ಸೆ.3: ದ.ಕ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟ
ಮಂಗಳೂರು, ಸೆ.2: ದ.ಕ.ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಗೆ ಆ.31ರಂದು ನಡೆದ ಚುನಾವಣೆಯ ಫಲಿತಾಂಶವು ಸೆ.3ರಂದು ಪ್ರಕಟಗೊಳ್ಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆಯು ಆರಂಭಗೊಳ್ಳಲಿದೆ. ಮಧ್ಯಾಹ್ನದ ವೇಳೆ ಫಲಿತಾಂಶದ ಚಿತ್ರಣ ಸ್ಪಷ್ಟಗೊಳ್ಳಲಿದೆ.
ಉಳ್ಳಾಲ ನಗರಸಭೆಯ ಮತ ಎಣಿಕೆಯು ಭಾರತ್ ಹೈಸ್ಕೂಲ್ ಉಳ್ಳಾಲ, ಪುತ್ತೂರು ನಗರಸಭೆಯ ಮತ ಎಣಿಕೆಯು ಪುತ್ತೂರು ತಾಲೂಕು ಕಚೇರಿ, ಬಂಟ್ವಾಳ ಪುರಸಭೆಯ ಮತ ಎಣಿಕೆಯು ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಡೆಯಲಿದೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಶೇ.68.50 ಮತದಾನವಾಗಿತ್ತು. 3 ಸ್ಥಳೀಯಾಡಳಿ ಸಂಸ್ಥೆಗಳ ಚುನಾವಣೆಯಲ್ಲಿ 1,17,979 ಮತದಾರರ ಪೈಕಿ 80,820 ಮಂದಿ ಮತದಾನಗೈದಿದ್ದರು. ಆ ಪೈಕಿ ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಶೇ.72.36 ಮತದಾನವಾಗಿತ್ತು. ಇಲ್ಲಿ 34,102 ಮತದಾರರ ಪೈಕಿ 24,676 ಮಂದಿ ಹಕ್ಕು ಚಲಾಯಿಸಿದ್ದರು. ಪುತ್ತೂರು ನಗರಸಭೆ ಚುನಾವಣೆಯಲ್ಲಿ ಶೇ.68.69 ಮತದಾನವಾಗಿತ್ತು. ಇಲ್ಲಿ 39,745 ಮತದಾರರ ಪೈಕಿ 27,299 ಮಂದಿ ಮತ ಚಲಾಯಿಸಿದ್ದರು. ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಶೇ.65.36 ಮತದಾನವಾಗಿತ್ತು.ಇಲ್ಲಿ 44,132 ಮತದಾರರ ಪೈಕಿ 28,845 ಮಂದಿ ಮತ ಚಲಾಯಿಸಿದ್ದರು.
89 ಸ್ಥಾನಕ್ಕೆ 250 ಅಭ್ಯರ್ಥಿಗಳು : ಉಳ್ಳಾಲದ 31 ವಾರ್ಡ್ಗಳಿಗೆ 102, ಪುತ್ತೂರಿನ 31 ವಾರ್ಡ್ಗಳಿಗೆ 77, ಬಂಟ್ವಾಳದ 27 ವಾರ್ಡ್ಗಳಿಗೆ 71 ಮಂದಿ ಹೀಗೆ 89 ವಾರ್ಡ್ಗಳಿಗೆ 250 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ದ.ಕ.ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇವಿಎಂ ಮತ ಯಂತ್ರ ಅಳವಡಿಸಲಾಗಿತ್ತು. ಅಲ್ಲದೆ ನೋಟಾ ಬಳಕೆಗೂ ಅವಕಾಶ ನೀಡಿದ ಕಾರಣ ಸ್ಥಳೀಯಾಡಳಿತ ಚುನಾವಣೆಯಲ್ಲಿ ನೋಟಾ ಬಳಕೆ ಎಷ್ಟರ ಪ್ರಮಾಣದಲ್ಲಿದೆ ಎಂಬುದು ಕೂಡಾ ಸ್ಪಷ್ಟಗೊಳ್ಳಲಿದೆ.