ಪ್ರಶ್ನೋಪನಿಷತ್ ಮತ್ತು ಪ್ರಭುತ್ವ
ಪ್ರಶ್ನೆಗಳು ಸತ್ಯವನ್ನು ಹೊರಗೆಳೆಯುವ ಸಲಾಕೆಗಳು. ಸತ್ಯ ತಿಳಿಯಬೇಕಾದರೆ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಪ್ರಶ್ನೆಗಳನ್ನು ಕೇಳದೆ ಪೊಲೀಸ್ ವ್ಯವಸ್ಥೆ ಕಾರ್ಯವೆಸಗಲಾರದು. ತಾವು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರಕದಿದ್ದಾಗ ಪೊಲೀಸರು ಆಪಾದಿತನ ಬಾಯಿ ಬಿಡಿಸಲು ಬೆತ್ತ ಬಳಸಬಹುದು. ‘ಥರ್ಡ್ ಡಿಗ್ರಿ’ ಶಿಕ್ಷೆಗಳಿಗೆ ಮೊರೆ ಹೋಗಬಹುದು. ಆದರೆ ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಶ್ನೆ ಕೇಳಿದವನಿಗೆ ಹೀಗೆ ಹಿಂಸೆ ನೀಡಲು ಸಾಧ್ಯವಿಲ್ಲ. ಹಿಂಸೆ ನೀಡುವುದು, ಆತನನ್ನು ಬೆದರಿಸುವುದು, ಆತ ಹೆದರಿಕೆಯ ವಾತಾವರಣದಲ್ಲಿ ಬದುಕುವಂತೆ ಮಾಡುವುದು ಅನೈತಿಕವಾಗುತ್ತದೆ.
‘‘ಯಥಾಕಾಮಂ ಪ್ರಶ್ನಾನ್ ಪೃಚ್ಛತ’’
ಪರಬ್ರಹ್ಮನನ್ನು ಅನ್ವೇಷಿಸುತ್ತ ಹೊರಟ ಸುಕೇಶ, ಸತ್ಯಕಾಮ, ಸೌರ್ಯಾಯಣಿ, ಕೌಸಲ್ಯ, ಭಾರ್ಗವ ಮತ್ತು ಕಬಂಧಿ ಎಂಬ ಆರು ಮಂದಿ ಶಿಷ್ಯರು ಪಿಪ್ಪಲಾದನ ಬಳಿಹೋಗುತ್ತಾರೆ. ಆಗ ಪಿಪ್ಪಲಾದ ಹೇಳುವ ಮಾತು: ‘‘ಯಥಾಕಾಮಂ ಪ್ರಶ್ನಾನ್ ಪೃಚ್ಛತ’’. ‘‘ನೀವು ಎಷ್ಟುಬೇಕಾದರೂ, ನಿಮ್ಮ ಇಚ್ಛಾನುಸಾರವಾಗಿ ಪ್ರಶ್ನೆಗಳನ್ನು ಕೇಳಿ.’’
ಸುಮಾರು 3,000 ವರ್ಷಗಳ ಹಿಂದೆ ರಚಿತವಾಯಿತೆನ್ನಲಾಗುವ ಅಥರ್ವವೇದದ ಒಂದು ಭಾಗವಾಗಿರುವ ಪ್ರಶ್ನೋಪನಿಷತ್‌ನ ಮಾತಿನಿಂದ ನಾನು ಈ ಲೇಖನವನ್ನು ಆರಂಭಿಸಲು ಕಾರಣವಿದೆ. ದೇಶದ ಸದ್ಯದ ಸ್ಥಿತಿಗಿಂತ ತೀರ ಭಿನ್ನವಾದ ಒಂದು ಪ್ರಾಚೀನ ಸಮಾಜದಲ್ಲಿ ಇದ್ದಂತಹ ಅಭಿವ್ಯಕ್ತಿ ಸ್ವಾತಂತ್ರ, ಪ್ರಶ್ನೆಕೇಳುವ ಅವಕಾಶ ಹಾಗೂ ಹಕ್ಕು ಮತ್ತು ಭಿನ್ನಮತವನ್ನು ವ್ಯಕ್ತಪಡಿಸುವ ಮಾನವ ಸಹಜ ವಾತಾವರಣವನ್ನು ವಿಶ್ವಕ್ಕೆ ಸಾರಿದ ಭಾರತೀಯ ಪರಂಪರೆಯಲ್ಲಿ ಪ್ರಶ್ನೆಕೇಳಿದವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎಂಬುದನ್ನು ಕೂಡ ಇದೇ ಉಪನಿಷತ್‌ನ ಮುಂದಿನ ಸಾಲು ಹೇಳುತ್ತದೆ: ‘‘ಯದಿ ವಿಜ್ಞಾಸ್ಯಾಮಃ ಸರ್ವಂ ಹ ವಕ್ಷಾಮ ಇತಿ.’’ ಅಂದರೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ ‘‘ನಮಗೆ ತಿಳಿದಿದ್ದರೆ ಎಲ್ಲವನ್ನು ನಿಮಗೆ ಹೇಳುವೆವು’’
ಪ್ರಶ್ನೆ ಕೇಳುವುದೇ ತಪ್ಪು, ಅಪರಾಧ, ಅಥವಾ ಪಾಪ ಎಂದು ಭಾರತೀಯ ಆರ್ಷೇಯ ಪರಂಪರೆಯ ಯಾವ ಪಠ್ಯವೂ ಹೇಳುವುದಿಲ್ಲ. ವಿಶ್ವ ತತ್ವಜ್ಞಾನಕ್ಕೆ ಭಾರತದ ಅನನ್ಯ ಕೊಡುಗೆ ಎಂದು ನಾವು ಹೆಮ್ಮೆ ಪಡುವ ಭಗವದ್ಗೀತೆ ಆರಂಭವಾಗುವುದೇ ಧೃತರಾಷ್ಟ್ರ ಕೇಳುವ ಒಂದು ಪ್ರಶ್ನೆಯಿಂದ: ‘‘... ಕಿಮಕುರ್ವತ ಸಂಜಯ’’ (‘‘ಸಂಜಯನೆ, ಯುದ್ಧ ಮಾಡಬೇಕೆಂದು ಕುರುಕ್ಷೇತ್ರದಲ್ಲಿ ಸೇರಿದ ನನ್ನವರೂ ಪಾಂಡವರೂ ಏನು ಮಾಡಿದರು?) ಪ್ರಶ್ನಿಸುವುದು ಜೀವಸಹಜಕ್ರಿಯೆ. ಪ್ರಶ್ನೆಯನ್ನೇ ಕೇಳಬೇಡ ಎನ್ನುವುದು ಜೀವವಿರೋಧಿ ನಿಲುವು. ಮಾತಾಡಲಾರಂಭಿಸಿದ ಮಗು ತಾನು ಕಂಡದ್ದನ್ನು, ಕೇಳಿದ್ದನ್ನು ಪ್ರಶ್ನಿಸುತ್ತದೆ. ‘‘ನಾನು ಕಾಲೇಜಿಗೆ ಹೋಗಬೇಕು’’ ಎಂದು ಹೇಳಿದವ, ಮರಳಿ ನನ್ನ ಐದು ವರ್ಷದ ಮೊಮ್ಮಗಳ ಎದುರು ಲುಂಗಿ, ಶರ್ಟ್‌ಧರಿಸಿ ಹೋದಾಗ ಅವಳು ಕೇಳುವ ಪ್ರಶ್ನೆ: ‘‘ ನೀನು ಕಾಲೇಜಿಗೆ ಹೋಗುತ್ತೇನೆ ಎಂದಿದ್ದೆಯಲ್ಲ. ಮತ್ಯಾಕೆ ಲುಂಗಿ ಉಟ್ಟುಕೊಂಡಿದ್ದಿ?’’! ನಾನೊಬ್ಬನೇ ಅವಳನ್ನು ನೋಡಲು ಹೋದರೆ ಆಕೆ ಥಟ್ಟನೆ ಕೇಳುತ್ತಾಳೆ: ‘‘ದೊಡ್ಡ ಎಲ್ಲಿ?’’ ಇಂತಹ ಸರಳ ಪ್ರಶ್ನೆಗಳ ಹಿಂದೆ ಹಲವು ಸ್ವೀಕೃತ ನಿಲುವುಗಳನ್ನು, ಪ್ರಮೇಯಗಳನ್ನು ಪ್ರಶ್ನಿಸುವ ಮನೋಧರ್ಮವಿರುತ್ತದೆ. ಒಬ್ಬರು ಹೇಳಿದ್ದನ್ನು ನಾವು ಅನುಮಾನಿಸಿದಾಗ ಅಥವಾ ಅವರು ಹೇಳಿದ್ದು ಸರಿಯಲ್ಲ, ಸತ್ಯವಲ್ಲ, ಸುಳ್ಳು ಅನ್ನಿಸಿದಾಗ ತನಿಂ್ನತಾನಾಗಿಯೇ ನಮ್ಮಲ್ಲಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಹುಟ್ಟುವ, ಏಳುವ ಪ್ರಶ್ನೆಗಳು ಒಬ್ಬ ವ್ಯಕ್ತಿಯ ನಡೆನುಡಿ ಅಥವಾ ಕ್ರಿಯೆಯ ಬಗ್ಗೆ ಇರ ಬಹುದು; ಅಥವಾ ಒಂದು ವ್ಯವಸ್ಥೆಯ, ಪ್ರಭುತ್ವದ ನಡೆ ಹಾಗೂ ನುಡಿಯ ಕುರಿತು ಇರಬಹುದು. ಇತಿಹಾಸದ ಉದ್ದಕ್ಕೂ ಅಂದಂದಿನ ಸಾಮಾಜಿಕ ವ್ಯವಸ್ಥೆ ಹಾಗೂ ಪ್ರಭುತ್ವದ ನಡೆಯ ಬಗ್ಗೆ ಮನುಷ್ಯ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದಾನೆ. ಬುದ್ಧ, ಸಾಕ್ರೆಟಿಸ್, ಏಸುಕ್ರಿಸ್ತ, ಮಹಾವೀರ, ಚಾರ್ವಾಕರು, ಬಸವಣ್ಣ, ಗಾಂಧಿ, ಅಕ್ಕಮಹಾದೇವಿ, ಡಾರ್ವಿನ್, ಮಾರ್ಕ್ಸ್, ಅಂಬೇಡ್ಕರ್, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ- ಎಲ್ಲರೂ ವಿವಿಧ ಹಂತಗಳಲ್ಲಿ ಹತ್ತಾರು ಪ್ರಶ್ನೆಗಳನ್ನು ಕೇಳಿದವರೇ. ಅವರೆಲ್ಲ ಪ್ರಶ್ನೆಗಳನ್ನೇ ಕೇಳದಿರುತ್ತಿದ್ದರೆ ಪ್ರಪಂಚದಲ್ಲಿ ಯಾವ ರೀತಿಯ ಬದಲಾವಣೆಯೂ ಸಾಧ್ಯವಾಗುತ್ತಿರಲಿಲ್ಲ. ಗುಲಾಮಗಿರಿ, ಸತಿಸಹಗಮನ, ಜೀತ ಪದ್ಧತಿ, ವರ್ಣದ್ವೇಷ ನೀತಿ ಕೊನೆಗೊಳ್ಳುತ್ತಿರಲಿಲ್ಲ. ಬ್ರಿಟಿಷ್ ಸರಕಾರದ ವಿರುದ್ಧ ಬಾಲಗಂಗಾಧರ ತಿಲಕ್, ಗಾಂಧೀಜಿ ಪ್ರಶ್ನೆಗಳನ್ನು ಕೇಳದಿರುತ್ತಿದ್ದರೆ ಈ ದೇಶಕ್ಕೆ ಸ್ವಾತಂತ್ರವೂ ಸಿಗುತ್ತಿರಲಿಲ್ಲ, ಸಂವಿಧಾನವೂ ಸಾಧ್ಯವಾಗುತ್ತಿರಲಿಲ್ಲ.
