ಸಂದರ್ಭದ ಅಗತ್ಯವನ್ನು ಅರಿಯಲಿ ಸಭೆ, ಸಮಾವೇಶಗಳು, ಪ್ರತಿಭಟನೆಗಳು ವ್ಯರ್ಥವಾಗದಿರಲಿ ಜನರ ಶ್ರಮಗಳು
ಇಂದಿನ ಅಗತ್ಯವೇನೆಂದರೆ ಜನಸಾಮಾನ್ಯರನ್ನು ಹಾಗೆಯೇ ಜನರ ಮಧ್ಯೆ ಒಂದಷ್ಟಾದರೂ ವಿಶ್ವಾಸ ಉಳಿಸಿಕೊಂಡಿರುವ ಸಂಘಟನೆಗಳನ್ನು ವಿಷಯಾಧಾರಿತವಾಗಿ ಒಂದೆಡೆ ಸೇರಿಸಿ ಹೋರಾಟ ರೂಪಿಸುವುದು. ಅದಲ್ಲದೇ ಇದ್ದರೆ ಈ ರೀತಿಯ ಸಮಾವೇಶಗಳು ಕೇವಲ ಪ್ರಚಾರಕ್ಕೋ ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷದೊಂದಿಗೆ ಲಾಬಿ ಮಾಡಲು ಬಳಕೆಯಾಗಬಹುದಷ್ಟೆ. ಅದರಿಂದ ಜನಸಾಮಾನ್ಯರಿಗೆ ಯಾವ ಲಾಭವೂ ಆಗುವುದಿಲ್ಲ. ಹಲವಾರು ಕಾರ್ಯಕರ್ತರ ಹಾಗೂ ಭಾಗವಹಿಸುವ ಜನರ ಶ್ರಮ ವ್ಯರ್ಥವಾಗುತ್ತದೆ ಅಷ್ಟೆ .
ಕಳೆದೆರಡು ವಾರಗಳಿಂದ ಕರ್ನಾಟಕದಲ್ಲಿ ಹಲವು ಪ್ರತಿಭಟನೆಗಳು ಸಮಾವೇಶಗಳು ನಡೆಯುತ್ತಿವೆ. ಇವೆಲ್ಲಾ ಒಂದು ಪ್ರಮುಖ ಬೆಳವಣಿಗೆಯ ಪರಿಣಾಮಗಳಾಗಿದ್ದವು. ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರಗಳು ದೇಶದ ವಿವಿಧ ರಾಜ್ಯಗಳಲ್ಲಿ ಜನಪರ ಕಾರ್ಯಕರ್ತರು, ಮಾನವ ಹಕ್ಕು ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರುಗಳನ್ನು ಬಂಧಿಸುತ್ತಾ, ಅವರುಗಳ ಮನೆಗಳ ಮೇಲೆಲ್ಲಾ ದಾಳಿಗಳನ್ನು ನಡೆಸಿದವು. 78 ವರ್ಷ ಪ್ರಾಯದ ತೆಲುಗು ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ವರವರರಾವ್, ವಕೀಲ ಹಾಗೂ ಮಾನವ ಹಕ್ಕು ಕಾರ್ಯಕರ್ತ, ವೆರ್ನನ್ ಗೊನ್ಸಾಲ್ವಿಸ್, ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಿರಿಯ ವಕೀಲೆ ಸುಧಾ ಭಾರದ್ವಾಜ್, ಪತ್ರಕರ್ತ ಹಾಗೂ ಮಾನವ ಹಕ್ಕು ಕಾರ್ಯಕರ್ತ ಗೌತಮ್ ನವ್ಲಾಖಾ, ವಕೀಲ ಹಾಗೂ ಮಾನವ ಹಕ್ಕು ಕಾರ್ಯಕರ್ತ ಅರುಣ್ ಫೆರೇರಾ, ಕ್ರಾಂತಿ ತೇಕುಲಾರವರುಗಳ ಮನೆಗಳ ಮೇಲೆ, ದಾಳಿ ಮಾಡಿದ್ದಲ್ಲದೇ ಅವರನ್ನೆಲ್ಲಾ ಬಂಧಿಸಿದರು. ಪ್ರಾಧ್ಯಾಪಕ ಹಾಗೂ ಬರಹಗಾರ, ದಲಿತ ಹಿನ್ನೆಲೆಯ ಆನಂದ್ ತೇಲ್ತುಂಬ್ಡೆ, ಪ್ರಾಧ್ಯಾಪಕ ಹಾಗೂ ಸಾಹಿತಿ ಸತ್ಯನಾರಾಯಣ, ಫಾದರ್ ಸ್ಟಾನ್ ಸ್ವಾಮಿ, ವಕೀಲ ಹಾಗೂ ಮಾನವಹಕ್ಕು ಕಾರ್ಯಕರ್ತ ಸುಸಾನ್ ಅಬ್ರಹಾಂರವರುಗಳ ಮನೆ ಮೇಲೆ ದಾಳಿ ನಡೆಸಿ ಅವರ ಲ್ಯಾಪ್ ಟಾಪ್ ಇನ್ನಿತರ ವಿದ್ಯುನ್ಮಾನ ವಸ್ತುಗಳನ್ನು ತೆಗೆದುಕೊಂಡು ಹೋಗಲಾಗಿದೆ. ಇವರೆಲ್ಲರ ಮೇಲೆ ಕೋರೆಗಾಂವ್ ಗಲಭೆೆ ಹಾಗೂ ಪ್ರಧಾನಿ ಹತ್ಯೆಗೆ ಸಂಚು ರೂಪಿಸುತ್ತಿದ್ದರು,ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪಕ್ಷದೊಂದಿಗೆ ಇವರಿಗೆಲ್ಲಾ ನಂಟಿದೆ ಇತ್ಯಾದಿ ಆರೋಪಗಳನ್ನು ಮಾಡಿ ಬಂಧನಗಳನ್ನು ಮಾಡಿದ್ದಾರೆ.
ಇದಕ್ಕೂ ಕೆಲ ತಿಂಗಳ ಮೊದಲು ವಕೀಲ ಸುರೇಂದ್ರ ಗಾಡ್ಲಿಂಗ್, ದಲಿತ ಕಾರ್ಯ ಕರ್ತ ಮತ್ತು ಪ್ರಕಾಶಕ ಸುಧೀರ್ ಧವಲೆ, ಬುಡಕಟ್ಟುಜನರ ಪರವಾಗಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತ ಮಹೇಶ್ ರೌತ್, ರೋನಾ ವಿಲ್ಸನ್ರಂತಹ ಮಾನವ ಹಕ್ಕು ಕಾರ್ಯಕರ್ತರು, ಮಹಿಳೆಯರ ಮೇಲಿನ ಊಳಿಗಮಾನ್ಯ ಹಾಗೂ ಪ್ರಭುತ್ವ ದೌರ್ಜನ್ಯ ವಿರೋಧಿ ವೇದಿಕೆಯ ಮುಖ್ಯಸ್ಥೆ ಪ್ರೊಫೆಸರ್ ಶೋಮಾ ಸೇನ್ರಂತಹ ಪ್ರಾಧ್ಯಾಪಕರನ್ನು ಇವೇ ಆರೋಪದಡಿಯಲ್ಲಿಯೇ ಬಂಧಿಸಲಾಗಿತ್ತು. ಇವರೆಲ್ಲರ ಮೇಲೆಯೂ ಕರಾಳ ಯುಎಪಿಎ (ಖಿಅಅ) ಕಾಯ್ದೆಗಳನ್ನು ಹೇರಲಾಗಿದೆ. ಇವರೆಲ್ಲರ ಮೇಲೆ ಭೀಮಾ ಕೋರೆಗಾಂವ್ನಲ್ಲಿ ಎಲ್ಗಾರ್ ಪರಿಷತ್ ನಡೆಸಿ ಹಿಂಸೆಗೆ ಪ್ರಚೋದನೆ ನೀಡಿದ ಮತ್ತು ಪ್ರಧಾನಿ ಮೋದಿಯವರ ಕೊಲೆಗೆ ಸಂಚು ನಡೆಸಿರುವ ಆರೋಪಗಳನ್ನು ಹೊರಿಸಲಾಗಿದೆ. ಇದನ್ನು ನಾವೇ ಸಂಘಟಿಸಿದ್ದು ಇದರಲ್ಲಿ ಈಗ ಬಂಧಿಸಿದವರ ಪಾತ್ರವಿಲ್ಲವೆಂದು ಅದನ್ನು ಸಂಘಟಿಸಿದ ಇಬ್ಬರು ಮಾಜಿ ನ್ಯಾಯಾಧೀಶರುಗಳೇ ಹೇಳಿಕೆ ನೀಡಿದ್ದಾರೆ.
