ಮೋದಿ ಹತ್ಯೆಗೆ ಈ ವರೆಗೆ ನಡೆದ ಸಂಚುಗಳೆಷ್ಟು ಮತ್ತು ಅದರಲ್ಲಿ ವಾಸ್ತವವೆಷ್ಟು?
ಭಾಗ-1
ಆಗಸ್ಟ್ನಲ್ಲಿ ಬಂಧಿಸಲ್ಪಟ್ಟ ಹೋರಾಟಗಾರರು ಮೋದಿ ಹತ್ಯೆಯ ಸಂಚಿನಲ್ಲಿ ಪಾಲ್ಗೊಂಡಿದ್ದಕ್ಕೆ ಯಾವ ಪುರಾವೆ ಇದೆ ಎಂದು ಪೊಲೀಸರು ಸ್ಪಷ್ಟಪಡಿಸಿಲ್ಲ. ಆದರೆ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಪೊಲೀಸರು ಹೇಳಿರುವ ಸನ್ನಿವೇಶಗಳ ಸುತ್ತ ಅಂದರೆ ಹತ್ಯೆ ಸಂಚು ರೂಪಿಸಿದ್ದಾರೆ ಎನ್ನಲಾದ ವ್ಯಕ್ತಿಗಳ ಹಿನ್ನೆಲೆ, ಇದನ್ನು ಬಹಿರಂಗಪಡಿಸಿದ ಪ್ರಸ್ತುತ ಕಾಲಘಟ್ಟದ ರಾಜಕೀಯ ವಾತಾವರಣ ಹಾಗೂ ಈ ಸುದ್ದಿಸ್ಫೋಟ ಮಾಡಿದ ಮಾಧ್ಯಮ ಸಂಸ್ಥೆಗಳ ಬಗ್ಗೆ ಜಿಜ್ಞಾಸೆಗಳು ಹುಟ್ಟಿಕೊಂಡಿವೆ.
ಆಗಸ್ಟ್ 28ರಂದು ಕಾರ್ಮಿಕ ಮುಖಂಡೆ ಹಾಗೂ ವಕೀಲೆ ಸುಧಾ ಭಾರದ್ವಾಜ್, ಲೇಖಕರಾದ ಗೌತಮ್ ನವ್ಲಾಖ ಮತ್ತು ವರವರ ರಾವ್, ವಕೀಲರಾದ ಅರುಣ್ ಫೆರೇರಾ ಮತ್ತು ವೆರ್ನನ್ ಗೊನ್ಸಾಲ್ವಿಸ್ ಅವರನ್ನು ಬಂಧಿಸಿದ ಪುಣೆ ಪೊಲೀಸರು ಇತರ ಹಲವರ ಮನೆಗಳ ಮೇಲೆ ದಾಳಿ ನಡೆಸಿದರು. ಇವರ ಬಂಧನಕ್ಕೆ ಪೊಲೀಸರು ಹಲವು ವಿವರಣೆಗಳನ್ನು ನೀಡಿದರು. ಕಳೆದ ಜನವರಿಯಲ್ಲಿ ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು, ಸರಕಾರವನ್ನು ಕಿತ್ತೊಗೆಯುವ ಫ್ಯಾಶಿಸ್ಟ್ ವಿರೋಧಿ ಸಂಚು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ ಕಾರಣಗಳು ಇದರಲ್ಲಿ ಸೇರಿವೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2014ರ ಸಾರ್ವತ್ರಿಕ ಚುನಾವಣೆ ಪ್ರಚಾರದ ವೇಳೆ ಹಾಗೂ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸುವ ವೇಳೆ ಹಲವು ಬಾರಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವುದು ಪೊಲೀಸರ ವಿವರಣೆ.
