ಅಂಬೇಡ್ಕರ್ ಜೀವನ ತಿಳಿಸುವ ಪ್ರಯತ್ನ
ನಾನು ಓದಿದ ಪುಸ್ತಕ
ರಘೋತ್ತಮ ಹೊ.ಬ
ಕುವೆಂಪು ರಾಮಾಯಣ ಕುರಿತು ಶ್ರೀ ರಾಮಾಯಣ ದರ್ಶನಂ ಬರೆದರೊ ಅದೇ ಹಾದಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ವಿಚಾರ, ಬರಹಗಳನ್ನು ಅವರ ಜೀವನದ ಸಂದೇಶ ತಿಳಿಸಲು ಬರಹಗಾರ ರಘೋತ್ತಮ ಹೊ.ಬ ‘ಅಂಬೇಡ್ಕರ್ ದರ್ಶನಂ’ ಕೃತಿಯನ್ನು ರಚಿಸಿದ್ದಾರೆ.
ಕೃತಿಯಲ್ಲಿ ಜಾತಿ ವರ್ಣವ್ಯವಸ್ಥೆ ಬಗ್ಗೆ, ಅಸಮಾನತೆ ಮತ್ತು ಅಂತರ್ಜಾತಿ ವಿವಾಹ ಪಂಕ್ತಿಭೇದ ಅಥವಾ ಅಂತರ್ಜಾತಿ ಸಹಭೋಜನ ನಿರಾಕರಣೆ ಹಾಗೂ ಅಸ್ಪಶ್ಯತೆ, ಗಾಂಧಿ ಬಗ್ಗೆ ಡಾ. ಬಿ. ಆರ್. ಅಂಬೇಡ್ಕರ್ ಅಭಿಪ್ರಾಯವನ್ನು ಮತ್ತು ಬಾಬಾಸಾಹೇಬರ ಹೋರಾಟ, ಸಂದೇಶಗಳನ್ನು ನಮ್ಮ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದು, ಅದರಲ್ಲಿ ರಘೋತ್ತಮ ಹೊ.ಬ ಯಶಸ್ವಿಯಾಗಿದ್ದಾರೆ.
ಇಂಗ್ಲಿಷ್‌ನಲ್ಲಿರುವ ಅಂಬೇಡ್ಕರ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ ನಮ್ಮ ಮುಂದಿಟ್ಟಿದ್ದಾರೆ. ಪುಸ್ತಕದಲ್ಲಿ ವರ್ಣವ್ಯವಸ್ಥೆ ಹೇಗೆ ಬಲಗೊಂಡಿತು ಮತ್ತು ಭಾರತ ಬಲವನ್ನು ಕಳೆದುಕೊಂಡಿರುವ ಬಗ್ಗೆ ಚರ್ಚಿಸಿ ಅದಕ್ಕೆ ಅಂಬೇಡ್ಕರ್ ಬರಹಗಳನ್ನು ಉಲ್ಲೇಖಿಸಿದ್ದಾರೆ.
ಜಾತಿ, ಧರ್ಮದ ಕುರಿತು ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಮತ್ತು ಅಸ್ಪಶ್ಯತೆಯ ಉಗಮದ ಬಗ್ಗೆ ಹಾಗೂ ಹಸು ಪವಿತ್ರಗೊಂಡ ಬೆಳವಣಿಗೆಯನ್ನು ಪುಸ್ತಕದಲ್ಲಿ ತಿಳಿಸಿದ್ದಾರೆ. ಮಹಾತ್ಮಾ ಗಾಂಧಿ ಕುರಿತು ಅಂಬೇಡ್ಕರ್ ನಿಲುವು, ಬ್ರಾಹ್ಮಣರ ಮಾಂಸಾಹಾರ ಸೇವನೆಯ ಕುರಿತಾದ ಅಂಬೇಡ್ಕರ್ ವಿಚಾರಗಳನ್ನು ಕೃತಿಯಲ್ಲಿ ತಿಳಿಸಿದ್ದಾರೆ.