ಈಗ ದೇಶದ ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವವರಿಗೆ ಹಲವು ರೀತಿಯ ಹಣೆಪಟ್ಟಿಗಳನ್ನು ಅಂಟಿಸಲಾಗುತ್ತಿದೆ. ಆದರೆ ರಾಜಕಾರಣದಲ್ಲಷ್ಟೆ ಪ್ರಶ್ನೆಗಳು ಉದ್ಭವಿಸುವುದಿಲ್ಲ. ನಾವು ನಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಹಾಗೂ ಧಾರ್ಮಿಕ ನೆಲೆಗಳಲ್ಲೂ, ವಲಯಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ. ನಮ್ಮ ಬದುಕಿನಲ್ಲಿ ನಾವು ಪ್ರಶ್ನೆಗಳನ್ನು ಕೇಳದ ಒಂದಾದರೂ ದಿನವನ್ನು ಊಹಿಸುವುದು ಸಾಧ್ಯವೇ? ಹೊಸತಾಗಿ ಒಬ್ಬರ ಪರಿಚಯವಾಗುವಾಗ ನಾವು ಮೊದಲು ಕೇಳುವುದೇ ಪ್ರಶ್ನೆಗಳನ್ನು: ನಿಮ್ಮ ಹೆಸರು ಏನು? ಊರು ಯಾವುದು? ಏನು ಮಾಡುತ್ತಿದ್ದೀರಿ? ಇತ್ಯಾದಿಗಳ ಹೊರತಾಗಿ ವೈಯಕ್ತಿಕ ಕೊಡು-ಕೊಳ್ಳುವಿಕೆಯನ್ನು, ಸಾಮಾಜಿಕ ಸಂವಹನವನ್ನು ಊಹಿಸಲು ಕೂಡ ಸಾಧ್ಯವಿಲ್ಲ. ನೆರೆಕರೆಯ ಇಬ್ಬರು ಮಹಿಳೆಯರು ದಿನದ ಮೊದಲ ಬಾರಿ ಭೇಟಿಯಾದಾಗ ‘‘ಇವತ್ತು ಏನು ಅಡುಗೆ?’’ ಎಂದು ಕೇಳದೆ ಉಂಟೆ? ಗಂಡು-ಹೆಣ್ಣಿನ ವೈವಾಹಿಕ ಸಂಬಂಧ ಕುದುರಿಸುವಾಗಲಂತೂ ಹುಡುಗ/ಗಿಯ ‘‘ಪೂರ್ವಾಪರ ಏನು? ಅವ/ಅವಳು ಎಷ್ಟು ಕಲಿತಿದ್ದಾನೆ/ಳೆ? ಇಂಜಿನಿಯರೋ? ಡಾಕ್ಟರೋ?, ಅವನ/ಅವಳ ತಿಂಗಳ ಸಂಬಳ ಎಷ್ಟು?’’ ಎಂಬ ಪ್ರಶ್ನೆಗಳ ಹೊರತಾಗಿ ಮದುವೆ ಮಾರುಕಟ್ಟೆಯಲ್ಲಿ ವಹಿವಾಟು ಸಾಗುವುದೇ ಇಲ್ಲ. ‘‘ವಧು-ವರನ ಜಾತಕ ‘ಮ್ಯಾಚ್’ ಆಗುತ್ತದೋ? ಎಷ್ಟು ಪರ್ಸೆಂಟ್ ಆಗುತ್ತದೆ?’’ ಎಂಬ ಪ್ರಶ್ನೆಗಳು ಇಂದು ಭಾರತೀಯ ಮಧ್ಯಮ ವರ್ಗದ ಕೌಟುಂಬಿಕ ಬದುಕಿನ ಜೀವಾಳವಾಗಿದೆ. ವೇತನದ ಮೊತ್ತ ಹೆಚ್ಚು ಇದ್ದಲ್ಲಿ ಜಾತಕಗಳ ಮ್ಯಾಚಿಂಗ್ ಪರ್ಸೆಂಟ್ ಎಷ್ಟು ಕಡಿಮೆಯಾದರೂ ಸಂಬಂಧ ಕುದುರಿಬಿಡುತ್ತದೆ! ಆ ಮಾತು ಬೇರೆ.