ಈ ವರ್ಷದ ಜೂನ್ನಲ್ಲಿ ಹಲವು ರಾಜ್ಯಗಳಲ್ಲಿ ಪುಣೆ ಪೊಲೀಸರು ಇಂಥದ್ದೇ ಕಾರ್ಯಾಚರಣೆ ನಡೆಸಿ, ನಗರ ನಕ್ಸಲೀಯ ಚಟುವಟಿಕೆಗಳ ಆರೋಪದಲ್ಲಿ ಬಂಧಿಸಿದ್ದರು. ಇವರು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೂ ಪ್ರಚೋದನೆ ನೀಡಿದ್ದರು ಎಂದು ಆಪಾದಿಸಲಾಗಿತ್ತು. ಬಂಧನದ ಎರಡು ದಿನಗಳ ಬಳಿಕ, ಐದು ಮಂದಿ ಬಂಧಿತರ ಪೈಕಿ ಒಬ್ಬರಾದ ರೋನಾ ವಿಲ್ಸನ್ ಅವರ ನಿವಾಸದಿಂದ ಒಂದು ಪತ್ರವನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ಹೇಳಿದ್ದರು. ಮೋದಿಯವರ ಹತ್ಯೆಗೆ ರಾಜೀವ್ಗಾಂಧಿ ಹತ್ಯೆ ಮಾದರಿಯ ಸಂಚು ರೂಪಿಸುವ ಬಗ್ಗೆ ಇದರಲ್ಲಿ ಉಲ್ಲೇಖವಿತ್ತು ಎನ್ನುವುದು ಪೊಲೀಸರ ವಾದ. ಆಗಸ್ಟ್ 31ರಂದು ಇತ್ತೀಚಿನ ಬಂಧನದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಪರಮ್ ಬೀರ್ ಸಿಂಗ್ ಅವರು, ಈ ಹೋರಾಟಗಾರರ ವಿರುದ್ಧ ಪೊಲೀಸರಿಗೆ ಬಲವಾದ ಪುರಾವೆ ಲಭ್ಯವಾಗಿದೆ. ಈ ಪತ್ರದ ಜತೆಗೆ ವಿಲ್ಸನ್ ನಿವಾಸದಿಂದ ಸಾವಿರಾರು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಿಸಿದ್ದರು.
ಆದರೆ ಆಗಸ್ಟ್ನಲ್ಲಿ ಬಂಧಿಸಲ್ಪಟ್ಟ ಹೋರಾಟಗಾರರು ಮೋದಿ ಹತ್ಯೆಯ ಸಂಚಿನಲ್ಲಿ ಪಾಲ್ಗೊಂಡಿದ್ದಕ್ಕೆ ಯಾವ ಪುರಾವೆ ಇದೆ ಎಂದು ಪೊಲೀಸರು ಸ್ಪಷ್ಟಪಡಿಸಿಲ್ಲ. ಆದರೆ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಪೊಲೀಸರು ಹೇಳಿರುವ ಸನ್ನಿವೇಶಗಳ ಸುತ್ತ ಅಂದರೆ ಹತ್ಯೆ ಸಂಚು ರೂಪಿಸಿದ್ದಾರೆ ಎನ್ನಲಾದ ವ್ಯಕ್ತಿಗಳ ಹಿನ್ನೆಲೆ, ಇದನ್ನು ಬಹಿರಂಗಪಡಿಸಿದ ಪ್ರಸ್ತುತ ಕಾಲಘಟ್ಟದ ರಾಜಕೀಯ ವಾತಾವರಣ ಹಾಗೂ ಈ ಸುದ್ದಿಸ್ಫೋಟ ಮಾಡಿದ ಮಾಧ್ಯಮ ಸಂಸ್ಥೆಗಳ ಬಗ್ಗೆ ಜಿಜ್ಞಾಸೆಗಳು