ಮಂದಿರ ಮಸೀದಿ ವಿವಾದದ ಮಧ್ಯೆ ಈ ವ್ಯಕ್ತಿ ಅಯೋಧ್ಯೆಯ ಬೌದ್ಧ ಗತಕಾಲಕ್ಕಾಗಿ ಹೋರಾಡುತ್ತಿದ್ದಾರೆ
ಅಯೋಧ್ಯೆ ಹಲವು ಧರ್ಮೀಯರಿಗೆ ಪವಿತ್ರವಾದ ಒಂದು ಪಟ್ಟಣವಾಗಿದೆ. ಜೈನರಿಗೆ ಅದು ಐದು ಮಂದಿ ತೀರ್ಥಂಕರರ ಜನ್ಮಸ್ಥಳವಾಗಿದೆ ಅಯೋಧ್ಯೆಯಲ್ಲಿ ಹಲವಾರು ಸೂಫಿ ದರ್ಗಾಗಳಿವೆ. ನೌಗಾಝಿ, ದರ್ಗಾ ತೀನ್ ದರ್ವೇಶ್ ಇತ್ಯಾದಿ ಪ್ರಸಿದ್ಧವಾಗಿವೆ. ಪುನೀತ್ ಕುಮಾರ್ ಮೌರ್ಯರವರ ಅರ್ಜಿ ಅಯೋಧ್ಯೆಯ ಬೌದ್ಧ ಧರ್ಮೀಯ ಮಹತ್ವಕ್ಕೆ ಮನ್ನಣೆ ದೊರಕಿಸಲು ಪ್ರಯತ್ನಿಸುತ್ತದೆ.
2008ರಲ್ಲಿ ಅಯೋಧ್ಯೆಯಲ್ಲಿ ನಾನು ಮೊದಲ ಬಾರಿಗೆ ವಿನೀತ್ ಮೌರ್ಯ ಅವರನ್ನು ಭೇಟಿಯಾದಾಗ, ಅವರು ಮತ್ತು ಅವರ ಕುಟುಂಬದವರು ರಾಮಜನ್ಮಭೂಮಿ ಸಂಕೀರ್ಣದ ಸುತ್ತ ಹಾಕಲಾದ ತಡೆ ಬೇಲಿಯಿಂದಾಗಿ ಕಳೆದುಕೊಂಡ ಕೃಷಿ ಭೂಮಿಯ ನಷ್ಟದಿಂದಾಗಿ ಸಂತ್ರಸ್ತರಾಗಿದ್ದರು. ಅನುಕೂಲ ಸ್ಥಿತಿಯಲ್ಲಿದ್ದ ಕುಟುಂಬಗಳು ಆರ್ಥಿಕ ಅನಿಶ್ಚಿತತೆಗೆ ತಳ್ಳಲ್ಪಟ್ಟಾಗ ಅವುಗಳು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದವು. ಸುಮಾರು ಎರಡು ದಶಕಗಳ ಕಾಲ ಓರ್ವ ಬೌದ್ಧ ಧರ್ಮೀಯನಾಗಿದ್ದ ಮೌರ್ಯ, 2018ರ ಎಪ್ರಿಲ್ನಲ್ಲಿ ಅಯೋಧ್ಯೆಯನ್ನು ಒಂದು ಬೌದ್ಧ ವಿಹಾರವೆಂದು ಘೋಷಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿತು.
ಅಯೋಧ್ಯೆಯ ವಿವಾದಾಸ್ಪದ ನಿವೇಶನವು ಯಾರಿಗೆ ಸೇರಿದ್ದೆಂಬ ಕುರಿತಾದ ವಿವಾದವನ್ನು ಈಗ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಒಂದು ದೇವಾಲಯವಿದ್ದ ಸ್ಥಳದಲ್ಲಿ ಒಂದು ಮಸೀದಿಯನ್ನು ನಿರ್ಮಿಸಲಾಯಿತೇ? ಎಂದು ನಿರ್ಧರಿಸುವ ಕಾಲ ಕಳೆದು ಹೋಗಿದೆ ಎಂದು ಓರ್ವ ಬ್ರಿಟಿಷ್ ಜಿಲ್ಲಾ ನ್ಯಾಯಾಧೀಶರು 1886ರಲ್ಲಿ ತೀರ್ಪು ನೀಡಿದ್ದರು. ಯಾಕೆಂದರೆ, ಅದು 356 ವರ್ಷಗಳ ಹಿಂದೆ ನಿರ್ಮಾಣಗೊಂಡ ಒಂದು ಕಟ್ಟಡವಾಗಿತ್ತು. ಅಂದಿನಿಂದ ಆರಂಭಿಸಿ ವಿವಾದದ ಕಾನೂನಾತ್ಮಕ ಇತಿಹಾಸವು ಹಲವಾರು ತಿರುವುಗಳನ್ನು ಕಂಡಿದೆ.
