ಕೆಎಂಸಿ ಮಣಿಪಾಲಕ್ಕೆ ನ್ಯೂಯಾರ್ಕ್ ಶಿಕ್ಷಣ ಇಲಾಖೆ ಮಾನ್ಯತೆ
ಮಣಿಪಾಲ, ಸೆ.11: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ನ(ಮಾಹೆ) ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮುಂದಿನ ಏಳು ವರ್ಷಗಳ ಅವಧಿಗೆ ನ್ಯೂಯಾರ್ಕ್ ಸ್ಟೇಟ್ ಶಿಕ್ಷಣ ಮಂಡಳಿಯ ಮಾನ್ಯತೆಯನ್ನು ಪಡೆದಿದೆ.
ನ್ಯೂಯಾರ್ಕ್ ಸ್ಟೇಟ್ ಶಿಕ್ಷಣ ಮಂಡಳಿಯಿಂದ (ಎನ್ವೈಎಸ್ಇಡಿ)ಯಿಂದ ಮಾನ್ಯತೆ ಪಡೆದ ಭಾರತದ ಏಕೈಕ ಮೆಡಿಕಲ್ ಕಾಲೇಜು ಕೆಎಂಸಿ ಮಣಿಪಾಲ ಆಗಿದೆ ಎಂದು ಮಾಹೆ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಕೆಎಂಸಿಗೆ ದೊರೆತ ಈ ಮಾನ್ಯತೆಯಿಂದ ಇಲ್ಲಿ ಕಲಿಯುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ನ್ಯೂಯಾರ್ಕ್ ನಗರದಲ್ಲಿ ಕ್ಲಿನಿಕಲ್ ತರಬೇತಿ ಪಡೆಯಲು ಯಾವುದೇ ಸಮಯದ ನಿರ್ಬಂಧಗಳು ಇರುವುದಿಲ್ಲ.
ಎನ್ವೈಎಸ್ಇಡಿಯಿಂದ ವಿದೇಶಿ ವೈದ್ಯಕೀಯ ಕಾಲೇಜುಗಳಿಗೆ ಈ ಮಾನ್ಯತೆ ದೊರೆಯುವ ಮೊದಲು ಸಾಕಷ್ಟು ಕಠಿಣ ಪರೀಕ್ಷೆಗಳು ನಡೆಯುತ್ತವೆ. ಕೆಎಂಸಿ ಮಟ್ಟಿಗೆ 2017ರ ನವೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ತಜ್ಞರ ತಂಡವೊಂದಿಗೆ ಮಣಿಪಾಲಕ್ಕೆ ಆಗಮಿಸಿ, ಅಂತಾರಾಷ್ಟ್ರೀಯ ಗುಣಮಟ್ಟದ ಹಲವು ಪರೀಕ್ಷೆಗಳನ್ನು ನಡೆಸಿತ್ತು. ತಂಡ ನೀಡಿದ ವರದಿ ಹಾಗೂ ಶಿಫಾರಸ್ಸುಗಳ ಆಧಾರದಲ್ಲಿ ಈ ಮಾನ್ಯತೆಯನ್ನು ನೀಡಲಾಗಿದೆ ಎಂದು ಮಾಹೆಯ ಪ್ರಕಟಣೆ ವಿವರಿಸಿದೆ.
ಎನ್ವೈಎಸ್ಇಡಿಯಿಂದ ಕೆಎಂಸಿ ಮಣಿಪಾಲಕ್ಕೆ ಮಾನ್ಯತೆ ದೊರೆತಿರುವುದಕ್ಕೆ ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಕೆಎಂಸಿಯ ಉನ್ನತ ಗುಣಮಟ್ಟ ಹಾಗೂ ಅದರ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ವುಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ ಎಂದರು.
2018ರ ಎನ್ಐಆಫ್ಎಫ್ ರ್ಯಾಂಕಿಂಗ್ನಲ್ಲಿ ಕೆಎಂಸಿ ಮಣಿಪಾಲ, ಖಾಸಗಿ ವೈದ್ಯಕೀಯ ವಲಯದಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಉಳಿದೆಲ್ಲಾ ರಾಷ್ಟ್ರೀಯ ರ್ಯಾಂಕಿಂಗ್ನ ಮೆಡಿಕಲ್ ಕಾಲೇಜು ವಿಭಾಗದಲ್ಲಿ ಕೆಎಂಸಿ ಅಗ್ರ 10 ಕಾಲೇಜುಗಳಲ್ಲಿ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.