ಇದು ಸಂಚಿನ ಹಿಂದಿನ ಸಂಚು
ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಕೊಂದವರಿಗೆ ಹಾರ ಹಾಕಿ ಸ್ವಾಗತಿಸಿದವರನ್ನು ತಮ್ಮ ಪಕ್ಷದಲ್ಲಿ ಇಟ್ಟುಕೊಂಡವರು ಪ್ರಧಾನಿ ಹತ್ಯೆಯ ಸಂಚಿನ ಕತೆ ಹೆಣೆದು ಈ ದೇಶದ ಹಿರಿಯ ಚಿಂತಕ ಆನಂದ ತೇಲ್ತುಂಬ್ಡೆೆ, ಕವಿ ವರವರ ರಾವ್, ಪತ್ರಕರ್ತ ಗೌತಮ ನವ್ಲಾಖಾ, ನ್ಯಾಯವಾದಿ ಸುಧಾ ಭಾರದ್ವಾಜ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾದ ಅರುಣ ಫೇರೇರಾ ವೆರ್ನನ್ ಗೊನ್ಸಾಲ್ವಿಸ್ ಅವರನ್ನು ಬಂಧಿಸಲಾಯಿತು. ಹಿಂದುತ್ವ ಸಿದ್ಧಾಂತ ವಿರೋಧಿಸುವವರನ್ನೆಲ್ಲ ನಗರ ನಕ್ಸಲರು ಎಂದು ಬಂಧಿಸಲಾಯಿತು.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಜಾಲದ ವಿವರ ಬಯಲಾಗುತ್ತಿದ್ದಂತೆ ಅಧಿಕಾರದಲ್ಲಿ ಇರುವ ಮತ್ತು ಅಧಿಕಾರದಿಂದ ಹೊರಗಿರುವ ನಾಝಿವಾದಿ ಗಳಿಗೆ ದಿಗಿಲು ಉಂಟಾಗಿದೆ. ಹಿಂದೂ ರಾಷ್ಟ್ರ ಕಟ್ಟಲು ಹೊರಟ ಸಂಘಟನೆಯೊಂದರ ಪಾತಕಿಗಳು ಗೌರಿ ಹತ್ಯೆ ಪ್ರಕರಣದಲ್ಲಿ ಒಬ್ಬೊಬ್ಬರಾಗಿ ಸಿಕ್ಕಿ ಬೀಳುತ್ತಿದ್ದಾರೆ. ಗೌರಿ ಹತ್ಯೆ ಮಾತ್ರವಲ್ಲ, ಕಲಬುರ್ಗಿ ಹತ್ಯೆ, ದಾಭೋಲ್ಕರ್ ಮತ್ತು ಪನ್ಸಾರೆ ಹತ್ಯೆಗಳಲ್ಲಿ ಕೂಡ ಒಂದೇ ಗುಂಪಿನ ಕೈವಾಡ ಇದೆ ಎಂದು ಮಾಧ್ಯಮಗಳಲ್ಲಿ ಬೆಳಕಿಗೆ ಬಂದ ತನಿಖೆ ವಿವರಗಳಿಂದ ತಿಳಿದು ಬರುತ್ತದೆ. ಪುಣೆ, ಹುಬ್ಬಳ್ಳಿ, ಬೆಳಗಾವಿ, ಮಡಿಕೇರಿ, ಮಂಗಳೂರು, ವಿಜಯಪುರ ಹೀಗೆ ಈ ಜಾಲ ಎಲ್ಲೆಲ್ಲೋ ವಿಸ್ತರಿಸಿ ವ್ಯಾಪಕವಾಗಿದೆ.
ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿರದಿದ್ದರೆ, ಗೌರಿ ಹತ್ಯೆ ಸಂಚಿನ ಪ್ರಕರಣ ಕೂಡ ಬಯಲಿಗೆ ಬರುವ ಸಾಧ್ಯತೆ ಇರುತ್ತಿರಲಿಲ್ಲ. ಸಿದ್ದರಾಮಯ್ಯ ಆಸಕ್ತಿ ವಹಿಸಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದ ಪರಿಣಾಮವಾಗಿ ಪಾತಕಿಗಳ ಜಾಲ ಬಯಲಿಗೆ ಬಂದಿದೆ. ಇಲ್ಲದಿದ್ದರೆ, ಆ ಪ್ರಕರಣವು ಮುಚ್ಚಿ ಹೋಗಿ, ಇಷ್ಟರಲ್ಲೇ ಮತ್ತೊಬ್ಬ ಚಿಂತಕನ ಹತ್ಯೆಯಾಗಿದ್ದರೆ ಅಚ್ಚರಿ ಪಡಬೇಕಾಗುತ್ತಿರಲಿಲ್ಲ.
