2019ರ ಚುನಾವಣೆ ಪ್ರತಿಪಕ್ಷಗಳ ಪಾಲಿಗೆ, ಭಾರತೀಯ ಪ್ರಜಾಪ್ರಭುತ್ವಕ್ಕೆ ಕೊನೆಯ ಅವಕಾಶ: ಅರುಣ್ ಶೌರಿ
2019ರ ಚುನಾವಣೆಗಳ ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪುನರಾಯ್ಕೆಗೊಂಡರೆ ಪ್ರಜಾಸತ್ತಾತ್ಮಕ ಹಕ್ಕುಗಳ ಭವಿಷ್ಯ ಮತ್ತು ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ನಡೆಯುವ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿರುವ ಮಾಜಿ ಬಿಜೆಪಿ ಸಚಿವ ಅರುಣ್ ಶೌರಿ ಅವರು,ಪ್ರತಿಯೊಂದು ಕ್ಷೇತ್ರದಲ್ಲಿಯೂ ಬಿಜೆಪಿಯ ಎದುರು ಏಕೈಕ ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರತಿಪಕ್ಷಗಳು ಪಣ ತೊಡಲೇಬೇಕು ಎಂದು ಹೇಳಿದ್ದಾರೆ. ಇತ್ತೀಚೆಗೆ ಆಂಗ್ಲ ಸುದ್ದಿ ಜಾಲತಾಣ ‘ದಿ ವೈರ್’ನ ವೇದಿಕೆಯಲ್ಲಿ ಕಿಕ್ಕಿರಿದು ಸೇರಿದ್ದ ಸಭಿಕರ ಉಪಸ್ಥಿತಿಯಲ್ಲಿ ಶೌರಿ ಅವರು ಖ್ಯಾತ ಟಿವಿ ನಿರೂಪಕ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದ ಸಾರವಿಲ್ಲಿದೆ...
‘‘ಮೋದಿಯವರಿಗೆ ಪರ್ಯಾಯ ನಾಯಕನನ್ನು ಒದಗಿಸಲು ಪ್ರತಿಪಕ್ಷಗಳಿಗೆ ಸಾಧ್ಯವಿಲ್ಲದಷ್ಟು ಅವರು ಜನಪ್ರಿಯರಾಗಿದ್ದಾರೆ ಎನ್ನುವುದು ಒಂದು ಮಿಥ್ಯೆಯಾಗಿದೆ’’ ಎಂದು ಸ್ಪಷ್ಟಪಡಿಸಿದ ಶೌರಿ, ‘‘ರಾಹುಲ್ ಗಾಂಧಿ ಅಥವಾ ಮಮತಾ ಬ್ಯಾನರ್ಜಿ ಅಥವಾ ಇನ್ಯಾರಾದರೂ ಮೋದಿಯವರಿಗೆ ಪರ್ಯಾಯ ನಾಯಕರಾಗಬಲ್ಲರೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆದರೆ 1977ರಲ್ಲಿ ಇಂದಿರಾ ಗಾಂಧಿಯವರಿಗೆ ಯಾರು ಪರ್ಯಾಯವಾಗುತ್ತಾರೆ ಎನ್ನುವುದನ್ನು ಪ್ರಶ್ನಿಸಲು ಅವರು ಮರೆತಿದ್ದರು. ಜಗಜೀವನ ರಾಂ, ಎಚ್.ಎನ್.ಬಹುಗುಣ, ಮೊರಾರ್ಜಿ ದೇಸಾಯಿ ಅಥವಾ ಚರಣಸಿಂಗ್ ಪರ್ಯಾಯ ನಾಯಕರಾಗಬಲ್ಲರೇ ಎಂದು ಅವರು ್ರಶ್ನಿಸಿರಲಿಲ್ಲ’’ ಎಂದು ನೆನಪಿಸಿದರು.