ಹುಟ್ಟಿಕೊಂಡಿವೆ. ಭೀಮಾ ಕೋರೆಗಾಂವ್ ಹಿಂಸಾಚಾರದ ಹಿಂದಿನ ತನಿಖೆ ನಡೆಸಿದಾಗ ಬೆಳಕಿಗೆ ಬಂದಿದೆ ಎನ್ನಲಾದ ಈ ಹತ್ಯೆ ಸಂಚಿನ ಸುದ್ದಿಯನ್ನು ಮೋದಿಯವರ ರಾಜಕೀಯ ವಿರೋಧಿಗಳು ಅಸಂಬದ್ಧ ಎಂದು ಬಣ್ಣಿಸುತ್ತಾರೆ. ರಾಷ್ಟ್ರೀಯ ಜನತಾದಳ, ಮೋದಿಗೆ ಪ್ರಾಣಾಪಾಯ ಇದೆ ಎಂಬ ವರದಿಗಳನ್ನು ಕಪೋಲ ಕಲ್ಪಿತ ಎಂದು ಬಣ್ಣಿಸಿದೆ. ‘‘ಜನರ ಅನುಕಂಪ ಗಿಟ್ಟಿಸುವ ತಂತ್ರ’’ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶರದ್ ಪವಾರ್ ಹೇಳಿದ್ದರೆ, ಮೋದಿಯವರ ಹಳೆಯ ಕಾರ್ಯತಂತ್ರ ಇದು ಎಂದು ಕಾಂಗ್ರೆಸ್ ಟೀಕಿಸಿದೆ. ಹತ್ಯೆ ಬೆದರಿಕೆ ಪರಿಸ್ಥಿತಿಯ ಗಂಭೀರತೆ ಹಾಗೂ ವಿರೋಧ ಪಕ್ಷಗಳ ಪ್ರತಿಕ್ರಿಯೆಯ ಸ್ವರೂಪದ ಹಿನ್ನೆಲೆಯಲ್ಲಿ ಮೋದಿಯವರ ಹತ್ಯೆ ಸಂಚಿನ ಸುತ್ತಮುತ್ತಲ ಚಿತ್ರಣದ ಬಗ್ಗೆ ಪರಾಮರ್ಶೆ ನಡೆಸುವುದು ಸೂಕ್ತ. ‘‘ಮೋದಿ ಹತ್ಯೆಗೆ ರೂಪಿಸಲಾಗಿದೆ’’ ಎಂಬ ಎಂಟು ಸಂಚಿನ ಪ್ರಕರಣಗಳನ್ನು ಈ ಕೆಳಗೆ ನೀಡಲಾಗಿದೆ.
ಇಶ್ರತ್ ಜಹಾನ್ (2004)
2004ರ ಜೂನ್ 15ರಂದು ಅಹ್ಮದಾಬಾದ್ನ ಹೊರವಲಯದಲ್ಲಿ, ಗುಜರಾತ್ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಅಧಿಕಾರಿಗಳು, ಲಷ್ಕರೆ ತಯ್ಯಿಬ ಜತೆ ನಂಟು ಹೊಂದಿದ್ದ ಶಂಕೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದರು. ಅವರು ಇಶ್ರತ್ ಜಹಾನ್, ಜಾವೇದ್ ಗುಲಾಂ ಶೇಖ್, ಅಮ್ಜದ್ ಅಲಿ ರಾಣಾ ಮತ್ತು ಝೀಶನ್ ಜೋಹರ್. 2002ರ ಕೋಮು ಹಿಂಸಾಚಾರ ತಡೆಯಲು ವಿಫಲರಾದ ಆರೋಪದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರ ಹತ್ಯೆಗೆ ಕಾರ್ಯಯೋಜನೆ ರೂಪಿಸುತ್ತಿದ್ದಾಗ ಇವರನ್ನು ಹತ್ಯೆ ಮಾಡಲಾಗಿದೆ ಎನ್ನುವುದು ಉನ್ನ ಪೊಲೀಸ್ ಅಧಿಕಾರಿಗಳ ಹೇಳಿಕೆ.
2009ರ ಸೆಪ್ಟೆಂಬರ್ನಲ್ಲಿ ಅಹ್ಮದಾಬಾದ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಪಿ.ತಮಂಗ್ ಅವರು ಈ ಘಟನೆಯನ್ನು ನಕಲಿ ಎನ್ಕೌಂಟರ್ ಎಂದು ಗುರುತಿಸಿದರು. ‘‘ಈ ನಾಲ್ವರನ್ನು ಪೊಲೀಸರು ಮುಂಬೈನಿಂದ ಅಪಹರಿಸಿ, 2004ರ ಜೂನ್ 12ರಂದು ಅಹ್ಮದಾಬಾದ್ಗೆ ಕರೆತಂದು 14ರ ರಾತ್ರಿ ಹತ್ಯೆ ಮಾಡಿದ್ದಾರೆ. ಬಳಿಕ ಅವರ ಶವದ ಬಳಿ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ಇರಿಸಿದ್ದಾರೆ’’ ಎಂದು 243 ಪುಟಗಳ ವರದಿಯಲ್ಲಿ ತಮಂಗ್ ವಿವರಿಸಿದ್ದರು. 2013ರಲ್ಲಿ ಕೇಂದ್ರ ತನಿಖಾ ಬ್ಯೂರೊ ಅಹ್ಮದಾಬಾದ್ನ ಮಿರ್ಜಾಪುರ ವಿಶೇಷ ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಿ, ಈ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಏಳುಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಿತು. ಈ ಪ್ರಕರಣದಲ್ಲಿ 2008ರಿಂದಲೂ ಜಹಾನ್ ಕುಟುಂಬವನ್ನು ಪ್ರತಿನಿಧಿಸಿದ್ದ ವಕೀಲೆ ವೃಂದಾ ಗ್ರೋವರ್, ‘‘ಈ ನಕಲಿ ಎನ್ಕೌಂಟರ್ಗೆ ರಾಜಕೀಯ ಒಪ್ಪಿಗೆಯೂ ಇತ್ತು ಎನ್ನುವುದನ್ನು ಸೂಚಿಸುವ ಹಲವು ಪುರಾವೆಗಳು ಸಿಬಿಐ ಆರೋಪಪಟ್ಟಿಯಲ್ಲಿವೆ’’ ಎಂದು ಹೇಳಿದ್ದನ್ನು ‘ದ ಕಾರವಾನ್’ ವರದಿ ಮಾಡಿತ್ತು. ಇದು ಪ್ರಸ್ತುತ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಮತ್ತು ಇಂದು ಬಿಜೆಪಿ ಅಧ್ಯಕ್ಷರಾಗಿರುವ ಅಮಿತ್ ಶಾ ಗಮನಕ್ಕೂ ಬಂದಿತ್ತು. ಆದರೆ ಸಿಬಿಐ ಈ ಅಂಶದ ಸಿಬಿಐ ತನಿಖೆ ನಡೆಸಿಲ್ಲ ಎನ್ನುವುದು ಅವರ ಆರೋಪ.
2004 ಜೂನ್ 13ರಂದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಝೀ ಟಿವಿಗೆ ನೀಡಿದ ಒಂದು ಸಂದರ್ಶನದಲ್ಲಿ, ‘‘2002ರ ಗುಜರಾತ್ ಗಲಭೆಯ ಬಳಿಕ ಮೋದಿ ಸರಕಾರವನ್ನು ಕಿತ್ತೆಸೆಯುವಲ್ಲಿ ವಿಫಲವಾದದ್ದು ಬಿಜೆಪಿ ನೇತೃತ್ವದ ಸರಕಾರ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣ’’ ಎಂದು ಹೇಳಿದ್ದರು. ‘ಮೋದಿ ಆ್ಯಂಡ್ ಗೋಧ್ರಾ: ದ ಫಿಕ್ಷನ್ ಆಫ್ ಫ್ಯಾಕ್ಟ್ ಫೈಂಡಿಂಗ್’ ಎಂಬ ತಮ್ಮ ಕೃತಿಯಲ್ಲಿ ಪತ್ರಕರ್ತ ಮನೋಜ್ ಮಿತ್ತಾ ಅವರು, ಗ್ರೇಟರ್ ಮುಂಬೈನ 19 ವರ್ಷದ ವಿದ್ಯಾರ್ಥಿನಿ ಇಶ್ರತ್ ಜಹಾನ್ ಹಾಗೂ ಮೂವರನ್ನು ಮೋದಿ ಹತ್ಯೆಯ ಸಂಚು ಕಾರ್ಯಗತಗೊಳಿಸುವ ಪ್ರಯತ್ನದಲ್ಲಿದ್ದಾಗ ಗುಜರಾತ್ ಪೊಲೀಸರು ಹತ್ಯೆ ಮಾಡಿದ ಘಟನೆ ವಾಜಪೇಯಿಯವರ ದಾಳಿಯಿಂದ ಮೋದಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ವಾಜಪೇಯಿಯವರು ಮೋದಿಯನ್ನು ಟೀಕಿಸಿದ ಎರಡೇ ದಿನಗಳಲ್ಲಿ ಅಂದರೆ ಜೂನ್ 15ರಂದು ಗಾಂಧಿನಗರದಲ್ಲಿ ಮೋದಿಯವರ ಸಂಭಾವ್ಯ ಹಂತಕರು, ಪೊಲೀಸರಿಂದ ಹತ್ಯೆಗೀಡಾದಂತೆ ಬಿಂಬಿಸುವ ಸಕಾಲಿಕ ಪ್ರಯತ್ನ ಎಂದು ಮಿತ್ತಾ ಬಣ್ಣಿಸಿದ್ದರು.
ಗುಜರಾತ್ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಅಧಿಕಾರಿ ಡಿ.ಜಿ.ವಂಜಾರ 2013ರ ಸೆಪ್ಟಂಬರ್ 1ರಂದು ನೀಡಿದ ರಾಜೀನಾಮೆ ಪತ್ರವನ್ನು ರಾಜ್ಯ ಸರಕಾರ ಸ್ವೀಕರಿಸಲಿಲ್ಲ. ಈ ಪತ್ರದಲ್ಲಿ ಅವರು, ‘‘ಕ್ಷೇತ್ರ ಅಧಿಕಾರಿಗಳಾಗಿ ನಾವು, ನಮಗೆ ಸ್ಫೂರ್ತಿದಾಯಕ, ಮಾರ್ಗದರ್ಶಿ ಮತ್ತು ನಿಕಟ ಕಣ್ಗಾವಲು ನೀಡುವ ಸರಕಾರದ ನೀತಿಯನ್ನಷ್ಟೇ ಅನುಷ್ಠಾನಗೊಳಿಸಿದ್ದೇವೆ’’ ಎಂದು ಹೇಳಿದ್ದರು. ಇಶ್ರತ್ ಜಹಾನ್ ಪ್ರಕರಣದ ಆರೋಪಿಗಳಲ್ಲಿ ವಂಜಾರಾ ಕೂಡಾ ಒಬ್ಬರು. ಈ ವರ್ಷದ ಆಗಸ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ನ್ಯಾಯಾಲಯ, ವಂಜಾರಾ ಮತ್ತು ಅವರ ಮಾಜಿ ಸಹಾಯಕ ಎನ್.ಕೆ.ಅಮೀನ್ ಅವರನ್ನು ಸೇವೆಯಿಂದ ಮುಕ್ತಗೊಳಿಸುವ ಅರ್ಜಿಯನ್ನು ತಿರಸ್ಕರಿಸಿದೆ. ಅಮೀನ್ ಕೂಡಾ ಈ ನಕಲಿ ಎನ್ಕೌಂಟರ್ನಲ್ಲಿ ಆರೋಪಿ. ಈ ಪ್ರಕರಣ ಇನ್ನೂ ಸಿಬಿಐ ನ್ಯಾಯಾಲಯದಲ್ಲಿ ಮುಂದುವರಿದಿದೆ.