2010ರ ಸೆಪ್ಟೆಂಬರ್ನಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ 2.77 ಎಕರೆ ಜಾಗವನ್ನು ಮೂರು ಭಾಗಗಳಾಗಿ ವಿಭಾಗಿಸಿ ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಮಂಡಳಿಗಳಿಗೆ ಹಂಚಿತು. ಆಗ ಆ ತೀರ್ಪಿನಿಂದ ತೃಪ್ತರಾಗದ ಕಕ್ಷಿದಾರರು ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ವಿವಾದಿತ ಸ್ಥಳದಲ್ಲಿ ಒಂದು ರಾಮಮಂದಿರ ನಿರ್ಮಾಣವಾಗಬೇಕೆಂಬ ಚಳವಳಿಯು ಮೂಲತಃ ಆಸ್ತಿ ವಿವಾದವಾಗಿದ್ದ ಒಂದು ಮೊಕದ್ದಮೆಯನ್ನು ಒಂದು ಕೋಮುವಾದಿ ಸ್ಫೋಟಕ ಸಂಗತಿಯನ್ನಾಗಿ ಮಾಡಿದೆ. ಆದರೆ ಅಯೋಧ್ಯೆ ಹಲವು ಧರ್ಮೀಯರಿಗೆ ಪವಿತ್ರವಾದ ಒಂದು ಪಟ್ಟಣವಾಗಿದೆ. ಜೈನರಿಗೆ ಅದು ಐದು ಮಂದಿ ತೀರ್ಥಂಕರರ ಜನ್ಮಸ್ಥಳವಾಗಿದೆ ಅಯೋಧ್ಯೆಯಲ್ಲಿ ಹಲವಾರು ಸೂಫಿ ದರ್ಗಾಗಳಿವೆ. ನೌಗಾಝಿ, ದರ್ಗಾ ತೀನ್ ದರ್ವೇಶ್ ಇತ್ಯಾದಿ ಪ್ರಸಿದ್ಧವಾಗಿವೆ. ಪುನೀತ್ ಕುಮಾರ್ ವೌರ್ಯರವರ ಅರ್ಜಿ ಅಯೋಧ್ಯೆಯ ಬೌದ್ಧ ಧರ್ಮೀಯ ಮಹತ್ವಕ್ಕೆ ಮನ್ನಣೆ ದೊರಕಿಸಲು ಪ್ರಯತ್ನಿಸುತ್ತದೆ. ಕೆಳಗಿನ ಮಾತುಕತೆಯಲ್ಲಿ ತನ್ನ ಪ್ರೀತಿಯ ಅಯೋಧ್ಯೆಗೆ ಸಂಬಂಧಿಸಿ ಏನೇನು ಆಗಬೇಕೆಂದು ಅವರು ಹೇಳಿದ್ದಾರೆ.
ಪ್ರ: ಈ ಅರ್ಜಿಯನ್ನು ಹಲವು ಸಂಘಟನೆಗಳು ಸೇರಿ ಸಲ್ಲಿಸಲಿದೆಯೇ ಅಥವಾ ಅದು ನಿಮ್ಮ ವೈಯಕ್ತಿಕ ಪ್ರಯತ್ನವೇ?
♦ ಇದು ನನ್ನ ವೈಯಕ್ತಿಕ ಅರ್ಜಿ. ಅಯೋಧ್ಯೆಯ ಬೌದ್ಧಧರ್ಮೀಯ ಮಹತ್ವದ ಬಗ್ಗೆ ಹಲವು ಅಧ್ಯಯನಗಳು, ಚರ್ಚೆಗಳು ನಡೆದಿವೆ. ಆದರೆ ಈ ಬಗ್ಗೆ ಕಾನೂನಿಗೆ ಮೊರೆ ಹೋಗುವುದು ಮುಖ್ಯ ಎಂದು ನನಗನ್ನಿಸಿತು.
ಪ್ರ: ನಿಮ್ಮ ವಾದದ ಪರವಾಗಿ ನೀವು ನ್ಯಾಯಾಲಯಕ್ಕೆ ಯಾವ ದಾಖಲೆಗಳನ್ನು ಸಲ್ಲಿಸಿದ್ದೀರಿ?
