ಧರೆ ಹತ್ತಿ ಉರಿದಾಗ ಮೈ ಕಾಯಿಸಿಕೊಳ್ಳುತ್ತಿರುವ ಕೊಡಗಿನ ಪರಿಸರವಾದಿಗಳು
ಒಂದು ವೇಳೆ ಈ ಭೂ ವಿಜ್ಞಾನಿಗಳು ಯಾವುದೇ ಸ್ಥಳವನ್ನು ವಾಸಕ್ಕೆ ಯೋಗ್ಯವಲ್ಲವೆಂದು ಗುರುತಿಸಿದರೆ ಅಲ್ಲಿಗೆ ಈಗಿನಕ್ಕಿಂತಲೂ ಇಮ್ಮಡಿಯಷ್ಟು ಮಳೆ ಸುರಿದರೆ ಅದು ವಾಸಕ್ಕೆ ಅಯೋಗ್ಯ ಸ್ಥಳವಾಗುತ್ತದೆ. ಸಮಸ್ಯೆಯ ಮೂಲವನ್ನೇ ಕಡೆಗಣಿಸಿ ಮತ್ತೆಲ್ಲಿಗೋ ಬೊಟ್ಟು ಮಾಡಿ ಕೈ ತೊಳೆದುಕೊಳ್ಳುವುದಕ್ಕೆ ಆಷಾಢಭೂತಿತನವೆಂದು ಹೇಳಬೇಕಾಗುತ್ತದೆ. ಪ್ರಕೃತಿಯ ವಿಕೋಪಕ್ಕೆ ಮನುಷ್ಯನ ಕಾಣಿಕೆಯೂ ಇರಬಹುದು. ಆದರೆ ಪ್ರಕೃತಿ ವಿಕೋಪಕ್ಕೆ ಮನುಷ್ಯನೇ ಕಾರಣವೆನ್ನುವುದು ಮಾತ್ರ ಸಂಪೂರ್ಣ ಆತ್ಮ ವಂಚನೆಯ ಮಾತಾಗುತ್ತದೆ. ಮನುಷ್ಯ ಭೂಮಿಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ಮೊದಲೇ ಪ್ರಕೃತಿ ವಿಕೋಪ ಮೈತಾಳಿದ್ದುಂಟು.
ಇಡೀ ಕೇರಳ ರಾಜ್ಯ ಹಾಗೂ ಅದಕ್ಕಂಟಿಕೊಂಡಿರುವ ಕರ್ನಾಟಕದ ಕೊಡಗು ಜಿಲ್ಲೆ ಹಿಂದೆಂದೂ ಕಂಡರಿಯದ ಮಹಾ ಮಳೆಗೆ ತುತ್ತಾಗಿ ತತ್ತರಿಸಿಹೋಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಸಾವಿರಾರು ಮಂದಿ ಸಾವಿಗೆ ತುತ್ತಾಗಿದ್ದಾರೆ. ಅಕ್ಷರಶಃ ಲಕ್ಷಾಂತರ ಜನರು ತಮ್ಮ ಬದುಕನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಬದುಕಿದ್ದೂ ಸತ್ತವರಾಗಿದ್ದಾರೆ. ಇಂದು ಲಕ್ಷಾಂತರ ಜನ ಪ್ರವಾಹದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ ಅಂಥವರ ರಕ್ಷಣೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಕೇರಳ ಹಾಗೂ ಕರ್ನಾಟಕ ಎರಡೂ ಸರಕಾರಗಳು ಮಾನವೀಯತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಸಂದರ್ಭದಲ್ಲಿ ಇಡೀ ದೇಶದ ಜನ ಪ್ರಕೃತಿ ವಿಕೋಪಕ್ಕೆ ಸಿಕ್ಕು ತತ್ತರಿಸಿ ಹೋದ ನಿರ್ಗತಿಕರ ನೆರವಿಗೆ ನಿಂತು ಸರ್ವ ರೀತಿಯಲ್ಲಿ ಸಹಕರಿಸಲು ಮುಂದಾಗಿರುವ ದೃಶ್ಯ ಬೆರಗುಗೊಳಿಸುವಂತಹದ್ದು. ಮಾನವೀಯತೆಗೆ ಮೆರುಗು ನೀಡಿರುವಂತಹದ್ದು. ಜಾತಿ, ಧರ್ಮ ಪ್ರಾಂತಗಳೆಂಬ ಭೇದವಿಲ್ಲದೆ ಸರ್ವ ದಿಕ್ಕಿನಿಂದ ನೆರವುಗಳ ಮಹಾಪೂರವೇ ಹರಿದುಬಂದಿದೆ. ಬರುತ್ತಲೂ ಇದೆ.