ಸೊಹ್ರಾಬುದ್ದೀನ್ ಶೇಖ್ (2005)
2005 ನವೆಂಬರ್ 22ರಂದು ಗುಜರಾತ್ ಮತ್ತು ರಾಜಸ್ಥಾನ ಪೊಲೀಸ್ ಅಧಿಕಾರಿಗಳು, ಗ್ಯಾಂಗ್ಸ್ಟರ್ ಸೊಹ್ರಾಬುದ್ದೀನ್ ಶೇಖ್ ಮತ್ತು ಪತ್ನಿ ಕೌಸರ್ಬಿ ಪ್ರಯಾಣಿಸುತ್ತಿದ್ದರು ಎನ್ನಲಾದ ಒಂದು ಬಸ್ಸನ್ನು ಹೈದರಾಬಾದ್ನಲ್ಲಿ ತಡೆದರು. ಇಬ್ಬರನ್ನೂ ಅಹ್ಮದಾಬಾದ್ ಬಳಿಕ ತೋಟದ ಮನೆಗೆ ಕರೆದೊಯ್ದರು. ಈ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದಂತೆ ನಾಲ್ಕು ದಿನಗಳ ಬಳಿಕ ಸೊಹ್ರಾಬುದ್ದೀನ್ ಶೇಖ್ ಅವರನ್ನು ಗುಜರಾತ್ ಪೊಲೀಸರು ನಕಲಿ ಎನ್ಕೌಂಟರ್ನಲ್ಲಿ ಗುಂಡಿಟ್ಟು ಕೊಂದರು. ಎರಡು ದಿನಗಳ ಬಳಿಕ ಪೊಲೀಸರು ಸೊಹ್ರಾಬುದ್ದೀನ್ ಅವರ ಪತ್ನಿ ಕೌಸರ್ಬೀ ಅವರನ್ನೂ ಹತ್ಯೆ ಮಾಡಿದರು. ಮುಂದಿನ ವರ್ಷದ ಡಿಸೆಂಬರ್ನಲ್ಲಿ ಅವರ ಸಹಚರ ತುಳಸೀರಾಮ್ ಪ್ರಜಾಪತಿಯನ್ನು ಕೂಡಾ ಗುಂಡಿಟ್ಟು ಹತ್ಯೆ ಮಾಡಲಾಯಿತು
ಸೊಹ್ರಾಬುದ್ದೀನ್ ಕೂಡಾ ಲಷ್ಕರೆ ತಯ್ಯಿಬ ಕಾರ್ಯಕರ್ತ ಎಂದು ಪೊಲೀಸರು ಆ ಬಳಿಕ ವಾದಿಸಿ, ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಬಿಂಬಿಸಿದರು. ಆದರೆ ಸೊಹ್ರಾಬುದ್ದೀನ್ ಅವರ ಸಹೋದರ ರುಬಾಬುದ್ದೀನ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, 2010ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು. ಆ ವರ್ಷದ ಜುಲೈನಲ್ಲಿ ಸಿಬಿಐ ಪೂರಕ ಆರೋಪಪಟ್ಟಿ ಸಲ್ಲಿಸಿ, ಪೊಲೀಸ್ ಅಧಿಕಾರಿಗಳಾದ ಡಿ.ಜಿ.ವಂಜಾರಾ, ಎನ್.ಕೆ.