♦ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನಗಳನ್ನಾ ಧರಿಸಿಯೇ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ. ಅಯೋಧ್ಯೆಯಲ್ಲಿ ಮೂರು ಸುತ್ತಿನ ಉತ್ಖನನಗಳಾಗಿವೆ. ಈ ಹಿಂದೆ ಅಲ್ಲಿ ಇದ್ದ ಕಟ್ಟಡಗಳ ಅವಶೇಷಗಳನ್ನು ಪತ್ತೆ ಹಚ್ಚಲು 186 ಹೊಂಡಗಳನ್ನು ಮಾಡಲಾಗಿದೆ. ಅವುಗಳಲ್ಲಿ 50ರಲ್ಲಿ ಮಾತ್ರ ಸರಿಯಾದ ಶೋಧ ನಡೆದಿದೆ ಮತ್ತು ಹಲವು ದಾಖಲೆಗಳು ದೊರಕಿವೆ. ಈ 50ರಲ್ಲಿ ಆ ನಿವೇಶನದಲ್ಲಿ ಒಂದು ಪ್ರಾಚೀನ ಬೌದ್ಧ ವಿಹಾರ ಇದ್ದದ್ದಕ್ಕೆ ಬೇಕಾದಷ್ಟು ಪುರಾವೆಗಳು ದೊರಕಿವೆ.
ಇದು ನನ್ನ ಅರ್ಜಿಗೆ ಆಧಾರವಾಗಿದೆ. ನ್ಯಾಯಾಲಯಕ್ಕೆ ನನ್ನ ಅರ್ಜಿಯಲ್ಲಿ ಹುರುಳಿದೆ ಅನ್ನಿಸಿರಬೇಕು. ಜುಲೈ 23ರಂದು ನಡೆದ ಎರಡನೆಯ ವಿಚಾರಣೆಯಲ್ಲಿ ನ್ಯಾಯಾಲಯವು ಅಯೋಧ್ಯೆಯ ಮಾಲಕತ್ವದ ಮೊಕದ್ದಮೆ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠವು ನನ್ನ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೆಂಬ ತೀರ್ಪು ನೀಡಿತು.
ಪ್ರ: ಆದರೆ ಅಯೋಧ್ಯೆ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಇತರ ಹಲವು ಪ್ರಯತ್ನಗಳು ಈ ಮೊದಲು ನಡೆದಿದೆಯಲ್ಲವೇ?
♦ ರಾಮಜನ್ಮಭೂಮಿ ಬಾಬರಿ ಮಸೀದಿ ವಿವಾದದಲ್ಲಿ ಮಧ್ಯ ಪ್ರವೇಶಿಸುವ ಹಲವು ಪ್ರಯತ್ನಗಳು ನಡೆದಿವೆ, ನಿಜ. ಅಂತಹ ಹದಿಮೂರು ಪ್ರಯತ್ನಗಳನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತ್ತು. ಸುಬ್ರಮಣಿಯನ್ ಸ್ವಾಮಿ, ತೀಸ್ತಾ ಸೆಟಲ್ವಾಡ್ ಮತ್ತು ಉದಿತ್ ರಾಜ್ ರವರ ಪ್ರಯತ್ನಗಳೂ ಇದರಲ್ಲಿ ಸೇರಿವೆ. ನನ್ನದು ಮಧ್ಯಂತರ ಅರ್ಜಿ ಅಲ್ಲ. ನನ್ನದು ಹೊಸತಾದ ಒಂದು ಅರ್ಜಿ. ಜನಸಾಮಾನ್ಯರ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವ ವಿಷಯದಲ್ಲಿ ಪರಿಹಾರ ಕೋರಿ ಸಲ್ಲಿಸಲಾಗಿರುವ ಅರ್ಜಿ ನನ್ನದು. ನಿವೇಶನದ ಮಾಲಕತ್ವದ ಹೆಯ ವಿವಾದದಲ್ಲಿ ನನಗೆ ಆಸಕ್ತಿ ಇಲ್ಲ.
ಪ್ರ: ಹಾಗಾದರೆ ನೀವು ಏನನ್ನು ಕೇಳುತ್ತಿದ್ದೀರಿ? ಅದೇ ವಿವಾದಿತ ಸ್ಥಳವನ್ನು ಒಂದು ಬೌದ್ಧ ನಿವೇಶನವೆಂದು ಘೋಷಿಸಬೇಕೆಂದು ನಿಮ್ಮ ಅಹವಾಲು ಅಲ್ಲವಾದಲ್ಲಿ ಅದು ಮತ್ತೆ ಇನ್ನೇನು?