ಇಂದು ವಿಷಯದ, ಬೆಳವಣಿಗೆಯ ಅಥವಾ ಅಂಗೀಕೃತ ಸ್ಥಿತಿಯ ಕುರಿತ ಅನುಮಾನದಿಂದ ಪ್ರಶ್ನೆಯೊಂದು ಮೂಡಿದಾಗ, ಅದನ್ನು ನಾವು ಯಾರಿಗೆ ಕೇಳುತ್ತೇವೋ, ಅವರ ಬಳಿ ಅದಕ್ಕೆ ಸಮರ್ಪಕವಾದ ಉತ್ತರ ಇಲ್ಲ್ಲದಿರಬಹುದು. ಯಾಕೆಂದರೆ ಪ್ರಶ್ನೆಗಳು ಸತ್ಯವನ್ನು ಹೊರಗೆಳೆಯುವ ಸಲಾಕೆಗಳು. ಸತ್ಯ ತಿಳಿಯಬೇಕಾದರೆ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಪ್ರಶ್ನೆಗಳನ್ನು ಕೇಳದೆ ಪೊಲೀಸ್ ವ್ಯವಸ್ಥೆ ಕಾರ್ಯವೆಸಗಲಾರದು. ತಾವು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರಕದಿದ್ದಾಗ ಪೊಲೀಸರು ಆಪಾದಿತನ ಬಾಯಿ ಬಿಡಿಸಲು ಬೆತ್ತ ಬಳಸಬಹುದು. ‘ಥರ್ಡ್ ಡಿಗ್ರಿ’ ಶಿಕ್ಷೆಗಳಿಗೆ ಮೊರೆ ಹೋಗಬಹುದು. ಆದರೆ ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಶ್ನೆ ಕೇಳಿದವನಿಗೆ ಹೀಗೆ ಹಿಂಸೆ ನೀಡಲು ಸಾಧ್ಯವಿಲ್ಲ. ಹಿಂಸೆ ನೀಡುವುದು, ಆತನನ್ನು ಬೆದರಿಸುವುದು, ಆತ ಹೆದರಿಕೆಯ ವಾತಾವರಣದಲ್ಲಿ ಬದುಕುವಂತೆ ಮಾಡುವುದು ಅನೈತಿಕವಾಗುತ್ತದೆ. ಸತ್ಯವನ್ನು ಹೊಳೆಯಿಸಲಿಕ್ಕಾಗಿ ಕೇಳಲಾಗುವ ಪ್ರಶ್ನೆ ಹಿಂಸೆಗೆ ಹಾದಿಯಾಗುವುದು ಅನಾಗರಿಕ ಸಮಾಜದ ಮುಖ್ಯ ಲಕ್ಷಣ.
ಆದರೆ ಪ್ರಜಾಪ್ರಭುತ್ವದ ಮುಖಕ್ಕೆ ಪ್ರಶ್ನೆ ಕೇಳಿದಾಗ, ಪ್ರಶ್ನೆಯ ಮೂಲಕ ಸತ್ಯವನ್ನೇ ಹೇಳಿದಾಗ, ಮತ್ತು ನಾವು ಕೇಳಿದ ಪ್ರಶ್ನೆಗೆ ಪ್ರಭುತ್ವ ಉತ್ತರ ಕೊಡಲಾಗದಾಗ ಅದು ರಕ್ಕಸನಂತೆ ವರ್ತಿಸುತ್ತದೆ. ಈಗ ದೇಶದಲ್ಲಿ ಇಂತಹ ಸ್ಥಿತಿ ಬರುತ್ತಿದೆ. ಆದರೆ ನಾನು ಸಾಲ ನೀಡಿದ ಹಣ ಹಿಂದೆ ಬರದಿದ್ದಾಗ ಸಾಲ ತೆಗೆದುಕೊಂಡವನಿಗೆ ‘‘ನೀನು ಯಾವಾಗ ಸಾಲ ವಾಪಸ್ ಮಾಡುತ್ತಿ?’’ ಎಂದು ಪ್ರಶ್ನಿಸದೆ ಇರುವುದು ಸಾಧ್ಯವೇ? ಸಾಧುವೇ? ‘‘ನನ್ನ ಖಾತೆಗೆ ನೀನು ಹಾಕುತ್ತಿ ಎಂದ ಮೊತ್ತವನ್ನು ಯಾಕೆ ಇನ್ನೂ ಹಾಕಿಲ್ಲ? ಹಾಗಾದರೆ ನನ್ನ ಖಾತೆಗೆ ಜಮೆ ಮಾಡುತ್ತೇನೆ ಎಂದು ನೀನು ಹೇಳಿದ್ದು ಸುಳ್ಳೇ?’’ ಅಂತ ಕೇಳಲೂ ಬಾರದೆ? ‘‘ಕೇಳಿದರೂ ಪ್ರಯೋಜನವಿಲ್ಲ. ನಾನೇನೂ ನಿನ್ನ ಖಾತೆಗೆ ಹಣ ಜಮೆ ಮಾಡುವುದಿಲ್ಲ’’ ಎಂದು ಸಾಲ ಪಡೆದವ ಹೇಳಿಯಾನು. ಅಥವಾ ‘‘ಪುನಃ ಪುನಃ ಕೇಳಿದರೆ ನಿನ್ನ ಮನೆಯ ಹಾಗೂ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ಮಾಡಿಸುತ್ತೇನೆ’’ ಎಂದೂ ಬೆದರಿಕೆ ಹಾಕಿಯಾನು. ಇಂತಹ ಸ್ಥಿತಿಯಲ್ಲಿ ಸಜ್ಜನರ ಪಾಡೇನು? ಸಿವಿಲ್ ಸೊಸೈಟಿಯ ಭವಿಷ್ಯವೇನು?