ಜೈಲಿನಲ್ಲಿ ಕೊಳೆಯುತ್ತಿರುವ ಕೈದಿಗಳು, ಲೈಂಗಿಕ ಕಾರ್ಯಕರ್ತೆಯರಾದಿಯಾಗಿ ಎಲ್ಲರೂ ತಮ್ಮ ಕೈ ಬಾಯಿ ಕಟ್ಟಿ ಕೈಲಾದುದ್ದನ್ನು ಸಂತ್ರಸ್ತರ ಪರಿಹಾರಕ್ಕಾಗಿ ನೀಡುತ್ತಿರುವ ಸುಂದರ ದೃಶ್ಯ ಎಂಥವರನ್ನೂ ಬೆರಗುಗೊಳಿಸುತ್ತದೆ. ಈ ನಡುವೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾತ್ರ ರಾಜಕೀಯ ಮಾಡುತ್ತಾ, ಸಂತ್ರಸ ್ತಜನರ ಸಂಕಟವನ್ನು ಸಂಭ್ರಮಿಸುತ್ತಿರುವುದು ಜನಮಾನಸದಲ್ಲಿ ಬೆಳೆದು ನಿಂತಿರುವ ಮಾನವೀಯತೆಯನ್ನೇ ಅಣಕಿಸುವಂತಿದೆ. ದೇಶವಾಸಿಗಳಲ್ಲಿ ಇರುವ ಮಾನವೀಯತೆಯನ್ನು ಕಂಡು ಭಾರತದ ಶ್ರೇಷ್ಠ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿಗಳು ದೇಶ ನಿಮ್ಮ ಜೊತೆಯಿದೆಯೆಂದು ಹೇಳಿ ಸಂತ್ರಸ್ತರಲ್ಲಿ ಧೈರ್ಯ ತುಂಬುವುದರ ಮೂಲಕ ಎತ್ತರಕ್ಕೇರಿದ್ದು ಗಮನಾರ್ಹ.
ಹೀಗೆ ಕೇಂದ್ರ ಸರಕಾರವನ್ನು ಹೊರತುಪಡಿಸಿ ಇಡೀ ದೇಶವೇ ಕೇರಳ ಮತ್ತು ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾದ ಜನರ ಪ್ರಾಣರಕ್ಷಣೆ ಮತ್ತು ಮುಳುಗಿಹೋದ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದಕ್ಕೆ ಸಂಪೂರ್ಣವಾಗಿ ಮುಂದಾಗಿರುವ ಹೊತ್ತಿನಲ್ಲಿ ಪರಸರವಾದಿಗಳ ಸೋಗಿನಲ್ಲಿ ಅಂದರೆ ಪರಿಸರ ವಾದವನ್ನೇ ತಮ್ಮ ಐಷಾರಾಮಿ ಬದುಕಿನ ಮಾರ್ಗವನ್ನಾಗಿಸಿಕೊಂಡಿರುವ ಜನ ಈ ಸಂದರ್ಭದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಉದ್ಯುಕ್ತರಾಗಿರುವುದನ್ನು ಕಂಡು ಮನುಷ್ಯತ್ವವುಳ್ಳವರು ಬೆರಗಾಗಿರಬೇಕು.
