'ಜನತಾ ದರ್ಶನ' ಆರಂಭಕ್ಕೆ ಸಾರ್ವಜನಿಕ ವಲಯದಿಂದ ಹೆಚ್ಚಾಗುತ್ತಿದೆ ಒತ್ತಡ !
ಎಚ್ಚೆತ್ತುಕೊಳ್ಳುವುದೆ ಶಿವಮೊಗ್ಗ ಜಿಲ್ಲಾಡಳಿತ
ಶಿವಮೊಗ್ಗ, ಸೆ. 6: ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ನಿಯಮಿತವಾಗಿ 'ಜನತಾ ದರ್ಶನ' ನಡೆಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿ ಹಲವು ತಿಂಗಳುಗಳೇ ಕಳೆದಿವೆ. ಸಿಎಂ ಸೂಚನೆ ಹೊರತಾಗಿಯೂ ರಾಜ್ಯದ ಹಲವು ಜಿಲ್ಲಾಡಳಿತಗಳು, ಇಲ್ಲಿಯವರೆಗೂ 'ಜನತಾ ದರ್ಶನ' ಆರಂಭಿಸಿಲ್ಲ. ಇದರಲ್ಲಿ ಶಿವಮೊಗ್ಗ ಜಿಲ್ಲೆ ಕೂಡ ಒಂದಾಗಿದೆ. ಈ ನಡುವೆ 'ಜನತಾ ದರ್ಶನ' ಆರಂಭಕ್ಕೆ ಸ್ಥಳೀಯ ನಾಗರಿಕ ವಲಯದಿಂದಲೂ ಕೂಗು ಕೇಳಿಬರಲಾರಂಭಿಸಿದೆ.
ಈ ಹಿಂದಿನ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‍ರವರು, ಗ್ರಾಮೀಣ ಪ್ರದೇಶ ಹಾಗೂ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿಯಿತ್ತು ನಾಗರೀಕರ ಅಹವಾಲು ಆಲಿಸುವ ಮೂಲಕ ಗಮನ ಸೆಳೆದಿದ್ದರು. ಆದರೆ ಜನಸಾಮಾನ್ಯರಿಂದ ಬೇಡಿಕೆ ವ್ಯಕ್ತವಾದ ಹೊರತಾಗಿಯೂ, ಜನತಾ ದರ್ಶನ ಆರಂಭಿಸುವತ್ತ ಅವರು ಚಿತ್ತ ಹರಿಸಿರಲಿಲ್ಲ. ನೂತನ ಜಿಲ್ಲಾಧಿಕಾರಿ ಡಾ. ಕೆ.ಎ.ದಯಾನಂದ್‍ರವರು ಜಿಲ್ಲೆಗೆ ಆಗಮಿಸಿ, ಸರಿಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ತಮ್ಮ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ನಾಗರೀಕರ ಕೇಂದ್ರಬಿಂದುವಾಗಿದ್ದಾರೆ. ಆದರೆ ಅವರು ಕೂಡ ಇಲ್ಲಿಯವರೆಗೂ ಜನತಾ ದರ್ಶನ ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಆರಂಭಿಸುತ್ತಾರಾ? ಇಲ್ಲವೇ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಜನಸಾಮಾನ್ಯರ ಆಗ್ರಹ: ಜಿಲ್ಲಾಡಳಿತದ ಹಂತದಲ್ಲಿಯೇ ಜನತಾದರ್ಶನ ನಡೆಸುವಂತೆ ಸಿಎಂ ನೀಡಿರುವ ಸೂಚನೆಗೆ, ಸ್ಥಳೀಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರಿಂದ ಸಿಎಂ ಹುಡುಕಿಕೊಂಡು ಬೆಂಗಳೂರಿಗೆ ಅಲೆದಾಡುವುದು ತಪ್ಪಲಿದೆ. ನಾನಾ ಕೆಲಸ ಕಾರ್ಯ ಮಾಡಿಸಿಕೊಳ್ಳಲು ವಿವಿಧ ಇಲಾಖೆಗಳಿಗೆ ಎಡತಾಕುವ ಸಂಕಷ್ಟವೂ ಇಲ್ಲವಾಗುತ್ತದೆ ಎಂದು ನಾಗರೀಕರು ಅಭಿಪ್ರಾಯ ಪಡುತ್ತಾರೆ.
'ಪ್ರಸ್ತುತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡೆಸುತ್ತಿರುವ ಜನತಾ ದರ್ಶನದಲ್ಲಿ ಸ್ಥಳದಲ್ಲಿಯೇ ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗುತ್ತಿದೆ. ಇದೇ ರೀತಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೂ ನಿಯಮಿತವಾಗಿ ಜನತಾ ದರ್ಶನ ನಡೆದರೆ, ನಾಗರಿಕರಿಗೆ ಸಾಕಷ್ಟು ಅನುಕೂಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದಷ್ಟು ಶೀಘ್ರವಾಗಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಅತ್ಯಂತ ವ್ಯವಸ್ಥಿತವಾಗಿ ಜನತಾ ದರ್ಶನ ಆರಂಭಿಸಲು ಮುಂದಾಗಬೇಕು. ಈ ಮೂಲಕ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡುವ ಕೆಲಸ ಮಾಡಬೇಕು' ಎಂದು ಜನಸಾಮಾನ್ಯರು ಮನವಿ ಮಾಡುತ್ತಾರೆ.