ಇಂತಹ ಅಕ್ರಮ ಬಂಧನಗಳು ಶುರುವಾಗಿದ್ದು ಇದೇ ಮೊದಲೇನೂ ಅಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕಾಲದಲ್ಲಿ ಜನಪರ ವೈದ್ಯ ಹಾಗೂ ಮಾನವ ಹಕ್ಕು ಕಾರ್ಯಕರ್ತ ಡಾ.ಬಿನಾಯಕ್ ಸೇನ್ರನ್ನು ಇದೇ ಕಾಯ್ದೆ ಬಳಸಿ ಸೆರೆಮನೆಗೆ ತಳ್ಳಲಾಗಿತ್ತು. ಅದಕ್ಕೂ ಹಿಂದೆ ಅದೇ ಸರಕಾರ ಆಪರೇಷನ್ ಗ್ರೀನ್ ಹಂಟ್ ಹೆಸರಿನಲ್ಲಿ ಹತ್ತಾರು ಆದಿವಾಸಿಗಳನ್ನು ಕೊಂದು ಯುಎಪಿಎ ಕಾಯ್ದೆಯಡಿ ಸಾವಿರಾರು ಆದಿವಾಸಿಗಳನ್ನು ಸೆರೆಮನೆಯಲ್ಲಿ ಕೂಡಿಹಾಕಿತ್ತು.
ನಂತರ ಶೇ.90ರಷ್ಟು ಅಂಗವೈಕಲ್ಯ ಹೊಂದಿರುವ ಹಲವು ಕಾಯಿಲೆಗಳಿಂದ ನರಳುತ್ತಿರುವ ದಿಲ್ಲಿಯ ಪ್ರಾಧ್ಯಾಪಕ ಪ್ರೊ. ಸಾಯಿಬಾಬರನ್ನು ಇದೇ ಕಾಯ್ದೆ ಬಳಸಿ ಕಳೆದ ಎರಡು ವರ್ಷಗಳಿಂದ ಸೆರೆಮನೆಯಲ್ಲಿಡಲಾಗಿದೆ.
ಇಂತಹ ಬಂಧನಗಳಾದ ಎಲ್ಲ ಸಂದರ್ಭಗಳಲ್ಲೂ ಜನರು ಪ್ರತಿಭಟಿಸುತ್ತಾ ಬಂದಿದ್ದಾರೆ. ಮಾನವ ಹಕ್ಕು ಸಂಘಟನೆಗಳು ಪ್ರತಿಭಟಿಸಿವೆ. ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಪ್ರತಿಭಟನೆಗಳು ನಡೆದಿದ್ದವು. ಡಾ. ಬಿನಾಯಕ್ ಸೇನ್ರ ವಿಚಾರದಲ್ಲಿ ಭಾರತೀಯ ನ್ಯಾಯಾಂಗದ ಕಾರ್ಯವೈಖರಿ ಬಗ್ಗೆಯೇ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು.