ಇಡೀ ದೇಶವೇ ಈ ಪ್ರಕೃತಿ ವಿಕೋಪವನ್ನು ಕಂಡು ದಿಗ್ಭ್ರಾತರಾಗಿರುವಾಗ ಪರಿಸರವಾದಿಗಳಿಗೆ ಮಾತ್ರ ಇದು ಸುವರ್ಣಾವಕಾಶವಾಗಿರುವಂತೆ ಗೋಚರಿಸುತ್ತಿದೆ. ಎಲ್ಲಾ ವಲಯಗಳಿಂದ ಸಂತ್ರಸ್ತರಿಗೆ ನೆರವು ಹರಿದು ಬರುತ್ತಿದ್ದರೆ ಪರಿಸರವಾದಿಗಳು ಮಾತ್ರ ಸಂತ್ರಸ್ತರಿಗೆ ಬಿಡಿ ಕಾಸಿನ ನೆರವೂ ನೀಡದೆ ಈ ಪ್ರಕೃತಿ ವಿಕೋಪ ಮಾನವ ನಿರ್ಮಿತ ಎಂದು ಅರಚಾಡುತ್ತಾ ಪಶ್ಚಿಮಘಟ್ಟ ರಕ್ಷಣೆ, ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಇತ್ಯಾದಿ ಮನುಷ್ಯ ವಿರೋಧಿ ವರದಿಗಳನ್ನು ಮುಂದಿಟ್ಟುಕೊಂಡು ಜನರ ಗಮನದ ದಿಕ್ಕನ್ನೇ ಬದಲಿಸುವ ಯತ್ನವನ್ನು ಬುದ್ಧಿಪೂರ್ವಕವಾಗಿ ಮಾಡುತ್ತಾ ಪರಿಸ್ಥಿತಿಯ ದುರ್ಬಳಕೆಗೆ ಮುಂದಾಗಿರುವುದು ಇವರ ಪೂರ್ತಿ ನಡವಳಿಕೆಗೆ ಸಾಕ್ಷಿಯಲ್ಲದೆ ಮತ್ತೇನೂ ಅಲ್ಲ.
ಪ್ರಕೃತಿಯ ವಿಕೋಪಕ್ಕೆ ಊರೂರುಗಳೇ ನೆಲ ಕುಸಿತದಿಂದಾಗಿ ಮಣ್ಣುಪಾಲಾಗಿರುವ ಈ ಸಂದರ್ಭದಲ್ಲಿ ಅದಕ್ಕೆ ಗಣಿಗಾರಿಕೆ, ಅರಣ್ಯ ನಾಶ ಕಾರಣ ಎಂದು ಕಿರುಚಾಡುತ್ತಿರುವ ಪರಿಸರವಾದಿಗಳು ಲಕ್ಷ ಲಕ್ಷ ಕೊಳವೆ ಬಾವಿಗಳು, ನೂರಾರು ಅಣೆಕಟ್ಟುಗಳು, ಜೆಸಿಬಿಯಿಂದ ನಿರಂತರ ಮಣ್ಣು ಕೊರೆದು ಗಣಿಗಾರಿಕೆ ಇವುಗಳನ್ನು ಮುಂದೊಡ್ಡುತ್ತಾ, ತಮ್ಮ ಸೋಗಲಾಡಿತನವನ್ನು ಪ್ರದರ್ಶಿಸುತ್ತಿದ್ದಾರೆ. ಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ವರದಿಯನ್ನು ಧಿಕ್ಕರಿಸಿದ ಪಶ್ಚಿಮ ಟ್ಟದ ಸಾಂಸ್ಕೃತಿಕ ವಲಯದಲ್ಲಿರುವ ನಿವಾಸಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಇದು ಧರೆ ಹತ್ತಿ ಉರಿಯುವಾಗ ಮೈ ಕಾಯಿಸಿಕೊಳ್ಳುವ ಮೂರ್ಖತನವಲ್ಲದೇ ಮತ್ತೇನೂ ಅಲ್ಲ.