ಗೌರಿ ಹತ್ಯೆಗಾಗಿ ನಡೆದ ಸಂಚಿನ ವಿವರಗಳು ತನಿಖೆ ಪೂರ್ಣಗೊಳ್ಳುವವರೆಗೆ ಬಯಲಿಗೆ ಬರುವುದಿಲ್ಲ. ಆದರೆ ಮಾಧ್ಯಮಗಳಲ್ಲಿ ದೊರಕಿದ ಅಲ್ಪವಿವರಗಳ ಪ್ರಕಾರ ಹೇಳುವುದಾದರೆ ವಿಚಾರವಾದಿಗಳನ್ನೇ ಗುರಿಯಾಗಿರಿಸಿಕೊಂಡು ಕೊಲ್ಲುವ ಸಂಚು ಅತ್ಯಂತ ವ್ಯಾಪಕ ಮತ್ತು ಸುಸಜ್ಜಿತವಾಗಿದೆ. ಗೌರಿ ಹತ್ಯೆಗೆ ಎರಡು ತಂಡಗಳು ಸಜ್ಜಾಗಿದ್ದವು ಮತ್ತು ಹಲವಾರು ತಿಂಗಳುಗಳಿಂದ ಸಂಚು ರೂಪಿಸಿದ್ದವು ಎಂಬುದು ಗೊತ್ತಾಗಿದೆ. ಹಿಂದೂ ರಾಷ್ಟ್ರ ನಿರ್ಮಿಸುವ ಗುರಿ ಹೊಂದಿರುವ ಸನಾತನ ಸಂಸ್ಥೆಗೆ ಸೇರಿದವರು ಈ ಹತ್ಯೆಯ ಸಂಚಿನಲ್ಲಿ ಇದ್ದಾರೆಂದು ಹೇಳಲಾಗುತ್ತಿದೆ.
ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರನ್ನು ದ್ವೇಷಿಸುವ ಸಿದ್ಧಾಂತವನ್ನು ಹೊಂದಿದ ಕೋಮುವಾದಿ ಸಂಘಟನೆಗಳು ಜಮ್ಮು-ಕಾಶ್ಮೀರ ಗಡಿಯಲ್ಲಿ ಹೋಗಿ ಮುಸ್ಲಿಂ ಉಗ್ರಗಾಮಿಗಳ ವಿರುದ್ಧ ಹೋರಾಡಬಹುದಾಗಿತ್ತು. ಆದರೆ ಬರೀ ತಮ್ಮ ವಿಚಾರ ಪ್ರತಿಪಾದನೆ ಮಾಡಿದ ತಪ್ಪಿಗಾಗಿ ವಯಸ್ಸಾದ ವಿಚಾರವಾದಿಗಳನ್ನು ಗುರಿಯಾಗಿರಿಸಿಕೊಂಡು ಯಾಕೆ ಕೊಲ್ಲುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಬಹುಶಃ ಇವರ ಹಿಂದೂ ರಾಷ್ಟ್ರವೆಂದರೆ, ಮೂಢನಂಬಿಕೆ ಮತ್ತು ಕಂದಾಚಾರದಿಂದ ಕೂಡಿದ ಬ್ರಾಹ್ಮಣ್ಯ ಪ್ರಧಾನವಾದ ರಾಷ್ಟ್ರವಾಗಿರಬಹುದು. ಅದಕ್ಕೆ ವಿಚಾರವಾದಿಗಳು ಅಡ್ಡಿಯಾಗಿದ್ದಾರೆ ಎಂಬ ಕೋಪದಿಂದ ಅವರನ್ನು ಸಾಲುಸಾಲಾಗಿ ಕೊಲ್ಲುತ್ತ ಬಂದರು. ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಈ ಕೋಮುವಾದಿಗಳ ಕೋಪ ಇರುವುದು ಮುಸ್ಲಿಂ ಉಗ್ರವಾದಿಗಳ ಮೇಲೆ ಅಲ್ಲ, ತಮ್ಮದೇ ಧರ್ಮದ ವಿಚಾರವಾದಿಗಳು ಎಂಬುದು ಖಚಿತವಾಗುತ್ತದೆ. ಆತಂಕ ಮತ್ತು ವಿಷಾದದ ಸಂಗತಿಯೆಂದರೆ, ನಮ್ಮ ದೇಶದ ಗುಪ್ತಚರ ವ್ಯವಸ್ಥೆಯಲ್ಲಿ ಹಿಂದುತ್ವವಾದಿ ಕೋಮು ಶಕ್ತಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ವಿಭಾಗವಿಲ್ಲ. ಬ್ರಿಟಿಷರ ಕಾಲದಿಂದಲೂ ಗುಪ್ತಚರ ಇಲಾಖೆಯಲ್ಲಿ ಕಮ್ಯುನಿಸ್ಟರು ಮತ್ತು ಮುಸಲ್ಮಾನರ ಮೇಲೆ ನಿಗಾ ವಹಿಸಲು ಪ್ರತ್ಯೇಕ ವಿಭಾಗವಿದೆ. ಮಾವೋವಾದಿ ಗಳು ಮಾತ್ರವಲ್ಲ, ಸಂಸದೀಯ ಕಮ್ಯುನಿಸ್ಟ್ ಪಕ್ಷದ ಮೇಲೆಯೂ ಗುಪ್ತಚರ ಸಂಸ್ಥೆಯು ನಿಗಾ ವಹಿಸಿದೆ.
ಆದರೆ, ಆರೆಸ್ಸೆಸ್, ವಿಎಚ್‌ಪಿ, ಎಬಿವಿಪಿ, ಹಿಂದೂ ಮಹಾಸಭೆಯಂತಹ ಸಂಘಟನೆಗಳ ಮೇಲೆ ನಿಗಾ ವಹಿಸಲು ಗುಪ್ತಚರ ವಿಭಾಗದಲ್ಲಿ ಪ್ರತ್ಯೇಕ ವಿಭಾಗವಿಲ್ಲ. ಗಾಂಧಿ ಹತ್ಯೆ ನಂತರವೂ ಇಂತಹ ವಿಭಾಗ ಆರಂಭಿಸಿಲ್ಲ. ಇಂತಹ ವಿಭಾಗವೊಂದು ಇದ್ದಿದರೆ, ದಾಭೋಲ್ಕರ್, ಪಾನ್ಸಾರೆ, ಕಲಬುರ್ಗಿ ಮತ್ತು ಗೌರಿ ಹತ್ಯೆಗಳು ಸಂಭವಿಸುತ್ತಿರಲಿಲ್ಲ. ಎರಡನೆಯದಾಗಿ, 70 ವರ್ಷಗಳ ಹಿಂದೆ ವಿನಾಯಕ ದಾಮೋದರ ಸಾವರ್ಕರ್, ನಮ್ಮ ದೇಶದ ಸೇನೆ, ಪೊಲೀಸು, ಆಡಳಿತ, ಶಿಕ್ಷಣ ಹೀಗೆ ಎಲ್ಲಾ ರಂಗಗಳಲ್ಲಿ ನಮ್ಮ ಕಾರ್ಯ ಕರ್ತರನ್ನು ಒಳಗೆ ಸೇರಿಸಬೇಕು ಎಂದು ಕರೆ ನೀಡಿದ್ದರು. ಆ ಪ್ರಕಾರ, ಈ ಎಲ್ಲಾ ಸಂಸ್ಥೆ ಗಳಲ್ಲಿ ಹಿಂದುತ್ವ ಐಡಿಯಾಲಜಿ ಹೊಂದಿದವರನ್ನು ಒಳಗೆ ತೂರಿಸಲಾಗಿದೆ. ಹೀಗಾಗಿ ಯಾವುದೇ ಸರಕಾರವಿದ್ದರೂ ಆಡಳಿತ ವ್ಯವಸ್ಥೆ ಕೋಮುವಾದಿಗಳಿಗೆ ಪೂರಕವಾಗಿ ಇರುತ್ತದೆ.
