varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 9 Sep, 2018

ರಾಹುಲ್ ‘ಟೆಂಪಲ್ ರನ್’
ಕೈಲಾಸ ಮಾನಸಸರೋವರಕ್ಕೆ ರಾಹುಲ್ ಗಾಂಧಿಯವರು ಕೈಗೊಂಡಿದ್ದ ತೀರ್ಥಯಾತ್ರೆಯನ್ನು ಚುನಾವಣಾ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಬಯಸುತ್ತಿಲ್ಲ. ಆದರೆ ತಾನು ಪ್ರತಿಪಾದಿಸುವ ಜಾತ್ಯತೀತವಾದವೆಂದರೆ ಹಿಂದೂ ವಿರೋಧಿ ನೀತಿಯೆಂಬ ಬಿಜೆಪಿಯ ಅಪಪ್ರಚಾರವನ್ನು, ಇಂತಹ ಕ್ರಮಗಳ ಮೂಲಕ ಮಟ್ಟಹಾಕಲು ಸಾಧ್ಯವೆಂಬ ಆಶಾವಾದವನ್ನು ಕಾಂಗ್ರೆಸ್ ಹೊಂದಿದೆ. ರಾಹುಲ್‌ರ ತೀರ್ಥಯಾತ್ರೆಯು ಬಿಜೆಪಿಗೆ ಕಸಿವಿಸಿಯುಂಟು ಮಾಡಿದೆಯೆಂದು ಕಾಂಗ್ರೆಸ್ ಪಕ್ಷದೊಳಗಿನವರು ನಂಬಿದ್ದರು. ಯಾಕೆಂದರೆ ಹಿಂದೂ ಧರ್ಮ ಹಾಗೂ ರಾಷ್ಟ್ರೀಯವಾದದ ಬಗ್ಗೆ ಏಕಸ್ವಾಮ್ಯವನ್ನು ಸಾಧಿಸಲು ಆಡಳಿತಾರೂಢ ಪಕ್ಷವು ಬಯಸುತ್ತಿದೆ. ಹಿಂದೂ ಧಾರ್ಮಿಕ ಭಾವನೆಗಳನ್ನು ತನಗೆ ಬೇಕಾದ ಹಾಗೆ ಬಳಸಿಕೊಳ್ಳುವ ಪಕ್ಷವು, ಶಿವನ ಬಗ್ಗೆ ಯಾರಾದರೂ ಭಕ್ತಿಯನ್ನು ತೋರ್ಪಡಿಸಿದಾಗ ಬಿಜೆಪಿ ಯಾಕೆ ಅಸಂತುಷ್ಟಗೊಳ್ಳುತ್ತದೆ ಎಂದವರು ಪ್ರಶ್ನಿಸುತ್ತಾರೆ. ಕೈಲಾಸ ಮಾನಸ ಸರೋವಕ್ಕೆ ರಾಹುಲ್ ನಿಜಕ್ಕೂ ಭೇಟಿ ನೀಡಿದ್ದಾರೆಯೇ ಎಂಬುದಾಗಿ ಸಂದೇಹವ್ಯಕ್ತಪಡಿಸಿ ಕೆಲವು ಬಿಜೆಪಿಗರು ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ ಹಾಗೂ ಪುರಾವೆಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ. ಈ ಮಧ್ಯೆ ರಾಹುಲ್ ತನ್ನ ಕೈಲಾಸ ಮಾನಸ ಸರೋವರ ಯಾತ್ರೆಯ ತನ್ನ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಹಾಗೂ ಇಡೀ ಯಾತ್ರೆಯಲ್ಲಿ ತಾನು ಕಳೆದ ಸಮಯ ಹಾಗೂ ತಾನು ಎಷ್ಟು ಹೆಜ್ಜೆಗಳನ್ನು ಇಟ್ಟಿದ್ದೆ ಎಂಬುದೂ ತನ್ನ ತೀರ್ಥಯಾತ್ರೆಯ ಸಂಪೂರ್ಣ ವಿವರಗಳನ್ನು ಒಂದಿನಿತೂ ಬಿಡದೆ ಇಂಚಿಂಚಾಗಿ ವಿವರಿಸಿದ್ದಾರೆ. ಆನಂತರವಷ್ಟೇ ರಾಹುಲ್ ಯಾತ್ರೆಯ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ ಬಿಜೆಪಿಯ ಕೆಲವರು ಸುಮ್ಮನಾಗಿದ್ದಾರೆ.