ಕಳೆದ ತಿಂಗಳು ನಿಧನರಾದ ಅಟಲ್ಬಿಹಾರಿ ವಾಜಪೇಯಿಯವರನ್ನು ಹಲವರು ಜವಾಹರಲಾಲ್ ನೆಹರೂ ಅವರಿಗೆ ಹೋಲಿಸಿದ್ದರು ಎಂದ ಶೌರಿ, ‘‘ಹಾಗಿದ್ದರೆ 2004ರಲ್ಲಿ ವಾಜಪೇಯಿ ಅವರಿಗೆ ಯಾರು ಪರ್ಯಾಯ ನಾಯಕರಾಗಿದ್ದರು? ಅದು ಸೋನಿಯಾ ಗಾಂಧಿಯೇ ಅಥವಾ ತೆರೆಮರೆಯಲ್ಲಿದ್ದ ಮನಮೋಹನ ಸಿಂಗ್ ಅವರೇ? ಆದರೂ ಆ ಚುನಾವಣೆಯನ್ನು ಬಿಜೆಪಿ ಸೋತಿತ್ತು’’ ಎಂದರು. ಇದೇ ವೇಳೆ ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಹೇಳುತ್ತಿದ್ದ ‘‘ನಾಯಕರಿಗೆ ಪರಿಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಪರಿಹರಿಸಲು ಜನರು ತಮ್ಮದೇ ಆದ ವಿಧಾನಗಳನ್ನು ಹೊಂದಿದ್ದಾರೆ. ಜನರು ಎದ್ದುನಿಂತರೆ ಅವರು ತಪರಾಕಿ ನೀಡುವುದಷ್ಟೇ ಅಲ್ಲ, ಇನ್ನೆಂದೂ ಮೇಲೇಳದಂತಹ ಹೊಡೆತವನ್ನು ನೀಡುತ್ತಾರೆ’’ಎಂಬ ಮಾತನ್ನು ಶೌರಿ ಉಲ್ಲೇಖಿಸಿದರು.
ಪ್ರತಿಪಕ್ಷಗಳಿಗೆ ನಿಮ್ಮ ಸಲಹೆಯೇನು ಎಂಬ ಥಾಪರ್ ಪ್ರಶ್ನೆಗೆ ಉತ್ತರಿಸಿದ ಶೌರಿ, ‘‘ತಮ್ಮ ಹಳೆಯ ವಾದಗಳನ್ನು ಮತ್ತು ದ್ವೇಷಗಳನ್ನು ಮರೆತು ಪ್ರತಿ ಕ್ಷೇತ್ರದಲ್ಲಿ ಬಿಜೆಪಿಯ ವಿರುದ್ಧ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಯುವಂತೆ ನೋಡಿಕೊಳ್ಳುವುದು ಅವು ಮಾಡಬೇಕಾದ ಮೊದಲ ಕೆಲಸವಾಗಿದೆ’’ ಎಂದರು.
‘‘ಹೀಗಾಗಿ ಹಿಂದಿನದನ್ನು ಮರೆತುಬಿಡಿ. ಇಂದು ಹೊಸ ಸ್ಥಿತಿ ಎದುರಾಗಿದೆ. ಅಪಾಯದಲ್ಲಿರುವುದು ಕೇವಲ ದೇಶವಲ್ಲ, ನೀವೂ ವೈಯಕ್ತಿಕವಾಗಿ ಅಪಾಯದಲ್ಲಿದ್ದೀರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಈ ಪ್ರತಿಪಕ್ಷ ನಾಯಕರಲ್ಲಿ ಪ್ರತಿಯೊಬ್ಬರನ್ನೂ ಮೋದಿ ಬಳಸಿಕೊಂಡ ಘಳಿಗೆಯಲ್ಲಿ ಅವರನ್ನು ಮುಗಿಸಿಬಿಡುತ್ತಾರೆ ಮತ್ತು ಇದು ವಿಶೇಷವಾಗಿ ನಿತೀಶ್ ಕುಮಾರ್ ಮತ್ತು ನವೀನ್ ಪಟ್ನಾಯಕ್ ಅವರನ್ನು ಉದ್ದೇಶಿಸಿದೆ. ಆದ್ದರಿಂದ ಭೂತಕಾಲವನ್ನು ಮರೆತುಬಿಡಿ, ಪ್ರತಿಷ್ಠೆಗೆ ಅಂಟಿಕೊಳ್ಳಬೇಡಿ. ಭವಿಷ್ಯವನ್ನೂ ಮರೆತುಬಿಡಿ ಎಂದು ನಾನು ಹೇಳುತ್ತೇನೆ. ನಾಳೆ ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿಯಾಗುವ ಪಕ್ಷದೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನೂ ಮರೆತು ಬಿಡಿ’’ ಎಂದ ಶೌರಿ, ‘‘ನೀವು ಈ ಚುನಾವಣೆಯಲ್ಲಿ ಸೋತರೆ ಮತ್ತೆಂದೂ ಚುನಾವಣೆಗಳು ನಡೆಯುವುದಿಲ್ಲ ಎನ್ನುವುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ತಡೆಯಲು ಇದು ಅಂತಿಮ ಅವಕಾಶವಾಗಿದೆ. ಇಂತಹ ಪರಿಗಣನೆಗಳಿಂದಾಗಿ ನಾವು 2019ರಲ್ಲಿ ಅವಕಾಶವನ್ನು ಕಳೆದುಕೊಂಡರೆ ಮತ್ತೆಂದೂ ನ್ಯಾಯಸಮ್ಮತ ಚುನಾವಣೆಗಳನ್ನು ನಿರೀಕ್ಷಿಸಬೇಡಿ’’ ಎಂದು ಎಚ್ಚರಿಸಿದರು.
