ನವಭಾರತ್ ಮಧ್ಯೆ ಆಕೆಯ ಸ್ಕೂಟರ್ನ್ನು ಓವರ್ಟೇಕ್ ಮಾಡಿ ಆಕೆಯ ಗಾಡಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾಳೆ. ಅದರಂತೆ ಆಕೆ ಗಾಡಿ ನಿಲ್ಲಿಸಿದ ಬಳಿಕ ಸಾರ್ವಜನಿಕರು ಒಟ್ಟಾಗಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯುವತಿಯ ರಂಪಾಟದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದಾಗ ಗಂಭೀರತೆ ಅರಿತ ಯುವತಿ ದಂಗಾಗಿದ್ದಾಳೆ. ಆನಂತರ ಸ್ಥಳೀಯರು ಪೊಲೀಸರನ್ನು ಕರೆಸಿ ದೂರು ನೀಡಲು ಮುಂದಾದಾಗ, ದಯವಿಟ್ಟು ಪೊಲೀಸರಿಗೆ ದೂರು ನೀಡಬೇಡಿ ನನ್ನನ್ನು ಕ್ಷಮಿಸಿ ಎಂದು ಕೇಳಿದ್ದಾಳೆ.
ಯುವತಿಯ ಗಾಡಿಯಲ್ಲಿದ್ದ ಬ್ಯಾಗ್ನಲ್ಲಿ ಹಣದ ಕಂತೆಗಳಿತ್ತು. ಈ ಸಂದರ್ಭ ಆಕೆ ನಿಮಗೇನು ಬೇಕು ಹೇಳಿ ? ನಾನು ಕೊಡುತ್ತೇನೆ ಎಂದು ಹೇಳಿ ಹಣಗಳನ್ನು ತೋರಿಸಿ ನಿಮಗೆಷ್ಟು ಹಣ ಬೇಕು ಎಂದು ಕೇಳಿದ್ದಾಳೆ. ಇದು ಸಾರ್ವಜನಿಕರ ಮತ್ತಷ್ಟು ಕೋಪಕ್ಕೆ ಕಾರಣವಾಯಿತು.
ನಡುರಸ್ತೆಯಲ್ಲೇ ಯುವತಿ ರಂಪಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ತುಂಬಾ ಹೊತ್ತು ಕಾದರೂ ಪೊಲೀಸರು ಮಾತ್ರ ಬರಲೇ ಇಲ್ಲ. ಯುವತಿ ಮಾತ್ರ ಮುಂದೆ ಆಪತ್ತು ಎದುರಾಗಬಹುದೆಂದು ತಿಳಿದು ಸ್ಕೂಟರ್ ಚಾಲನೆ ಮಾಡಿ ಎಸ್ಕೇಪ್ ಆಗಿದ್ದಾಳೆ.