ಗಿರಿರಾಜ್‌ಗೆ ಆಕ್ರೋಶ

ಕೇಂದ್ರ ಸೂಕ್ಷ್ಮ, ಕಿರು ಹಾಗೂ ಮಧ್ಯಮ ಕೈಗಾರಿಕೆಗಳ ಸಹಾಯಕ ಸಚಿವರಾದ ಗಿರಿರಾಜ್ ಸಿಂಗ್, ಬಿಹಾರದ ನವಾಡ ಲೋಕಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾಗಿ ಬಂದವರು. ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಹಾಗೂ ಹಿಂದೂಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳ ಬಗ್ಗೆ ಉದ್ರೇಕಕಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಅವರು ವಿವಾದಕ್ಕೆ ಗ್ರಾಸವಾಗುತ್ತಿದ್ದಾರೆ. ತನ್ನ ತೀವ್ರವಾದಿ ಹಿಂದುತ್ವ ನೀತಿಗಳಿಂದಾಗಿ ಇವರು ಪ್ರಧಾನಿ ನರೇಂದ್ರ ಮೋದಿಯವರ ಅಚ್ಚುಮೆಚ್ಚಿನ ಸಚಿವರಲ್ಲೊಬ್ಬರೆಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗಿರಿರಾಜ್ ಅವರು ಖಾಸಗಿ ಹಿಂದಿ ಸುದ್ದಿ ಚಾನೆಲ್ ಒಂದರ ವರದಿಗಾರನ ಬಗ್ಗೆ ರೊಚ್ಚಿಗೆದಿದ್ದಾರೆ. ಆ ವರದಿಗಾರ ಗಿರಿರಾಜ್ ಅವರ ಸ್ವಕ್ಷೇತ್ರವಾದ ನವಾಡಾಕ್ಕೆ ಭೇಟಿ ನೀಡಿದ್ದ ಹಾಗೂ ಅಲ್ಲಿನ ಜನತೆ ಗಿರಿರಾಜ್ ಬಗ್ಗೆ ಅಸಂತುಷ್ಟರಾಗಿದ್ದಾರೆಂಬ ಅನಿಸಿಕೆಯನ್ನು ಪ್ರಸಾರ ಮಾಡಿದ್ದ. ಈ ಸಲ ಎಲ್ಲೆ ಮೀರದೆ ಜಾಗರೂಕತೆಯಿಂದ ಮಾತನಾಡಲು ಯತ್ನಿಸಿದ ಗಿರಿರಾಜ್ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಒಂದು ವೇಳೆ ಆ ಪತ್ರಕರ್ತ ತನಗೆ ದಾರಿ ಮಧ್ಯೆ ಸಿಕ್ಕಿದಲ್ಲಿ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆತನಿಗೆ ಎರಡು ಬಿಗಿಯುತ್ತಿದ್ದೆ ಎಂದು ಹೇಳಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬೆಗುಸರಾಯ್ ಕ್ಷೇತ್ರದಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ನಾಯಕ ಕನ್ಹಯ್ಯಾ ಕುಮಾರ್ ಎದುರು ಸ್ಪರ್ಧಿಸಲು ಪಕ್ಷವು ಅವರಿಗೆ ಸೂಚಿಸಲಿದೆಯೆಂಬ ವದಂತಿಗಳ ಬಗ್ಗೆಯೂ ಅವರು ಕಸಿವಿಸಿಗೊಂಡಿದ್ದಾರಂತೆ. ತಾನು ಸ್ಪರ್ಧಿಸುವ ಕ್ಷೇತ್ರವನ್ನು ನವಾಡದಿಂದ ಬೆಗುಸರಾಯ್ ಕ್ಷೇತ್ರಕ್ಕೆ ಬದಲಾಯಿಸಲಾಗುವುದೆಂಬ ವದಂತಿಗಳ ಬೆಂಕಿಗೆ ಹಿಂದಿ ವಾಹಿನಿಯ ಈ ವರದಿ ತುಪ್ಪ ಸುರಿದಿದೆಯೆಂದು ಗಿರಿರಾಜ್ ಭಾವಿಸಿರಬೇಕು.