ಆದರೆ, ಈಗ ಹಿಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ದೇಶಾದ್ಯಂತ ಜನರ ಪ್ರತಿಭಟನೆ ಗಳು ದಾಖಲಾಗುತ್ತಿವೆ. ಕರ್ನಾಟಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ ಮೊದಲಾದ ವಿಚಾರಗಳನ್ನು ಇಟ್ಟುಕೊಂಡು ಸಭೆ ಸಮಾವೇಶಗಳು ನಡೆಯುತ್ತಿವೆ. ಪತ್ರಕರ್ತೆ ಮತ್ತು ಜನಪರ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ರನ್ನು, ಮಾಜಿ ಉಪಕುಲಪತಿ ಹಾಗೂ ಸಾಹಿತಿ ಎಂ.ಎಂ. ಕಲಬುರ್ಗಿಯವರನ್ನು ಕೊಲೆ ಮಾಡಿದ್ದ ಫ್ಯಾಶಿಸ್ಟ್ ಶಕ್ತಿಗಳ ಕೃತ್ಯವನ್ನು ಖಂಡಿಸಿ ಅಭಿವ್ಯಕ್ತಿ ಸಮಾವೇಶ ನಡೆಯಿತು. ನಂತರ ದಕ್ಷಿಣಭಾರತದ ದಲಿತ ಹೋರಾಟಗಾರರ ಸಮಾವೇಶ ನಡೆಯಿತು. ಇದಷ್ಟೇ ಅಲ್ಲದೇ ಬಹುತ್ವ ಭಾರತ, ದಲಿತ, ಆದಿವಾಸಿ, ಪ್ರಗತಿಪರ ವಿಚಾರಗಳನ್ನಿಟ್ಟುಕೊಂಡು ಹಲವು ಸಾಹಿತ್ಯಿಕ, ಇನ್ನಿತರ ಸಮಾವೇಶ, ಸಭೆಗಳು ನಡೆದವು.
ಬಹುತೇಕ ಇಂತಹ ಸಭೆಗಳು, ಸಮಾವೇಶಗಳು ಈಗಿನ ಸಂದರ್ಭದ ಸಮಸ್ಯೆಗಳನ್ನು ಗಂಭೀರವಾಗಿ ಮುಖಾಮುಖಿಯಾಗುತ್ತಿಲ್ಲ. ಗತಕಾಲದ ಇಲ್ಲವೇ ಸಾಹಿತ್ಯಕ್ಕೆ ಮಾತ್ರ, ಇಲ್ಲವೇ ಯಾವುದೋ ಮೇಲುಮಟ್ಟದ ವಿಚಾರಗಳಿಗೆ ಮೀಸಲೆಂಬಂತೆ ಮೇಲುಮಟ್ಟ ದಲ್ಲಿ ವಿಚಾರ ಮಂಡನೆಗಳು ನಡೆಯುತ್ತಿವೆ. ತೂತುಕುಡಿ, ಗಡ್ಚಿರೋಲಿ, ಮಹಾದಾಯಿಗ ಳಂತಹ ವಿಚಾರಗಳು ಪ್ರಸ್ತಾವನೆಯಾಗುವುದು ಬಹಳ ಕಡಿಮೆ. ಸಮಕಾಲೀನ ಸಂದರ್ಭ ದಲ್ಲಿ ನಿಂತು ವಿಷಯಗಳನ್ನು ನೋಡದೇ ಇರುವ ಒಂದು ಕೆಟ್ಟ ತಪ್ಪುಧೋರಣೆಯಿದೆ ಇಲ್ಲಿ.
ಚರ್ಚೆ ಸಂವಾದಗಳಿಗೆ ಅವಕಾಶಗಳೇ ಇಲ್ಲದಂತೆ ಇವುಗಳನ್ನೆಲ್ಲಾ ಸಂಘಟಿಸುತ್ತಿ ರುವುದೇ ಹೆಚ್ಚಾಗಿ ನಡೆಯುತ್ತಿದೆ. ಇಲ್ಲಿ ಒಂದು ಪ್ರಧಾನ ಧೋರಣೆ ಮೇಲುಗೈ ಯಲ್ಲಿರುತ್ತದೆ. ಭಾಗವಹಿಸುವವರು ಕೇವಲ ವೇದಿಕೆಯಿಂದ ಮಾತನಾಡು ವವರ ಮಾತುಗಳನ್ನಷ್ಟೇ ಕೇಳಿಸಿಕೊಂಡು ಹೋಗಬೇಕೆಂಬಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ಕೆಟ್ಟ ಅಪ್ರಜಾತಾಂತ್ರಿಕ ಧೋರಣೆ. ಕೇಳುಗರನ್ನು ಕಡೆಗಣಿಸಿನೋಡುವ ದಾಷ್ಟವಿದೆ ಇಲ್ಲಿ. ಇದು ಸಾಮಾನ್ಯವಾಗಿ ಎಲ್ಲಾ ಕಡೆ ಕಾಣಿಸುತ್ತದೆ.