31-69 ಮತ್ತು 60-90 ಈ ಸಂಖ್ಯೆಗಳನ್ನು ಪ್ರತಿಪಕ್ಷಗಳು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ ಎಂದ ಶೌರಿ, ‘‘ಶೇ.31 ಮೋದಿ 2014ರಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಗಳಿಸಿದ ಮತಗಳ ಪ್ರಮಾಣವಾಗಿದೆ ಮತ್ತು ಈಗ ಅವರ ಜನಪ್ರಿಯತೆ ಅಂದಿಗಿಂತ ಕಡಿಮೆಯಾಗಿದೆ. ಹೀಗಾಗಿ ಪ್ರತಿಪಕ್ಷಗಳ ಆರಂಭಿಕ ಸಂಖ್ಯೆ ಶೇ.69ರಷ್ಟು ಮತಗಳ ಪಾಲು ಆಗಿದೆ. ಎರಡನೆಯ ಜೋಡಿ ಸಂಖ್ಯೆಗಳು ಲೋಕಸಭೆಯಲ್ಲಿ ಶೇ.60ರಷ್ಟು ಸ್ಥಾನಗಳನ್ನು ಹೊಂದಿರುವ ರಾಜ್ಯಗಳಲ್ಲಿಯ ಶೇ.90ರಷ್ಟು ಸ್ಥಾನಗಳನ್ನು ಗೆದ್ದುಕೊಂಡಿದ್ದರಿಂದ ಮೋದಿ ಪ್ರಧಾನಿಯಾಗಿದ್ದರು ಎನ್ನುವುದನ್ನು ನೆನಪಿಸುತ್ತವೆ. ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ.....ಕೇವಲ ಈ ಮೂರು ರಾಜ್ಯಗಳಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾದರೂ ಮೋದಿ ಮತ್ತೊಮ್ಮೆ ಶೇ.90ರಷ್ಟು ಸ್ಥಾನಗಳನ್ನು ಗೆಲ್ಲುವುದು ಅಸಾಧ್ಯವಾಗುತ್ತದೆ’’ ಎಂದು ವಿವರಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವರು ತನಗೆ ದೂರವಾಣಿ ಕರೆಯನ್ನು ಮಾಡಿರಲಿಲ್ಲ, ಆದ್ದರಿಂದ ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ತಾನು ಬೆಂಬಲಿಸಿರಲಿಲ್ಲ ಎಂದು ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ಮಾಡಿದ್ದ ವರದಿಗಳನ್ನು ಪ್ರಸ್ತಾಪಿಸಿದ ಅವರು, ಪ್ರತಿಪಕ್ಷಗಳು ತಮ್ಮ ಪ್ರತಿಷ್ಠೆಗೆ ಅಂಟಿಕೊಳ್ಳಬಾರದು. ದೇಶವು ಅಪಾಯದಲ್ಲಿದೆ ಎಂದು ನೀವು(ಕೇಜ್ರಿವಾಲ್) ಹೇಳುತ್ತೀರಿ ಮತ್ತು ‘‘ಓಹ್, ಅವರು ನನಗೆ ದೂರವಾಣಿ ಕರೆ ಮಾಡಲಿಲ್ಲ’’ ಎಂದು ದೂರುತ್ತೀರಿ ಎಂದು ಕುಟುಕಿದರು.
ಮೋದಿ ಪರಾಭವಗೊಂಡರೆ ಮತ್ತದೇ ಹಿಂದಿನ ಕಳಂಕಿತ ನಾಯಕರು ಅಧಿಕಾರಕ್ಕೆ ಮರಳುತ್ತಾರೆ ಎಂಬ ಜನರಲ್ಲಿ ಮನೆಮಾಡಿರುವ ಆತಂಕದ ಕುರಿತು ಸಭಿಕರೋರ್ವರ ಪ್ರಶ್ನೆಗೆ ಉತ್ತರವಾಗಿ ಶೌರಿ ‘‘ನಾವು ಸಮುದ್ರಯಾನಕ್ಕೆ ಸಜ್ಜಾಗಿದ್ದಾಗ ಮಾರ್ಗಮಧ್ಯೆ ಎದುರಾಗಬಹುದಾದ ಚಂಡಮಾರುತದ ಬಗ್ಗೆ ಭಯಪಟ್ಟುಕೊಂಡರೆ ನಮ್ಮನ್ನು ತೀರದಲ್ಲೇ ಮುಳುಗಿಸಲು ಹಡಗಿನವರಿಗೆ ಅವಕಾಶವನ್ನು ಕಲ್ಪಿಸುತ್ತೇವೆ’’ ಎಂಬ ಉರ್ದು ಸಾಲುಗಳನ್ನು ನೆನಪಿಸಿದರು. ‘‘ನೂತನ ಸರಕಾರವು ತನ್ನೊಂದಿಗೆ ಸಮಸ್ಯೆಗಳನ್ನೂ ತರಬಹುದು ಮತ್ತು ಅವುಗಳನ್ನು ಎದುರಿಸಬಹುದು ಕೂಡ. ಭಾರತದಲ್ಲೀಗ ಹೊಸ ನಾಯಕತ್ವ ಪ್ರಚಂಡ ವೇಗದಲ್ಲಿ ಹೊರಹೊಮ್ಮುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು. ಜಿಗ್ನೇಶ್ ಮೇವಾನಿ, ಕನ್ಹಯ್ಯಿ ಕುಮಾರ್, ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಇವರೆಲ್ಲ ಹೊಸ ನಾಯಕತ್ವವನ್ನು ಒದಗಿಸಿದ್ದಾರೆ’’ ಎಂದರು.
ಮೋದಿ ಸರಕಾರವು ತುಲನಾತ್ಮಕವಾಗಿ ಹಗರಣ ಮುಕ್ತವಾಗಿದೆ ಎಂಬ ಅಭಿಪ್ರಾಯದ ಕುರಿತು ಥಾಪರ್ ಪ್ರಶ್ನಿಸಿದಾಗ, ಅಂದಿನ ಯುಪಿಎ ಮತ್ತು ಈಗಿನ ಎನ್ಡಿಎ ಸರಕಾರಗಳ ಎರಡೂ ರಫೇಲ್ ಒಪ್ಪಂದಗಳ ಬಗ್ಗೆ ದೀರ್ಘವಾಗಿ ಮಾತನಾಡಿದ ಶೌರಿ, ‘‘ಸರಕಾರವು ಈಗ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತು ಆರೋಪಗಳನ್ನು ತನಿಖೆಗೊಳಪಡಿಸುವಲ್ಲಿ ಮಾಧ್ಯಮಗಳು ವಿಫಲಗೊಂಡಿವೆ ಎಂದು ನಾನು ಭಾವಿಸಿದ್ದೇನೆ. ಯಾವುದೇ ಸಂದರ್ಭದಲ್ಲಿಯೂ ಭ್ರಷ್ಟಾಚಾರವೆಂದರೆ ಕೇವಲ ಹಣದ ಅಕ್ರಮ ವಿನಿಮಯ ಅಲ್ಲ ಎನ್ನುವುದನ್ನು ಮರೆಯಬೇಡಿ. ಭ್ರಷ್ಟಾಚಾರದ ಇತರ ರೂಪಗಳೂ ಇವೆ. ನ್ಯಾಯದ ಭ್ರಷ್ಟಾಚಾರ, ಸಿದ್ಧಾಂತದ ಭ್ರಷ್ಟಾಚಾರ,ಇತಿಹಾಸದ ಭ್ರಷ್ಟಾಚಾರ,ಸಾಮಾಜಿಕ ಭ್ರಷ್ಟಾಚಾರ ಇತ್ಯಾದಿಗಳೂ ಮೆರೆಯುತ್ತಿವೆ’’ ಎಂದರು.