ಅಮೀನ್ ಮತ್ತು ರಾಜ್ಕುಮಾರ್ ಪಾಂಡ್ಯನ್ ಹಾಗೂ ಅಂದು ರಾಜ್ಯದ ಗೃಹ ಸಚಿವರಾಗಿದ್ದ ಅಮಿತ್ ಶಾ ಹೆಸರುಗಳನ್ನು ಆರೋಪಿಗಳನ್ನಾಗಿ ಹೆಸರಿಸಿತು. ಈ ನಾಲ್ಕೂ ಮಂದಿಯನ್ನು ಮತ್ತು ಇತರರನ್ನು ಆ ಬಳಿಕ ಆರೋಪಮುಕ್ತಗೊಳಿಸಲಾಯಿತು. ಸಿಬಿಐ ಆರೋಪಪಟ್ಟಿಯ ಪ್ರಕಾರ, ‘‘ಗುಜರಾತ್ ಮತ್ತು ರಾಜಸ್ಥಾನದ ಪೊಲೀಸ್ ಅಧಿಕಾರಿಗಳು, ಅಹ್ಮದಾಬಾದ್ನಲ್ಲಿ ಸೊಹ್ರಾಬುದ್ದೀನ್ ಅವರನ್ನು ಹತ್ಯೆ ಮಾಡಲು ಎನ್ಕೌಂಟರ್ ನಾಟಕ ಮಾಡಿದರು. ಪ್ರಮುಖ ರಾಜಕೀಯ ಮುಖಂಡರನ್ನು ಹತ್ಯೆ ಮಾಡಲು ಸೊಹ್ರಾಬುದ್ದೀನ್ ಅಹ್ಮದಾಬಾದ್ಗೆ ಬಂದಿದ್ದ ಎಂದು ಬಿಂಬಿಸಲಾಯಿತು.’’
ಸೊಹ್ರಾಬುದ್ದೀನ್ ಶೇಖ್, ಕೌಸರ್ ಬಿ ಮತ್ತು ತುಳಸೀರಾಂ ಪ್ರಜಾಪತಿಯವರನ್ನು ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ ಉದ್ದೇಶಗಳ ಬಗ್ಗೆ ಆ ಬಳಿಕ ಬಹಳಷ್ಟು ಕಥೆಗಳು ಹುಟ್ಟಿಕೊಂಡವು. ಆರೋಪಪಟ್ಟಿಯ ಪ್ರಕಾರ, ‘‘ಸೊಹ್ರಾಬುದ್ದೀನ್ರ ಹತ್ಯೆಯನ್ನು ಆರೋಪಿಗಳು ವ್ಯಾಪಾರಿಗಳು ಮತ್ತು ಇತರರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿ ಅವರಿಂದ ಸುಲಿಗೆ ಮಾಡುವ ಅಸ್ತ್ರವಾಗಿ ಬಳಸಿಕೊಂಡರು.’’ ಆದರೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸಿಬಿಐ ತನಿಖೆ ವೇಳೆ ವಂಜಾರಾ, 2003ರಲ್ಲಿ ಅಹ್ಮದಾಬಾದ್ನಲ್ಲಿ ಹತ್ಯೆಗೀಡಾದ ಗುಜರಾತ್ನ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಅವರ ಹತ್ಯೆ ಪ್ರಕರಣದಲ್ಲಿ ಸೊಹ್ರಾಬುದ್ದೀನ್ ಕೈವಾಡವಿತ್ತು ಎಂದು ಹೇಳಿದ್ದರು.
ಸೊಹ್ರಾಬುದ್ದೀನ್ ಅವರ ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆ ಮುಂಬೈನ ಸಿಬಿಐ ಕೋರ್ಟ್ನಲ್ಲಿ ನಡೆಯುತ್ತಿದೆ. ಈ ವರ್ಷದ ಆಗಸ್ಟ್ವರೆಗೆ 65 ಮಂದಿ ಸಾಕ್ಷಿಗಳು ತಮ್ಮ ಮೂಲ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ.
ಕೃಪೆ: caravanmagazine.in