ವ್ಯವಸ್ಥೆಯಿಲ್ಲ: ಈ ಹಿಂದೆ 'ಜನಸ್ಪಂದನ', 'ಜನಸಂಪರ್ಕ' ವ್ಯವಸ್ಥೆಯಡಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನಾಗರಿಕರ ಅಹವಾಲು ಆಲಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ ಹೋಬಳಿ ಮಟ್ಟದಲ್ಲಿಯೂ ಜನತಾದರ್ಶನದಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಎಲ್ಲ ಇಲಾಖೆ ಅಧಿಕಾರಿಗಳು ಇದರಲ್ಲಿ ಭಾಗವಹಿಸುತ್ತಿದ್ದರಿಂದ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ ಸರ್ಕಾರಗಳು ಬದಲಾದಂತೆ ಈ ವ್ಯವಸ್ಥೆಗಳು ಮೂಲೆಗುಂಪಾಗಿದ್ದವು.
ಇದೀಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬೆಂಗಳೂರಿನ ನಿವಾಸದಲ್ಲಿ ನಡೆಸುವ ಜನತಾದರ್ಶನಕ್ಕೆ, ರಾಜ್ಯದ ನಾನಾ ನಾನಾ ಕಡೆಯಿಂದ ಜನಸಾಗರವೇ ಹರಿದು ಬರುತ್ತಿದೆ. ಕಾರ್ಯಭಾರದ ಒತ್ತಡದ ಕಾರಣದಿಂದ ಪ್ರತಿಯೋರ್ವ ನಾಗರಿಕರ ಅಹವಾಲು ಆಲಿಸುವುದು ಸಿಎಂಗೂ ಕಷ್ಟಕರವಾಗಿ ಪರಿಣಮಿಸುತ್ತಿದೆ. ಈ ಕಾರಣದಿಂದ ಪ್ರತಿ ಜಿಲ್ಲೆಗಳಲ್ಲಿ ಜನತಾದರ್ಶನ ನಡೆಸಿ, ಸಾರ್ವಜನಿಕರ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಈ ಕುರಿತಂತೆ ಸ್ಪಷ್ಟ ಆದೇಶವಾಗಲಿ ಅಥವಾ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸುವ ಕೆಲಸ ರಾಜ್ಯ ಸರ್ಕಾರ ಮಾಡಿಲ್ಲ. ಇದರಿಂದ ರಾಜ್ಯದ ಹಲವು ಜಿಲ್ಲಾಡಳಿತಗಳು ಜನತಾ ದರ್ಶನ ಆರಂಭಿಸಿದ್ದರೆ, ಮತ್ತೆ ಕೆಲ ಜಿಲ್ಲಾಡಳಿತಗಳು ಸರ್ಕಾರದ ನಿರ್ದೇಶನಕ್ಕಾಗಿ ಕಾದು ಕುಳಿತುಕೊಂಡಿವೆ. ಒಟ್ಟಾರೆ ಶಿವಮೊಗ್ಗ ಜಿಲ್ಲಾಡಳಿತ ಯಾವಾಗ ಜನತಾ ದರ್ಶನ ಆರಂಭಿಸಲಿದೆ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ತಕ್ಷಣವೇ ಆರಂಭಿಸಬೇಕು : ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ
'ಸ್ಥಳೀಯವಾಗಿ ಸಮಸ್ಯೆಗೆ ಪರಿಹಾರ ಸಿಗದ ಕಾರಣದಿಂದ, ಸಿಎಂ ನಡೆಸುತ್ತಿರುವ ಜನತಾ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ನೂರಾರು ಜನ ತೆರಳುತ್ತಿದ್ದಾರೆ. ಸಿಎಂ ಸೂಚನೆಯಂತೆ ಶಿವಮೊಗ್ಗ ಜಿಲ್ಲಾಡಳಿತವು ಜಿಲ್ಲೆಯಲ್ಲಿ ತತ್‍ಕ್ಷಣವೇ ಜನತಾ ದರ್ಶನ ಕಾರ್ಯಕ್ರಮ ಕಾರ್ಯಗತಗೊಳಿಸಬೇಕು. ಯಾವುದೇ ಗೊಂದಲ - ಗಡಿಬಿಡಿಗೆ ಆಸ್ಪದವಾಗದಂತೆ ಅತ್ಯಂತ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಕೇವಲ ಜಿಲ್ಲಾ ಕೇಂದ್ರದಲ್ಲಿ ಜನತಾ ದರ್ಶನ ಆಯೋಜಿಸದೆ, ತಾಲೂಕು ಕೇಂದ್ರಗಳಲ್ಲಿಯೂ ನಡೆಸಬೇಕು. ಈ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿ ಕೊಡಬೇಕು' ಎಂದು ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆಗ್ರಹಿಸುತ್ತಾರೆ.