ತಮ್ಮ ಪಕ್ಷಗಳ ನೇತೃತ್ವದ ಸರಕಾರಗಳಲ್ಲಿ ಪಕ್ಷಾಧ್ಯಕ್ಷರಾಗಿ ಸೋನಿಯಾ ಗಾಂಧಿ ಮತ್ತು ಅಮಿತ್ ಶಾ ಅವರ ಪಾತ್ರಗಳ ಕುರಿತು ಥಾಪರ್ ಪ್ರಶ್ನೆಗೆ ಶೌರಿ, ‘‘ಶಾ ಮೋದಿಯವರ ಸಂಪುಟ ಸದಸ್ಯರಿಗಿಂತ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ. ಅಟಲ್ಜಿ ಅವರ ಸರಕಾರದಲ್ಲಿ ನನ್ನಂತಹ ಸಣ್ಣವ್ಯಕ್ತಿಯು ಕೂಡ ಎಲ್.ಕೆ. ಅಡ್ವಾಣಿಯವರಂತಹ ಹಿರಿಯ ನಾಯಕರನ್ನು ಪ್ರಶ್ನಿಸಬಹುದಿತ್ತು. ಅಟಲ್ಜಿ ಅವರು ಮುಕ್ತ ಚರ್ಚೆಗಳನ್ನು ಉತ್ತೇಜಿಸುತ್ತಿದ್ದರು. ಆದರೆ ಅದು ಈಗ ಸಾಧ್ಯವಿಲ್ಲ’’ ಎಂದು ಉತ್ತರಿಸಿದರು. ಸರಕಾರ ಮತ್ತು ಬಿಜೆಪಿ ಇವೆರಡೂ ಮೋದಿ-ಶಾ ಜೋಡಿಯ ಕೈಗಳಲ್ಲಿ ಅತಿಯಾಗಿ ಕೇಂದ್ರೀಕರಣಗೊಂಡಿವೆ ಎನ್ನುವುದನ್ನು ಬೆಟ್ಟುಮಾಡಿದರು.
ಬಿಜೆಪಿ ಈಗ ಒಂದು ಪಕ್ಷವಾಗಿ ಉಳಿದಿಲ್ಲ ಎಂದ ಅವರು, ‘‘ಶಾ ಮತ್ತು ಮೋದಿ ಅವರ ಎದುರು ಮುಕ್ತವಾಗಿ ಮಾತನಾಡಲು ಪಕ್ಷದವರೇ ಹೆದರಿಕೊಳ್ಳುತ್ತಿದ್ದಾರೆ. ಇದು ‘ಒಂದು’ ಮತ್ತು ಮುಕ್ಕಾಲು ಜನರ ಸರಕಾರ ಮತ್ತು ಪಕ್ಷವಾಗಿದೆ. ಆ ‘ಒಂದು’ ಅಮಿತ್ ಶಾ ಆಗಿದ್ದಾರೆ, ಮೋದಿಯಲ್ಲ. ಮೋದಿ ಭಾಷಣಗಳಲ್ಲಿ, ಕಾರ್ಯಕ್ರಮಗಳಲ್ಲಿ ಮತ್ತು ತನ್ನ ಇಮೇಜ್ ಉಳಿಸಿಕೊಳ್ಳುವಲ್ಲಿ ವ್ಯಸ್ತರಾಗಿದ್ದರೆ, ವಿವಿಧ ಏಜೆನ್ಸಿಗಳ ಕಾರ್ಯಗಳನ್ನು ನಿರ್ದೇಶಿಸುತ್ತ ಶಾ ಸರಕಾರದ ಮೇಲೆ ಹಿಡಿತ ಹೊಂದಿದ್ದಾರೆ. ಅರುಣ್ ಜೇಟ್ಲಿಯವರ ಮಟ್ಟಿಗೆ ಹೇಳುವುದಾದರೆ ಅವರು ಮೋದಿ ಮತ್ತು ಶಾ ಅವರ ‘ಬ್ಲಾಗಿಂಗ್ ಸಚಿವರ’ ಮಟ್ಟಕ್ಕೆ ಇಳಿಸಲ್ಪಟ್ಟಿದ್ದಾರೆ’’ ಎಂದರು.