ಕೊಡಗಿನ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ ಆಗಸ್ಟ್ ತಿಂಗಳ ಒಂದೇ ದಿನದಲ್ಲಿ ಹಿಂದೆಂದೂ ಕಾಣದಷ್ಟು ಮಳೆ ಸುರಿದಿದ್ದು, ಹಾಗೆಯೇ ಒಂದು ವಾರದಲ್ಲಿ ಹಿಂದೆಂದೂ ಕಾಣದಷ್ಟು ಕುಂಭದ್ರೋಣ ಮಳೆಯಾಯಿತು. ಈ ಹಿಂದೆ ಎರಡು ವರ್ಷ ಸತತವಾಗಿ ಕೊಡಗಿನಲ್ಲಿ ಬರ ಪರಿಸ್ಥಿತಿ ಉಂಟಾಗಿತ್ತು. ಹೀಗೆ ಬರಗಾಲ ಪರಿಸ್ಥಿತಿ ಉಂಟಾದಾಗ ಕಾಡು ನಾಶವಾಗಿರುವುದರಿಂದ ಅದರಲ್ಲೂ ಹೈಟೆನ್ಷನ್ ವಿದ್ಯುತ್ ಸರಬರಾಜಿಗಾಗಿ ಲಕ್ಷಾಂತರ ಮರಕಡಿದು ಬೀಳಿಸಿದ್ದರಿಂದ ಮಳೆ ಬೀಳುತ್ತಿಲ್ಲವೆಂದು ಕಿರುಚಾಡಿದ್ದುಂಟು. ಹಾಗಾದರೆ ಈ ವರ್ಷದ ಅತಿವೃಷ್ಟಿಯ ದಾಖಲೆ ಮೀರಿದ ಕುಂಭದ್ರೋಣ ಮಳೆಗೆ ಕಾರಣವೇನು? ಒಂದೇ ವರ್ಷದಲ್ಲಿ ಮರವಿಲ್ಲದೆ ಕಾಡುಬೆಳೆದಿದೆಯಾ? ಎಂದೂ ಕಂಡರಿಯದಷ್ಟು ಧಾರಾಕಾರ ಮಳೆ ಈ ವರ್ಷಕೊಡಗಿನಲಿ ್ಲಸುರಿದಿದ್ದಕ್ಕೆ ಕಾರಣ ಗಣಿಗಾರಿಕೆಯಾ? ಮರಕಡಿದದ್ದಾ?, ರೆಸಾರ್ಟುಗಳು ನಿರ್ಮಾಣಗೊಂಡದ್ದಾ? ಯಾ ಹೋಂಸ್ಟೇಗಳಾ?
ಕೊಡಗಿನಲ್ಲಿ ಗಣಿಗಾರಿಯಂತೂ ಇಲ್ಲವೇ ಇಲ.್ಲ ಯಾವುದೇ ರೆಸಾರ್ಟಾಗಲೀ, ಹೋಂ ಸ್ಟೇ ಆಗಲೀ ಭೂಕುಸಿತದಿಂದ ಹಾನಿಗೊಂಡ ವರದಿಗಳು ಬಂದಿಲ್ಲ. ನೂರಾರು ವರ್ಷದಿಂದ ಜೀವಂತವಿದ್ದು, ಜನ ಬಾಳಿ ಬದುಕಿದ ಮನೆಗಳು ಭೂಕುಸಿತದಿಂದ ಕಣ್ಮರೆಯಾಗಿವೆ. ಜನನಿವಾಸವೇ ಇಲ್ಲದ ದಟ್ಟವಾಗಿ ಬೆಳೆದ ಅರಣ್ಯ ಪ್ರದೇಶದಲ್ಲಿಯೂ ಭೂಕುಸಿತವುಂಟಾಗಿದೆ. ಭೂಕುಸಿತದಿಂದ ಮಣ್ಣುಪಾಲಾಗಿರುವ ಗ್ರಾಮಗಳು ಜನವಸತಿಗೆ ಯೋಗ್ಯವಾಗಿರಲಿಲ್ಲವೆಂದು ಸ್ಥಳಕ್ಕೆ ಬಂದ ಕೆಲವು ಭೂ ವಿಜ್ಞಾನಿಗಳು ಹೇಳಿದ್ದಾರೆಂದು ವರದಿಯಾಗಿದೆ. ಆ ಭೂವಿಜ್ಞಾನಿಗಳಿಗೆ ಹೇಳಬೇಕಾಗಿರುವುದು ಇಷ್ಟೆ. ನೂರಾರು ವರ್ಷಗಳಿಂದ ಅಲ್ಲಿ ಜನ ವಾಸವಿದ್ದರೂ ಎಂದೂ ಕಂಡು ಕೇಳರಿಯದಷ್ಟು ಈ ವರ್ಷ ಮಳೆ ಬಿದ್ದಾಗ ಉಂಟಾದ ಭೂಕುಸಿತದಿಂದಾಗಿ ಅದೂ ಇದ್ದಕ್ಕಿದ್ದಂತೆಯೇ ವಾಸಕ್ಕೆ ಯೋಗ್ಯವಲ್ಲದ ಸ್ಥಳವೆನಿಸಿದೆಯೇ? ಒಂದು ವೇಳೆ ಈ ಭೂ ವಿಜ್ಞಾನಿಗಳು ಯಾವುದೇ ಸ್ಥಳವನ್ನು ವಾಸಕ್ಕೆ ಯೋಗ್ಯವಲ್ಲವೆಂದು ಗುರುತಿಸಿದರೆ ಅಲ್ಲಿಗೆ ಈಗಿನಕ್ಕಿಂತಲೂ ಇಮ್ಮಡಿಯಷ್ಟು ಮಳೆ ಸುರಿದರೆ ಅದು ವಾಸಕ್ಕೆ ಅಯೋಗ್ಯ ಸ್ಥಳವಾಗುತ್ತದೆ. ಸಮಸ್ಯೆಯ ಮೂಲವನ್ನೇ ಕಡೆಗಣಿಸಿ ಮತ್ತೆಲ್ಲಿಗೋ ಬೊಟ್ಟು ಮಾಡಿ ಕೈ ತೊಳೆದುಕೊಳ್ಳುವುದಕ್ಕೆ ಆಷಾಢಭೂತಿತನವೆಂದು ಹೇಳಬೇಕಾಗುತ್ತದೆ. ಪ್ರಕೃತಿಯ ವಿಕೋಪಕ್ಕೆ ಮನುಷ್ಯನ ಕಾಣಿಕೆಯೂ ಇರಬಹುದು. ಆದರೆ ಪ್ರಕೃತಿ ವಿಕೋಪಕ್ಕೆ ಮನುಷ್ಯನೇ ಕಾರಣವೆನ್ನುವುದು ಮಾತ್ರ ಸಂಪೂರ್ಣ ಆತ್ಮ ವಂಚನೆಯ ಮಾತಾಗುತ್ತದೆ. ಮನುಷ್ಯ ಭೂಮಿಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ಮೊದಲೇ ಪ್ರಕೃತಿ ವಿಕೋಪ ಮೈತಾಳಿದ್ದುಂಟು.
ಈ ಸಂದರ್ಭದಲ್ಲಿ ಮಾಧವ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿ ವಿರೋಧಿಸಿದವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬುದ್ಧಿಪೂರ್ವಕ ಪ್ರಯತ್ನದಲ್ಲಿ ಸಹ ಪರಿಸರವಾದದ ಸೋಗಿನಲ್ಲಿ ಕಿಸೆ ತುಂಬಿಸಿಕೊಳ್ಳುವವರು ಕೊಡಗಿನಲ್ಲಿರುವುದು ಗೋಚರಿಸುತ್ತದೆ. ಇಂತಹವರು ಉತ್ತರಿಸಬೇಕಾದ ಪ್ರಶ್ನೆಯೆಂದರೆ, ಒಂದು ವೇಳೆ ಮಾಧವ ಗಾಡ್ಗೀಳ್ ವರದಿ ಯಥಾವತ್ತಾಗಿ ಜಾರಿಯಾಗಿದ್ದರೆ ಈಗ ಸುರಿದ ಮಹಾಮಳೆ ಸುರಿಯುತ್ತಿರಲಿಲ್ಲವೇ? ಸುರಿಯುತ್ತಿರಲಿಲ್ಲವೆಂದು ಹೇಳುವವರನ್ನು ನಯವಂಚಕರೆಂದು ಹೇಳದೆ ವಿಧಿಯಿಲ್ಲ.
ಮಾಧವ ಗಾಡ್ಗೀಳ್ ವರದಿ ಜಾರಿಯಾಗಿದ್ದರೂ ಇಂದು ಕೊಡಗಿನಲ್ಲಿ ಸುರಿದ ಅನಾಹುತಕಾರಿ ಕುಂಭದ್ರೋಣ ಮಳೆ ಸುರಿಯುತ್ತಿತ್ತು. ಭೂ ಕುಸಿತಗಳಿಂದಾಗಿ ಜನಸಂಕಷ್ಟಕ್ಕೂ ಒಳಗಾಗುತ್ತಿದ್ದರು. ಆದ್ದರಿಂದ ಸಮಸ್ಯೆಯ ಮೂಲ ಮಾಧವ ಗಾಡ್ಗೀಳ್ ವರದಿ ಜಾರಿಗೆ ವಿರೋಧಿಸಿದವರಲ್ಲ. ಅದು ಇರುವುದು ಬೇರೆಲ್ಲೋ. ಅಷ್ಟಕ್ಕೂ ತೀವ್ರ ವಿರೋಧದ ನಂತರವೂ ಜನರ ಭಾವನೆಯನ್ನು ಕಡೆಗಣಿಸಿ ವರದಿಯ ಹಲವು ಶಿಫಾರಸುಗಳು ಈಗಾಗಲೇ ಜಾರಿಯಾಗಿರುವುದು ಸತ್ಯ. ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ವರದಿಗಳಿಗೆ ವಿರೋಧ ವ್ಯಕ್ತವಾದುದಾದರೂ ಏಕೆ? ಏಕೆಂದರೆ ಆ ವರದಿಗಳು ಪರಿಸರವಾದಿಗಳೆಂಬ ಪಟ್ಟಭದ್ರ ಹಿತಾಸಕ್ತಿಗಳ ಆಶಯದಂತೆ ಅವರ ಇಚ್ಛೆ ಪೂರೈಕೆಗಾಗಿಯೇ ತಯಾರಿಸಲ್ಪಟ್ಟ ದಸ್ತಾವೇಜುಗಳಾಗಿವೆಯೇ ಹೊರತು ಪಶ್ಚಿಮಘಟ್ಟವನ್ನು ರಕ್ಷಿಸು ಉದ್ದೇಶದಿಂದ ಕೂಡಿರಲಿಲ್ಲ.