‘ಹವಾಮಾನ ತಜ್ಞ’ ಪಾಸ್ವಾನ್
ಲೋಕಜನಶಕ್ತಿ ಪಕ್ಷದ ವರಿಷ್ಠ ರಾಮ್‌ವಿಲಾಸ್ ಪಾಸ್ವಾನ್ ಅವರನ್ನು ‘ಹಮಾಮಾನ ತಜ್ಞ’ ಎಂದು ಲೋಕಜನಶಕ್ತಿ ಪಕ್ಷದ ವರಿಷ್ಠ ಲಾಲುಪ್ರಸಾದ್ ಬಣ್ಣಿಸಿದ್ದರು. ಪಾಸ್ವಾನ್ 2014ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಪಾಳಯವನ್ನು ಸೇರಿ, ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ರಾಜಕೀಯದ ಗಾಳಿ ಯಾವ ದಿಕ್ಕಿನತ್ತ ಬೀಸುತ್ತಿದೆಯೆಂಬುದನ್ನು ಅಂದಾಜಿಸುವ ಕಲೆಯಲ್ಲಿ ಪಾಸ್ವಾನ್ ಸಿದ್ಧ್ದಹಸ್ತರೆಂಬ ಅಭಿಪ್ರಾಯದೊಂದಿಗೆ ಲಾಲು ಹೀಗೆ ಹೇಳಿದ್ದಾರೆ. ಆವಾಗಿನಿಂದ, ‘ವೌಸಂ ವೈಜ್ಞಾನಿಕ್’ (ಹವಾಮಾನ ತಜ್ಞ) ಎಂಬ ಪದವು ರಾಜಕೀಯ ಪದವಾಗಿಯೂ ಬಳಕೆಯಾಗತೊಡಗಿದೆ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಪಾಸ್ವಾನ್ ಯಾವ ದಾರಿಯೆಡೆಗೆ ತಿರುಗಲಿದ್ದಾರೆಂದು ಜನ ಯೋಚಿಸತೊಡಗಿದ್ದಾರೆ. ಎಸ್ಸಿ/ಎಸ್ಟಿ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದ್ದಕ್ಕಾಗಿ ಕೇಂದ್ರ ಸರಕಾರವನ್ನು ಗುರಿಯಿರಿಸಿ ಟೀಕಿಸತೊಡಗಿದಾಗ, ‘ಹವಾಮಾನ ತಜ್ಞ’ ಎನ್‌ಡಿಎ ಒಕ್ಕೂಟವನ್ನು ತ್ಯಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಹಲವರು ಭಾವಿಸಿದ್ದರು. ಆದಾಗ್ಯೂ, ಒಮ್ಮೆ ಸರಕಾರವು ಈ ಕಾಯ್ದೆಯು ಇನ್ನಷ್ಟು ಬಲಿಷ್ಠವಾಗಲು ಕೆಲವು ತಿದ್ದುಪಡಿಗಳನ್ನು ಅಂಗೀಕರಿಸಿದ ಬಳಿಕ ಪಾಸ್ವಾನ್ ನರೇಂದ್ರ ಮೋದಿಯವರಿಗೆ ಪ್ರಶಂಸೆಗಳ ಸುರಿಮಳೆಗೈದರು. ಪಾಸ್ವಾನ್‌ರ ಈ ನಡೆಯು ಹಲವಾರು ರಾಜಕಾರಣಿಗಳನ್ನು ಗೊಂದಲದಲ್ಲಿ ಕೆಡವಿದೆ. ಆದರೆ ಇನ್ನು ಕೆಲವರು, ಇನ್ನೂ ಸ್ವಲ್ಪ ಸಮಯ ಕಾಯೋಣ, ಹವಾಮಾನ ಬದಲಾಗಲೂ ಬಹುದು. ಕಾದುನೋಡಿ ಎಂದು ಹೇಳತೊಡಗಿದ್ದಾರೆ.


ಮತ್ತೆ ಸಕ್ರಿಯರಾದ ಪವಾರ್  
ರಾಜಕೀಯದಲ್ಲಿ ಸದಾ ಕಾಲ ಸಕ್ರಿಯವಾಗಿ ಉಳಿಯಬೇಕೆಂಬುದೇ ಭಾರತೀಯ ರಾಜಕಾರಣಿಗಳ ಹಂಬಲವಾಗಿದೆ. ಹಾಗೆಯೇ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಇದ್ದಕ್ಕಿದ್ದಂತೆ ಮತ್ತೆ ಸಕ್ರಿಯರಾಗಿದ್ದಾರೆ. 2019ರ ಚುನಾವಣೆಗೆ ಮುನ್ನ ವಿವಿಧ ರಾಜ್ಯಗಳಲ್ಲಿ ಜಾತ್ಯತೀತ ಪಕ್ಷಗಳ ನಡುವೆ ಮೈತ್ರಿಯನ್ನು ಏರ್ಪಡಿಸುವ ಪ್ರಯತ್ನದಲ್ಲಿ ಅವರೀಗ ಮುಂಚೂಣಿಯಲ್ಲಿದ್ದಾರೆ. ಸ್ವಾರಸ್ಯಕರವೆಂದರೆ, ಈ ಮಹತ್ವಾಕಾಂಕ್ಷಿ ಮರಾಠಾ ಮುಖಂಡನನ್ನು ಸಂಶಯದಿಂದಲೇ ಕಾಣುತ್ತಿದ್ದ ಕಾಂಗ್ರೆಸ್ ನಾಯಕರು, ರಾಜಕೀಯವಾಗಿ ಸಕ್ರಿಯವಾಗುವ ಪವಾರ್‌ರ ಉಪಕ್ರಮವನ್ನು ಬೆಂಬಲಿಸ ತೊಡಗಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ನಾಯಕರ ಜೊತೆಗಿನ ಅವರ ನಿಕಟಬಾಂಧವ್ಯವನ್ನು ಗರಿಷ್ಠಮಟ್ಟದಲ್ಲಿ ಬಳಸಿಕೊಳ್ಳಬೇಕೆಂಬುದು ಅವರ ವಾದವಾಗಿದೆ. ಮಹಾರಾಷ್ಟ್ರದ ನಾಯಕರು ಕೂಡಾ ಪವಾರ್ ಸಾಹೇಬ್ ವಿರುದ್ಧ ಮಾತನಾಡುತ್ತಿಲ್ಲ. ಪವಾರ್‌ಗೆ ಇರಿಸುಮುರಿಸು ಉಂಟು ಮಾಡುವಂತಹ ಯಾವುದೇ ಕೆಲಸಕ್ಕೆ ಕೈಹಾಕದಂತೆ ರಾಹುಲ್ ಗಾಂಧಿ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಉಸ್ತುವಾರಿಯಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಪಕ್ಷದ ನಾಯಕರಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದಾರೆಂದು ಆಂತರಿಕ ಮೂಲಗಳು ತಿಳಿಸಿವೆ.