ಇಂದು ದೇಶಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿಯ ಬಗ್ಗೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಇದಕ್ಕಾಗಿ ‘ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಿ’ ಎಂಬ ಕೂಗು ಕೂಡ ಕರ್ನಾಟಕದಲ್ಲಿ ಕೇಳಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಮೌಢ್ಯವನ್ನು ಪ್ರಶ್ನೆಮಾಡಿದವರನ್ನು, ಸರಕಾರದ ನೀತಿಗಳನ್ನು, ಮಂತ್ರಿಗಳ ಕಾರ್ಯ ವೈಖರಿಗಳನ್ನು ಟೀಕಿಸುವವರನ್ನುಕೂಡ ಇಂಡಿಯನ್ ಪೀನಲ್ ಕೋಡಿನ ಹಲವು ಕಲಮುಗಳನ್ನು ಬಳಸುತ್ತಾ ಬಂಧಿಸಿ ಕಿರುಕುಳ ನೀಡುವ ಪರಿಪಾಠಗಳನ್ನು ಎಲ್ಲಾ ಕಡೆ ಸರಕಾರಗಳು ಈಗ ಹೆಚ್ಚಾಗಿ ಮಾಡುತ್ತಿವೆ. ಇಂತಹವುಗಳನ್ನು ಆದಿವಾಸಿಗಳು ಇನ್ನಿತರ ಜನರು ತಮ್ಮ ಬದುಕು ಹಾಗೂ ಪರಿಸರಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಪ್ರದೇಶಗಳಲ್ಲಿ ಹಿಂದಿನ ಎಲ್ಲಾ ಸರಕಾರಗಳ ಕಾಲದಿಂದಲೂ ಮಾಡುತ್ತಾ ಬರಲಾಗಿದೆ. ಛತ್ತೀಸ್ಗಡದಲ್ಲಿ ಆದಿವಾಸಿಗಳ ಮಧ್ಯೆ ಇದ್ದುಕೊಂಡು ಅವರ ಬದುಕಿನ ಸುಧಾರಣೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದ ಹಿಮಾಂಶುಕುಮಾರ್ರ ಮೇಲೆ ಹತ್ತು ಹಲವು ಪ್ರಕರಣಗಳನ್ನು ದಾಖಲಿಸಿ, ಬೆದರಿಕೆ ಹಾಕಿ, ಅವರ ಆಶ್ರಮಕ್ಕೆ ಬೆಂಕಿ ಕೊಟ್ಟು ಅವರನ್ನು ಅಲ್ಲಿಂದ ಹೊರಹೋಗುವಂತೆ ಮಾಡಲಾಗಿತ್ತು. ಅದೇ ರೀತಿ ಪತ್ರಕರ್ತೆ ಮಾಲಿನಿ ಸುಬ್ರಮಣ್ಯಂ, ಪ್ರೊಫೆಸರ್ ನಂದಿನಿ ಸುಂದರ್ರಂತಹ ಹಲವು ಮಾನವ ಹಕ್ಕು ಕಾರ್ಯಕರ್ತರ ಮೇಲೂ ಈ ರೀತಿಯ ಹಲವು ಕಿರುಕುಳಗಳನ್ನು ಮತ್ತು ಬೆದರಿಕೆಗಳನ್ನು ನೀಡಲಾಗಿತ್ತು. ಆದಿವಾಸಿ ಹಿನ್ನ್ನೆಲೆಯ ಸೋನಿಸೋರಿಯಂತಹ ಅಧ್ಯಾಪಕಿಯನ್ನು ಕಿರುಕುಳ ನೀಡಿ ಬಂಧಿಸಿದ್ದಲ್ಲದೆ ಭಯಂಕರ ಚಿತ್ರಹಿಂಸೆ ನೀಡಲಾಗಿತ್ತು. ಅವರ ಮರ್ಮಾಂಗದೊಳಗೆ ಸುಮಾರು 200 ಗ್ರಾಂ ತೂಗುವ ಕಲ್ಲನ್ನು ತುರುಕಿಸಲಾಗಿತ್ತು. ಇವುಗಳು ಕಾಂಗ್ರೆಸ್ ನೇತೃತ್ವದಲ್ಲಿದ್ದ ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದವು. ಈಗಲೂ ಸೋನಿ ಸೋರಿ ಆದಿವಾಸಿಗಳ ಹಕ್ಕಿಗಾಗಿ ತಮ್ಮ ಹೋರಾಟ ಮುಂದುವರಿಸಿದ್ದಾರೆ.