♦ ಅಯೋಧ್ಯೆಯ ಉತ್ಖನನದಲ್ಲಿ ಲಭಿಸಿದ ಪ್ರಾಚ್ಯ ವಸ್ತುಗಳಿಗೆ (ಆರ್ಟಿಫ್ಯಾಕ್ಟ್ಸ್) ಬೌದ್ಧ ಧರ್ಮದ ಮೂಲ ಇದೆ ಎಂದು ಎಎಸ್ಐ ತಜ್ಞರು ಘೋಷಿಸಿದ್ದಾರೆ. ಬೌದ್ಧ ಧರ್ಮೀಯರಿಗೆ ಒಂದು ರಾಷ್ಟ್ರೀಯ ಪರಂಪರೆಯ ನಿವೇಶನವೆಂದು ಘೋಷಿಸಲ್ಪಟ್ಟಲ್ಲಿ, ಅಯೋಧ್ಯೆಗೆ ತುಂಬಾ ಲಾಭವಾಗಲಿದೆ. ಅಲ್ಲಿ ದೊರಕಿರುವ ಬೌದ್ಧ ಧರ್ಮೀಯ ಮೂಲವಾದ ವಸ್ತುಗಳನ್ನು ಸಾರ್ವಜನಿಕ ವೀಕ್ಷಣೆಗೆ ಇಟ್ಟಲ್ಲಿ ಶ್ರಾವಸ್ತಿ, ಕಪಿಲವಸ್ತು, ಸಾರಾನಾಥ ಮತ್ತು ಖುಷಿನಗರದ ಹಾಗೆ, ಅಯೋಧ್ಯೆ ಕೂಡ ಒಂದು ಅಂತರ್ರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಅಯೋಧ್ಯೆಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ನೆರವಾಗುವ ಒಂದು ದಾರಿಯನ್ನು ಹುಡುಕುವುದೇ ನನ್ನ ಅರ್ಜಿಯ ಉದ್ದೇಶವಾಗಿದೆ.
ಪ್ರ: ಅದು ಇರಬಹುದು. ಆದರೆ ನಿಮ್ಮ ಅರ್ಜಿಯಿಂದಾಗಿ ನೀವು ಆಸ್ತಿ ಹಿಂದುತ್ವ ಸಂಘಟನೆಗಳ ಕೋಪಕ್ಕೆ ಗುರಿಯಾಗಿರಬೇಕು. ನಿಮಗೆ ಬೆದರಿಕೆ ಹಾಕಲಾಗಿದೆಯೇ?
♦ ಹೌದು ಮಾರ್ಚ್ 6ರ ಸಂಜೆಯೇ ನನಗೆ ಮೊದಲ ಬೆದರಿಕೆ ಒಡ್ಡಲಾಯಿತು. ಅಯೋಧ್ಯೆಯನ್ನು ಬಿಟ್ಟು ಹೊರಗೆ ಹೋಗುವಂತೆ ನನಗೆ ಹೇಳಲಾಗಿದೆ. ನನ್ನನ್ನು ನಿಂದಿಸಲಾಗಿದೆ. ನನ್ನ ಪ್ರಾಣಕ್ಕೆ ಬೆದರಿಕೆ ಒಡ್ಡಲಾಗಿದೆ. ‘ವಿಶ್ವ ಬ್ರಾಹ್ಮಣ್ ಮಹಾಸಭಾ’ ಎಂಬ ಒಂದು ಸಂಘಟನೆಯಿಂದ ಕರೆ ಮಾಡಿದ ಯಾರೋ ಒಬ್ಬ ವ್ಯಕ್ತಿ ನನಗೆ ಐಎಸ್ಐಯಿಂದ ಹಣಕಾಸು ನೆರವು ಬರುತ್ತಿದೆ ಎಂದು ಆಪಾದಿಸಿದ. ನನಗೇನಾದರೂ ಆದಲ್ಲಿ, ಇನ್ನಾರೋ ಒಬ್ಬರು ನನ್ನ ಹೋರಾಟವನ್ನು ಮುಂದುವರಿಸುತ್ತಾರೆ. ನಮ್ಮ ರಾಷ್ಟ್ರಕ್ಕೆ ಅಯೋಧ್ಯೆಯ ಬೌದ್ಧ ಪರಂಪರೆ ಬಹಳ ಮುಖ್ಯ ಮತ್ತು ಇದಕ್ಕೆ ಖಂಡಿತವಾಗಿಯೂ ಸರಿಯಾದ ಮನ್ನಣೆ ದೊರಕಲಿದೆ.
ಕೃಪೆ: thewire.in