ಲಾಲು ಮತ್ತು ಬ್ರೂನೊ
ತನಗೆ ನೀಡಲಾದ ಮಧ್ಯಾಂತರ ಜಾಮೀನಿನ ಅವಧಿಯನ್ನು ವಿಸ್ತರಿಸುವಂತೆ ಕೋರಿ ರಾಷ್ಟ್ರೀಯ ಜನತಾದದ ವರಿಷ್ಠ ಲಾಲು ಪ್ರಸಾದ್ ಸಲ್ಲಿಸಿದ ಮನವಿ ಇತ್ತೀಚೆಗೆ ತಿರಸ್ಕೃತಗೊಂಡ ಬಳಿಕ ಅವರು ಮೇವು ಹಗರಣದ ಪ್ರಕರಣಗಳಿಗೆ ಸಂಬಂಧಿಸಿ ರಾಂಚಿಯಲ್ಲಿರುವ ಸಿಬಿಐ ನ್ಯಾಯಾಲಯದ ಮುಂದೆ ಶರಣಾಗಬೇಕಾಯಿತು. ಜಾಮೀನು ಬಿಡುಗಡೆಯ ಅವಧಿಯನ್ನು ವಿಸ್ತರಣೆ ಕೋರಿ ಲಾಲು ಮನವಿ ಸಲ್ಲಿಸಿರುವುದಕ್ಕೆ ಕಾರಣ ಕೇವಲ ತನ್ನ ಕುಟುಂಬಿಕರೊಂದಿಗೆ ಮಾತ್ರವಲ್ಲದೆ ಅವರ ಮುದ್ದಿನ ನಾಯಿ ಬ್ರೂನೊ ಜೊತೆಗೂ ಕಾಲಕಳೆಯಬೇಕೆಂಬ ಇಚ್ಛೆಯಾಗಿತ್ತು. ಮೂರು ತಿಂಗಳ ಪ್ರಾಯದ ಈ ಲ್ಯಾಬ್ರಡಾರ್ ರಿಟ್ರೀವರ್ ನಾಯಿ, ಪ್ರಸಾದ್ ಅವರ ಮುದ್ದಿನ ಕಣ್ಮಣಿಯಾಗಿದೆ ಹಾಗೂ ತನ್ನ ಈ ನಿಷ್ಠಾವಂತ ಜೊತೆಗಾರನಿಂದ ಬಹಳ ಸಮಯ ದೂರವಿರುವುದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಶ್ವಾನಪ್ರಿಯರಾಗಿರುವ ಲಾಲುಪ್ರಸಾದ್, ತನ್ನ ಈ ಪ್ರೀತಿಯ ನಾಯಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಬ್ರೂನೊಗೆ ಸಿಹಿ ತಿನ್ನಿಸದಂತೆ ಸಂದರ್ಶಕರನ್ನು ಕೋರುವ ಭಿತ್ತಿ ಪತ್ರಗಳನ್ನು ಅವರ ಮನೆಯಲ್ಲಿ ಅಂಟಿಸಲಾಗಿದೆ. ಆದರೆ ಪ್ರಸಾದ್ ಅವರಿಗೆ ತನ್ನ ಪ್ರೀತಿಯ ‘ಬ್ರೂನೊ’ನನ್ನು ಕಾಣಲು ಇನ್ನೂ ಬಹಳ ಸಮಯ ಕಾಯಬೇಕಾಗುವ ಹಾಗೆ ಕಾಣುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)