ಮೋದಿ ಆಡಳಿತದಲ್ಲಿ ಹೆಚ್ಚಿನ ಸರಕಾರಿ ಸಂಸ್ಥೆಗಳನ್ನು ಹೇಗೆ ಬುಡಮೇಲುಗೊಳಿಸಲಾಗಿದೆ ಎನ್ನುವುದನ್ನು ವಿವರಿಸುವ ಪ್ರಯತ್ನ ಮಾಡಿದ ಶೌರಿ, ಉತ್ತರ ಪ್ರದೇಶದಲ್ಲಿ ಪೊಲೀಸರು ನಕಲಿ ಎನ್ಕೌಂಟರ್ಗಳನ್ನು ನಡೆಸುತ್ತಿರುವುದನ್ನು ಮತ್ತು ಭಿನ್ನಮತ ಎತ್ತುವವರನ್ನು ಬಂಧಿಸುತ್ತಿರುವುದನ್ನು ಉದಾಹರಣೆಯಾಗಿ ನೀಡಿದರು. ‘‘ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ 54 ಸಾಕ್ಷಿಗಳು ತಮ್ಮ ಹೇಳಿಕೆಗಳಿಂದ ಹಿಂದಕ್ಕೆ ಸರಿದಿದ್ದಾರೆ. ಇದು ಭ್ರಷ್ಟಾಚಾರವಲ್ಲವೇ’’ ಎಂದು ಪ್ರಶ್ನಿಸಿದ ಅವರು, ಮೋದಿ-ಶಾ ಜೋಡಿಯು ಕಾನೂನು ಪ್ರಕ್ರಿಯೆಗಳನ್ನೇ ಬುಡಮೇಲು ಮಾಡಿದೆ ಎಂದು ಆರೋಪಿಸಿದರು.
ಭೀಮಾ-ಕೋರೆಗಾಂವ್ ಘಟನೆಗೆ ಮತ್ತು ಮೋದಿ ಹತ್ಯೆಗೆ ನಡೆದಿತ್ತೆನ್ನಲಾದ ಸಂಚಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳುತ್ತಿರುವ ದಾಖಲೆಗಳನ್ನು ‘ಸೃಷ್ಟಿಸಲಾಗಿದೆ’ ಎಂದು ಅವರು ಆಪಾದಿಸಿದರು.
‘‘2019ರ ಚುನಾವಣೆಗಳಿಗೆ ಮುನ್ನ ಜನರ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಮೋದಿ-ಶಾ ಜೋಡಿ ಹವಣಿಸುತ್ತಿದೆ’’ ಎಂದ ಶೌರಿ, ಇತ್ತೀಚೆಗೆ ಐವರು ಮಾನವ ಹಕ್ಕು ಹೋರಾಟಗಾರರ ಬಂಧನವನ್ನು ಬೆಟ್ಟು ಮಾಡಿದರು. ಇದು ‘ಗುಜರಾತ್ ಮಾದರಿ’ಯಾಗಿದೆ ಎಂದ ಅವರು, 2002-2014ರ ಅವಧಿಯಲ್ಲಿ ಗುಜರಾತ್ ಪೊಲೀಸರೂ ಮೋದಿಯವರ ಹತ್ಯೆ ನಡೆಯಬಹುದು ಎಂದು ಹಲವಾರು ಬಾರಿ ಹೇಳಿಕೊಂಡಿದ್ದರು. ಈಗ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ-ಶಾ ಜೋಡಿಯು ಇದೇ ತಂತ್ರವನ್ನು ಮುಂದೆ ಮಾಡುತ್ತಿದೆ ಎಂದು ಆರೋಪಿಸಿದರು. ಇದರ ಹೊರತಾಗಿ ಅವರ ಬಳಿ ಇರುವ ಇನ್ನೊಂದು ಏಕೈಕ ತಂತ್ರವೆಂದರೆ ಹಿಂದೂ-ಮಸ್ಲಿಮ್ ಒಡಕನ್ನು ಉತ್ತೇಜಿಸುವುದು ಎಂದರು.
ನೂತನ ಸರಕಾರವು ತನ್ನೊಂದಿಗೆ ಸಮಸ್ಯೆಗಳನ್ನೂ ತರಬಹುದು ಮತ್ತು ಅವುಗಳನ್ನು ಎದುರಿಸಬಹುದು ಕೂಡ. ಭಾರತದಲ್ಲೀಗ ಹೊಸ ನಾಯಕತ್ವ ಪ್ರಚಂಡ ವೇಗದಲ್ಲಿ ಹೊರಹೊಮ್ಮುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು. ಜಿಗ್ನೇಶ್ ಮೇವಾನಿ, ಕನ್ಹಯ್ಯಿ ಕುಮಾರ್, ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಇವರೆಲ್ಲ ಹೊಸ ನಾಯಕತ್ವವನ್ನು ಒದಗಿಸಿದ್ದಾರೆ.
ಕೃಪೆ: thewire