ಸನಾತನವಾದುದು, ಶಾಶ್ವತವಾದುದು, ಸ್ಥಿರವಾದುದು, ಯಾವುದೂ ಇಲ್ಲ ಪ್ರತಿಯೊಂದು ಬದಲಾವಣೆಗೆ ಒಳಪಡುತ್ತದೆ. ಬದಲಾವಣೆ ಜೀವನದ ನಿಯಮವಾಗಿದ್ದು, ಅದು ವ್ಯಕ್ತಿಗಳಲ್ಲದೆ ಸಮಾಜಕ್ಕೂ ಅನ್ವಯಿಸುತ್ತದೆ. ನಿಜ, ಸ್ಥಿರತೆ ಬೇಕು. ಆದರೆ ಅದಕ್ಕೆ ಬದಲಾವಣೆಯ ಬೆಲೆ ತೆರಬೇಕಾಗಿಲ್ಲ. ಏಕೆಂದರೆ ಬದಲಾವಣೆ ಕಡ್ಡಾಯವಾದದ್ದು. ಹಾಗೆಯೇ ಹೊಂದಾಣಿಕೆ ಬೇಕು. ಹಾಗಂತ ಅದಕ್ಕೆ ಸಾಮಾಜಿಕ ನ್ಯಾಯವನ್ನು ಬಲಿಕೊಡಬೇಕಾಗಿಲ್ಲ. ಆದ್ದರಿಂದ ಅದ್ಯಾವುದೋ ಬೆಲೆ ತೆರಹೋದರೂ ಸ್ವರ್ಗಕ್ಕೆ ದಾರಿಯಂತಿರುವ ಸಾಮಾಜಿಕ ಸುಧಾರಣೆಯ ದಾರಿಯು ಭಾರತದಲ್ಲಿ ಹಲವು ಗೋಜಲುಗಳಿಂದ ಕೂಡಿದೆ. ಈ ನಿಟ್ಟಿನಲ್ಲಿ ಈ ದಾರಿಗೆ ಅಡ್ಡಲಾಗಿರುವ ರಾಕ್ಷಸ ಎಂದರೆ ಅದು ಜಾತಿಯಾಗಿದೆ. ಈ ದಿಸೆಯಲ್ಲಿ ಈ ಜಾತಿ ಎಂಬ ರಾಕ್ಷಸನನ್ನು ಕೊಲ್ಲದೆ ನೀವು ಆರ್ಥಿಕ, ರಾಜಕೀಯ ಸುಧಾರಣೆ ಹೊಂದುವುದಾಗಲಿ ಸಾಧ್ಯವೇ ಇಲ್ಲ ಎಂದು ಜಾತಿ ಕುರಿತ ಅಂಬೇಡ್ಕರ್ ಸಮಾಜಶಾಸ್ತ್ರೀಯ ವಿವರಣೆಯನ್ನು ನೀಡಿದ್ದಾರೆ.
ವರ್ಣವ್ಯವಸ್ಥೆ ಅದಕ್ಕೆ ಆಧಾರವಾದ ಸೂತ್ರಗಳು, ವರ್ಣವ್ಯವಸ್ಥೆ ಜಾತಿಯಾದ ಬಗೆ ಹಾಗೂ ದೇವಾಲಯ ಪ್ರವೇಶ ಮತ್ತು ಶೋಷಿತರ ಅಸಹಾಯಕತೆಯನ್ನು ವಿವರಿಸಿದ್ದಾರೆ.
ಧರ್ಮಕ್ಕಾಗಿ ಮನುಷ್ಯನಲ್ಲ: ಮನುಷ್ಯನಿಗಾಗಿ ಧರ್ಮ, ಮಾನವರಾಗಬೇಕೆ? ನಿಮ್ಮಿಷ್ಟಕ್ಕೆ ನೀವೇ ಮತಾಂತರಗೊಳ್ಳಿ, ಸಂಘಟಿತರಾಗಬೇಕೆ? ನಿಮ್ಮಿಷ್ಟಕ್ಕೆ ನೀವೇ ಮತಾಂತರಗೊಳ್ಳಿ, ಸಾಮರ್ಥ್ಯ ಗಳಿಸಬೇಕೆ? ನಿಮ್ಮಿಷ್ಟಕ್ಕೆ ನೀವೇ ಮತಾಂತರಗೊಳ್ಳಿ, ಸ್ವಾತಂತ್ರ, ಸಮಾನತೆ ಪಡೆಯಬೇಕೆ? ನಿಮ್ಮಿಷ್ಟಕ್ಕೆ ನೀವೇ ಮತಾಂತರಗೊಳ್ಳಿ, ನಿಮ್ಮ ಕೌಟುಂಬಿಕ ಜೀವನವನ್ನು ಸುಖಮಯಗೊಳಿಸಿಕೊಳ್ಳಬೇಕೆ? ನಿಮ್ಮಿಷ್ಟಕ್ಕೆ ನೀವೇ ಮತಾಂತರಗೊಳ್ಳಿ ಎಂಬ ಮತಾಂತರದ ಕುರಿತಾದ ಇಪ್ಪತ್ತು ಘೋಷಣೆಗಳನ್ನು ಅಂಬೇಡ್ಕರ್ ತಿಳಿಸಿದ್ದಾರೆ.
