ಗೊಂದಲಕ್ಕೀಡುಮಾಡುವ ಔಷಧಿಗಳು
ನೀವು ಕಾಲ್ ಪೋಲ್, ಡೋಲೋ, ಕ್ರೋಸಿನ್, ಪ್ಯಾರಾಸಿಪ್ ಮುಂತಾದ ಮಾತ್ರೆಗಳ ಹೆಸರು ಕೇಳಿರಬಹುದು. ಇವೆಲ್ಲವುಗಳಲ್ಲೂ ಇರುವುದು ಪ್ಯಾರಾಸಿಟಮೋಲ್ ಎಂಬ ಜ್ವರ ನಿವಾರಕ ಔಷಧ. ಅವುಗಳೆಲ್ಲಾ ಆ ಔಷಧಿಗಳ ಮಾರುಕಟ್ಟೆ ಸ್ಥಾಪಿಸಲಿಕ್ಕಾಗಿ ಆಯಾ ಕಂಪೆನಿಗಳು ತಮ್ಮ ಮಾತ್ರೆಗಳಿಗೆ ಕೊಟ್ಟ ಟ್ರೇಡ್ ನೇಮ್ ಅಥವಾ ವ್ಯಾಪಾರ ನಾಮ. ಪ್ಯಾರಾಸಿಟಮೋಲ್ ಎಂದರೆ ಅದರಲ್ಲಿರುವ ಔಷಧಿ. ಔಷಧಿಯ ಹೆಸರೇನಿದೆಯೋ ಅದನ್ನೇ ಜನರಿಕ್ ಎನ್ನುತ್ತಾರೆ.
ಹೀಗೆ ಒಂದೇ ಔಷಧಿಯನ್ನು ಸಹಸ್ರಾರು ಕಂಪೆನಿಗಳು ಉತ್ಪಾದಿಸುವಾಗ ತಂತಮ್ಮ ಟ್ರೇಡ್ ನೇಮ್ ಗಳನ್ನು ಹಾಕಿ ಆ ಹೆಸರಿನಲ್ಲಿ ತಮ್ಮ ವ್ಯಾಪಾರ ವೃದ್ಧಿಸುತ್ತಾರೆ.
ಹೀಗೆಯೇ ಎಲ್ಲಾ ಔಷಧಿಗಳನ್ನೂ ಬೇರೆ ಬೇರೆ ಕಂಪೆನಿಗಳು ಉತ್ಪಾದಿಸಿ ಅವುಗಳಿಗೆ ತಮ್ಮದೇ ಆದ ಟ್ರೇಡ್ ನೇಮ್ ಹಾಕುತ್ತಾರೆ. ನೀವು ಅನೇಕ ಬಾರಿ ಔಷಧಾಲಯಗಳಲ್ಲಿ "ಅದೇ ಔಷಧಿ ಆದರೆ ಕಂಪೆನಿ ಬೇರೆ" ಎಂದು ಹೇಳುವುದನ್ನು ಕೇಳಿರಬಹುದು. ಹೀಗೆ ಒಂದು ಕಂಪೆನಿ ಹಾಕಿದ ಟ್ರೇಡ್ ನೇಮನ್ನು ಇನ್ನೊಂದು ಕಂಪೆನಿ ಯಾವುದೇ ಕಾರಣಕ್ಕೂ ಹಾಕುವಂತಿಲ್ಲ. ಇದೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ. ಇನ್ನೊಂದು ಉದಾಹರಣೆ ನೋಡಿ. ಒಂದು ಹೆಸರಲ್ಲಿ ಒಂದು ಸಂಸ್ಥೆ ನೋಂದಾಯಿಸಲ್ಪಟ್ಟರೆ ಪುನಃ ಅದೇ ಹೆಸರಲ್ಲಿ ಇನ್ನೊಂದು ಸಂಸ್ಥೆಗೆ ನೋಂದಾವಣಿ ಕೊಡುವಂತಿಲ್ಲ.
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇತ್ತೀಚೆಗೆ "Medzole" ಎಂಬ ಹೆಸರಲ್ಲಿ ಐದು ಕಂಪೆನಿಗಳು ಬೇರೆ ಬೇರೆ ಖಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಅವುಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆಯಾದರೂ ವಿಷಯ ಏನೆಂದು ವೈದ್ಯಕೀಯ ವೃತ್ತಿಪರರ ಹೊರತಾಗಿ ಬೇರೆ ಯಾರಿಗೂ ತಿಳಿಯುವ ಸಾಧ್ಯತೆ ತೀರಾ ಕಡಿಮೆ.
Medzole ಎಂಬ ಹೆಸರಿನ ಔಷಧಿಗಳ ಕುರಿತಂತೆ ಸ್ವಲ್ಪ ವಿವರಣೆ-
- Esomeprazole ಎಂಬ h.pylori ಬ್ಯಾಕ್ಟೀರಿಯಾ ಸೋಂಕಿನ ಚಿಕಿತ್ಸೆಗೆ ಬಳಸುವ ಔಷಧಿಯೊಂದನ್ನು Medzole- 40 ಎಂಬ ಹೆಸರಿನಲ್ಲಿ ಕಂಪೆನಿಯೊಂದು ಮಾರುಕಟ್ಟೆಗೆ ಬಿಟ್ಟಿದೆ.