ಪ್ರಶ್ನೆ ಕೇಳುವುದರಲ್ಲೇ ನಮ್ಮ ಭಿನ್ನಮತ ವ್ಯಕ್ತವಾಗುತ್ತದೆ. ಭಿನ್ನಾಭಿಪ್ರಾಯವಿಲ್ಲದಿದ್ದಲ್ಲಿ ಪ್ರಶ್ನೆಗಳೂ ಇರುವುದಿಲ್ಲ. ಪ್ರಶ್ನೆಗಳಿಗೆ ಉತ್ತರ ದೊರಕದೆ ಇದ್ದರೂ ಪ್ರಶ್ನೆ ಕೇಳುವ ಸ್ವಾತಂತ್ರ ಇರಲೇಬೇಕು. ಈ ಸ್ವಾತಂತ್ರವಿಲ್ಲದ ಪ್ರಭುತ್ವ ಪ್ರಜಾಪ್ರಭುತ್ವವಾಗುವುದಿಲ್ಲ; ಕೆಲವೇ ಮಂದಿಯ ಕೈಯಲ್ಲಿರುವ ಗುಂಪು ಪ್ರಭುತ್ವವಾಗುತ್ತದೆ.
ಒಂದು ಪ್ರಜಾಪ್ರಭುತ್ವ ಪ್ರಶ್ನೆಗಳನ್ನು, ಪ್ರಶ್ನೆ ಕೇಳುವವರನ್ನು ಹೇಗೆ ನಿಭಾಯಿಸಬೇಕು? ಹೇಗೆ ನಡೆಸಿಕೊಳ್ಳಬೇಕು?
ಮತ್ತೆ ನಾನು ಪ್ರಶ್ನೋಪನಿಷತ್‌ಗೆ ಮರಳುತ್ತೇನೆ. ನೀವು ಎಷ್ಟು ಬೇಕಾದರೂ, ನೀವು ಬಯಸುವಷ್ಟು ಪ್ರಶ್ನೆಗಳನ್ನು ಕೇಳಿ ಎನ್ನುವ ಪಿಪ್ಪಲಾದ ತನ್ನ ಮುಂದಿನ ಮಾತಿನಲ್ಲಿ ಹೇಳುವುದು: ನಿಮ್ಮ ಪ್ರಶ್ನೆಗಳಿಗೆ ಉತ್ತರ ‘‘ನಮಗೆ ತಿಳಿದಿದ್ದರೆ ಎಲ್ಲವನ್ನೂ ನಿಮಗೆ ಹೇಳುವೆವು’’.
ಆತನ ಮಾತಿನಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ, ಪ್ರಶ್ನೆಗಳಿಗೆ ಉತ್ತರ ತಿಳಿದಿರಲೇಬೇಕು ಅಥವಾ ಉತ್ತರ ಇರಲೇಬೇಕು ಎಂದೇನೂ ಇಲ್ಲ. ನಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲದಿರಬಹುದು. ಎರಡನೆಯದಾಗಿ, ಉತ್ತರವಿದ್ದಲ್ಲಿ ಮಾತ್ರ ಅದನ್ನು ಹೇಳಬಹುದು. ಸದ್ಯದ ಸ್ಥಿತಿಯಲ್ಲಿ ಪ್ರಭುತ್ವದ ಬಳಿ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲ; ಹಾಗಾಗಿ ಉತ್ತರ ಹೇಳುವ ಸ್ಥಿತಿಯಲ್ಲಿ ಅದು ಇಲ್ಲ. ಇದೇ ಈಗ ಪ್ರಭುತ್ವದ ಸಮಸ್ಯೆ ಮತ್ತು ಸಂಕಟ. ಈ ಸಂಕಟದಿಂದ ಪಾರಾಗಲು ದಾರಿಗಳನ್ನು ಹುಡುಕುವ ಭರದಲ್ಲಿ, ತರಾತುರಿಯಲ್ಲಿ ಅದು ಕಲ್ಪನಾತೀತವಾದ ದಾರಿಗಳನ್ನೂ ಹಿಡಿಯಬಹುದು.
(bhaskarrao599@gmail.com)