ಸಾವಿರಾರು ವರ್ಷಗಳಿಂದ ಪಶ್ಚಿಮಘಟ್ಟ ಭೂಪ್ರದೇಶಗಳಲ್ಲಿ ವಾಸಿಸುತ್ತಾ ಪರಿಸರದೊಡನೆ ಹೆಣಗಾಡಿಕೊಂಡು ಪರಸರ ಪ್ರೇಮಿಗಳಾಗಿ ಪರಸರವನ್ನು ಉಳಿಸಿ ಬೆಳೆಸಿಕೊಂಡು ಬಂದ ಕೋಟ್ಯಂತರ ಜನರ ಬದುಕಿಗೆ ಕೊಳ್ಳಿ ಇಡುವ ಶಿಫಾರಸುಗಳು ಆ ವರದಿಗಳಲ್ಲಿ ಇದ್ದವು. ಮಾತ್ರವಲ್ಲದೆ ವರದಿ ತಯಾರಿಸುವಾಗ ಪಶಿಮಘಟ್ಟ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮಾತ್ರವಲ್ಲದೆ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿ ಜನವಿರೋಧಿಗಳಾದ ವಿದೇಶಿ ಏಜೆಂಟ್ ಪರಿಸರವಾದಿಗಳ ಮೂಗಿನ ನೇರಕ್ಕೆ ಸೃಷ್ಟಿಸಲ್ಪಟ್ಟಿದ್ದವು. ಪಶ್ಚಿಮಘಟ್ಟ ವಾಸಿಗಳ ಬದುಕನ್ನು ಉಳಿಸುವುದಕ್ಕಾಗಿ ವರದಿಗಳನ್ನು ವಿರೋಧಿಸಲೇಬೇಕಾದುದು ಪ್ರತಿಯೊಬ್ಬ ಸಾರ್ವಜನಿಕ ಮುಂದಾಳುಗಳ ಕರ್ತವ್ಯವೇ ಆಗಿವೆ. ವರದಿ ವಿರೋಧಿಗಳ ಮೇಲೆ ಗೂಬೆ ಕೂರಿಸಲು ತಮ್ಮ ಬುದ್ಧಿಗಳನ್ನೆಲ್ಲಾ ಸವೆಸುತ್ತಿರುವ ಪರಿಸರವಾದಿಗಳು ಅಂತಹವರೊಡನೆ ಮುಖಾಮುಖಿ ಚರ್ಚೆಗೆ ಮುಂದಾಗಲಿಲ್ಲ. ಮಾಧವಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ವರದಿ ತಯಾರಿಸುವಾಗ ಜನರನ್ನು ಕತ್ತಲೆಯಲ್ಲಿಡಲಾಗಿತ್ತು.