ಸಂವಿಧಾನ ರಚನೆ ಮತ್ತು ಪೀಠಿಕೆಯ ಕುರಿತು ಸಂಕ್ಷಿಪ್ತವಾಗಿ ತಿಳಿಸಿದ್ದು, ಜನವರಿ 26 ಅಂಬೇಡ್ಕರ್ ಸ್ಮತಿ ಮನುಸ್ಮತಿಯನ್ನು ಪಲ್ಲಟಗೊಳಿಸಿದ ದಿನ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಅಂಬೇಡ್ಕರ್ ಗಾಂಧಿ ನಿಜಕ್ಕೂ ಮಹಾತ್ಮರೇ? ಎಂಬುದಾಗಿ ಲೇಖನವನ್ನು ಬರೆದಿದ್ದರು. ಅದರಲ್ಲಿ ಗಾಂಧಿಯ ಕುರಿತು ಚರ್ಚಿಸಿದ್ದಾರೆ.
ಕರ್ನಾಟಕದ ಉದಯಕ್ಕೆ ಕಾರಣವಾದ ಅಂಬೇಡ್ಕರ್ ಚಿಂತನೆಗಳು ಪುಸ್ತಕದಲ್ಲಿದ್ದು, ಚುನಾವಣಾ ಅಕ್ರಮದ ಮೂಲಕ ಅಂಬೇಡ್ಕರ್ ಸೋತರು ಎನ್ನುವುದನ್ನು ವಿವರಿಸಲಾಗಿದೆ. ನನ್ನ ಜೀವನದಿಂದ ನೀವು ಕಲಿಯಲೇಬೇಕಾದ ಒಂದು ಪಾಠವೆಂದರೆ ನಾನು ಎಂದೂ ಕೂಡ ನನ್ನ ಸಮುದಾಯವನ್ನು ತಬ್ಬಲಿಗೊಳಿಸಿಲಿಲ್ಲ, ನನ್ನ ಜೀವನ ಪೂರ್ತಿ ಅವರ ನೋವು, ನಲಿವನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದೇನೆ ಮತ್ತು ನನ್ನ ಜೀವನದುದ್ದಕ್ಕೂ ಅದನ್ನು ಮುಂದುವರಿಸುತ್ತೇನೆ ಎಂಬ ಅಂಬೇಡ್ಕರ್ ಮಾತನ್ನು ಲೇಖಕರು ಪುಸ್ತಕದಲ್ಲಿ ಸ್ಮರಿಸಿದ್ದಾರೆ.
ಅಸ್ಪಶ್ಯತೆ, ಜಾತಿ, ವರ್ಣವ್ಯವಸ್ಥೆ, ಅಸಮಾನತೆ, ಅಂತರ್ಜಾತಿ ವಿವಾಹ, ಸ್ವಾತಂತ್ರ, ಸಮಾನತೆ, ಸಹೋದರತೆ ಪ್ರಜಾಪ್ರಭುತ್ವ, ಸಂವಿಧಾನ, ಹಿಂದೂ ಮತ್ತು ಬೌದ್ಧ ಧರ್ಮದ ಕುರಿತು ಹಾಗೂ ಗಾಂಧಿ, ಡಾ. ಎಸ್. ರಾಧಾಕೃಷ್ಣನ್ ಬಗ್ಗೆ ಕೆಲವು ವಿಚಾರಗಳನ್ನು ಮತ್ತು ಅಂಬೇಡ್ಕರ್ ಜೀವನ ಅವರ ಬರಹ, ಭಾಷಣ ಚಿಂತನೆಗಳನ್ನು ಪುಸ್ತಕದಲ್ಲಿ ಕಾಣಬಹುದಾಗಿದೆ.