ಇದರ ಪರಿಣಾಮವಾಗಿ ದಾಭೋಲ್ಕರ್ ಹತ್ಯೆ ನಂತರ ಮೂವರು ವಿಚಾರವಾದಿಗಳ ಹತ್ಯೆಯಾದರೂ ಕೂಡ ಕೊಂದವರು ಯಾರು ಎಂಬುದು ಬೆಳಕಿಗೆ ಬರಲಿಲ್ಲ. ಮಹಾ ರಾಷ್ಟ್ರ ಸರಕಾರ ಎಸ್‌ಐಟಿ ರಚಿಸಿತ್ತು. ಅದು ಯಾರನ್ನೂ ಹಿಡಿಯದೆ ಕೈ ಚೆಲ್ಲಿತು. ನಂತರ ಸಿಬಿಐಗೆ ವಹಿಸಲಾಯಿತು. ಸಿಬಿಐ ಕೂಡ ಪಾತಕಿಗಳನ್ನು ಹಿಡಿಯಲು ವಿಫಲ ಗೊಂಡಿತು. ಕರ್ನಾಟಕದ ಎಸ್‌ಐಟಿ ಗೌರಿ ಹತ್ಯೆಯ ಸಂಚಿನ ಜಾಲ ಭೇದಿಸಿದಾಗ, ಮುಂಬೈ ಹೈಕೋರ್ಟ್ ಮಹಾರಾಷ್ಟ್ರ ಎಸ್‌ಐಟಿ ಮತ್ತು ಸಿಬಿಐಯನ್ನು ನೀವೇನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿತು. ಬಹುಶಃ ಅಲ್ಲಿನ ಬಿಜೆಪಿ ಸರಕಾರ ಈ ವಿಷಯದಲ್ಲಿ ಆಸಕ್ತಿ ತೋರಲಿಲ್ಲ ಎಂದು ಕಾಣುತ್ತದೆ.
ಗೌರಿ ಹತ್ಯೆ ಸಂಚು ಬಯಲಾಗುತ್ತಿದ್ದಂತೆ, ಸಂಬಂಧಿಸಿದ ಸಂಘಟನೆಗಳು ಮಾತ್ರವಲ್ಲ ಇನ್ನೂ 8 ತಿಂಗಳಲ್ಲಿ ಮತದಾರರ ಬಳಿ ಹೋಗಲಿರುವ ದಿಲ್ಲಿಯ ದೊರೆಗಳಿಗೂ ದಿಗಿಲು ಕವಿಯಿತು. ನೋಟು ಅಮಾನ್ಯೀಕರಣ, ಜಿಎಸ್ಟಿ, ಬೆಲೆ ಏರಿಕೆ ತಡೆ, ನಿರುದ್ಯೋಗ ನಿವಾರಣೆ, ಕಪ್ಪು ಹಣ ಈ ಎಲ್ಲಾ ಪ್ರಶ್ನೆಗಳಲ್ಲಿ ವಿಫಲಗೊಂಡ ದಿಲ್ಲಿ ದೊರೆಗಳಿಗೆ ಜನರ ಗಮನ ಬೇರೆಡೆ ಸೆಳೆಯಲು ಒಂದು ವಿಷಯ ಬೇಕಾಗಿತ್ತು. ಆಗ ಪ್ರಧಾನಿ ಹತ್ಯೆ ಸಂಚು ರೂಪುಗೊಂಡಿತು.
ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಕೊಂದವರಿಗೆ ಹಾರ ಹಾಕಿ ಸ್ವಾಗತಿಸಿ ದವರನ್ನು ತಮ್ಮ ಪಕ್ಷದಲ್ಲಿ ಇಟ್ಟುಕೊಂಡವರು ಪ್ರಧಾನಿ ಹತ್ಯೆಯ ಸಂಚಿನ ಕತೆ ಹೆಣೆದು ಈ ದೇಶದ ಹಿರಿಯ ಚಿಂತಕ ಆನಂದ ತೇಲ್ತುಂಬೆ, ಕವಿ ವರವರ ರಾವ್, ಪತ್ರಕರ್ತ ಗೌತಮ ನವ್ಲಾಖಾ, ನ್ಯಾಯವಾದಿ ಸುಧಾ ಭಾರ್ವಾಜ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾದ ಅರುಣ ಫೇರೇರಾ ಗೊನ್ಸಾಲ್ವಿಸ್ ಅವರನ್ನು ಬಂಧಿಸಲಾಯಿತು. ಹಿಂದುತ್ವ ಸಿದ್ಧಾಂತ ವಿರೋಧಿಸುವವರನ್ನೆಲ್ಲ ನಗರ ನಕ್ಸಲರು ಎಂದು ಬಂಧಿಸಲಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿ ವರವರ ರಾವ್ ತಂಗಿದ್ದ ಅವರ ಮಗಳ ಮನೆಗೆ ಹೋದ ಪೊಲೀಸರು ಅವರ ಅಳಿಯ ಪ್ರೊ.ಸತ್ಯನಾರಾಯಣ ರಾವ್ ಅವರನ್ನು ವಿಚಾರಣೆಗೆ ಒಳಪಡಿಸಿ, ನಿಮ್ಮ ಮನೆಯಲ್ಲಿ ಮಾರ್ಕ್ಸ್, ಅಂಬೇಡ್ಕರ್ ಮತ್ತು ಲೆನಿನ್ ಪುಸ್ತಕಗಳು ಏಕಿವೆ? ದೇವರ ಫೋಟೊ ಹಾಕುವುದು ಬಿಟ್ಟು ಜ್ಯೋತಿಬಾ ಫುಲೆ ಫೋಟೊ ಏಕೆ ಹಾಕಿದ್ದೀರಿ? ಗದ್ದರ್ ಹಾಡನ್ನು ಯಾಕೆ ಆಲಿಸುತ್ತೀರಿ? ಇಷ್ಟೇಕೆ ಪುಸ್ತಕಗಳು ನಿಮ್ಮ ಮನೆಯಲ್ಲಿವೆ ಎಂದೆಲ್ಲ ತರಹವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪತ್ನಿಗೆ, ಬ್ರಾಹ್ಮಣ ಮಹಿಳೆಯಾದ ನೀವು ಹಣೆಗೆ ಕುಂಕುಮ ಯಾಕೆ ಹಚ್ಚುವುದಿಲ್ಲ ಎಂದು ಕೇಳಿದ್ದಾರೆ. ಪೊಲೀಸರ ದೃಷ್ಟಿಯಲ್ಲಿ ಅಂಬೇಡ್ಕರ್ ಪುಸ್ತಕ ಓದುವುದು, ಜ್ಯೋತಿಬಾ ಫುಲೆ ಫೋಟೊ ಹಾಕುವುದು ಅಪರಾಧವಾಗಿದೆ.
ಪ್ರಧಾನಿ ಹತ್ಯೆ ಸಂಚಿನಲ್ಲಿ ಆರು ಬುದ್ಧಿಜೀವಿಗಳನ್ನೇನೋ ಬಂಧಿಸಿದರು. ಆದರೆ ಸುಪ್ರೀಂಕೋರ್ಟ್ ಮಧ್ಯೆಪ್ರವೇಶ ಮಾಡಿ, ತಡೆಯಾಜ್ಞೆ ನೀಡಿತು. ಬೇಕಾದರೆ, ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರನ್ನು ಗೃಹಬಂಧನದಲ್ಲಿ ಇರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಧಾನಿ ಹತ್ಯೆ ಸಂಚಿನ ಬಗ್ಗೆ ಪೊಲೀಸರ ಬಳಿ ಖಚಿತ ಸಾಕ್ಷ್ಯಾಧಾರಗಳಿಲ್ಲ. ಈಗ ಪೊಲೀಸರು ತೋರಿಸುತ್ತಿರುವ ಪತ್ರ ಸಾಕ್ಷ್ಯಾಧಾರ ಆಗುವುದಿಲ್ಲ. ಇದರ ಆಧಾರದಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಬಾರದು ಎಂದು ನಿವೃತ್ತ ನ್ಯಾಯಮೂರ್ತಿ ಬಿ.ಎ.ಎಸ್. ಚವಾಣ್ ನೇತೃತ್ವದ ಕಾನೂನು ಆಯೋಗ ಸ್ಪಷ್ಟವಾಗಿ ಹೇಳಿದೆ. ಖಚಿತ ಸಾಕ್ಷ್ಯಾಧಾರ ಇರದಿದ್ದರೂ ಕಳೆದ ಜನವರಿ 1ರಂದು ಪುಣೆ ಬಳಿಯ ಭೀಮಾ ಕೊರೇಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಯಿತು. ಅದಕ್ಕೆ ಪ್ರಧಾನಿ ಹತ್ಯೆ ಸಂಚು ತಳುಕು ಹಾಕಲಾಯಿತು. ಇದಕ್ಕಿಂತ ಮುಂಚೆ ಮಹಾರಾಷ್ಟ್ರ ದಲ್ಲಿ ಸುಮಾರು 10 ಮಂದಿ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗಿತ್ತು. ವಾಸ್ತವವಾಗಿ ಭೀಮಾ-ಕೋರೆಗಾಂವ್‌ನಲ್ಲಿ ನಡೆದ ಘಟನೆಯ ಇತಿಹಾಸದತ್ತ ಹೊರಳಿ ನೋಡಿದರೆ, ಸತ್ಯ ಸಂಗತಿ ಗೊತ್ತಾಗುತ್ತದೆ.
1818ರ ಜನವರಿಯಲ್ಲಿ ನಡೆದ ಬ್ರಿಟಿಷ್ ಮತ್ತು ಮರಾಠಾ ಪಡೆಗಳ ನಡುವಿನ ಯುದ್ಧದಲ್ಲಿ ಅಂತಿಮವಾಗಿ ಬ್ರಿಟಿಷ್ ಸೈನ್ಯ ಗೆಲುವು ಸಾಧಿಸಿತು. ಬ್ರಿಟಿಷ್ ಸೇನೆಯಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪರಾಭವಗೊಂಡ ಮರಾಠಾ ಸೇನೆ ಪೇಶ್ವೆಗಳ ಸೇನೆಯಾಗಿತ್ತು. ಈ ಕಾರಣಕ್ಕಾಗಿ ದಲಿತ ಸಂಘಟನೆಯವರು ಈ ದಿನವನ್ನು ಮೇಲ್ಜಾತಿಗಳ ವಿರುದ್ಧ ದಲಿತರ ವಿಜಯದ ದಿನವನ್ನಾಗಿ ಆಚರಿಸುತ್ತ ಬಂದಿದ್ದಾರೆ. ಪ್ರತಿ ವರ್ಷ ಜನವರಿ 1ರಂದು ನಡೆಯುವ ದಿನಾಚರಣೆಗೆ ಬಾಬಾ ಸಾಹೇಬ ಅಂಬೇಡ್ಕರ್ ತಪ್ಪದೇ ಬರುತ್ತಿದ್ದರು. ಅದೇ ರೀತಿ ಈ ವರ್ಷ ದಲಿತ ಸಂಘಟನೆಗಳು ಒಂದಾಗಿ, ಎಲ್ಗಾರ್ ಪರಿಷತ್ತು ರಚಿಸಿ ಭೀಮಾ-ಕೊರೇಗಾಂವ್ ವಿಜಯದ ದಿನ ಸಂಘಟಿಸಿದ್ದವು. ಇದೇ ಭೀಮಾ-ಕೊರೇಗಾಂವ್ ಸಮೀಪದ ಹಳ್ಳಿಯಲ್ಲಿ ಶಿವಾಜಿಯ ಮಗ ಸಂಬಾಜಿಯ ಸಮಾಧಿ ಇದೆ. ಅದರ ಪಕ್ಕದಲ್ಲಿ ಅಸ್ಪಶ್ಯ ಗೋವಿಂದ ಗಾಯಕವಾಡ ಅವರ ಸಮಾಧಿಯೂ ಇದೆ.