ಇಂಡಿಯನ್ ಪೀನಲ್ ಕೋಡ್ನಲ್ಲಿ ಹಲವು ಕಲಮುಗಳು ಇದ್ದು ಅವೆಲ್ಲಾ ನಿಜವಾದ ಪ್ರಜಾತಾಂತ್ರಿಕ ವ್ಯವಸ್ಥೆಯೊಂದಕ್ಕೆ ವ್ಯತಿರಿಕ್ತವಾಗಿರುವಂತಹವುಗಳು. ಅವುಗಳನ್ನು ಬ್ರಿಟಿಷ್ ವಸಾಹತು ಶಾಹಿ ಆಡಳಿತ ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಲು ಜಾರಿಗೆ ತಂದಿತ್ತು. ಈಗಲೂ ಅವುಗಳನ್ನು ಇಲ್ಲಿನ ಸರಕಾಗಳು ಜನರ ಮೇಲೆ ಬಳಸುತ್ತಿವೆ.
ಮೊದಲಿನಿಂದಲೂ ಸಂವಿಧಾನದಡಿಯಲ್ಲಿಯೇ ಇಂತಹ ಜನವಿರೋಧಿ ಹಾಗೂ ಪ್ರಜಾತಂತ್ರ ವಿರೋಧಿ ಕಾಯ್ದೆಗಳನ್ನು ಮಾಡುವುದು, ಬಳಸುವುದು ನಡೆಯುತ್ತಲೇ ಬಂದಿವೆ. ನಮ್ಮ ದೇಶದ ಕಾಯ್ದೆಗಳಲ್ಲಿ ಜನಸಾಮಾನ್ಯರನ್ನು ಹೇಗೆ ಬೇಕೆಂದರೆ ಹಾಗೆ ಬಂಧಿಸುವ, ಕಿರುಕುಳ ಕೊಡಬಹುದಾದ ನೂರಾರು ಕಲಮುಗಳಿವೆ, ಪೊಲೀಸ್ ಕಾಯ್ದೆಗಳಿವೆ, ಕಾನೂನುಗಳಿವೆ. ಅಧಿಕಾರಸ್ಥರು ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಬಳಸುವಂತೆ ಅವುಗಳನ್ನು ರೂಪಿಸಲಾಗಿದೆ. ಯುಎಪಿಎ ಯಂತಹ ಕಾನೂನುಗಳನ್ನೂ ಮಾಡುತ್ತಾ ಬರಲಾಗಿದೆ. ಇಂತಹ ಕಾನೂನುಗಳ ಬಿಸಿ ಜನಸಾಮಾನ್ಯರಿಗೆ ಅರಿವಿಗೆ ಬರುವುದು ಸರಕಾರಗಳು ಮತ್ತು ಅಧಿಕಾರಸ್ಥರನ್ನು ಪ್ರಶ್ನೆ ಮಾಡಲು ತೊಡಗಿದಾಗ ಮಾತ್ರ.