ಪಶಿಮಘಟ್ಟ ಪ್ರದೇಶಗಳಿಗೆ ಭೇಟಿಕೊಟ್ಟು ಸ್ಥಳ ಪರಿಶೀಲನೆಯನ್ನೇ ಮಾಡದೆ ಪಶ್ಚಿಮಘಟ್ಟ ನಿವಾಸಿಗಳ ಜೊತೆ ಚರ್ಚೆಯನ್ನೂ ನಡೆಸದೆ ಕೇವಲ ಪರಿಸರವಾದಿಗಳ ಜೊತೆ ಕೈಜೋಡಿಸಿಕೊಂಡು ಅವರ ಹಿತ ರಕ್ಷಣೆಗೋಸ್ಕರ ಸೃಷ್ಟಿಯಾದ ವರದಿಗಳೇ ಮಾಧವ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳಾಗಿತ್ತು. ಯಾವ ಅಧ್ಯಯನವನ್ನೂ ಕೈಗೊಳ್ಳದೆ ಇಲಾಖೆಗಳ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಸೃಷ್ಟಿಸಿದ ವರದಿಯನ್ನು ವಿರೋಧಿಸದೆ ಅದನ್ನು ಪೂಜೆ ಮಾಡುವುದು ಹೊಣೆಗೇಡಿತನವಲ್ಲದೆ ಮತ್ತೇನೂಅಲ್ಲ. ಮುಗ್ಧ ಜನರಲ್ಲಿ ಮೂಢನಂಬಿಕೆಯನ್ನು ಭಿತ್ತಿ ಸುಲಿಗೆ ಮಾಡಿ ಬೆವರಿಳಿಸದೆ ಆಡಂಬರದಿಂದ ಬದುಕುವ ಪುರೋಹಿತರ ಮತ್ತು ಬುರುಡೆ ಜ್ಯೋತಿಷಿಗೂ, ಜನರ ಬದುಕಿಗೆ ಕೊಳ್ಳಿಯಿಟ್ಟು ಪರಿಸರವಾದಿಗಳ ಸೋಗಿನಲ್ಲಿ ಮೋಜಿನ ಬದುಕಿಗೆ ದಾರಿ ಮಾಡಿಕೊಂಡಿರುವ ಈ ಪರಿಸರವಾದಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಪರಿಸರವಾದಿಗಳು ತಮ್ಮನ್ನು ಒಪ್ಪದಿದ್ದವರನ್ನು ಬಾಯಿ ಮುಚ್ಚುವಂತೆ ಮಾಡಲು ಪ್ಯಾಶಿಸ್ಟ್ ತಂತ್ರಗಾರಿಕೆಯನ್ನೇ ಅವಲಂಬಿಸಿರುವವರಾಗಿದ್ದಾರೆ. ಇವರನ್ನು ಪರಿಸರ ಭಯೋತ್ಪಾದಕರೆನ್ನಬಹುದು. ಪಶ್ಚಿಮಘಟ್ಟ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಉಳಿಯಬೇಕೇ?ಬೇಡವೇ?ಎಂದು ಮೊದಲು ಇತ್ಯರ್ಥ ಮಾಡಬೇಕು. ಅಲ್ಲಿ ಕೃಷಿ ಬೇಡವೆಂದರೆ ಅವರಿಗೆ ನಾಗರಿಕರಂತೆ ಬದುಕಲು ಬದಲಿ ವ್ಯವಸ್ಥೆ ಮಾಡುವುದಾದರೆ ನಮ್ಮ ಅಭ್ಯಂತರವೇನೂ ಇಲ್ಲ. ಇಲ್ಲ ಅಲ್ಲಿ ಕೃಷಿ ಚಟುವಟಿಕೆ ಉಳಿಯಬೇಕೆಂದರೆ ಅವರ ಬದುಕಿಗೆ ಬೆಂಕಿ ಇಡುವ ಕಾರ್ಯಕ್ರಮವನ್ನು ನಿಲ್ಲಿಸಿ ಅವರು ಆಧುನಿಕ ಜೀವನ ಪದ್ಧತಿಗೆ ಹೊಂದಿಕೊಳ್ಳುವುದಕ್ಕೆ ಅವಕಾಶವಾಗುವಂತಹ ವ್ಯವಸ್ಥೆಯಾಗಬೇಕು.