ಔರಂಗಜೇಬ್‌ನಿಂದ ಚಿತ್ರಹಿಂಸೆಗೆ ಒಳಗಾದ ಸಂಬಾಜಿಯ ದೇಹದ ಭಾಗಗಳನ್ನು ಜೋಡಿಸಿ ಹೊಲಿದು ಅಂತ್ಯಕ್ರಿಯೆ ಮಾಡಿದವರು ದಲಿತ ಯುವಕ ಗೋವಿಂದ ಗಾಯಕವಾಡ ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಅಂತಲೇ ಅವರ ಸಮಾಧಿ ಪಕ್ಕದಲ್ಲಿದೆ. ಈ ಬಾರಿ ಭೀಮಾ-ಕೊರೇಗಾಂವ್ ವಿಜಯೋತ್ಸವದ ದಿನ ಮನುವಾದಿ ಶಕ್ತಿಗಳು ಗೋವಿಂದ್ ಗಾಯಕವಾಡರ ಇತಿಹಾಸ ವಿವರಿಸುವ ಫಲಕವನ್ನು ಕಿತ್ತೆಸೆದು ಅವರ ಗೋರಿಯನ್ನು ಭಗ್ನಗೊಳಿಸಿದರು. ಅಷ್ಟೇ ಅಲ್ಲದೆ, ವಿಜಯೋತ್ಸವ ಆಚರಿಸಲು ಬಂದಿದ್ದ ದಲಿತರ ಮೇಲೆ ಪೆಟ್ರೋಲ್ ಬಾಂಬ್ ಎಸೆದರು. ಈ ಪ್ರಕರಣದ ನಿಜವಾದ ಆರೋಪಿಗಳಾದ ಸಂಬಾಜಿ ಭಿಡೆ ಮತ್ತು ಮಿಲಿಂದ್ ಏಕಬೋಟೆ ಅವರನ್ನು ಪೊಲೀಸರು ಬಂಧಿಸಲಿಲ್ಲ. ಈ ಸಂಬಾಜಿ ಭಿಡೆ ಮುಂಚೆ ಆರೆಸ್ಸೆಸ್ ಪ್ರಚಾರಕರಾಗಿದ್ದವರು. ಇವರನ್ನು ಪ್ರಧಾನಿ ಮೋದಿ ತಮ್ಮ ಗುರು ಎಂದು ಕರೆಯುತ್ತಾರೆ. ಇಂಥವರನ್ನು ಸುಮ್ಮನೆ ಬಿಟ್ಟ ಪೊಲೀಸರು ಹಿಂಸೆಗೆ ದಲಿತ ಸಂಘಟನೆಗಳೇ ಕಾರಣ ಎಂದು ಕೆಲವರನ್ನು ಬಂಧಿಸಿದರು.
ಈ ನಡುವೆ ಕರ್ನಾಟಕದ ಪೊಲೀಸರು ಗೌರಿ ಹತ್ಯೆ ತನಿಖೆ ಪ್ರಕರಣವನ್ನು ಬೆಳಕಿಗೆ ತಂದಿರುವುದರಿಂದ ದಿಗಿಲುಗೊಂಡ ಬಿಜೆಪಿ ನಾಯಕರು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಭೀಮಾ-ಕೊರೇಗಾಂವ್ ಪ್ರಕರಣಕ್ಕೂ ಮತ್ತು ಪ್ರಧಾನಿ ಹತ್ಯೆ ಸಂಚಿಗೂ ತಳುಕು ಹಾಕಿ, ಕಳೆದ ವಾರ ಆರು ಮಂದಿ ಚಿಂತಕರನ್ನು ಬಂಧಿಸಿದರು. ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಹತ್ಯೆ ಸಂಚಿನ ಕತೆ ಕಟ್ಟಲಾಗಿದೆ. ಈ ಕುರಿತು ಕಾನೂನು ಪರಿಣಿತರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರಿಕೆಗಳ ಸಂಪಾದಕೀಯಗಳು ಆಕ್ಷೇಪಿಸಿವೆ. ಈ ಸಂಚಿನ ಹಿನ್ನೆಲೆಯಲ್ಲಿ ಹೋರಾಟದ ಧ್ವನಿಯನ್ನು ಅಡಗಿಸುವ ಇನ್ನೊಂದು ಸಂಚು ಇದ್ದರೆ ಅಚ್ಚರಿಪಡಬೇಕಾಗಿಲ್ಲ.