ಸಿಎಂ ಸ್ಪಷ್ಟ ಆದೇಶ ಹೊರಡಿಸಲಿ : ಮುಖಂಡ ಎನ್.ಗೋಪಿನಾಥ್
'ರಾಜ್ಯದ ಪ್ರತಿಯೊಂದು ಜಿಲ್ಲಾಡಳಿತ ಜನತಾ ದರ್ಶನ ನಡೆಸುವ ಕುರಿತಂತೆ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸ್ಪಷ್ಟ ಆದೇಶ ಹೊರಡಿಸಬೇಕು. ಏಕರೂಪದ ವೇಳಾಪಟ್ಟಿ ಪ್ರಕಟಿಸಬೇಕು. ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳ್ಳುವಂತಾಗಬೇಕು. ವಿಳಂಬಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಬೇಕು. ಆಡಳಿತಕ್ಕೆ ಹೊರೆಯಾಗದಂತೆ, ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು' ಎಂದು ನನ್ನ ಕನಸಿನ ಶಿವಮೊಗ್ಗ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದ್ದಾರೆ.
ನಾಗರಿಕರಿಗೆ ಉಪಯುಕ್ತ : ವಕೀಲ ಲಕ್ಷ್ಮೀಕಾಂತ ಚಿಮಣೂರು
'ಪ್ರಸ್ತುತ ಜನಸಾಮಾನ್ಯರು ನಾನಾ ಕೆಲಸ ಕಾರ್ಯಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಪ್ರತಿನಿತ್ಯ ಎಡತಾಕುವಂತಾಗಿದೆ. ಹಿರಿಯ ಅಧಿಕಾರಿಗಳ ಅಲಭ್ಯತೆ, ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮತ್ತಿತರ ಕಾರಣಗಳಿಂದ ಕೆಲ ನಾಗರಿಕರು ಅನುಭವಿಸುತ್ತಿರುವ ಸಂಕಷ್ಟ ಹೇಳತೀರದಾಗಿದೆ. ಜಿಲ್ಲಾಧಿಕಾರಿಗಳೇ ಜನತಾ ದರ್ಶನ ನಡೆಸಿದರೆ, ಜನಸಾಮಾನ್ಯರು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಲಿದೆ. ಇದರಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿಒದೆ. ಹಾಗೆಯೇ ಜನಸಾಮಾನ್ಯರ ಬಳಿಗೆ ಸರ್ಕಾರದ ಆಡಳಿತ ಕೊಂಡೊಯ್ದದಂತಾಗುತ್ತದೆ' ಎಂದು ವಕೀಲ ಲಕ್ಷ್ಮೀಕಾಂತ ಚಿಮಣೂರುರವರು ಅಭಿಪ್ರಾಯಪಡುತ್ತಾರೆ.
ಆಡಳಿತದ ಬಗ್ಗೆ ವಿಶ್ವಾಸ ಬರಲಿದೆ : ಮಹಮ್ಮದ್ ಸಾದತ್‍ವುಲ್ಲಾ
'ಹಿರಿಯ ಅಧಿಕಾರಿಗಳೇ ಖುದ್ದಾಗಿ ನಾಗರೀಕರ ಅಹವಾಲು ಆಲಿಸುವುದರಿಂದ, ಜನಸಾಮಾನ್ಯರ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಈ ಕಾರಣದಿಂದ ಜಿಲ್ಲಾಧಿಕಾರಿ ಮಾತ್ರವಲ್ಲದೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಇಓ ಹಂತಗಳಲ್ಲಿಯೂ ಜನತಾ ದರ್ಶನ ನಡೆಯುವಂತಾಗಬೇಕು. ಇದರಿಂದ ಸರ್ಕಾರದ ಯೋಜನೆ, ಸೌಲಭ್ಯಗಳು ಜನಸಾಮಾನ್ಯರಿಗೆ ಸುಲಭವಾಗಿ ದೊರಕಲಿದೆ. ಹಾಗೆಯೇ ಜನಸಾಮಾನ್ಯರಿಗೂ ಆಡಳಿತದ ಮೇಲೆ ವಿಶ್ವಾಸ ಬರಲಿದೆ' ಎಂದು ನಾಗರೀಕರ ಮಹಮ್ಮದ್ ಸಾದತ್‍ವುಲ್ಲಾ ಅಭಿಪ್ರಾಪಡುತ್ತಾರೆ.