- Albendazole ಎಂಬ ಜಂತುಹುಳುವಿನ ಚಿಕಿತ್ಸೆಗೆ ಬಳಸುವ ಔಷದಿಯೊಂದನ್ನು Medzole 400 ಎಂಬ ಹೆಸರಿನಲ್ಲಿ ಇನ್ನೊಂದು ಕಂಪೆನಿಯೂ ಮಾರುಕಟ್ಟೆಗೆ ಹಾಕಿದೆ.
- Metranidazole ಎಂಬ ಕೀವಿನಿಂದಾಗುವ ಸೋಂಕಿನ ಚಿಕಿತ್ಸೆ ಮತ್ತು ಹೊಟ್ಟೆ ನೋವಿನ ಚಿಕಿತ್ಸೆಯಲ್ಲೂ ಬಳಸಲಾಗುವ ಔಷಧಿಯಿರುವ ಸಿರಪ್ ಒಂದನ್ನು Medzole oral suspension ಎಂಬ ಹೆಸರಿನಲ್ಲಿ ಇನ್ನೊಂದು ಕಂಪೆನಿ ಮಾರುಕಟ್ಟೆಗೆ ಹಾಕಿದೆ.
- Itraconazole ಎಂಬ ಚರ್ಮರೋಗದ ಚಿಕಿತ್ಸೆಗೆ ಬಳಸಲಾಗುವ ಔಷಧಿಯಿರುವ ಕ್ಯಾಪ್ಸೂಲೊಂದನ್ನು ಇನ್ನೊಂದು ಕಂಪೆನಿ Medzole 200 ಎಂಬ ಹೆಸರಲ್ಲಿ ಮಾರುಕಟ್ಟೆಗೆ ಹಾಕಿದೆ.
- Pantaprazole ಎಂಬ ವಾಯುಕ್ಷೋಭೆಯ ಚಿಕಿತ್ಸೆಗೆ ಬಳಸಲಾಗುವ ಚುಚ್ಚುಮದ್ದೊಂದನ್ನು Medzole ಎಂಬ ಹೆಸರಲ್ಲಿ ಇನ್ನೊಂದು ಕಂಪೆನಿ ಮಾರುಕಟ್ಟೆಗೆ ಹಾಕಿದೆ.
ಈ ಮೇಲೆ ಪಟ್ಟಿ ಮಾಡಿದ ಔಷಧಿಗಳಲ್ಲಿ ಒಂದೇ ಒಂದು ಔಷಧಿಯ ಅಡ್ಡ ಪರಿಣಾಮದ ಕುರಿತು ವಿವರಿಸುವೆ.
Metranidazole ಎಂಬ ಔಷಧಿಯನ್ನು ಪ್ರಯೋಗಾರ್ಥ ಇಲಿಗಳ ಮೇಲೆ ಪ್ರಯೋಗಿಸಿದಾಗ "ಅದರ ಓವರ್ ಡೋಸ್ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಬಹುದು " ಎಂದು ತಿಳಿದು ಬಂದಿದೆ. ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ಆ ಔಷಧಿಯನ್ನು ಉತ್ಪಾದಿಸುವ ಹೆಚ್ಚಿನೆಲ್ಲಾ ಕಂಪೆನಿಗಳು ಔಷಧದ ಪೊಟ್ಟಣದ ಮೇಲೆಯೇ ನಮೂದಿಸಿದೆ.
ಈ ಐದೂ ಔಷಧಿಗಳನ್ನು ಗಮನಿಸಿ. ಒಂದಕ್ಕೊಂದು ತೀರಾ ವ್ಯತಿರಿಕ್ತವಿರುವ ಖಾಯಿಲೆಗಳಿಗೆ ಬಳಸಲಾಗುವ ಔಷಧಿಗಳಿವು. ಎರಡು ವರ್ಷಗಳ ಹಿಂದೆ ಪ್ರಧಾನಿಯವರು ಯಾವ ವೈದ್ಯನೂ ಔಷಧಿಗಳ ಟ್ರೇಡ್ ನೇಮ್ ಬರೆಯುವಂತಿಲ್ಲ, ಎಲ್ಲಾ ವೈದ್ಯರೂ ಜನರಿಕ್ ಹೆಸರುಗಳನ್ನೇ ಬರೆಯಬೇಕು. ಈ ಕುರಿತು ಕಾನೂನು ಜಾರಿಗೆ ತರುವ ಪ್ರಸ್ತಾಪವನ್ನೂ ಇಟ್ಟಿದ್ದರು. ಆದರೆ ಪ್ರಸ್ತಾಪ ನೆನೆಗುದಿಗೆ ಬಿದ್ದಿದೆ. ಇದರ ಹಿಂದೆ ಔಷಧೋದ್ಯಮದ ಬಂಡವಾಳಶಾಹಿಗಳ ಕೈವಾಡವಿರುವ ಸಾಧ್ಯತೆ ನಿಚ್ಚಳ.
ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಟ್ರೇಡ್ ನೇಮ್ ಬರೆಯುವ ಪರಿಪಾಠವೇ ಇಲ್ಲ. ಕೇವಲ ಜನರಿಕ್ ಹೆಸರುಗಳನ್ನು ಮಾತ್ರ ಬರೆಯಲಾಗುತ್ತದೆ. ಅಲ್ಲೆಲ್ಲಾ ಭಾರತದಲ್ಲಿರುವಂತೆ ನಾಯಿಕೊಡೆಗಳಂತೆ ಔಷಧಿ ತಯಾರಿಕಾ ಕಂಪೆನಿಗಳೂ ಇಲ್ಲ. ಆದುದರಿಂದಲೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಲ್ಯಾಟಿನ್ ಅಮೇರಿಕಾದ ದೇಶಗಳಲ್ಲಿ ಉತ್ಪಾದಿಸುವ ಔಷಧಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. ಅಲ್ಲೆಲ್ಲಾ ಪ್ರತೀ ಔಷಧಿ ತಯಾರಿಕಾ ಕಂಪೆನಿಗಳ ಮೇಲೆ ಸರಕಾರ ನಿಗಾ ವಹಿಸುತ್ತದೆ. ಭಾರತದಂತೆ ಗಲ್ಲಿ ಗಲ್ಲಿಗಳಲ್ಲಿ ಔಷಧಿ ತಯಾರಕ ಕಂಪೆನಿಗಳಿಗೆ ಪರವಾನಗಿಯನ್ನು ಜಗತ್ತಿನ ಯಾವ ರಾಷ್ಟ್ರಗಳಲ್ಲೂ ನೀಡಲಾಗುವುದಿಲ್ಲ.
ನಮ್ಮಲ್ಲಿ ಔಷಧ ನಿಯಂತ್ರಣ ಇಲಾಖೆಗಳಿವೆ. ಒಂದೇ ಟ್ರೇಡ್ ನೇಮ್ ನಲ್ಲಿ ವ್ಯತಿರಿಕ್ತ ಖಾಯಿಲೆಯ ಚಿಕಿತ್ಸೆಗೆ ಬಳಸಲಾಗುವ ಔಷಧಿಗಳನ್ನು ಔಷಧ ಮಾಫಿಯಾದ ಕುಳಗಳು ಮಾರುಕಟ್ಟೆಗೆ ಬಿಡುತ್ತಿದ್ದರೂ ಇವರೇನು ಕತ್ತೆ ಕಾಯುತ್ತಿದ್ದಾರಾ..? ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನೆಲ್ಲಾ ವೈದ್ಯರು ಟ್ರೇಡ್ ನೇಮ್ ಗಳನ್ನೇ ಬರೆಯುತ್ತಾರೆ. ವೈದ್ಯನೊಬ್ಬ Medzole ಎಂದು ಬರೆದರೆ ಔಷಧಾಲಯದವರು ಯಾವ ಔಷಧಿಯನ್ನು ನೀಡಬೇಕು. ಸರಿ ವೈದ್ಯರಲ್ಲಿ ವಿಚಾರಿಸೋಣವೆಂದರೆ ವೈದ್ಯನೊಬ್ಬ ದಿನಕ್ಕೆ ನಲ್ವತ್ತೈವತ್ತು ರೋಗಿಗಳನ್ನು ನೋಡುತ್ತಾನೆ. ಆತ ಯಾರಿಗೆ ಯಾವ ಔಷಧಿ ಬರೆದಿದ್ದಾನೆಂದು ನೆನಪಿಡುವುದು ಕಷ್ಟ.
ಕೆಲವೊಮ್ಮೆ ರೋಗಿಗಳು ವೈದ್ಯ ಬರೆದು ಕೊಟ್ಟ ಕೂಡಲೇ ಔಷಧಿ ಖರೀದಿಸುವುದಿಲ್ಲ. ಆತ ಮರುದಿನ ಖರೀದಿಸಲೂಬಹುದು. ಇಂತಹ ಸಂದರ್ಭಗಳಲ್ಲೆಲ್ಲಾ ಔಷಧಾಲಯದವರು ದೂರವಾಣಿ ಕರೆ ಮಾಡಿ ಯಾವ ಔಷಧಿಯೆಂದು ವಿಚಾರಿಸಿದರೂ ಪ್ರಯೋಜನವಾಗದು. ಇದು ಜನಾರೋಗ್ಯದ ಮೇಲೆ ಬೀರಬಲ್ಲ ಪ್ರತಿಕೂಲ ಪರಿಣಾಮ ಊಹಿಸಲೂ ಭಯವಾಗುತ್ತದೆ. ಔಷಧ ನಿಯಂತ್ರಣ ಇಲಾಖೆ ಈ ಲೇಖನವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿದೆ.