ಬೈಕಂಪಾಡಿಯಲ್ಲಿ ಬಸ್ ಪಲ್ಟಿ: 35ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
ಮಂಗಳೂರು, ಸೆ.11: ಖಾಸಗಿ ಬಸ್ಸೊಂದು ಉರುಳಿಬಿದ್ದ ಪರಿಣಾಮ ಹಲವರು ಗಾಯಗೊಂಡ ಘಟನೆ ಬೈಕಂಪಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಾಟಿಪಳ್ಳ-ಕೈಕಂಬ ಕಡೆಯಿಂದ ಮಂಗಳೂರಿನತ್ತ ಬರುತ್ತಿದ್ದ ಖಾಸಗಿ ಬಸ್ ಇದಾಗಿದೆ. ಬಸ್ಸಿನಲ್ಲಿದ್ದ 35ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾಟಿಪಳ್ಳ ಕಡೆಯಿಂದ ಮಂಗಳೂರಿನತ್ತ ಬರುತ್ತಿದ್ದ ಬಸ್ ಬೈಕಂಪಾಡಿಯಿಂದ ಜೋಕಟ್ಟೆಗೆ ತೆರಳುವ ತಿರುವಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದಿದೆ.
ಬೆಳಗ್ಗಿನ ವೇಳೆಯಾಗಿದ್ದುದರಿಂದ ವಿದ್ಯಾರ್ಥಿಗಳು ಸೇರಿದಂತೆ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಯ ಬಗ್ಗೆ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story