ದೇಶಾದ್ಯಂತ ಮಹಿಳೆಯರು, ದಲಿತರು, ದಮನಿತರು, ಪ್ರಜಾತಂತ್ರವಾದಿಗಳ ಮೇಲೆ ಹಿಂದೆಂದೂ ಇಲ್ಲದಷ್ಟು ತೀವ್ರಗತಿಯ ಫ್ಯಾಶಿಸ್ಟ್ ಆಕ್ರಮಣಗಳು ನಡೆಯುತ್ತಿರುವ ಇಂದಿನ ಸಂದರ್ಭದಲ್ಲೂ, ಇಂತಹ ಮೂಲಭೂತ ಪ್ರಶ್ನೆಗಳನ್ನು ಹಾಕಿಕೊಳ್ಳುವ, ಅವುಗಳ ಬಗ್ಗೆ ಚರ್ಚಿಸುವ ಕಾರ್ಯಕ್ಕೆ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಸಭೆ, ಸಮಾವೇಶಗಳು ಮುಂದಾಗದಿರುವುದು ಎದ್ದು ಕಾಣುತ್ತಿದೆ. ಬುದ್ಧಿಜೀವಿಗಳು, ಸಾಹಿತಿಗಳು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತ್ರ ಚಿಂತಿತರಾದಂತಿದೆ. ಅದೂ ಕೂಡ ಈಗ ಕೇಂದ್ರದಲ್ಲಿರುವ ಸರಕಾರದ ಕಾರಣಕ್ಕೆ ಹಾಗೆ ಆಗುತ್ತಿದೆ ಎಂದುಕೊಂಡಿದ್ದಾರೆ. ಆದರೆ ಈ ನಾಡಿನ ಬಹು ಸಂಖ್ಯಾತ ಸಮುದಾಯಗಳಿಗೆ ಬದುಕುವ ಸ್ವಾತಂತ್ರ್ಯ ಗಳೇ ಹರಣವಾಗುತ್ತಾ ಬಂದಿರುವುದರ ಬಗ್ಗೆ ಗಮನಿಸುವುದಿಲ್ಲ. ಗಮನಿಸಿದರೂ ತಮ್ಮ ಸೇಫ್ ರೆನ್ಗೇನೂ ತೊಂದರೆಯಾಗದಿದ್ದರೆ ಸಾಕು ಎಂಬ ಧೋರಣೆಯಿದೆ. ತಮ್ಮ ಸೇಫ್ ರೆನಿಗೆ ಕಂಟಕ ಬರುತ್ತಿರು ವುದರ ಬಿಸಿ ಮುಟ್ಟುತ್ತಿರುವಾಗ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತಿರುವಂತೆ ಮಾಡು ತ್ತಾರೆ. ಕೆಲವು ಸಂಘಟನೆಗಳು ಜನರ ಪ್ರತಿಭಟ ನೆಗಳನ್ನು ಹಾದಿ ತಪ್ಪಿಸಲು ‘ಯಂತ್ರಗಳನ್ನು ಕಳಚಿ ಗ್ರಾಮ ಭಾರತ ಕಟ್ಟು ವುದೇ’ ಇದಕ್ಕೆಲ್ಲಾ ಪರಿಹಾರ, ಇದು ಗಾಂಧಿ ತತ್ವದಿಂದ ಬದಲಾವಣೆ ತರುವ ಮಾರ್ಗ ಎನ್ನುವಂತೆ ಮಾತಾಡುತ್ತಿದ್ದಾರೆ.
ಕೆಲವು ಬುದ್ಧಿಜೀವಿಗಳು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಸಂವಿಧಾನದಡಿಯಲ್ಲಿ ತಪ್ಪುಗಳನ್ನು ಮಾಡುತ್ತಿತ್ತು. ಆದರೆ, ಈಗಿನ ಸರಕಾರ ಸಂವಿಧಾನವನ್ನೇ ಉಲ್ಲಂಘಿಸುತ್ತಾ ಸಂವಿಧಾನವನ್ನು ಬದಲಿಸಲು ಹೊರಟಿದೆ. ಹಾಗಾಗಿ ಮೋದಿ ಸರಕಾರದ ಬದಲಿಗೆ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ತರುವ ಅಗತ್ಯವಿದೆ ಎಂದು ಪ್ರತಿಪಾದನೆ ಮಾಡುತ್ತಿ ದ್ದಾರೆ. ಇಂತಹ ಅರ್ಥವಿಲ್ಲದ, ಕನಿಷ್ಠ ತರ್ಕ ಕೂಡಾ ಇಲ್ಲದ ಪ್ರತಿಪಾದನೆಗಳನ್ನು ಜನಸಾಮಾನ್ಯರು ಈಗ ನಂಬುವ ಸ್ಥಿತಿಯಲ್ಲಿದ್ದಾರೆಯೇ?. ಯಾಕೆಂದರೆ ಜನಸಾಮಾನ್ಯರು ಮೊದಲಿನಿಂದ ಕಾಂಗ್ರೆಸ್ಸಿನಂತಹ ಪಕ್ಷಗಳನ್ನು ನೋಡುತ್ತಾ ಬಂದಿದ್ದಾರೆ ತಾನೆ. ತುರ್ತುಪರಿಸ್ಥಿತಿಯ ಕರಾಳ ನೆರಳು ಜನರ ಮನಸ್ಸಿನಿಂದ ಇನ್ನೂ ಹೋಗಿಲ್ಲ ತಾನೆ.