ಅಂತಹ ಬದುಕಿನೊಡನೆ ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಯೋಜನೆಗಳನ್ನು ರೂಪಿಸಬೇಕೇ ವಿನಹ ಅಭಿವೃದ್ಧಿಯನ್ನು ನಿಲ್ಲಿಸಕೂಡದು. ಪರಿಸರವಾದಿಗಳು ಐಷಾರಾಮಿ ನಗರಜೀವನಕ್ಕೆ ಹೊಂದಿಕೊಳ್ಳುವಾಗ ಪಶ್ಚಿಮ ಘಟ್ಟದ ಕೃಷಿಕರು, ಕೃಷಿಕಾರ್ಮಿಕರು, ಕುಶಲಕರ್ಮಿಗಳು ಮತ್ತು ಆದಿವಾಸಿಗಳು ಇನ್ನೂ ಕಾಡುಮನುಷ್ಯರಂತೆ ಬದುಕುತ್ತಿರಬೇಕೇ? ಎನ್ನುವ ಪ್ರಶ್ನೆಗೆ ಉತ್ತರಿಸಬೇಕಿದೆ. ಪಶ್ಚಿಮಘಟ್ಟದ ರಕ್ಷಣೆ ಅಲ್ಲಿ ವಾಸಿಸುವ ಜನರಿಂದಲೇ ಸಾಧ್ಯವಾಗಬೇಕಲ್ಲದೆ ಬೇರೆ ಹೊರಗಿನವರಿಂದ ಸಾಧ್ಯವಿಲ್ಲ.
ಆದ್ದರಿಂದ ಸರಕಾರ ಪರಿಸರವಾದಿಗಳನ್ನು ದೂರವಿಟ್ಟು ಪಶ್ಚಿಮಘಟ್ಟದ ನಿವಾಸಿಗಳನ್ನು ಬಳಸಿಕೊಂಡು ಪಶ್ಚಿಮಘಟ್ಟದ ರಕ್ಷಣೆಯ ಜವಾಬ್ದಾರಿಯನ್ನು ಅಲ್ಲಿನ ಜನರಿಗೆ ನೀಡಿದರೆ ಮಾತ್ರ ಅದು ಉಳಿಯುತ್ತದೆ. ಇದರಿಂದ ಪಶ್ಚಿಮ ಘಟ್ಟ ಮತ್ತಷ್ಟು ಹಸಿರಾಗುತ್ತದೆ. ಇಲ್ಲದಿದ್ದರೆ ಇದು ಸಾಧ್ಯವಿಲ್ಲ. ಇದು ವಾಸ್ತವ. ಪಶ್ಚಿಮಘಟ್ಟದ ಮೊದಲನೇ ಶತ್ರುಗಳೆಂದರೆ ವಿದೇಶಿ ಏಜೆಂಟರಾಗಿರುವ ಡೋಂಗಿ ಪರಿಸರವಾದಿಗಳು ಮತ್ತು ಇವರೊಡನೆ ಕೈಜೋಡಿಸಿರುವ ಭ್ರಷ್ಟ ಅರಣ್ಯ ಅಧಿಕಾರಿಗಳು. ಪಶ್ಚಿಮಘಟ್ಟದ ಮೇಲೆ ತಮ್ಮ ಪ್ರಭುತ್ವ ಸಾಧಿಸುವುದು ಇವರ ಉದ್ದೇಶವಾಗಿದೆ. ಒಮ್ಮೆ ಪ್ರಭುತ್ವ ಸಾಧಿಸಿ ಆದ ಮೇಲೆ ಅದು ಜಾಗತೀಕರಣಗೊಂಡು ಖಾಸಗೀಕರಣದತ್ತ ಚಲಿಸುತ್ತದೆ. ಈ ಕಾರ್ಯ ಸಾಧನೆಗಾಗಿ ಪಶ್ಚಿಮಘಟ್ಟದ ನಿವಾಸಿಗಳ ಬದುಕಿಗೆ ಕೊಳ್ಳಿ ಇಡುವ ಕೆಲಸದಲ್ಲಿ ಈ ಪರಿಸರವಾದಿಗಳು ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆಂದು ಹೇಳಲು ಹಿಂದೂ ಮುಂದು ನೋಡಬೇಕಿಲ್ಲ. ಈ ಆರೋಪ ವಿದೇಶಿ ಹಣ ಪಡೆದು ಪರಿಸರದ ರಕ್ಷಣೆ ಸೋಗಿನಲ್ಲಿ ಬದುಕುತ್ತಿರುವವರ ಬಗ್ಗೆಯೇ ವಿನಹ: ಪ್ರಾಮಾಣಿಕವಾಗಿ ಪರಿಸರ ಕಾಳಜಿ ಹೊಂದಿರುವವರ ಬಗ್ಗೆ ಅಲ್ಲ.