ದಕ್ಷಿಣ ಭಾರತದ ದಲಿತ ಹೋರಾಟಗಾರರ ಸಮಾವೇಶವೊಂದು ಬೆಂಗಳೂರಿನಲ್ಲಿ ನಡೆಯಿತು. ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಎಲ್ಲ ದಲಿತ ಸಂಘಟನೆಗಳು ಒಂದೇ ಛತ್ರಿಯಡಿ ಬಂದು ಬಿಜೆಪಿ ಹಾಗೂ ಮೋದಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಕೆಲಸಮಾಡಲು ಕರೆ ಕೊಟ್ಟರು. ಇಂದು ಅದು ಬಹಳ ತುರ್ತಿನ ಕೆಲಸ ಎಂದರು. ಆದರೆ, ಅಲ್ಲಿ ಭಾಗವಹಿಸಿದ್ದ ದಲಿತ ನಾಯಕರಲ್ಲಿ ಬಹುತೇಕರು ಜನರ ವಿಶ್ವಾಸವನ್ನು ಎಂದೋ ಕಳೆದುಕೊಂಡವರಾಗಿದ್ದರು. ಅವರನ್ನು ಜನರು ಈಗ ನಂಬುವ ಪರಿಸ್ಥಿತಿ ಇಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಎಂದರೆ, ಜಿಗ್ನೇಶ್ಭಾಷಣ ಕೇಳಲು ಉತ್ಸುಕತೆ ತೋರಿದ ಜನರು ಈ ನಾಯಕರ ಭಾಷಣ ಕೇಳುವ ಉತ್ಸುಕತೆ ತೋರಲಿಲ್ಲ. ಅವರ ಭಾಷಣಗಳಿಗೆ ಜನರಿಗಿಂತ ಖಾಲಿ ಕುರ್ಚಿಗಳೇ ಹೆಚ್ಚಾಗಿದ್ದವು.
ಇಂದಿನ ಅಗತ್ಯವೇನೆಂದರೆ ಜನಸಾಮಾನ್ಯರನ್ನು ಹಾಗೇಯೇ ಜನರ ಮಧ್ಯೆ ಒಂದಷ್ಟಾದರೂ ವಿಶ್ವಾಸ ಉಳಿಸಿಕೊಂಡಿರುವ ಸಂಘಟನೆಗಳನ್ನು ವಿಷಯಾಧಾರಿತವಾಗಿ ಒಂದೆಡೆ ಸೇರಿಸಿ ಹೋರಾಟ ರೂಪಿಸುವುದು. ಅದಲ್ಲದೇ ಇದ್ದರೆ ಈ ರೀತಿಯ ಸಮಾವೇಶಗಳು ಕೇವಲ ಪ್ರಚಾರಕ್ಕೋ ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷದೊಂದಿಗೆ ಲಾಬಿ ಮಾಡಲು ಬಳಕೆಯಾಗಬಹುದಷ್ಟೆ. ಅದರಿಂದ ಜನಸಾಮಾನ್ಯರಿಗೆ ಯಾವ ಲಾಭವೂ ಆಗುವುದಿಲ್ಲ. ಹಲವಾರು ಕಾರ್ಯಕರ್ತರ ಹಾಗೂ ಭಾಗವಹಿಸುವ ಜನರ ಶ್ರಮ ವ್ಯರ್ಥವಾಗುತ್ತದೆ ಅಷ್ಟೆ .